Gruha Lakshmi: ಗೃಹಲಕ್ಷ್ಮಿ ಹಣ ವಿಳಂಬಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ಟ ಕಾರಣ ಏನು..?
ಬೆಂಗಳೂರು, ಆಗಸ್ಟ್ 10: ಕಳೆದ ವಿಧಾನಸಭಾ ಚುನಾವಣೆ ವೇಳೆ ನೀಡಿದ್ದ ಪಂಚ ಗ್ಯಾರಂಟಿಯನ್ನು ಕಾಂಗ್ರೆಸ್ ಈಡೇರಿಸಿದೆ. ಎಲ್ಲಾ ಯೋಜನೆಗಳು ಸದ್ಯ ಚಾಲ್ತಿಯಲ್ಲಿದ್ದು, ಗೃಹಲಕ್ಷ್ಮಿ ಯೋಜನೆಯ ಹಣ ಎರಡ್ಮೂರು ತಿಂಗಳಿಂದ ಮಹಿಳೆಯರ ಖಾತೆಗಳಿಗೆ ವರ್ಗಾವಣೆಯಾಗದೇ ಬಾಕಿ ಇದೆ. ಈ ವಿಚಾರವಾಗಿ ರಾಜ್ಯ ಸರ್ಕಾರ ವಿರುದ್ಧ ಆಕ್ಷೇಪ ವ್ಯಕ್ತವಾಗುತ್ತಿದ್ದು, ಗೃಹಲಕ್ಷ್ಮಿ ಯೋಜನೆಯ ಹಣ ಬಾಕಿ ಉಳಿದ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಟಿವಿ 9 ಕನ್ನಡದ ಜೊತೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಗೃಹಲಕ್ಷ್ಮಿ ಯೋಜನೆಯ ಹಣ ಸಂದಾಯದ ಗೊಂದಲ ಖಂಡಿತಾ ಬಗೆ ಹರಿದಿದೆ. ಒಂದು ತಿಂಗಳಿಗೆ ಸುಮಾರು ಎರಡು ಸಾವಿರದ ನಾಲ್ಕು ನೂರು ಕೋಟಿ ರೂಪಾಯಿಗಳನ್ನು ಹಾಕುತ್ತೇವೆ. ಒಂದು ರೂಪಾಯಿ ಅಲ್ಲಾ, ಎರಡು ರೂಪಾಯಿ ಅಲ್ಲಾ, ಅದು ಬಹಳ ದೊಡ್ಡ ಮಟ್ಟದ ಹಣವಾಗುತ್ತದೆ. ಹೀಗಾಗಿ ಒಂದೊಂದು ಸಂದರ್ಭದಲ್ಲಿ ಹೆಚ್ಚು ಕಡಿಮೆಯಾಗುತ್ತಲೇ ಇರುತ್ತದೆ ಎಂದರು.

ಈಗ ನಾವು ಡಿಪಿಟಿ ಪುಶ್ ಮಾಡಿ ಮೂರು ದಿನ ಆಯ್ತು. ಇನ್ನೂ ನಾಲ್ಕೈದು ಜಿಲ್ಲೆಗೆ ಹೋಗಬೇಕು. ನಾವು ಬ್ಯಾಂಕ್‌ಗಳಿಗೆ ಕಳುಹಿಸಿಬಿಟ್ಟಿರುತ್ತೇವೆ. ಬಳಿಕ ಬ್ಯಾಂಕ್‌ಗಳು ಸ್ಥಳೀಯ ಮಟ್ಟವಾಗಿ ಅವರ ಖಾತೆಗೆ ಹಾಕಬೇಕಾಗುತ್ತದೆ. ಯಾಕೆಂದರೆ ಇದು ಬಹಳ ದೊಡ್ಡ ಮಟ್ಟದ ಹಣವಾಗಿರುತ್ತದೆ. ಹೀಗಾಗಿ ಸ್ವಲ್ಪ ಹೆಚ್ಚು ಕಮ್ಮಿಯಾಗುತ್ತದೆ ಎಂದು ಹೇಳಿದರು.
ಈಗಾಗಲೇ ನಾನು ಜೂನ್ ತಿಂಗಳಿನ ಹಣವನ್ನು ಪುಶ್ ಮಾಡಿದ್ದೇನೆ. ಜುಲೈ ತಿಂಗಳಿದ್ದು ಇನ್ನೆರಡು ದಿನದಲ್ಲಿ ಪುಶ್ ಮಾಡುತ್ತೇವೆ. ಅದರ ಹಿಂದುಗಡನೇ ಆಗಸ್ಟ್ ತಿಂಗಳಿದ್ದು ಹಾಕುತ್ತೇವೆ. ಮುಂದೆ ಈ ರೀತಿಯ ತೊಂದರೆ ಆಗಬಾರದು ಎನ್ನುವುದೇ ನಮ್ಮ ಚಿಂತನೆ. ಯಾಕೆಂದರೆ ಒಂದು ದಿನಕ್ಕೆ ಐನೂರು ಕರೆಗಳು ಬರುತ್ತದೆ. ಒಬ್ಬ ಮಂತ್ರಿ ಎಲ್ಲವನ್ನೂ ಸಹಿಸಿಕೊಂಡು ಜನರಿಗೆ ಸಮಾಧಾನವಾಗಿ ಉತ್ತರ ಕೊಡುವುದು ಬಹಳ ಕಷ್ಟ ಎಂದರು.

ನಾವು ಮಂತ್ರಿ ಆಗಿದ್ದೇವೆ. ಇದೆಲ್ಲಾ ಸಮರ್ಥವಾಗಿ ನಿರ್ವಹಣೆ ಮಾಡುತ್ತೇವೆ. ದಿನ ಐನೂರು ಕರೆಗೆ ಉತ್ತರ ಕೊಡುತ್ತೇವೆ. ಹಣ ಬರುತ್ತಿದೆ, ಬರುತ್ತಿದೆ ಅಂತಾ ಸಮಾಧಾನ ಮಾಡುತ್ತಿರುತ್ತೇನೆ. ಈ ರೀತಿ ಆಗದ ರೀತಿ ನೋಡಿಕೊಳ್ಳಲು ಹಗಲು ರಾತ್ರಿ ನಾವು ಕೆಲಸ ಮಾಡುತ್ತೇವೆ. ಪ್ರತಿ ತಿಂಗಳು ಇವತ್ತು ನಾವು ಶುರು ಮಾಡಿದರೆ ಪ್ರತಿ ಜಿಲ್ಲೆಗೂ ಹೋಗಿ ತಲುಪಲು ಹತ್ತರಿಂದ ಹನ್ನೆಡರು ದಿನ ಬೇಕಾಗುತ್ತದೆ. ಅದನ್ನು ಮುಗಿಸಿದ ತಕ್ಷಣ ಇನ್ನೊಂದು ತಿಂಗಳ ಪ್ರಕ್ರಿಯೆ ಆರಂಭವಾಗುತ್ತದೆ. ಮುಂದಿನ ದಿನಗಳಲ್ಲಿ ಖಂಡಿತಾ ಈ ರೀತಿ ಆಗದ ಹಾಗೇ ನಾವು ನೋಡಿಕೊಳ್ಳುತ್ತೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ.












Click it and Unblock the Notifications