ಅಧಿಕಾರ ಹಂಚಿಕೆ ಬಗ್ಗೆ ನಾನು ಹೇಳಿಕೆಯೇ ನೀಡಿಲ್ಲ: ಸಚಿವ ಮುನಿಯಪ್ಪ ಯೂಟರ್ನ್?
ರಾಜ್ಯ ಕಾಂಗ್ರೆಸ್‌ನಲ್ಲಿ ಈಗ ಅಧಿಕಾರ ಹಂಚಿಕೆಯ ವಿಚಾರ ಭುಗಿಲೆದ್ದಿದೆ. ಮೊದಲಿಗೆ ಮುಖ್ಯಮಂತ್ರಿ ಸ್ಥಾನದ ಅಧಿಕಾರದ ಹಂಚಿಕೆ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿದ್ದರು. ಇದು ನಿಜ ಎಂದು ಸಚಿವ ಕೆ.ಎಚ್.ಮುನಿಯಪ್ಪ ಕೂಡ ಹೇಳಿದ್ದಾಗಿ ಮಾಧ್ಯಮಗಳಿಗೆ ವರದಿಯಾಗಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವ ಮುನಿಯಪ್ಪ ನಾನು ಆ ರೀತಿಯ ಹೇಳಿಕೆಗಳನ್ನು ನೀಡಿಲ್ಲ ಎಂದು ಹೇಳಿದ್ದಾರೆ.
ಹಲವು ಮಾಧ್ಯಮಗಳಲ್ಲಿ ಸಚಿವ ಮುನಿಯಪ್ಪ ಅವರ ಹೇಳಿಕೆ ಬಗ್ಗೆ ವರದಿಯಾಗಿತ್ತು. ಇದೀಗ ಅವರು ಹೇಳಿಕೆ ಬೆನ್ನಲ್ಲೇ ಯೂಟರ್ನ್ ಹೊಡೆದಿದ್ದಾರಾ ಎನ್ನುವ ಅನುಮಾನವೂ ವ್ಯಕ್ತವಾಗುತ್ತಿದೆ. ಕೋಲಾರದಲ್ಲಿ ನಾನು ಮಾಧ್ಯಮಕ್ಕೆ ನೀಡಿರುವ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿದ್ದು, ಮುಖ್ಯಮಂತ್ರಿಯವರ ಅಧಿಕಾರ ಅವಧಿಯ ಹಂಚಿಕೆಯ ಕುರಿತ ಯಾವ ಹೇಳಿಕೆಯನ್ನು ಸಹ ನೀಡಿರುವುದಿಲ್ಲ ಎಂದು ಸಚಿವ ಮುನಿಯಪ್ಪ ಅವರು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ಅಧಿಕಾರ ಹಂಚಿಕೆಯ ವಿಚಾರವು ಬೂದಿ ಮುಚ್ಚಿದ ಕೆಂಡದಂತಿದ್ದು, ಡಿಕೆ ಶಿವಕುಮಾರ್ ಅವರು ಸಂದರ್ಶನವೊಂದರಲ್ಲಿ ಅವರು ಅಧಿಕಾರ ಹಂಚಿಕೆಯ ಒಪ್ಪಂದವಾಗಿರುವುದು ನಿಜ ಎಂದು ಹೇಳಿದ್ದರು. ಆದರೆ, ಇದನ್ನು ಸಿಎಂ ಸಿದ್ದರಾಮಯ್ಯ ಅವರು ನಿರಾಕರಿಸಿದ್ದರು. ನಿನ್ನೆ ಇದೇ ವಿಚಾರವಾಗಿ ಕಾಂಗ್ರೆಸ್ ಸಚಿವ ಕೆ.ಎಚ್.ಮುನಿಯಪ್ಪ ಕೂಡ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ವಿಚಾರವಾಗಿ ಒಪ್ಪಂದ ಆಗಿದೆ. ಈ ವಿಚಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದು ಸತ್ಯ. ಈ ಬಗ್ಗೆ ನನ್ನನ್ನು ಬೇರೇ ಏನೂ ಕೇಳಬೇಡಿ ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿಕೆ ನೀಡಿದ್ದಾಗಿ ಹೇಳಲಾಗಿತ್ತು. ಇಂದು ನಾನು ಆ ರೀತಿ ಹೇಳಿಯೇ ಇಲ್ಲ ಎಂದು ಸಚಿವ ಮುನಿಯಪ್ಪ ಹೇಳಿರುವುದು ಮತ್ತೆ ಅನುಮಾನ ಹುಟ್ಟುಹಾಕಿದೆ.

ಡಿಕೆಶಿ ಹೇಳಿದ್ದೇನು?: ಸಿಎಂ ಸ್ಥಾನದ ವಿಚಾರವಾಗಿ ನಮ್ಮ ನಡುವೆ ಒಪ್ಪಂದ ನಡೆದಿದೆ. ಅದನ್ನು ಈಗ ಬಹಿರಂಗಪಡಿಸಲು ಸಾಧ್ಯವಿಲ್ಲ, ಸಮಯ ಬಂದಾಗ ಹೇಳುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದರು. ನಂತರ ಈ ವಿಚಾರವಾಗಿ ಕಾಂಗ್ರೆಸ್‌ನಲ್ಲಿ ಗದ್ದಲ ಉಂಟಾಗಿತ್ತು. ಇದೇ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಕೇಳಿದಾಗ ಆ ರೀತಿಯ ಯಾವುದೇ ಅಧಿಕಾರದ ಒಪ್ಪಂದ ನಡೆದಿಲ್ಲ ಎಂದು ಖಡಕ್ ಆಗಿ ಹೇಳಿದ್ದರು. ಬಳಿಕ ಈ ವಿಚಾರವು ತಣ್ಣಗಾಗಿತ್ತು.
ಬಳಿಕ ಡಿ.ಕೆ.ಶಿವಕುಮಾರ್ ಅವರೂ ಈ ವಿಚಾರದ ಬಗ್ಗೆ ಹೆಚ್ಚಾಗಿ ಮಾತನಾಡದೆ ಸೈಲೆಂಟ್ ಆಗಿದ್ದರು. ಇನ್ನು ಹಾಸನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ್ದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರ ಬೆನ್ನ ಹಿಂದೆ ಬಂಡೆಯಂತೆ ನಿಲ್ಲುವುದಾಗಿ ಹೇಳಿದ್ದೇನೆ. ಈಗಲೂ ಇದ್ದೀನಿ, ನಾಳೆಯೂ ಇರ್ತೀನಿ, ಸಾಯುವವರೆಗೂ ಇರುತ್ತೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು.
ಇನ್ನು ಅಧಿಕಾರ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಗೃಹ ಸಚಿವ ಪರಮೇಶ್ವರ್ ಕೂಡ ಅವರಿಬ್ಬರೇ ಒಪ್ಪಂದ ಮಾಡಿಕೊಂಡಿದ್ದರೆ ನಾವೆಲ್ಲ ಏಕೆ? ಎಂದು ಖಾರವಾಗಿ ಮಾತನಾಡಿದ್ದರು. ಇನ್ನು ಸಚಿವ ಮುನಿಯಪ್ಪ ಅವರ ಹೇಳಿಕೆ ಕೂಡ ಸಂಚಲನ ಮೂಡಿಸಿತ್ತು. ಇದೀಗ ಅವರು ಕೂಡ ಯೂಟರ್ನ್ ಹೊಡೆದಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications