ಕರ್ನಾಟಕದ ಕಾರಾಗೃಹಗಳಲ್ಲಿರುವ ಕೈದಿಗಳ ದುಡಿಮೆಗೆ ಕನಿಷ್ಠ ಕೂಲಿ ನಿಗದಿ
ಬೆಂಗಳೂರು, ಜುಲೈ 16: ಕರ್ನಾಟಕದ ಕಾರಾಗೃಹಗಳಲ್ಲಿ ದುಡಿಯುತ್ತಿರುವ ಕೈದಿಗಳಿಗೆ ನಿಗದಿಪಡಿಸಿರುವ ಕನಿಷ್ಠ ಕೂಲಿಯ ದರವನ್ನು ನೀಡಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ರಾಜ್ಯ ಕಾರಾಗೃಹ ಅಭಿವೃದ್ದಿ ಮಂಡಳಿಯ ಪ್ರಥಮ ಸಭೆಯ ನಂತರ ಮಾತನಾಡಿದ ಅವರು, ಕಾರಾಗೃಹಗಳಲ್ಲಿ ಇರುವ ಕೈದಿಗಳ ಕಾರ್ಯಕ್ಕೆ ಸರ್ಕಾರವೇ ವೇತನ ಪಟ್ಟಿಯನ್ನು ನಿಗದಿಪಡಿಸಿದೆ. ಈ ಬಗ್ಗೆ ರಾಜ್ಯ ಹಣಕಾಸು ಇಲಾಖೆಗೆ ಪ್ರಸ್ತಾವನೆ ನೀಡಿದ್ದು, ಕೈದಿಗಳು ತಾವು ಮಾಡಿದ ದುಡಿಮೆಗೆ ರಾಜ್ಯ ಸರ್ಕಾರ ಇತ್ತೀಚೆಗೆ ಪರಾಮರ್ಶಿಸಬೇಕು. ಹೀಗೆ ನಿಗದಿ ಪಡಿಸಿದ ಕನಿಷ್ಠ ಕೂಲಿ ದರವನ್ನು ನೀಡಲು ನಿರ್ಧರಿಸಲಾಗಿದೆ ಎಂದರು.
ಕರ್ನಾಟಕದ ಹಣಕಾಸು ಇಲಾಖೆಯು ಕೈದಿಗಳಿಗೆ ವೇತನ ನೀಡುವುದಕ್ಕಾಗಿ ಏಳು ಕೋಟಿ ರೂಪಾಯಿಗಳ ವಿಶೇಷ ಅನುದಾನ ಬಿಡುಗಡೆ ಪ್ರಕ್ರಿಯೆ ನಡೆಸಿದೆ ಎಂದು ಸಚಿವ ಅರಗ ಜ್ಞಾನೇಂದ್ರ ಮಾಹಿತಿ ನೀಡಿದರು. ಈ ವೇಳೆ ರಾಜ್ಯ ಕಾರಾಗೃಹಗಳ ಡಿಜಿ ಅಲೋಕ್ ಮೋಹನ್, ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್, ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ,(ಗೃಹ ಇಲಾಖೆ) ರಜನೀಶ್ ಗೋಯಲ್ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳು ಹಾಜರಾಗಿದ್ದರು.

ಕಾರಾಗೃಹ ಅಭಿವೃದ್ದಿ ಮಂಡಳಿಯ ಪ್ರಥಮ ಸಭೆ:
ರಾಜ್ಯದ ಕಾರಾಗೃಹ ಅಭಿವೃದ್ದಿ ಮಂಡಳಿಯ ಪ್ರಥಮ ಸಭೆಯ ಬಗ್ಗೆ ಪ್ರಸ್ತಾಪಿಸಿದ ಸಚಿವರು, ರಾಜ್ಯದ ವಿವಿಧ ಇಲಾಖೆಗಳು, ತಮ್ಮ ವ್ಯಾಪ್ತಿಯಲ್ಲಿ ಬರುವಂತಹ ಆರ್ಥಿಕ ಚಟುವಟಿಕೆಗಳಲ್ಲಿ ಕಾರಾಗೃಹ ಕೈದಿಗಳನ್ನು ಮಾನವ ಸಂಪನ್ಮೂಲವನ್ನಾಗಿ ಬಳಸಿಕೊಳ್ಳಲು ಅನುವಾಗುವಂತೆ ಯೋಜನೆಗಳನ್ನು ಸಲ್ಲಿಸಲು ಕೋರಲಾಯಿತು ಎಂದರು.
ಕೇಂದ್ರ ಕಾರಾಗೃಹಗಳಲ್ಲಿ ಬಂಧಿಯಾಗಿರುವ ಮಾನವ ಸಂಪನ್ಮೂಲವನ್ನು ರಾಷ್ಟ್ರೀಯ ಸಂಪನ್ಮೂಲವನ್ನಾಗಿ ಪರಿವರ್ತಿಸಲು ಯೋಜನೆ ಹಾಕಿಕೊಳ್ಳಲಾಗುತ್ತಿದೆ. ಈಗಾಗಲೇ ನಡೆಸಲಾಗುತ್ತಿರುವ ಹತ್ತು ಹಲವು ಕೈಗರಿಕಾ ಚಟುವಟಿಕೆಗಳಿಗೆ ಕಾರ್ಪೊರೇಟ್ ಸ್ವರೂಪವನ್ನು ನೀಡುವ ಪ್ರಯತ್ನ ಇದಾಗಿದೆ ಎಂದು ಹೇಳಿದರು.
ಕಾರಾಗೃಹದಲ್ಲಿ ಕೈಗಾರಿಕಾ ಚಟುವಟಿಕೆ:
ರಾಜ್ಯದ ಕಾರಾಗೃಹಗಳಲ್ಲಿ ಪ್ರಸ್ತುತ, ನೇಯ್ಗೆ, ಮರಗೆಲಸ, ಬೇಕರಿ, ಜಮಖಾನ, ಶಾಮಿಯಾನ, ಸೋಪ್ ಹಾಗೂ ಇನ್ನಿತರ ಕೈಗಾರಿಕಾ ಚಟುವಟಿಕೆಗಳು ನಡೆಯುತ್ತಿದ್ದು, ಹಾಲಿ ಇರುವ ಯಂತ್ರೋಪಕರಣಗಳ ಉನ್ನತೀಕರಣ, ಕೈದಿಗಳಿಗೆ ವೃತ್ತಿಯಲ್ಲಿ ನೈಪುಣ್ಯತೆ ಒಳಗೊಂಡಂತೆ ಹಲವಾರು ಸುಧಾರಣಾ ಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆಯೂ ಫಲಪ್ರದ ಚರ್ಚೆಯಾಗಿದೆ ಎಂದು ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.












Click it and Unblock the Notifications