ಬಿಸಿಯೂಟ ಕಾರ್ಯಕರ್ತರು ಕನಿಷ್ಠ ವೇತನಕ್ಕೆ ಅರ್ಹರಲ್ಲವೆಂದ ಹೈಕೋರ್ಟ್
ಬೆಂಗಳೂರು,ಆ.19: ಕನಿಷ್ಠ ವೇತನಕ್ಕಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದ ಬಿಸಿಯೂಟ ಕಾರ್ಯಕರ್ತೆಯರಿಗೆ ಕಾನೂನು ಹೋರಾಟದಲ್ಲಿ ತೀವ್ರ ಹಿನ್ನಡೆಯಾಗಿದೆ.
ಹೈಕೋರ್ಟ್, ರಾಜ್ಯ ಸರ್ಕಾರದ ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಮುಖ್ಯ ಅಡುಗೆ ತಯಾಕರು ಮತ್ತು ಅಡುಗೆ ಸಹಾಯರಕರು ಕನಿಷ್ಠ ವೇತನ ಕಾಯ್ದೆಯಡಿ ವೇತನ ಪಡೆಯಲು ಅರ್ಹರಲ್ಲ ಎಂದು ಮಹತ್ವದ ತೀರ್ಪು ನೀಡಿದೆ. ಇದರಿಂದಾಗಿ ರಾಜ್ಯದಲ್ಲಿನ ಸಾವಿರಾರು ಬಿಸಿಯೂಟ ಕಾರ್ಯಕರ್ತೆಯರಿಗೆ ಕನಿಷ್ಠ ವೇತನದ ಆಸೆ ಕಮರಿದೆ.
ಬಿಸಿಯೂಟ ತಯಾರಿಸುವ ಮುಖ್ಯ ಅಡುಗೆ ತಯಾಕರು ಮತ್ತು ಅಡುಗೆ ಸಹಾಯಕರಿಗೆ ಕನಿಷ್ಠ ವೇತನ ಕಾಯ್ದೆ-1981ರ ಅಡಿ ಸೂಕ್ತ ವೇತನ ನಿಗದಿಪಡಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತರಾದ ಎಂ.ಎಸ್. ನೌಹೇರಾ ಶೇಖ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಸಿಜೆ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯಪೀಠ ಈ ಆದೇಶ ಮಾಡಿದೆ.
ಕರ್ನಾಟಕ ಕನಿಷ್ಠ ವೇತನ ನಿಯಮಗಳು-1981ರ ಪ್ರಕಾರ ದಿನದ ಕೆಲಸದ ಅವಧಿ 9 ಗಂಟೆಯಾಗಿರಬೇಕು. ಈ ಮಾನದಂಡ ಮುಖ್ಯ ಅಡುಗೆ ತಯಾರಕರ ಮತ್ತು ಅಡುಗೆ ತಯಾರಕರ ವಿಚಾರದಲ್ಲಿ ಪಾಲನೆಯಾಗಿಲ್ಲ. ಹಾಗಾಗಿ, ಅವರಿಗೆ ಕನಿಷ್ಠ ವೇತನ ನೀಡಬೇಕೆಂಬ ವಿಚಾರವು ಕಾಯ್ದೆಯ ನಿಮಗಳ ವ್ಯಾಪ್ತಿಗೆ ಬರುವುದಿಲ್ಲ ಮತ್ತು ಅವರಿಗೆ ಕನಿಷ್ಠ ವೇತನ ಕಾಯ್ದೆಯಡಿ ಸೂಕ್ತ ಕನಿಷ್ಠ ವೇತನ ವಿತರಿಸಲು ಸರ್ಕಾರಕ್ಕೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.

ಕನಿಷ್ಠ ವೇತನ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿರುವ ಅಧಿಸೂಚಿತ ಉದ್ಯೋಗಗಳಿಗೆ ಮಾತ್ರ ಕಾಯ್ದೆಯ ನಿಯಮಗಳು ಅನ್ವಯಿಸುತ್ತವೆ. ಬಿಸಿಯೂಟ ಯೋಜನೆಯಡಿಯ ದಿನಕ್ಕೆ ನಾಲ್ಕು ಗಂಟೆಯಷ್ಟು ಸೀಮಿತ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಉದ್ಯೋಗ ಮಾಡುತ್ತಿರುವ ಮುಖ್ಯ ಅಡುಗೆ ತಯಾರಕರು ಮತ್ತು ಅಡುಗೆ ತಯಾರಕರಿಗೆ ಕನಿಷ್ಠ ವೇತನ ಕಾಯ್ದೆಯ ನಿಯಮಗಳು ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.
ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 2018ರಲ್ಲಿ ಬಿಸಿಯೂಟ ಕಾರ್ಯಕರ್ತರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದ ಆವರಣದಲ್ಲಿ ಹಗಲು-ರಾತ್ರಿ ಧರಣಿ ಕೈಗೊಂಡಿದ್ದರು. ಈ ವೇಳೆ, ಧರಣಿ ಸ್ಥಳಕ್ಕೆ ಭೇಟಿ ನೀಡಿ ಬಿಸಿಯೂಟ ಕಾರ್ಯಕರ್ತೆಯರ ಕುಂದು-ಕೊರತೆ ಆಲಿಸಿದ್ದ ಅರ್ಜಿದಾರರು ನಂತರ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದರು.
ಸದನ ಸಮಿತಿಗೆ ಅಧಿಕಾರವಿದೆ: ಈ ಮಧ್ಯೆ, ಹೈಕೋರ್ಟ್ ಮತ್ತೊಂದು ಪ್ರಕರಣದಲ್ಲಿ ವಿಶೇಷ ಸದನ ಸಮಿತಿಗೆ ನರ್ಸಿಂಗ್ ಕಾಲೇಜು ಮತ್ತು ಇತರೆ ಆರೋಗ್ಯ ಸಂಬಂಧಿ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಅಧಿಕಾರವಿದೆ ಎಂದು ಆದೇಶಿಸಿದೆ.
ಹೈದರಾಬಾದ್ ಕರ್ನಾಟಕ ನರ್ಸಿಂಗ್ ಮ್ಯಾನೇಜ್ ಮೆಂಟ್ ಅಸೋಸಿಯೇಷನ್, ಕರ್ನಾಟಕ ನರ್ಸಿಂಗ್ ಸಂಸ್ಥೆಗಳ ಒಕ್ಕೂಟ ಮತ್ತಿತರರ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳನ್ನು ಆಲಿಸಿದ ನ್ಯಾ ಎಂ.ಐ. ಅರುಣ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ.

ಕರ್ನಾಟಕ ವಿಧಾನಪರಿಷತ್ತಿನಲ್ಲಿ, ಮೂಲಸೌಕರ್ಯ ಕೊರತೆ ಇದ್ದರೂ ಭಾರತೀಯ ನರ್ಸಿಂಗ್ ಕೌನ್ಸಿಲ್ ನಿಯಮಗಳನ್ನು ಉಲ್ಲಂಘನೆ 2020-21ನೇ ಸಾಲಿನಲ್ಲಿ ಹೊಸ ನರ್ಸಿಂಗ್ ಕಾಲೇಜುಗಳು ಮತ್ತು ಅದರ ಸಂಬಂಧಿ ಆರೋಗ್ಯ ಸಂಸ್ಥೆಗಳಿಗೆ ಮಂಜೂರಾತಿ ನೀಡಿರುವ ಕುರಿತು ಪ್ರಶ್ನೆಯನ್ನು ಕೇಳಲಾಗಿತ್ತು. ಆಗ ಚರ್ಚೆಯ ನಂತರ ನರ್ಸಿಂಗ್ ಕಾಲೇಜುಗಳ ಬಗ್ಗೆ ಪರಿಶೀಲನೆ ನಡೆಸಲು ಸದನ ಸಮಿತಿಯನ್ನು ರಚನೆ ಮಾಡಲು ಸದನ ನಿರ್ಣಯ ಕೈಗೊಂಡಿತ್ತು. 2021ರ ಏಪ್ರಿಲ್ ನಲ್ಲಿಸಮಿತಿಯನ್ನು ರಚಿಸಿ, ಅದರ ಷರತ್ತು ಮತ್ತು ನಿರ್ಬಂಧನೆಗಳನ್ನು ಪ್ರಕಟಿಸಲಾಗಿತ್ತು.
ಅದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದ ಅರ್ಜಿದಾರರು, ಸದನ ಸಮಿತಿ ರಚನೆ ಅಧಿಕಾರವಿಲ್ಲ. ಆ ಸಮಿತಿ ಕಾಲೇಜುಗಳಿಂದ ದಾಖಲೆಗಳನ್ನು ಕೇಳುವಂತಿಲ್ಲಎಂದು ಆಕ್ಷೇಪ ಎತ್ತಿದ್ದರು.
ಹೈಕೋರ್ಟ್ ಆದೇಶವೇನು?: ವಿಚಾರಣೆ ಬಳಿಕ ಹೈಕೋರ್ಟ್, ಕರ್ನಾಟಕ ವಿಧಾನಪರಿಷತ್ ಕಲಾಪ ಮತ್ತು ನಡಾವಳಿ ನಿಯಮ 242(ಎ) ಉಪ ನಿಯಮ 1ರಡಿ ಸದನ ಸಮಿತಿ ರಚನೆ ನ್ಯಾಯಾಲಯ ಎತ್ತಿಹಿಡಿದಿದೆ. ಭಾರತೀಯ ನರ್ಸಿಂಗ್ ಮಂಡಳಿಯ ನಿರ್ದೇಶನಗಳಿಗೆ ಅನುಗುಣವಾಗಿ ನಡೆಯುತ್ತಿದೆಯೇ ಇಲ್ಲವೇ ಎಂದು ಹಾಗೂ ಅಗತ್ಯ ಮೂಲಸೌಕರ್ಯ ಮತ್ತಿತರ ಸೌಕರ‍್ಯಗಳು ಇವೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲು ಸದನ ಸಮಿತಿಗೆ ಅಧಿಕಾರವಿದೆ. ಕಾಲೇಜುಗಳು ಮತ್ತು ಸಂಸ್ಥೆಗಳು ನಿಯಮ ಬದ್ಧವಾಗಿ ನಡೆಯುತ್ತಿವೆಯೇ ಇಲ್ಲವೇ ಎಂಬ ಬಗ್ಗೆಯೂ ಸಮಿತಿ ದಾಖಲೆ, ಸಾಕ್ಷಿ ಪರಿಶೀಲಿಸಬಹುದಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಭಾರತೀಯ ಸಂವಿಧಾನದ ಕಲಂ 194(3)ರಲ್ಲಿರಾಜ್ಯ ಶಾಸಕಾಂಗಕ್ಕೆ ಇರುವ ಅಧಿಕಾರವನ್ನು ಉಲ್ಲೇಖಿಸಲಾಗಿದೆ. ಅದರಂತೆ ಸದನ ಸಮಿತಿ ರಚನೆ ಅಧಿಕಾರ ಮತ್ತು ಆ ಸಮಿತಿ ನರ್ಸಿಂಗ್ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಮೂಲಸೌಕರ್ಯದ ಬಗ್ಗೆ ಪರಿಶೀಲನೆ ನಡೆಸುವ, ದಾಖಲೆಗಳನ್ನು ಕೇಳುವ ಅಧಿಕಾರ ಹೊಂದಿದೆ. ಆದರೆ ಪರಿಶೀಲನೆ ಹೆಸರಿನಲ್ಲಿ ಕಿರುಕುಳ ನೀಡುವಂತಿಲ್ಲ ಎಂದು ನ್ಯಾಯಪೀಠ ಆದೇಶಿಸಿದೆ.












Click it and Unblock the Notifications