ಸಿಂಗಾಪುರದಲ್ಲಿ ಸರ್ಕಾರ ಬೀಳಿಸುವ ಸ್ಕೆಚ್; ಜೆಡಿಎಸ್ ಬಿಜೆಪಿ ಒಂದಾಗಿ ಷಡ್ಯಂತ್ರ: ದಿನೇಶ್ ಗುಂಡೂರಾವ್
ತುಮಕೂರು, ಜುಲೈ 25: ನಮ್ಮ ಸರ್ಕಾರ ಬೀಳಿಸಲು ಸಿಂಗಾಪುರದಲ್ಲಿ ಜೆಡಿಎಸ್ ಬಿಜೆಪಿ ಒಂದಾಗಿ ಷಡ್ಯಂತ್ರ ಮಾಡುತ್ತಿರುವುದು ಸತ್ಯ. ಆದರೆ ನಾವು ಒಗ್ಗಟ್ಟಾಗಿದ್ದೇವೆ, ಐದು ವರ್ಷ ನಾವು ಅಧಿಕಾರ ನಡೆಸುತ್ತೇವೆ. ಒಳ್ಳೆ ಆಡಳಿತ ಕೊಡುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಈ ಕುರಿತು ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸರ್ಕಾರದ ವಿರುದ್ದ ಸಿಂಗಾಪುರದಲ್ಲಿ ಆಪರೇಷನ್ ನಡೆಯುತ್ತಿರುವ ವಿಚಾರವಾಗಿ ನಮ್ಮ ಪಕ್ಷದ ಅಧ್ಯಕ್ಷರು ಈ ಬಗ್ಗೆ ಮಾತಾಡಿದ್ದಾರೆ. ಅವರಿಗೆ ಈ ಬಗ್ಗೆ ವಿಶೇಷವಾಗಿ ಮಾಹಿತಿ ಇರಬಹುದು, ಯಾರಿಗೂ ಯಾವ ಆತಂಕವೂ ಇಲ್ಲ ಎಂದು ಹೇಳಿದರು.

ಸಚಿವರ ವಿರುದ್ದ ಕಾಂಗ್ರೆಸ್ ಶಾಸಕರು ಸಿಎಂಗೆ ಪತ್ರ ಬರೆದ ವಿಚಾರವಾಗಿ ಮಾತನಾಡಿದ ಅವರು, ಶಾಸಕರು ಸಚಿವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಿಎಂಗೆ ಪತ್ರ ಬರೆದಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ನಿನ್ನೆ ಸಿಎಂ ಅವರನ್ನ ಭೇಟಿ ಮಾಡಿದ್ದೆ. ಅದರ ಈ ಬಗ್ಗೆ ನನ್ನ ಬಳಿ ಸಿಎಂ ಸಿದ್ದರಾಮಯ್ಯ ಅವರು ಏನೂ ಮಾತನಾಡಿಲ್ಲ ಎಂದು ತಿಳಿಸಿದರು.
ಹಿಂದಿನ ಸರ್ಕಾರದಲ್ಲಿ ಆರೋಗ್ಯ ಇಲಾಖೆಯಲ್ಲಿ ನಡೆದ ಅವ್ಯವಹಾರಗಳನ್ನು ತನಿಖೆ ಮಾಡುತ್ತೇವೆ. ಕೋವಿಡ್ ಕಾಲದಲ್ಲಿ ನಡೆದ ಎಲ್ಲ ಅವ್ಯವಹಾರಗಳನ್ನು ತನಿಖೆ ಮಾಡಿಸುತ್ತೇವೆ, ಇದು ದ್ವೇಷದ ರಾಜಕಾರಣ ಅಲ್ಲ, ತನಿಖೆ ಮಾಡಿಸುವ ಬಗ್ಗೆ ನಾವು ಚುನಾವಣೆಯಲ್ಲೇ ಹೇಳಿದ್ದೇವೆ. ಯಾವ ರೀತಿಯ ತನಿಖೆಯಾಗಬೇಕು ಅನ್ನೋದನ್ನು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ.
ಕೋವಿಡ್ ಸಂದರ್ಭದಲ್ಲಿ ಅವರು ಖರೀದಿ ಮಾಡಿದ ಔಷಧಿ, ಸಲಕರಣೆಗಳು ಅದರ ಬಗ್ಗೆ ತನಿಖೆ ನಡೆಸುವುದು ಅಗತ್ಯವಾಗಿದೆ. ಇದರ ಕುರಿತು ಪಬ್ಲಿಕ್ ಅಕೌಂಟ್ ಕಮಿಟಿ ವರದಿ ನೀಡಲಾಗಿದೆ. ಈ ವರದಿಯಲ್ಲಿ ಅವ್ಯವಹಾರದ ಬಗ್ಗೆ ಉಲ್ಲೇಖ ಮಾಡಲಾಗಿದೆ, ಎಲ್ಲವನ್ನೂ ಸಂಪೂರ್ಣವಾಗಿ ತನಿಖೆ ಮಾಡುತ್ತೇವೆ ಎಂದು ಹೇಳಿದರು.












Click it and Unblock the Notifications