ಕಂಬಿ ಎಣಿಸಬೇಕಾಗುತ್ತೆ! ಚಕ್ರವರ್ತಿ ಸೂಲಿಬೆಲೆಗೆ ಸಚಿವ ಎಂ.ಬಿ ಪಾಟೀಲ್ ಎಚ್ಚರಿಕೆ
ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದರೆ ಕಂಬಿ ಎಣಿಸಬೇಕಾಗುತ್ತದೆ ಹುಷಾರ್ ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಸಚಿವ ಎಂ.ಬಿ. ಪಾಟೀಲ್ ಚಕ್ರವರ್ತಿ ಸೂಲಿಬೆಲೆ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರಗಳನ್ನು ತನಿಖೆ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾಲ್ಕು ವರ್ಷಗಳ ಅಧಿಕಾರದಲ್ಲಿ ಬಿಜೆಪಿ ಸರ್ಕಾರ ಜನರಿಗೆ ಒಳ್ಳೆಯ ಬದುಕು ಕಟ್ಟಿಕೊಡುವ ಬದಲಾಗಿ ಹಿಜಾಬ್, ಹಲಾಲ್, ಆಜಾನ್ ಎಂದೆಲ್ಲಾ ಕೋಮು ಸಾಮರಸ್ಯ ಹಾಳು ಮಾಡಲು ಯತ್ನಿಸಿದ್ದಾರೆ. ಬಿಜೆಪಿ ಆಡಳಿತದ ಅವಧಿಯಲ್ಲಿ ನಡೆದಿರುವು ಎಲ್ಲಾ ಭ್ರಷ್ಟಾಚಾರಗಳನ್ನು ಬಯಲು ಮಾಡುವುದಾಗಿ ಎಂ.ಬಿ. ಪಾಟೀಲ್ ಹೇಳಿದರು.

ಎಲ್ಲಾ ಜನಾಂಗ, ಧರ್ಮದ ಜನರನ್ನು ಒಳಗೊಂಡಂತೆ ಸುಭದ್ರ ಆಡಳಿತ ನೀಡಲು ಕಾಂಗ್ರೆಸ್ ಸರ್ಕಾರ ಶ್ರಮಿಸಲಿದೆ. ರಾಷ್ಟ್ರಕವಿ ಕುವೆಂಪು ಅವರ ಕನಸಾದ ಸರ್ವಜನಾಂಗದ ಶಾಂತಿಯ ತೋಟವನ್ನು ನಿರ್ಮಾಣ ಮಾಡಲಾಗುವುದು. ಎಲ್ಲಾ ಜಾತಿ, ಧರ್ಮದ ಜನರ ಅಭಿವೃದ್ಧಿಗಾಗಿ ಯೋಜನೆ ರೂಪಿಸುತ್ತೇವೆ. ದೀನ ದಲಿತರು ಮತ್ತು ಶೋಷಿತರ ಪರ ಆಡಳಿತ ನೀಡುವು ಭರವಸೆ ನೀಡಿದರು.
ರಾಜ್ಯದಲ್ಲಿ ಹಿಟ್ಲರ್ ಆಡಳಿತವಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ನಾಲ್ಕು ವರ್ಷ ಏನು ಮಾಡಿದ್ದಾರೆ ಎಂದು ಗೊತ್ತಿದೆ. ಪಠ್ಯ ಪರಿಷ್ಕರಣೆ, ಹಿಜಾಬ್, ಹಲಾಲ್, ಆಜಾನ್ ಎಂದೆಲ್ಲಾ ಶಾಂತಿಯನ್ನು ಕದಡಲು ಯತ್ನಿಸಿದರು. ನಮ್ಮ ಸರ್ಕಾರದ ಅವಧಿಯಲ್ಲಿ ಬಾಲ ಬಿಚ್ಚಿದರೆ ಕಂಬಿ ಎಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿರುವ ಅಕ್ರಮಗಳ ಬಗ್ಗೆ ಸಮಗ್ರವಾಗಿ ತನಿಖೆ ಮಾಡುವುದಾಗಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಭಾರಿ ಸದ್ದು ಮಾಡಿದ್ದ ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದ ಬಗ್ಗೆ ಕೂಡ ತನಿಖೆ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ. ಎಸ್ಟಿಮೇಟ್ ಹೆಚ್ಚಳ ಮಾಡಿ ಕಮೀಷನ್ ಕೂಡ ಹೊಡೆದುಕೊಂಡಿದ್ದಾರೆ, ಇದರ ಬಗ್ಗೆ ಕೂಡ ತನಿಖೆ ಮಾಡುವುದಾಗಿ ಹೇಳಿದರು. ಲೋಕೋಪಯೋಗಿ ಇಲಾಖೆಯಲ್ಲೂ ಭಾರಿ ಭ್ರಷ್ಟಾಚಾರ ನಡೆದಿದ್ದು ಎಲ್ಲಾ ಅಕ್ರಮಗಳನ್ನು ಬಯಸಲು ಮಾಡುತ್ತೇವೆ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಠ್ಯಪುಸ್ತಕದಲ್ಲಿ ಅವರು ತಮ್ಮ ಅಜೆಂಡಾವನ್ನು ಹೇರಲು ಯತ್ನಿಸಿದರು. ಉರಿಗೌಡ-ನಂಜೇಗೌಡ ಎನ್ನುವ ಇತಿಹಾಸ ಸೃಷ್ಟಿಸಿದರು. ಪಠ್ಯವನ್ನು ಪರಿಷ್ಕರಣೆ ಮಾಡಲಿದ್ದು, ಬಸವೇಶ್ವರ, ಡಾ.ಅಂಬೇಡ್ಕರ್, ಜೋತಿಬಾ ಫುಲೆ, ಮಹಾತ್ಮ ಗಾಂಧಿ, ಭಗತ್ ಸಿಂಗ್‌ರಂತಹ ಮಹಾತ್ಮರ ಪಾಠಗಳನ್ನು ಅಳವಡಿಸುವುದಾಗಿ ಹೇಳಿದರು.












Click it and Unblock the Notifications