ರೈತರಿಗೆ ನ್ಯಾಯಯುತ ಪರಿಹಾರ ತಲುಪಿಸಲು ಅಧಿಕಾರಿಗಳಿಗೆ ಖಡಕ್ ಸೂಚನೆ!
ಚಾಮರಾಜನಗರ: ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಬೆಳೆ ಸಮೀಕ್ಷೆ ಕುರಿತ ಎಲ್ಲಾ ರೈತರ ಸಂಪೂರ್ಣ ಮಾಹಿತಿಯನ್ನು "ಫ್ರೂಟ್ಸ್" (Fruits) ನಮೂದಿಸಿ ರೈತರಿಗೆ ನ್ಯಾಯಯುತ ಪರಿಹಾರ ತಲುಪಿಸಲು ಸರ್ಕಾರದ ಜೊತೆ ಸಹಕರಿಸಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಚಾಮರಾಜನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ, ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು ಸಚಿವರು, ರಾಜ್ಯ ಇತಿಹಾಸ ಕಾಣದ ಬರಕ್ಕೆ ತುತ್ತಾಗಿದೆ. ಮಳೆ ಇಲ್ಲದೆ ರೈತರು ಪರಿತಪಿಸಿದ್ದು, ಬೆಳೆ ಕೈಸೇರದೆ ಸಂಕಷ್ಟಕ್ಕೂ ಈಡಾಗಿದ್ದಾರೆ ಇಂತಹ ಸಂದರ್ಭದಲ್ಲಿ ನಾವು ರೈತರ ಪರ ನಿಲ್ಲಬೇಕಾಗಿದೆ ಎಂದು ಕಿವಿಮಾತು ಹೇಳಿದರು.

ಸೂಕ್ತ ಪರಿಹಾರ ಒದಗಿಸಲು ಕ್ರಮ
ಮುಂದುವರೆದು, "ಅಧಿಕಾರಿಗಳು ಚಾಮರಾಜನಗರದಲ್ಲಿ ಈಗಾಗಲೇ ಬೆಳೆ ಸಮೀಕ್ಷೆ ನಡೆಸಿದ್ದೀರಿ. ಆದರೆ, 2015-16ರ ಸಮೀಕ್ಷೆಯಂತೆ ಜಿಲ್ಲೆಯಲ್ಲಿ 2.16 ಲಕ್ಷ ರೈತರು ಇದ್ದು, ಈವರೆಗೆ 1.8 ಲಕ್ಷ ರೈತರ ಮಾಹಿತಿ ಮಾತ್ರ ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಲಾಗಿದೆ. ಜಿಲ್ಲೆಯ ಎಲ್ಲಾ ರೈತರ ಮಾಹಿತಿಯನ್ನು ಸರಿಯಾಗಿ ತಂತ್ರಾಂಶದಲ್ಲಿ ನಮೂದಿಸಿದರೆ ಮಾತ್ರ ಅವರಿಗೆ ಸೂಕ್ತ ಪರಿಹಾರ ನೀಡುವುದು ಸಾಧ್ಯ.
ಬೆಳೆ ಸಮೀಕ್ಷೆಯ ಬಗ್ಗೆ ಸೂಚನೆ
ಅಲ್ಲದೆ, "ಬೆಳೆ ನಷ್ಟಕ್ಕೆ ರೈತರಿಗೆ 5 ಎಕರೆ ವರೆಗೆ ಪರಿಹಾರ ಸಿಗಲಿದೆ. ಒಮ್ಮೆ ಬೆಳೆ ಸಮೀಕ್ಷೆ ಮುಗಿಸಿದ ನಂತರ ಬಿಟ್ಟುಹೋದ ರೈತರ ಹೆಸರನ್ನು ಮತ್ತೆ ಪರಿಹಾರದ ಪಟ್ಟಿಗೆ ಸೇರಿಸುವುದು ಅಸಾಧ್ಯ. ನಗದಿನ ಮೂಲಕವೂ ಪರಿಹಾರ ನೀಡಿಕೆಗೆ ಅವಕಾಶ ಇಲ್ಲ. ಪರಿಹಾರದ ಹಣ ಬ್ಯಾಂಕ್ ಖಾತೆಗೆ ಸಂದಾಯವಾಗಲಿದೆ. ಹೀಗಾಗಿ ಅಧಿಕಾರಿಗಳು ಈಗಲೇ ಬೆಳೆ ಸಮೀಕ್ಷೆಯನ್ನು ಶೇ.100 ರಷ್ಟು ದಕ್ಷತೆಯಿಂದ ಮುಗಿಸಬೇಕು" ಎಂದು ಸಚಿವರು ಸೂಚಿಸಿದರು.

ಅರ್ಜಿ ವಿಲೇಗೆ 1 ವರ್ಷ ಗಡುವು
ಅಕ್ರಮ ಸಕ್ರಮ ಬಗರ್ ಹುಕುಂ ಯೋಜನೆಯಡಿ ಸಾಗುವಳಿ ಚೀಟಿ ನೀಡುವಂತೆ ಚಾಮರಾಜನಗರದಲ್ಲಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿದೆ. ಈ ಅರ್ಜಿಗಳನ್ನು ಮುಂದಿನ ಒಂದು ವರ್ಷದಲ್ಲಿ ವಿಲೇವಾರಿಗೊಳಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.
ನಮೂನೆ 50, 53, 57ಕ್ಕೆ ಸಂಬಂಧಿಸಿದಂತೆ ಅಕ್ರಮ-ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಲು ಕೋರಿ ಸಾವಿರಾರು ಜನ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈ ಅರ್ಜಿಗಳು ವಿಲೇವಾರಿಯಾಗದ ಕಾರಣ ರೈತರು ದಿನಂಪ್ರತಿ ಸರ್ಕಾರಿ ಕಚೇರಿಗಳಿಗೆ ಅಲೆಯುವಂತಾಗಿದೆ. ಎಷ್ಟೋ ಜನಕ್ಕೆ ಸರ್ಕಾರಿ ಕಚೇರಿಗೆ ಅಲೆಯುವುದೇ ಕೆಲಸವಾಗಿದೆ. ಜನರನ್ನು ಹೀಗೆ ಅಲೆಸುವುದು ಸರಿಯಲ್ಲ.

ಜನ ಭರವಸೆ ಇಟ್ಟು ಬದಲಾವಣೆ ನಿರೀಕ್ಷೆಯಿಂದ ಹೊಸ ಸರ್ಕಾರ ತಂದಿದ್ದಾರೆ. ಸುಧಾರಣೆ ಕಾರ್ಯರೂಪಕ್ಕೆ ಬರದಿದ್ದರೆ ಪ್ರಜಾಪ್ರಭುತ್ವದ ಆಶಯವೇ ವ್ಯರ್ಥ. ಹೀಗಾಗಿ ಸರ್ಕಾರವೂ ಬಡ ಜನರ ಪರ ಕೆಲಸ ಮಾಡಲು ಬದ್ಧವಾಗಿದೆ. ಆದರೆ, ಸರ್ಕಾರದ ದ್ಯೇಯೋದ್ದೇಶ ಈಡೇರಲು ಅಧಿಕಾರಿಗಳ ಸಹಕಾರ ಮುಖ್ಯ. ಹೀಗಾಗಿ ಮುಂದಿನ ಒಂದು ವರ್ಷದಲ್ಲಿ ಬಗರ್ ಹುಕುಂ ಅರ್ಜಿಗಳನ್ನು ವಿಲೇಗೊಳಿಸಿ. ಅರ್ಹರಿಗೆ ಸಾಗುವಳಿ ಚೀಟಿ ನೀಡಿ ಎಂದು ತಿಳಿಸಿದರು.
ಮುಂದುವರೆದು, "ಬಗರ್ ಹುಕುಂ ಅರ್ಜಿ ವಿಲೇವಾರಿ ಸಂದರ್ಭದಲ್ಲಿ ಅಧಿಕಾರಿಗಳು ಯಾವುದೇ ಪ್ರಭಾವಿಗಳ ಅಥವಾ ರಾಜಕೀಯ ಪಕ್ಷದ ನಾಯಕರಿಗೆ ಅನುಕೂಲವಾಗುವಂತೆ ವರ್ತಿಸಬಾರದು, ಬದಲಾಗಿ ಬಡ ಜನರಿಗೆ ಮತ್ತು ಅರ್ಹರಿಗೆ ನ್ಯಾಯ ಒದಗಿಸಲು ಬದ್ಧರಾಗಿರಬೇಕು. ಅಲ್ಲದೆ, ಅಧಿಕಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ "ಬಗರ್ ಹುಕುಂ ಆ್ಯಪ್" ಅಭಿವೃದ್ಧಿಪಡಿಸುತ್ತಿದ್ದು ಇದರ ಸಹಾಯದಿಂದ ಸ್ಯಾಟಲೈಟ್ ಇಮೇಜ್ ಪಡೆದು ನೈಜ ಸಾಗುವಳಿದಾರರನ್ನು ಗುರುತಿಸಬಹುದು. ಅಲ್ಲದೆ, ಇ-ಸಾಗುವಳಿ ಚೀಟಿಯನ್ನೂ ನೀಡಬಹುದು" ಎಂದು ಕಂದಾಯ ಸಚಿವರು ಮಾಹಿತಿ ನೀಡಿದರು.
ಬಡವರಿಗೆ ನ್ಯಾಯ ಸಲ್ಲಿಸಿ
ಕಂದಾಯ ಇಲಾಖೆಗೆ ಸೇರದ ಕಾರಣ ಕಂದಾಯೇತರ ಜನವಸತಿ ನಿವಾಸಿಗಳು ಅಭಿವೃದ್ಧಿ ಯೋಜನೆಗಳಿಂದ ವಂಚಿತರಾಗುತ್ತಿದ್ದರು ಹೀಗಾಗಿ ಕರ್ನಾಟಕ ಭೂ ಕಂದಾಯ ಕಾಯಿದೆಗೆ ತಿದ್ದುಪಡಿ ತಂದು ತಾಂಡ-ಗೊಲ್ಲರಹಟ್ಟಿ ಸೇರಿದಂತೆ ಪ್ರದೇಶಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಲು ಅನುವುಮಾಡಿಕೊಡಲಾಗಿತ್ತು.
ಚಾಮರಾಜನಗರದಲ್ಲೂ ಒಟ್ಟು 67 ಕಂದಾಯ ಗ್ರಾಮಗಳು ರಚನೆಯಾಗಬೇಕಿತ್ತು. ಆದರೆ, ಈವರೆಗೆ 53 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದರೆ, 13 ಗ್ರಾಮಗಳಿಗೆ ಮಾತ್ರ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಇನ್ನೂ 14 ಗ್ರಾಮಗಳಿಗೆ ಪ್ರಾಥಮಿ ಅಧಿಸೂಚನೆ, 32 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಬೇಕಾಗಿದೆ. ಹೀಗಾಗಿ ಮುಂದಿನ ಮೂರು ತಿಂಗಳಲ್ಲಿ ಕ್ರಮಕೈಗೊಂಡು ಕಂದಾಯ ಗ್ರಾಮ ರಚಿಸಿ ಹಕ್ಕುಪತ್ರ ವಿತರಿಸಿ ಎಂದು ಸೂಚಿಸಿದರು.
ಹೈಕೋರ್ಟ್ ಕೇಸ್‌ಗಳ ಬಗ್ಗೆ ಅಸಡ್ಡೆ ಏಕೆ?
ಚಾಮರಾಜನಗರ ಕಂದಾಯ ಇಲಾಖೆಗೆ ಸಂಬಂಧಿಸಿ ಹೈಕೋರ್ಟ್ ನಲ್ಲಿ 169 ಪ್ರಕರಣಗಳಿವೆ. ಈ ಪೈಕಿ 92 ಪ್ರಕರಣಗಳಲ್ಲಿ ತೆಗೆದುಕೊಂಡಿರುವ ಕ್ರಮ ಶೂನ್ಯ. ಅಲ್ಲದೆ, ನ್ಯಾಯಾಲಯದಲ್ಲಿ ವಕಾಲತ್ತನ್ನು ಸಹ ಸಲ್ಲಿಸುವ ಕೆಲಸ ನಮ್ಮ ಅಧಿಕಾರಿಗಳು ಮಾಡಿಲ್ಲ. ಹೀಗಾಗಿ ನ್ಯಾಯಾಲಯ ಇಲಾಖೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದೆ ಎಂದು ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಗೂ ಅಸಮಾಧಾನ ಹೊರಹಾಕಿದ ಸಚಿವರು, ನಿಮ್ಮ ಕೆಲಸಕ್ಕೆ ಸರ್ಕಾರದ ಜಮೀನು ಖಾಸಗಿಯವರ ಪಾಲಾಗಲು ನಾವು ಸಹಿ ಹಾಕಬೇಕ? ಎಂದು ಕಿಡಿಕಾರಿದರು. ಅಲ್ಲದೆ, ಈ ಸಮಸ್ಯೆ ಶೀಘ್ರವೇ ಪಡಿಹರಿಸಿ ಪ್ರತಿ 15 ದಿನಗಳಿಗೊಮ್ಮೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಿದರು.
ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ
ಚಾಮರಾಜನಗರ ಪ್ರಗತಿ ಪರಿಶೀಲನೆ ಸಭೆಗೆ ಮುನ್ನ ಸಚಿವ ಕೃಷ್ಣ ಬೈರೇಗೌಡ ಅವರು ಜಿಲ್ಲೆಯ ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶನಿವಾರ ಬೆಳಗ್ಗೆ ಅಗರ ಹೋಬಳಿ ನಾಡಕಚೇರಿಗೆ ಭೇಟಿ ನೀಡಿದ ಸಚಿವರು ಅಲ್ಲಿ ಕಚೇರಿ ಹೇಗೆ ಕಾರ್ಯನಿರ್ವಹಿಸ್ತಿದೆ, ಜನರ ಸಮಸ್ಯೆಗೆ ಅಧಿಕಾರಿಗಳು ಹೇಗೆ ಸ್ಪಂದಿಸುತ್ತಿದ್ದಾರೆ? ಎಂಬ ಕುರಿತು ಮಾಹಿತಿ ಪಡೆದರು.
ನಂತರ ಯಳಂದೂರು ತಾಲೂಕು ಕಚೇರಿಗೆ ಭೇಟಿ ನೀಡಿದ ಅವರು, ಇ-ಆಫೀಸ್ ಅನುಷ್ಠಾನದಿಂದ ಸಾರ್ವಜನಿಕರಿಗೆ ಎಷ್ಟರ ಮಟ್ಟಿಗೆ ಸಹಾಯವಾಗುತ್ತಿದೆ, ಅಧಿಕಾರಿ ವರ್ಗದ ಕೆಲಸದ ಹೊರೆ ಯಾವ ಪ್ರಮಾಣಕ್ಕೆ ಇಳಿದಿದೆ ಎಂಬ ಕುರಿತು ಮಾಹಿತಿ ಪಡೆದರು.
ಈ ಆಫೀಸ್ ಬಳಕೆ ಬಗ್ಗೆಯೂ ಚರ್ಚೆ ನಡೆಸಿದ ಸಚಿವರು, ಚಾಮರಾಜನಗರದಲ್ಲಿ ಬಹುತೇಕ ಎಲ್ಲಾ ತಾಲೂಕುಗಳಲ್ಲೂ ಇ-ಆಫೀಸ್ ಅನುಷ್ಠಾನಗೊಳಿಸುವುದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ಸೂಚಿಸಿದರು. ಅಲ್ಲದೆ ಇ-ಆಫೀಸ್ ಅನುಷ್ಠಾನದ ನಂತರ ಜನರಿಗೆ ಯಾವ ಸೇವೆಗಳು ಸುಲಭವಾಗಿ ಮತ್ತು ಶೀಘ್ರವಾಗಿ ದೊರೆಯುತ್ತಿವೆ ಹಾಗೂ ಅಧಿಕಾರಿಗಳ ಕೆಲಸ ಎಷ್ಟರ ಮಟ್ಟಿಗೆ ಕಡಿಮೆಯಾಗಿದೆ? ಎಂದು ಚರ್ಚಿಸಿದರು. ಈ ಸೇವೆಯು ಮತ್ತಷ್ಟು ಪರಿಣಾಮಕಾರಿಗೊಳಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.












Click it and Unblock the Notifications