BJP-JDS Alliance: ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಸಚಿವರ ಸ್ಫೋಟಕ ಹೇಳಿಕೆ

ಬೆಂಗಳೂರು, ಡಿಸೆಂಬರ್ 08: ಕರ್ನಾಟಕದ ರಾಜಕೀಯದಲ್ಲಿ 2023ರ ವಿಧಾನಸಭೆ ಚುನಾವಣೆ ಬಳಿಕ ಮಹತ್ವದ ಬೆಳವಣಿಗೆ ನಡೆಯಿತು. ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ವಿರೋಧ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡವು. ಲೋಕಸಭೆ ಚುನಾವಣೆ, ವಿಧಾನ ಪರಿಷತ್ ಉಪ ಚುನಾವಣೆ, ವಿಧಾನಸಭೆ ಉಪ ಚುನಾವಣೆಯನ್ನು ಸೀಟು ಹಂಚಿಕೆ ಮಾಡಿಕೊಂಡು ಈ ಮೈತ್ರಿಕೂಟಗಳು ಎದುರಿಸುತ್ತಿವೆ.

ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ಒಟ್ಟಾಗಿ ಬಿಜೆಪಿ-ಜೆಡಿಎಸ್ ಹೋರಾಟವನ್ನು ಮಾಡುತ್ತಿವೆ. ಈ ಮೈತ್ರಿಕೂಟ ರಚನೆಯಿಂದ ಹೆಚ್ಚು ಲಾಭವಾಗಿದ್ದು, ಆಗುತ್ತಿರುವುದು ಯಾರಿಗೆ?. ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋತಿದ್ದು ಏಕೆ? ಎಂಬ ಚರ್ಚೆಗಳು ನಡೆಯುತ್ತಿವೆ.

Minister Krishna Byre Gowda Statement On BJP JDS Alliance

ಇಂತಹ ಹೊತ್ತಿನಲ್ಲಿಯೇ ಕಾಂಗ್ರೆಸ್ ನಾಯಕ, ಕಂದಾಯ ಸಚಿವ ಕೃಷ್ಣಬೈರೇಗೌಡ ಬಿಜೆಪಿ-ಜೆಡಿಎಸ್ ಮೈತ್ರಿಯ ಕುರಿತು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. "ಜೆಡಿಎಸ್ ಪಕ್ಷವನ್ನು ವ್ಯವಸ್ಥಿತವಾಗಿ ಮುಗಿಸಲು ಬಿಜೆಪಿ ಸ್ಕೆಚ್ ಹಾಕಿದೆ" ಎಂದು ಹೇಳುವ ಮೂಲಕ ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

ಸಚಿವರು ಹೇಳಿದ್ದೇನು?; ಭಾನವಾರ ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ಮಂಡ್ಯದಲ್ಲಿ ಜೆಡಿಎಸ್ ಪಕ್ಷ ಸಮಾವೇಶ ನಡೆಸಲು ತಯಾರಿ ನಡೆಸಿರುವ ಕುರಿತು ಪ್ರತಿಕ್ರಿಯೆ ನೀಡಿದರು. "ಸಮಾವೇಶವನ್ನು ರಾಜಕೀಯ ಪಕ್ಷವಾಗಿ ಮಾಡಲಿ, ಅವರಿಗೆ ಒಳ್ಳೆಯದಾಗಲಿ ಜೆಡಿಎಸ್ ಪಕ್ಷ ಉಳಿಯಲಿ. ಜನತಾದಳ ಉಳಿಯಬೇಕು ಎಂದು ಆಸೆ ಪಡುತ್ತೇನೆ" ಎಂದು ಹೇಳಿದರು.

"ಈಗ ವ್ಯವಸ್ಥಿತವಾಗಿ ಬಿಜೆಪಿಯವರು ಜನತಾದಳವನ್ನು ಮುಗಿಸಲು ಸ್ಕೆಚ್ ಹಾಕಿದ್ದಾರೆ. ನೋಡಿ ಈ ಚುನಾವಣೆಯನ್ನೇ ತಗೊಳ್ಳಿ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ತ್ರಿಕೋನ ಸ್ಪರ್ಧೆ ಆದಾಗ ಕುಮಾರಸ್ವಾಮಿ ಅವರು ಬಿಜೆಪಿ ವಿರುದ್ಧವಾಗಿ 97 ಸಾವಿರ ವೋಟ್ ತೆಗೆದುಕೊಂಡಿದ್ದರು" ಎಂದು ಕೃಷ್ಣಬೈರೇಗೌಡ 2023ರ ಚನ್ನಪಟ್ಟಣ ವಿಧಾನಸಭೆ ಚುನಾವಣೆ ಕುರಿತು ಮಾತನಾಡಿದರು.

"ಆ ಮೇಲೆ ಬಿಜೆಪಿ-ದಳ ಒಂದಾದ ಮೇಲೆ 97 ಸಾವಿರ ಇದ್ದಿದ್ದು ಕನಿಷ್ಠ 10 ಸಾವಿರ ಮತಗಳು ಜಾಸ್ತಿ ಆಗಬೇಕಿತ್ತಾ?. ಅದು ಹೇಗೆ 87,229ಕ್ಕೆ ಇಳಿಯಿತು?. ಎಲ್ಲಿ ಹೋಯಿತು ಹಾಗಾದರೆ ಬಿಜೆಪಿಯ ವೋಟು?" ಎಂದು ಸಚಿವ ಕೃಷ್ಣಬೈರೇಗೌಡ ಪ್ರಶ್ನೆ ಮಾಡಿದರು.

"ಬಿಜೆಪಿಯ ಒಂದು ವೋಟು ಸಹ ಜನತಾದಳಕ್ಕೆ ಬಂದಿಲ್ಲ. ಬಿಜೆಪಿಯವರು ಬೇಕೆಂದೇ ಕುಮಾರಸ್ವಾಮಿ ಅವರ ಮಗನನ್ನು ನಿಲ್ಲಿಸಿಬಿಟ್ಟು, ಅವರ ವೋಟುಗಳನ್ನು ಮಾತ್ರ ಬಹುಶಃ ಕಾಂಗ್ರೆಸ್‌ಗೆ ಹಾಕಿಸಿದ್ದಾರೆ" ಎಂದು ಚನ್ನಪಟ್ಟಣ ಉಪ ಚುನಾವಣೆ 2024ರ ಫಲಿತಾಂಶದ ಕುರಿತು ಕೃಷ್ಣಬೈರೇಗೌಡ ಮಾತನಾಡಿದರು.

"ಇಲ್ಲ ಅಂದರೆ ಹೇಗೆ 97 ಸಾವಿರ ಬರೀ ದಳದ ವೋಟು ಇತ್ತು. ಬಿಜೆಪಿ ಜೊತೆ ಮೈತ್ರಿಯಾದ ಮೇಲೆ ಅವರಿಗೆ ಬರಬೇಕಿದ್ದ ವೋಟು ಹೆಚ್ಚಾಗಬೇಕಾ, ಕಡಿಮೆಯಾಗಬೇಕಾ?. ಹಾಗಾದರೆ ಚನ್ನಪಟ್ಟಣದಲ್ಲಿ ಬಿಜೆಪಿಯದ್ದು ಅಂತ ಒಂದು 10 ಸಾವಿರ ಮತಗಳು ಇಲ್ಲವೇ?. ಯೋಗೇಶ್ವರ ಅವರ ವೈಯಕ್ತಿಕ ವರ್ಚಸ್ಸು ಬಿಡಿ 10 ಸಾವಿರ ಬಿಜೆಪಿ ಮತಗಳು ಇಲ್ಲವೇ?" ಎಂದು ಸಚಿವರು ಪ್ರಶ್ನಿಸಿದರು.

"ದಳ 97 ಸಾವಿರ ವೋಟು ಇದ್ದಿದ್ದು ಕುಸಿದಿದ್ದು ಹೇಗೆ?. ಗೆಲ್ಲುವುದು ಬಿಡುವುದು ಎರಡನೇ ಮಾತು ಬಿಜೆಪಿಯವರು ಬೆನ್ನಿಗೆ ಚೂರಿ ಹಾಕದಿದ್ದರೆ, ಅವರ ವೋಟುಗಳನ್ನು ಯಾರಿಗೆ ಹಾಕಿಸಿದ್ದಾರೆ. ಯೋಗೇಶ್ವರ ಗೆಲ್ಲುವ ಚಾನ್ಸ್ ಶೇ 50ರಷ್ಟು ಎಂದು ಎಲ್ಲರೂ ಮಾತನಾಡಿದ್ದರು. 25413 ಮತಗಳಲ್ಲಿ ಗೆಲ್ಲಬೇಕಾದರೆ ಯಾವ ಯಾವ ಕಡೆಯಿಂದ ಸಹಾಯ ಬಂದಿತು? ಎಂದು ನೀವು ಸಹ ಆಲೋಚಿಸಿ" ಎಂದು ಸಚಿವರು ತಿಳಿಸಿದರು.

"25 ಸಾವಿರ ಮತಗಳಲ್ಲಿ ಗೆಲ್ಲಬೇಕಾದರೆ ಬಿಜೆಪಿಯವರ ಪರೋಕ್ಷ ಸಹಾಯ ಇಲ್ಲದೇ ಸಾಧ್ಯವೇ?. ಬಿಜೆಪಿಯವರ ಉದ್ದೇಶವೇನು? ಜನತಾದಳ, ಕುಮಾರಸ್ವಾಮಿ ಅವರನ್ನು ಜೊತೆಗೆ ಇಟ್ಟುಕೊಳ್ಳಬೇಕು ಅವರಿಂದ ಸಿಗುವುದನ್ನೆಲ್ಲ ಬಳಸಿಕೊಂಡು ಜೆಡಿಎಸ್ ಮುಗಿಸಿ ಅವರ ಮತಗಳನ್ನು ಬಿಜೆಪಿಗೆ ಹಾಕಿಕೊಳ್ಳಬೇಕು ಎಂಬುದು" ಎಂದು ಕೃಷ್ಣಬೈರೇಗೌಡ ದೂರಿದರು.

"ಲೋಕಸಭೆ ಚುನಾವಣೆಯನ್ನೇ ತೆಗೆದುಕೊಳ್ಳಿ, ಎಲ್ಲೆಲ್ಲಿ ಜೆಡಿಎಸ್‌ನ ಮತಗಳನ್ನು ಪಡೆಯಲು ಸಾಧ್ಯವೋ ಅಲ್ಲಿ ಮತಗಳನ್ನು ಪಡೆದುಕೊಂಡರು. ಬಿಜೆಪಿ 4-5 ಸೀಟು ಗೆಲ್ಲುವಲ್ಲಿ ಜೆಡಿಎಸ್‌ನ ಮತಗಳು ಸಹಾಯಕವಾಗಿದೆ. ಆದಾದ ಮೇಲೆ ಕುಮಾರಸ್ವಾಮಿ ಮಂತ್ರಿ ಆದರು ಅನ್ನುವುದನ್ನು ಬಿಟ್ಟರೆ ಜನತಾದಳಕ್ಕೆ ಸಿಕ್ಕಿದ್ದೇನು?. ಉಪ ಚುನಾವಣೆಯಲ್ಲಿ ಸೋತರು. ಭವಿಷ್ಯದಲ್ಲಿ ಜನತಾದಳವನ್ನೇ ನುಂಗಿ ಹಾಕಿಕೊಳ್ಳುತ್ತಾರೆ. ಅದೇ ಅವರ ಉದ್ದೇಶ" ಎಂದು ಸಚಿವರು ಹೇಳಿದರು.

"ಹಾಗಾಗಿ ಜನತಾದಳದವರು ಸಮಾವೇಶ ಮಾಡಲಿ. ಜನತಾದಳಕ್ಕೆ ಕರ್ನಾಟಕದಲ್ಲಿ ಹಲವಾರು ವರ್ಷಗಳ ಇತಿಹಾಸವಿದೆ. ಪಕ್ಷ ಉಳಿಯಲಿ ಎಂದು ನಾನು ಆಶಿಸುತ್ತೇನೆ. ಆದರೆ ಬಿಜೆಪಿಯವರು ಸ್ಕೆಚ್ ಹಾಕಿದ್ದಾರೆ. ಅದು ಹೇಗೆ ಬಚಾವಾಗಿ ಬದುಕುತ್ತಾರೆ ನೋಡಬೇಕು. ಬಚಾವಾಗಲಿ, ಬದುಕಲಿ ಕರ್ನಾಟಕದಲ್ಲಿ ಜನತಾದಳವರು ಕೂಡಾ ಇರಬೇಕು" ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+