ತಕರಾರು ಇತ್ಯರ್ಥಗೊಳಿಸಿ, ಜನಸ್ನೇಹಿ ಸೇವೆ ನೀಡಿ: ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು: ತಹಶೀಲ್ದಾರ್, ಎಸಿ ಹಾಗೂ ಡಿಸಿ ಮಟ್ಟದ ಕೋರ್ಟ್‌ಗಳಲ್ಲಿ 6 ತಿಂಗಳಿನಿಂದ 5 ವರ್ಷಗಳ ತನಕ ನೂರಾರು ತಕರಾರು ಪ್ರಕರಣ ಬಾಕಿ ಉಳಿದಿದ್ದು, ಎಲ್ಲ ಪ್ರಕರಣಗಳನ್ನು 4 ತಿಂಗಳ ಕಾಲಮಿತಿಯಲ್ಲಿ ಇತ್ಯರ್ಥಪಡಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಗಡುವನ್ನು ನೀಡಿದ್ದಾರೆ. ಈ ಮೂಲಕ ತಕರಾರು ಪ್ರಕರಣಗಳ ಇತ್ಯರ್ಥಕ್ಕೆ ಚುರುಕು ಮುಟ್ಟಿಸಿದ್ದಾರೆ.
ಬೆಂಗಳೂರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಇಂದು ಆಯೋಜಿಸಿದ್ದ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತಾಡಿದ ಸಚಿವ ಕೃಷ್ಣ ಬೈರೇಗೌಡ, ಜನರಿಗೆ ಒಳಿತು ಕೆಡುಕು ಎರಡನ್ನೂ ಮಾಡುವ ಶಕ್ತಿ ಕಂದಾಯ ಇಲಾಖೆಗೆ ಇದೆ. ಆದರೆ ಕಾಂಗ್ರೆಸ್ ಸರ್ಕಾರವು ಉತ್ತಮ ಆಡಳಿತ ನೀಡಲಿದೆ ಎಂಬ ಭರವಸೆಯಲ್ಲಿ ಜನ ನಮಗೆ ಮತ ನೀಡಿದ್ದು, ಜನಸ್ನೇಹಿ ಆಡಳಿತ ನೀಡುವುದು ನಮ್ಮ ಆದ್ಯತೆಯಾಗಲಿ ಎಂದು ಕಿವಿಮಾತು ಹೇಳಿದ್ದಾರೆ ಕಂದಾಯ ಸಚಿವರು. ಅಲ್ಲದೆ ಇದೇ ವೇಳೆ, ಕಳೆದ ಐದು ವರ್ಷಗಳಿಂದ ಇತ್ಯರ್ಥವಾಗದ ತಕರಾರು ಪ್ರಕರಣಗಳನ್ನು ಶೀಘ್ರದಲ್ಲೇ ವಿಲೇವಾರಿಗೊಳಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಪ್ರಕರಣಗಳ ಇತ್ಯರ್ಥಕ್ಕೆ ಡೆಡ್‌ಲೈನ್ ಫಿಕ್ಸ್
ಬೆಂಗಳೂರು ಪ್ರಾದೇಶಿಕ ವಿಭಾಗದ ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ಕಳೆದ 6 ತಿಂಗಳಿಂದ 5 ವರ್ಷಗಳವರೆಗಿನ ಒಟ್ಟು 6,859 ತಕರಾರು ಪ್ರಕರಣಗಳು ಈವರೆಗೂ ಇತ್ಯರ್ಥವಾಗದೆ ಬಾಕಿ ಇವೆ. ಇದರಿಂದಾಗಿ ಜನರು ಪ್ರತಿದಿನ ತಹಶೀಲ್ದಾರ್ ಕಚೇರಿಗೆ ಅಲೆಯುವಂತಾಗಿದೆ. ಹೀಗಾಗಿ ತಹಶೀಲ್ದಾರ್ ಕಚೇರಿಯಲ್ಲಿ ಬಾಕಿ ಉಳಿದ ಪ್ರಕರಣಗಳಲ್ಲಿ 4000 ಪ್ರಕರಣಗಳನ್ನು ಮುಂದಿನ 4 ತಿಂಗಳ ಒಳಗೆ ಇತ್ಯರ್ಥಗೊಳಿಸಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಸಿ & ಡಿಸಿ ವಿರುದ್ಧ ಅಸಮಾಧಾನ!
ಹಾಗೇ ಇದೇ ವೇಳೆ ಬೆಂಗಳೂರು ಪ್ರಾದೇಶಿಕ ವಿಭಾಗದ ಉಪ ವಿಭಾಗಾಧಿಕಾರಿ (ಎಸಿ) ಹಾಗೂ ಜಿಲ್ಲಾಧಿಕಾರಿ (ಡಿಸಿ) ನ್ಯಾಯಾಲಯಗಳಲ್ಲೂ ಸಾಕಷ್ಟು ತಕರಾರು ಪ್ರಕರಣ ಬಾಕಿ ಉಳಿದಿದ್ದು ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಅದರ ಮಾಹಿತಿ ನೋಡುವುದಾದರೆ, ಉಪ ವಿಭಾಗಾಧಿಕಾರಿ ನ್ಯಾಯಾಲಯ ಪೈಕಿ ದೊಡ್ಡಬಳ್ಳಾಪುರ 5683, ಬೆಂಗಳೂರು ದಕ್ಷಿಣ 6129, ಬೆಂಗಳೂರು ಉತ್ತರ 6035, ಚಿಕ್ಕಬಳ್ಳಾಪುರ 3014, ಚಿತ್ರದುರ್ಗ 1374, ದಾವಣಗೆರೆ 152, ಹೊನ್ನಾಳ್ಳಿ 456, ಕೋಲಾರ 5112, ರಾಮಮನಗರ 4210, ಶಿವಮೊಗ್ಗ 613, ಸಾಗರ 411, ತುಮಕೂರು 7354, ಮಧುಗಿರಿ 3167 ಮತ್ತು ತಿಪಟೂರಿನ 742 ಪ್ರಕರಣಗಳು ಸೇರಿದಂತೆ ಒಟ್ಟಾರೆಯಾಗಿ 45,482 ಪ್ರಕರಣ ಬಾಕಿ ಇವೆ.

ಜಿಲ್ಲಾಧಿಕಾರಿ ನ್ಯಾಯಾಲಯದಲ್ಲೂ ಬಾಕಿ
ಎಸಿ ನ್ಯಾಯಾಲಯದ ರೀತಿಯೇ ಡಿಸಿ ನ್ಯಾಯಾಲಯದಲ್ಲೂ ಸಾಕಷ್ಟು ಕೇಸ್ ಬಾಕಿ ಇವೆ. ಜಿಲ್ಲಾಧಿಕಾರಿ ನ್ಯಾಯಾಲಯಗಳ ಪೈಕಿ ಬೆಂಗಳೂರು ಗ್ರಾಮಾಂತರ 1384, ಬೆಂಗಳೂರು ನಗರ 4974, ಚಿಕ್ಕಬಳ್ಳಾಪುರ 429, ಚಿತ್ರದುರ್ಗ 1711, ದಾವಣಗೆರೆ 81 ಹಾಗೂ ಕೋಲಾರ 102, ರಾಮನಗರ 501, ಶಿವಮೊಗ್ಗ 73, ತುಮಕೂರಿನ 697 ಸೇರಿದಂತೆ ಒಟ್ಟಾರೆಯಾಗಿ 10,ಿತ 065 ಪ್ರಕರಣಗಳು ಬಾಕಿ ಇವೆ.
ಪರಿಶೀಲನೆ ವೇಳೆ ಎಸಿ-ಡಿಸಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಬಗ್ಗೆ ಸಚಿವರು ಅಸಮಾಧಾನ ಹೊರಹಾಕಿ, ಉನ್ನತ ಅಧಿಕಾರಿಗಳೇ ತಮ್ಮ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣ ಇತ್ಯರ್ಥಪಡಿಸದಿದ್ದರೆ, ತಹಶೀಲ್ದಾರರಿಂದ ನೀವು ಹೇಗೆ ಪರಿಣಾಮಕಾರಿ ಕೆಲಸವನ್ನು ನಿರೀಕ್ಷೆ ಮಾಡಲು ಸಾಧ್ಯ. ಹೀಗಾಗಿ ನೀವು ಇತರರಿಗೆ ತಪ್ಪು ಉದಾಹರಣೆಯಾಗಬೇಡಿ ಎಂದು ಇದೇ ವೇಳೆ ಗಂಭೀರವಾಗಿ ಸೂಚನೆ ನೀಡಿದರು.
ರಾಜಸ್ವ ನಿರೀಕ್ಷಕರಿಗೂ ಜವಾಬ್ದಾರಿ
ಇದೇ ವೇಳೆ, ಉಪ ವಿಭಾಗಾಧಿಕಾರಿಗಳು ಸಿವಿಲ್ ತಕರಾರು ಪ್ರಕರಣಗಳನ್ನು ಮುಂದಿನ ಒಂದು ತಿಂಗಳಲ್ಲಿ ಇತ್ಯರ್ಥಪಡಿಸಬೇಕು. ಜಿಲ್ಲಾಧಿಕಾರಿಗಳು ತಮ್ಮ ಬಳಿಯ ಪ್ರಕರಣಗಳನ್ನು ವಿಭಾಗಿಸಿ ಈ ಪ್ರಕರಣಗಳನ್ನ ಎಷ್ಟು ದಿನದಲ್ಲಿ ಮುಗಿಸಬಹುದು ಎಂದು ನಿರ್ಧರಿಸಬೇಕು & ಸಣ್ಣಪುಟ್ಟ ಪ್ರಕರಣಗಳನ್ನ ಕೋರ್ಟ್ ಅದಾಲತ್ ಮೂಲಕ ಬಗೆಹರಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನ ಕರೆತರುವ ಜವಾಬ್ದಾರಿಯನ್ನ ಆಯಾ ರಾಜಸ್ವ ನಿರೀಕ್ಷಕರಿಗೆ ಅಂದರೆ ರೆವೆನ್ಯೂ ಇನ್ಸ್ಪೆಕ್ಟರ್‌ಗೆ ವಹಿಸಬೇಕು ಎಂದು ಸಭೆಯಲ್ಲಿ ಸಚಿವರು ಸೂಚಿಸಿದರು.

3 ತಿಂಗಳಲ್ಲಿ ವಿಲೇವಾರಿ ಮಾಡಿ
ಉಪ ವಿಭಾಗಾಧಿಕಾರಿಗಳು ತಮ್ಮ ನ್ಯಾಯಾಲಯದಲ್ಲಿ ಬಾಕಿ ಪ್ರಕರಣಗಳ ಪೈಕಿ 6 ತಿಂಗಳಿಗಿಂತ ಹಳೆಯ ಎಲ್ಲಾ ಪ್ರಕರಣಗಳೂ ಸೇರಿದಂತೆ ಉಳಿದಿರುವ 12000 ಪ್ರಕರಣಗಳನ್ನೂ ಮುಂದಿನ 4 ತಿಂಗಳಲ್ಲಿ ವಿಲೇವಾರಿ ಮಾಡಬೇಕು. ಜಿಲ್ಲಾಧಿಕಾರಿಗಳೂ ಸಹ ತಮ್ಮ ನ್ಯಾಯಾಲಯದಲ್ಲಿರುವ 6 ತಿಂಗಳಿಗಿಂತ ಹಳೆಯ ಎಲ್ಲ ಪ್ರಕರಣಗಳನ್ನ ಮುಂದಿನ 3 ತಿಂಗಳಲ್ಲಿ ವಿಲೇವಾರಿ ಮಾಡಬೇಕು ಎಂದು ಕಾಲಮಿತಿ ನೀಡಿದರು. ಹಾಗೇ ಸೆಪ್ಟೆಂಬರ್ 10ನೇ ದಿನಾಂಕದ ಒಳಗಾಗಿ ಮತ್ತೊಂದು ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದು, ಆ ಸಭೆಯಲ್ಲಿ ತಹಶೀಲ್ದಾರ್ ಹಾಗೂ ಎಸಿ-ಡಿಸಿ ನ್ಯಾಯಾಲಯಗಳಲ್ಲಿ ವಿಲೇವಾರಿಯಾಗಿರುವ ಪ್ರಕರಣಗಳ ಪರಿಶೀಲನೆ ನಡೆಸುತ್ತೇವೆ ಎಂದು ತಿಳಿಸಿದರು.
ಆದೇಶಕ್ಕೆ ಕಾಯ್ದಿರಿಸಿದ್ದ ಕೇಸ್ ವಿಳಂಬವೇಕೆ?
ಇನ್ನು ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಆದೇಶಕ್ಕೆ ಕಾಯ್ದಿರಿಸಿದ್ದ ಪ್ರಕರಣಗಳ ವಿಲೇವಾರಿಗೂ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವುದೇಕೆ? ಎಂದು ಸಚಿವರ ಕೃಷ್ಣ ಬೈರೇಗೌಡ ಅವರು ಸಭೆಯಲ್ಲಿ ಅಸಮಾಧಾನ ಹೊರಹಾಕಿದರು. ಇದೇ ವೇಳೆ ಅಧಿಕಾರಿಗಳಿಗೆ ಕಾನೂನು ಪಾಠ ಮಾಡಿದ ಸಚಿವರು, ಆದೇಶಕ್ಕೆ ಕಾಯ್ದಿರಿಸಲ್ಪಟ್ಟ ಕೇಸ್‌ಗಳಿಗೆ ಸಂಬಂಧಿಸಿದಂತೆ 15 ದಿನದ ಒಳಗೆ ಆದೇಶ ಹೊರಡಿಸಬೇಕು ಎಂಬ ಕಾನೂನು ಇದೆ. ಆದರೆ, ಉಪ ವಿಭಾಗಾಧಿಕಾರಿಗಳು ವಿಚಾರಣೆ ಮುಗಿಸಿ ಸಾವಿರಾರು ಪ್ರಕರಣಗಳ ಆದೇಶ ಹೊರಡಿಸದೆ ಇರುವುದು ಏಕೆ? ಎಂದು ಪ್ರಶ್ನೆ ಮುಂದಿಟ್ಟರು. ಈ ಪ್ರಕರಣಗಳನ್ನ ಗಂಭೀರವಾಗಿ ಪರಿಗಣಿಸಿ, ನಿಯಮದ ಅನ್ವಯ ತುರ್ತಾಗಿ ಆದೇಶ ಹೊರಡಿಸಿ ಎಂದು ತಿಳಿಸಿದರು.
ಬಾಕಿ ಕಾಮಗಾರಿ ಪೂರ್ಣಗೊಳಿಸಲು ತಾಕೀತು
ಇದೇ ವೇಳೆ ಸಾರ್ವಜನಿಕ ಆಸ್ತಿಗೆ ಉಂಟಾದ ಹಾನಿ ದುರಸ್ಥಿಗೆ 2019ರಿಂದ 2022ರ ಅವಧಿಯ ನಡುವೆ ಮಂಜೂರಾಗಿ ಇನ್ನೂ ಪೂರ್ಣಗೊಳ್ಳದ ಸುಮಾರು 14 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳ ಬಗ್ಗೆಯೂ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ಹೊರಹಾಕಿದರು. ಇನ್ನು ಈ ವಿಚಾರದ ಕುರಿತು ಕೂಡ ಗಂಭೀರವಾದ ಚರ್ಚೆಯನ್ನ ಸಭೆಯಲ್ಲಿ ನಡೆಸಲಾಗಿದೆ.
ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳದಿರಲು ಕಾರಣವೇನು? 45 ದಿನದಲ್ಲಿ ಮುಗಿಯಬೇಕಿದ್ದ ಕಾಮಗಾರಿ 2019ರಿಂದ ಬಾಕಿ ಉಳಿದಿವೆ ಎಂದರೆ ಏನರ್ಥ? 2019ರ ನೆರೆಯಲ್ಲಿ ರಿಪೇರಿಯಾದ ಮನೆಯನ್ನ ಅಧಿಕಾರಿಗಳು ಈಗ ದುರಸ್ಥಿ ಮಾಡಿ ಕೊಡ್ತೀರಾ? ಎಂದು ಆಕ್ರೋಶ ಹೊರಹಾಕಿದ ಸಚಿವರು ಮುಂದಿನ 15 ದಿನದಲ್ಲಿ ಎಲ್ಲಾ ಕಾಮಗಾರಿ ಪೂರ್ಣಗೊಳಿಸಬೇಕು, ಸಂಬಂಧಪಟ್ಟ ಕಾಮಗಾರಿಗೆ ಹಣ ಪಾವತಿ ಮಾಡಬೇಕು. ಕಳೆದ ವರ್ಷದ ಬಾಕಿ ಸಂಪೂರ್ಣವಾಗಿ ವಿಲೇವಾರಿ ಮಾಡಬೇಕು ಎಂದು ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.












Click it and Unblock the Notifications