Milk Price: ನಂದಿನಿ ಹಾಲಿನ ದರ ಏರಿಕೆ? ಲೀಟರ್‌ಗೆ ₹8–₹10 ಹೆಚ್ಚಳಕ್ಕೆ ಬೇಡಿಕೆ: ಡಿ ಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು: ಕರ್ನಾಟಕದಲ್ಲಿ ನಂದಿನಿ ಹಾಲಿನ ಖರೀದಿ ಮತ್ತು ಮಾರಾಟ ದರವನ್ನು ಪ್ರತಿ ಲೀಟರ್‌ಗೆ ₹8ರಿಂದ ₹10ರವರೆಗೆ ಹೆಚ್ಚಿಸುವಂತೆ ಕರ್ನಾಟಕ ರಾಜ್ಯದ ಸಹಕಾರ ಹಾಲು ಉತ್ಪಾದಕರ ಒಕ್ಕೂಟಗಳ ನಿಯೋಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದೆ.
ವಿಧಾನಸೌಧದಲ್ಲಿ ಮಂಗಳವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಹಾಲು ಒಕ್ಕೂಟಗಳ ನಿಯೋಗ ಭೇಟಿ ಮಾಡಿ, ಹಾಲು ಉತ್ಪಾದಕರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಹಾಲಿನ ದರ ಪರಿಷ್ಕರಣೆ ಕುರಿತು ಸಮಾಲೋಚನೆ ನಡೆಸಿತು.

Milk Price: ಸಮಗ್ರ ಮಾಹಿತಿ ನೀಡುವಂತೆ ಸೂಚನೆ
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಾಲಿನ ದರ ಹೆಚ್ಚಳದ ಕುರಿತು ಸಮಗ್ರ ಮಾಹಿತಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕಳೆದ 10 ವರ್ಷಗಳಲ್ಲಿ ಪಶು ಆಹಾರದ ದರದಲ್ಲಿ ಎಷ್ಟು ಏರಿಕೆಯಾಗಿದೆ, ಪ್ರತಿ ಲೀಟರ್ ಹಾಲು ಉತ್ಪಾದನೆಗೆ ತಗಲುತ್ತಿರುವ ವೆಚ್ಚ ಎಷ್ಟು, ವಿವಿಧ ಜಿಲ್ಲೆಗಳಲ್ಲಿ ಎಷ್ಟು ಪ್ರಮಾಣದ ಹಾಲು ಉತ್ಪಾದನೆಯಾಗುತ್ತಿದೆ, ಒಕ್ಕೂಟಗಳು ಎಷ್ಟು ಹಾಲು ಖರೀದಿಸುತ್ತಿವೆ ಮತ್ತು ಎಷ್ಟು ಹಾಲು ಇತರ ಕಡೆಗೆ ಮಾರಾಟವಾಗುತ್ತಿದೆ ಎಂಬ ವಿವರಗಳನ್ನು ನೀಡುವಂತೆ ಸೂಚಿಸಿದರು.
ಇದರ ಜೊತೆಗೆ ನೆರೆಯ ರಾಜ್ಯಗಳಲ್ಲಿ ಹಾಲಿನ ಖರೀದಿ ಮತ್ತು ಮಾರಾಟ ದರಗಳ ವಿವರಗಳನ್ನೂ ಒದಗಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.
Milk Price: ಹೈನುಗಾರಿಕೆ ವೆಚ್ಚ ಹೆಚ್ಚಳ: ಡಿ.ಕೆ. ಸುರೇಶ್
ನಿಯೋಗದ ಪರವಾಗಿ ಮಾತನಾಡಿದ ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್, ಹೈನುಗಾರಿಕೆಗೆ ಅಗತ್ಯವಿರುವ ಪಶು ಆಹಾರ, ಮೇವು, ಔಷಧೋಪಚಾರ ಸೇರಿದಂತೆ ನಿರ್ವಹಣಾ ವೆಚ್ಚ ನಿರಂತರವಾಗಿ ಹೆಚ್ಚಾಗುತ್ತಿದೆ. ಇದರಿಂದ ಪ್ರತಿ ಲೀಟರ್ ಹಾಲಿನ ಉತ್ಪಾದನಾ ವೆಚ್ಚವೂ ಗಣನೀಯವಾಗಿ ಏರಿಕೆಯಾಗಿದೆ ಎಂದು ವಿವರಿಸಿದರು.
ಸದ್ಯದ ಬರ ಪರಿಸ್ಥಿತಿಯಲ್ಲಿ ಬೆಳೆ ಕೊರತೆಯಿಂದ ಕೃಷಿ ಆದಾಯ ಕುಸಿದಿದ್ದು, ಮೇವಿನ ಲಭ್ಯತೆ ಕಡಿಮೆಯಾಗಿರುವುದರಿಂದ ಹೈನುಗಾರರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ನೆರೆಯ ರಾಜ್ಯಗಳಲ್ಲಿ ಹಾಲಿನ ಖರೀದಿ ದರ ಹೆಚ್ಚು
ವಿವಿಧ ರಾಜ್ಯಗಳ ಸಹಕಾರಿ ಸಂಸ್ಥೆಗಳು ಹಾಗೂ ಖಾಸಗಿ ಡೇರಿಗಳು ಹಾಲು ಮತ್ತು ಹಾಲಿನ ಉತ್ಪನ್ನಗಳ ದರವನ್ನು ನಿರಂತರವಾಗಿ ಹೆಚ್ಚಿಸುತ್ತಿವೆ. ಆದರೆ ಗ್ರಾಹಕರ ಹಿತದೃಷ್ಟಿಯಿಂದ ಕಳೆದ ಒಂದೂವರೆ ವರ್ಷದಿಂದ ಕರ್ನಾಟಕದಲ್ಲಿ ಹಾಲಿನ ದರವನ್ನು ಹೆಚ್ಚಿಸಿಲ್ಲ ಎಂದು ಡಿ.ಕೆ. ಸುರೇಶ್ ಹೇಳಿದರು.
ಖಾಸಗಿ ಡೇರಿಗಳು ಹೆಚ್ಚಿನ ಪ್ರಮಾಣದಲ್ಲಿ ಹಾಲು ಸಂಗ್ರಹಿಸಲು ಮುಂದಾಗುತ್ತಿರುವುದರಿಂದ ಸಹಕಾರಿ ಹಾಲು ಒಕ್ಕೂಟಗಳು ಹಾಲು ಸಂಗ್ರಹಣೆಯಲ್ಲಿ ತೀವ್ರ ಪೈಪೋಟಿ ಎದುರಿಸುತ್ತಿವೆ ಎಂದರು.
ಪ್ರತಿ ಲೀಟರ್‌ಗೆ ₹35ಕ್ಕೆ ಖರೀದಿ
ಪ್ರಸ್ತುತ ಕರ್ನಾಟಕದಲ್ಲಿ ಹಾಲು ಉತ್ಪಾದಕರಿಂದ ಟೋನ್ಡ್ ಹಾಲನ್ನು ಪ್ರತಿ ಲೀಟರ್‌ಗೆ ₹35ಕ್ಕೆ ಖರೀದಿಸಲಾಗುತ್ತಿದೆ. ಆದರೆ ನೆರೆಯ ರಾಜ್ಯಗಳಲ್ಲಿ ಇದೇ ರೀತಿಯ ಹಾಲಿನ ಖರೀದಿ ದರ ಆಂಧ್ರಪ್ರದೇಶದಲ್ಲಿ ₹41.50, ಕೇರಳದಲ್ಲಿ ₹41.80, ಮಹಾರಾಷ್ಟ್ರದಲ್ಲಿ ₹41 ಹಾಗೂ ತಮಿಳುನಾಡಿನಲ್ಲಿ ₹42.24 ಇದೆ ಎಂದು ಅವರು ಮಾಹಿತಿ ನೀಡಿದರು.
ಅದೇ ರೀತಿ ಹಾಲಿನ ಗರಿಷ್ಠ ಮಾರಾಟ ದರದಲ್ಲಿಯೂ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪ್ರತಿ ಲೀಟರ್‌ಗೆ ಕನಿಷ್ಠ ₹12ರಷ್ಟು ಕಡಿಮೆ ದರವಿದೆ ಎಂದು ಡಿ.ಕೆ. ಸುರೇಶ್ ತಿಳಿಸಿದರು. ಹೀಗಾಗಿ ಹಾಲು ಉತ್ಪಾದಕರ ಹಿತ ಕಾಪಾಡುವ ನಿಟ್ಟಿನಲ್ಲಿ ಖರೀದಿ ದರ ಹಾಗೂ ಮಾರಾಟ ದರವನ್ನು ₹8ರಿಂದ ₹10ರಷ್ಟು ಹೆಚ್ಚಿಸುವಂತೆ ಹಾಲು ಒಕ್ಕೂಟಗಳ ನಿಯೋಗ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದೆ.


Click it and Unblock the Notifications
