ಕೋಲಾರಕ್ಕಿಂತ ಮಂಡ್ಯದಲ್ಲೇ ಹೆಚ್ಚು ಹಾಲು ಉತ್ಪಾದನೆ
ಮಂಡ್ಯ, ಜೂನ್ 16 : ರಾಜ್ಯದಲ್ಲಿ ಹೆಚ್ಚು ಹಾಲು ಉತ್ಪಾದಿಸುವ ಹೆಗ್ಗಳಿಕೆಗೆ ಕೋಲಾರ ಪಾತ್ರವಾಗಿತ್ತು. ಆದರೆ ಇದೀಗ ಕೋಲಾರ ಜಿಲ್ಲೆಯನ್ನು ಹಿಂದಿಕ್ಕಿದ ಮಂಡ್ಯ, ರಾಜ್ಯದಲ್ಲಿ ಅತಿ ಹೆಚ್ಚು ಹಾಲಿನ ಉತ್ಪಾದನೆ ಮಾಡುತ್ತಿರುವ ಜಿಲ್ಲೆ ಎಂಬ ಹಿರಿಮೆಗೆ ಪಾತ್ರವಾಗಿದೆ. ಅದರೊಂದಿಗೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟವೂ ಪ್ರಗತಿ ಪಥದಲ್ಲಿ ದಾಪುಗಾಲು ಹಾಕುತ್ತಿದೆ. ಪ್ರಸಕ್ತ ಸಾಲಿನಲ್ಲಿ ಒಕ್ಕೂಟಕ್ಕೆ 8 ಕೋಟಿ ರೂ ಆದಾಯ ಹರಿದು ಬರುವ ಅಂದಾಜಿದೆ.
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ (ಮನ್ ಮುಲ್) 1065 ಹಾಲು ಉತ್ಪಾದಕರ ಸಹಕಾರ ಸಂಘಟನೆಗಳು ನೋಂದಾವಣೆ ಮಾಡಿಕೊಂಡಿದ್ದು, ಈ ಸಹಕಾರ ಸಂಘಗಳಲ್ಲಿ 2 ಲಕ್ಷದ 43 ಸಾವಿರ ಮಂದಿ ಹಾಲು ಉತ್ಪಾದಕರಿದ್ದಾರೆ. ಪ್ರತಿ ನಿತ್ಯ ಮನ್ ಮುಲ್ ಗೆ 6 ಲಕ್ಷದ 60 ಸಾವಿರ ಹಾಲು ಸರಬರಾಜಾಗುತ್ತಿದೆ. ಇದರಿಂದ ಹೈನುಗಾರಿಕೆಯನ್ನು ನಂಬಿರುವ ಒಕ್ಕೂಟದ ಸದಸ್ಯರಿಗೆ ಪ್ರತಿ ತಿಂಗಳು 50 ಕೋಟಿ ರೂ. ಗೂ ಹೆಚ್ಚಿನ ಹಣ ಬಟವಾಡೆಯಾಗುತ್ತಿದೆ. [ಲಾಭದಲ್ಲಿದ್ದರೂ ದರ ಇಳಿಕೆ ಇಲ್ಲ]

ಅಲ್ಲದೆ, ಪ್ರತಿ ತಿಂಗಳು ಸರ್ಕಾರ ಹಾಲು ಉತ್ಪಾದಕರಿಗೆ ನೀಡುವ 4 ರೂ. ಪ್ರೋತ್ಸಾಹ ಧನದ ಮೂಲಕ ಪ್ರತಿ ತಿಂಗಳು 8 ಕೋಟಿ ರೂ. ಗೂ ಹೆಚ್ಚಿನ ಹಣ ರೈತರಿಗೆ ದೊರೆಯುತ್ತಿದೆ. ಒಟ್ಟಾರೆಯಾಗಿ ಮಂಡ್ಯ ಹಾಲು ಒಕ್ಕೂಟ ವಾರ್ಷಿಕ 1,500 ಕೋಟಿ ವಹಿವಾಟು ನಡೆಸಿ, ಇತರ ಜಿಲ್ಲೆಯ ಹಾಲು ಒಕ್ಕೂಟಕ್ಕೆ ಮಾದರಿಯಾಗಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿ ಲಕ್ಷ್ಮಣ ರೆಡ್ಡಿ ಹೇಳುತ್ತಾರೆ.
ಮಂಡ್ಯ ಹಾಲು ಒಕ್ಕೂಟದಲ್ಲಿ ಪ್ರತಿ ನಿತ್ಯ 6 ಲಕ್ಷದ 60 ಸಾವಿರ ಲೀಟರ್ ಹಾಲು ಸಂಗ್ರಣೆಯಾಗುತ್ತಿದೆ. ಮಂಡ್ಯ ಹಾಲು ಒಕ್ಕೂಟಕ್ಕೆ ಸೇರಿದ ಬೆಂಗಳೂರಿನ ಕುಂಬಳಗೂಡಿನಲ್ಲಿರುವ ಘಟಕದಲ್ಲಿ 85 ಸಾವಿರ ಲೀಟರ್ ಹಾಲನ್ನು ಗುಡ್ ಲೈಫ್ ಹಾಲನ್ನಾಗಿ ಪರಿವರ್ತನೆ ಮಾಡಲಾಗುತ್ತಿದೆ. ಅಲ್ಲದೆ, 1 ಲಕ್ಷದ 50 ಸಾವಿರ ಲೀಟರ್ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತಿಸಲಾಗುತ್ತಿದೆ. ಇನ್ನುಳಿದ ಹಾಲನ್ನು ಮಾತೃ ಸಂಸ್ಥೆಯಾದ ಕೆಎಂಎಫ್ ಮೂಲಕ ಕೇರಳ ಹಾಗೂ ಇತರೆ ರಾಜ್ಯಗಳಿಗೆ ಹಾಲನ್ನು ಪೂರೈಕೆ ಮಾಡಲಾಗುತ್ತಿದೆ.
ಮಂಡ್ಯ ಜಿಲ್ಲೆಯಲ್ಲಿರುವ ಒಟ್ಟು ಹಾಲು ಉತ್ಪಾದಕರ ಸಹಕಾರ ಸಂಘಗಳು: 1065. ಹಾಲು ಉತ್ಪಾದಕ ಮಹಿಳಾ ಸಹಾರ ಸಂಘಗಳು 426. ಎರಡು ಶೀತಲೀಕರಣ ಘಟಕಗಳು ಹಾಗೂ 65 ಮಿಲ್ಕ್ ಬಲ್ಕ್ ಕೂಲರ್ ಗಳಿವೆ.
ದಾಖಲಾರ್ಹ ಸಂಗತಿಯೆಂದರೆ ಹಾಲು ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಜನಶ್ರೀ ವಿಮಾ ಯೋಜನೆ, ರಾಸುಗಳಿಗೆ ವಿಮೆ ಅಲ್ಲದೆ, ರಾಸುಗಳಿಗೆ ಸಮತೋಲನ ಆಹಾರವಾದ ಫೀಡ್, ಮೇವಿನ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಣೆ ಮಾಡಿ, ಜಿಲ್ಲೆಯಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡಲಾಗುತ್ತಿದೆ ಎಂದು ಲಕ್ಷ್ಮಣ ರೆಡ್ಡಿ ವಿವರಿಸುತ್ತಾರೆ.

ಮಂಡ್ಯ ಹಾಲು ಒಕ್ಕೂಟ ರಾಜ್ಯದ ಇತರೆ ಹಾಲು ಒಕ್ಕೂಟಗಳಿಗಿಂತ ಹೆಚ್ಚು ಪ್ರಮಾಣದ ಹಾಲು ಉತ್ಪಾದನೆ ಮಾಡುತ್ತಿದ್ದರೂ, ಇನ್ನು ಅಧುನೀಕರಣಗೊಂಡಿಲ್ಲ. ಹಾಲಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಅದಕ್ಕೆ ತಕ್ಕಂತೆ ಉಪ ಉತ್ಪನ್ನಗಳನ್ನು ತಯಾರಿಸಲು ಘಟಕಗಳನ್ನು ಆಧುನಿಕರಗೊಳಿಸುತ್ತಿಲ್ಲ. ಅಲ್ಲದೆ, ಸಿಬ್ಬಂದಿಯ ಕೊರತೆ ಕೂಡ ಇದೆ. ತಮ್ಮ ಅವಧಿಯಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಿ, ಅಧುನೀಕ ಯಂತ್ರೋಪಕರಣಗಳ ಮೂಲಕ ಒಕ್ಕೂಟವನ್ನು ಬಲವರ್ಧಿಸಲಾಗುವುದು. ಜತೆಗೆ ಮಾರುಕಟ್ಟೆಯನ್ನು ವಿಸ್ತರಣೆ ಮಾಡಲಾಗುವುದು ಎಂದು ಮನ್ ಮುಲ್ ನೂತನ ಅಧ್ಯಕ್ಷ ಕದಲೂರು ರಾಮಕೃಷ್ಣ ಹೇಳುತ್ತಾರೆ.
ಒಟ್ಟಾರೆ ಮಂಡ್ಯ ಹಾಲು ಒಕ್ಕೂಟ ರಾಜ್ಯದ ಇತರೆ ಹಾಲು ಒಕ್ಕೂಟಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದನೆ ಮಾಡುತ್ತಿದೆ. ಅಲ್ಲದೆ, ಸತತವಾಗಿ ಲಾಭಗಳಿಸುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಹೆಚ್ಚಾಗುತ್ತಿದ್ದು, ಅದಕ್ಕೆ ತಕ್ಕಂತೆ ಒಕ್ಕೂಟ ಅಧುನೀಕಣಗೊಳ್ಳಬೇಕಿದೆ ಎನ್ನುವುದು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡವರ ಆಗ್ರಹವಾಗಿದೆ. ಇದಕ್ಕೆ ಆಡಳಿತ ಮಂಡಳಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.
ಮಂಡ್ಯ ಜಿಲ್ಲೆಯಲ್ಲಿ ಹಾಲು ಸಂಗ್ರಹಣೆ (ತಾಲೂಕು ಮಟ್ಟದಲ್ಲಿ)
ಮಂಡ್ಯ: 1.40 ಲಕ್ಷ ಲೀಟರ್
ಮದ್ದೂರು: 85 ಸಾವಿರ ಲೀಟರ್
ಮಳವಳ್ಳಿ: 72 ಸಾವಿರ ಲೀಟರ್
ಶ್ರೀರಂಗಪಟ್ಟಣ: 40 ಸಾವಿರ ಲೀಟರ್
ಪಾಂಡವಪುರ: 62 ಸಾವಿರ ಲೀಟರ್
ಕೆ.ಆರ್. ಪೇಟೆ: 85 ಸಾವಿರ ಲೀಟರ್
ನಾಗಮಂಗಲ: 1.40 ಲಕ್ಷ ಲೀಟರ್












Click it and Unblock the Notifications