ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್ ಪಾವತಿಸದಂತೆ ಸಚಿವ ಚಲುವರಾಯಸ್ವಾಮಿ ಕರೆ
ಮಂಡ್ಯ, ಜುಲೈ 1: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಗೆ ಎರಡನೇ ಟೋಲ್ ಪಾವತಿಸದಂತೆ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಜನರಿಗೆ ಕರೆ ನೀಡಿದ್ದಾರೆ.
ಇದರ ವಿರುದ್ಧದ ಪ್ರತಿಭಟನೆಗೆ ಬೆಂಬಲ ನೀಡುವುದಾಗಿ. ಆದರೆ ನೇರವಾಗಿ ಪ್ರತಿಭಟಿಸುವುದಿಲ್ಲ. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಈ ಸಂಬಂಧ ನಮ್ಮ ಶಾಸಕರು ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿದ್ದಾರೆ ಎಂದರು.

ಮೈಸೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೀಡುವ ಹಣ ಆಯಾ ರಾಜ್ಯಗಳು ಸಂಗ್ರಹಿಸುವ ತೆರಿಗೆಯಾಗಿದೆ. ಆದ್ದರಿಂದ ಅವರು ಎಕ್ಸ್‌ಪ್ರೆಸ್‌ವೇ ಬಳಸುವುದಕ್ಕಾಗಿ ಸಂಗ್ರಹಿಸುವ ಟೋಲ್‌ಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ರಾಜ್ಯ ಸರ್ಕಾರವನ್ನು ಸಂಪರ್ಕಿಸಬೇಕು ಎಂದು ಹೇಳಿದ್ದಾರೆ.
ಟೋಲ್ ಹಣ ಸಂಗ್ರಹಿಸುವುದಕ್ಕೆ ನಮಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಕಾಮಗಾರಿ ಪೂರ್ಣಗೊಂಡ ನಂತರವೇ ಮಾಡಬೇಕು. ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತಗಳು ಹೆಚ್ಚುತ್ತಿರುವ ಕಾರಣ ಎಡಿಜಿಪಿ ಅಲೋಕ್ ಕುಮಾರ್ ಎಕ್ಸ್‌ಪ್ರೆಸ್ ಮಾರ್ಗವನ್ನು ಪರಿಶೀಲಿಸಿದ್ದಾರೆ. ನಾವು ಶೀಘ್ರದಲ್ಲೇ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುತ್ತೇವೆ ಎಂದು ಅವರು ಹೇಳಿದರು.

ಬಿಜೆಪಿ ಮುಖಂಡ ಸಿ ಟಿ ರವಿ ಹೇಳಿಕೆಗೆ ಸಂಬಂಧಿಸಿದಂತೆ ಸಚಿವ ಚಲುವರಾಯಸ್ವಾಮಿ, 'ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರ ಪಂಚೆ ಬಗ್ಗೆ ಮಾತನಾಡುವ ಮೊದಲು ಸಿ ಟಿ ರವಿ ಅವರು ಪಂಚೆ ಸರಿಪಡಿಸಿಕೊಳ್ಳಲಿ, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಜಗಳ ಎಲ್ಲಿ, ಜನರು ಈಗಾಗಲೇ ಉತ್ತರ ನೀಡಿದ್ದಾರೆ.
ಅವರು ತಮ್ಮ ಮನಸ್ಸಿಗೆ ಬಂದದ್ದನ್ನು ಹೇಳಿಯೇ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಸ್ಥಾನವನ್ನು 65 ಸ್ಥಾನಗಳಿಗೆ ಇಳಿಸಿಕೊಂಡಿದ್ದಾರೆ. ಎಲ್ಲ ವಿರೋಧ, ಕಾಮೆಂಟ್‌ಗಳ ಹೊರತಾಗಿಯೂ ನಾವು ನಮ್ಮ ಮಾತನ್ನು ಉಳಿಸಿಕೊಳ್ಳುತ್ತೇವೆ ಮತ್ತು ನಮ್ಮ ಭರವಸೆಗಳನ್ನು ಜಾರಿಗೊಳಿಸುತ್ತೇವೆ. ಅವರು ತಮ್ಮ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲಿ ಎಂದು ಅವರು ಹೇಳಿದರು.
ಮೈಸೂರು ಮತ್ತು ನಿಡಘಟ್ಟ ನಡುವೆ ಗಣಂಗೂರು ಬಳಿ ಟೋಲ್ ಸಂಗ್ರಹಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಿರ್ಧರಿಸಿದ್ದು, ಇಂದಿನಿಂದ ಟೋಲ್ ಆರಂಭವಾಗಲಿದೆ. ಜುಲೈ 1 ರಿಂದಲೇ ಟೋಲ್ ದರ ದುಪ್ಪಟ್ಟಾಗಲಿದೆ. ಈಗಿರುವ ಶೇಷಗಿರಿಹಳ್ಳಿ ಟೋಲ್ ಪ್ಲಾಜಾದಲ್ಲಿ ಕಾರುಗಳು ಏಕಮುಖ ಸಾರಿಗೆಗೆ 165 ರೂಪಾಯಿ ನೀಡಬೇಕಾಗಿದೆ.
ಕಾರು, ಎಸ್‌ಯುವಿ, ವ್ಯಾನ್: ಏಕಮುಖ ಸಂಚಾರಕ್ಕೆ 155 ರೂಪಾಯಿ, 24 ಗಂಟೆಯೊಳಗೆ ಹಿಂದಿರುಗುವ ಪ್ರಯಾಣಕ್ಕೆ 235 ರೂಪಾಯಿ. ಎಲ್‌ಸಿವಿ/ಎಲ್‌ಜಿವಿ/ಮಿನಿ ಬಸ್: ಏಕಮುಖ ಪ್ರಯಾಣಕ್ಕೆ 235 ರೂಪಾಯಿ ಮತ್ತು 24 ಗಂಟೆಗಳ ಒಳಗೆ ಹಿಂದಿರುಗಲು 375 ರೂಪಾಯಿ. ಎರಡು ಆಕ್ಸಲ್ ಟ್ರಕ್, ಬಸ್: ಏಕಮುಖ ಪ್ರಯಾಣಕ್ಕೆ 525 ರೂಪಾಯಿ ಮತ್ತು 24 ಗಂಟೆಗಳ ಒಳಗೆ ಹಿಂದಿರುಗಲು 790 ರೂಪಾಯಿ. ಮೂರು ಆಕ್ಸಲ್‌ಗಳ ವಾಣಿಜ್ಯ ವಾಹನ: ಏಕಮುಖ ಪ್ರಯಾಣಕ್ಕೆ 575 ರೂಪಾಯಿ ಮತ್ತು 24 ಗಂಟೆಗಳ ಒಳಗೆ ಹಿಂದಿರುಗಲು 860 ರೂಪಾಯಿ.
4-6 ಆಕ್ಸಲ್‌ಗಳ ಭಾರಿ ಗಾತ್ರದ ವಾಹನ, ಜೆಸಿಬಿ: ಏಕಮುಖ ಪ್ರಯಾಣಕ್ಕೆ 825 ರೂಪಾಯಿ ಮತ್ತು 24 ಗಂಟೆಗಳ ಒಳಗೆ ಹಿಂದಿರುಗಲು 1240 ರೂಪಾಯಿ. 7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್ ವಾಹನಗಳು: ಏಕಮುಖ ಪ್ರಯಾಣಕ್ಕೆ 1005 ರೂಪಾಯಿ ಮತ್ತು 24 ಗಂಟೆಗಳ ಒಳಗೆ ಹಿಂದಿರುಗಲು 1510 ರೂಪಾಯಿ. ಟೋಲ್ ಪ್ಲಾಜಾದಿಂದ 20 ಕಿಮೀ ವ್ಯಾಪ್ತಿಯೊಳಗೆ ಪ್ರಯಾಣಿಸುವ ವಾಣಿಜ್ಯೇತರ ವಾಹನಗಳಿಗೆ 330 ರೂಪಾಯಿ ಬೆಲೆಯ ಮಾಸಿಕ ಪಾಸ್ ಅನ್ನು ಎನ್‌ಹೆಚ್‌ಎಐ ನೀಡಲಿದೆ.












Click it and Unblock the Notifications