ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂತಾನಪ್ರಾಪ್ತಿಯ ಐತಿಹ್ಯವಿರುವ 'ಯಶಸ್ವೀ' ತೊಟ್ಟಿಲಮಡು ಹರಕೆ

By ಬಾಲರಾಜ್ ತಂತ್ರಿ
|
Google Oneindia Kannada News

ಮಂಡ್ಯ ಜಿಲ್ಲೆಯ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ದೇವಾಲಯ ಇತ್ತೀಚೆಗೆ ಬೇಡವಾದ ಕಾರಣಗಳಿಗೇ ಹೆಚ್ಚು ಸುದ್ದಿಯಾಗುತ್ತಿದೆ. ಅರ್ಚಕರ ಮಧ್ಯೆ ನಡೆಯುತ್ತಿರುವ ಮೇಲಾಟ, ಬೆಲೆಕಟ್ಟಲಾಗದ ದೇವರ ವಜ್ರಾಭರಣಗಳ ಕಳವು, ದೇವರಿಗೆ ಹಾಕುವ ನಾಮದ ವಿಚಾರದಲ್ಲಿನ ಗೊಂದಲ. ಹೀಗೆ.. ದೇವಾಲಯ ಸದಾ ಸುದ್ದಿಯಲ್ಲಿರುತ್ತದೆ.

ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ದಿನದಿಂದ ದಿನಕ್ಕೆ ದೇಶದೆಲ್ಲಡೆಯಿಂದ ದೇವಾಲಯಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಗಣ ಆಗಮಿಸಿ, ದೇಗುಳದ ಜಾತ್ರೆಯಲ್ಲಿ ಭಕ್ತಿಭಾವದಿಂದ ಭಾಗವಹಿಸುತ್ತಿರುವುದು ಚೆಲುವನಾರಾಯಣಸ್ವಾಮಿಯ ಶಕ್ತಿಯೇ ಇರಬಹುದು. (ಮೇಲುಕೋಟೆಗೆ ಕೇಳಿದ್ದು 500 ಕೋಟಿ ರು ಸಿಕ್ಕಿದ್ದು 20 ಕೋಟಿ)

ಕಾರ್ತಿಕ ಮಾಸದಲ್ಲಿ ಮೇಲುಕೋಟೆ ದೇವಳದಲ್ಲಿ ನಡೆಯುವ ಜಾತ್ರೆಯಲ್ಲಿ 'ತೊಟ್ಟಿಲ ಮಡು ಹರಕೆ' ಕೂಡಾ ಒಂದು. ಮಕ್ಕಳಿಲ್ಲದವರು ಇಲ್ಲಿ ಹರಕೆ ತೀರಿಸಿದರೆ ಸಂತಾನಪ್ರಾಪ್ತಿಯಾಗುತ್ತದೆ ಎನ್ನುವುದು ಈ ಹರಕೆಗಿರುವ ಐತಿಹ್ಯ. ಪ್ರಸಕ್ತ ವರ್ಷದ ಈ ಹರಕೆ ಶನಿವಾರ (ನ 21) ವಿಜೃಂಭಣೆಯಿಂದ ಮುಕ್ತಾಯಗೊಂಡಿದೆ.

ಒಂಬತ್ತು ದಿನಗಳ ಕಾಲ ನಡೆಯುವ ರಾಜಮುಡಿ ಉತ್ಸವ, ಅಷ್ಟ ತೀರ್ಥೋತ್ಸವದ ಸಂಭ್ರಮದ ಜಾತ್ರೆಯ ವೇಳೆ ನಡೆಯುವ ತೊಟ್ಟಿಲ ಮಡು ಹರಕೆಯಲ್ಲಿ ನೂರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಕಳೆದ ವರ್ಷ ಈ ಹರಕೆ ಪೂರೈಸಿದ ಶೇ. 90 ಮಹಿಳೆಯರಿಗೆ ಫಲಸಿಕ್ಕಿದ್ದು ಈ ಹರಕೆಗಿರುವ ಶಕ್ತಿ ಎನ್ನುವುದು ಭಕ್ತವೃಂದದ ಅಂಬೋಣ.

ಮೈಸೂರಿನ ದೊರೆಯಾಗಿದ್ದ ರಾಜಾ ಒಡೆಯರ್ ಸಮರ್ಪಿಸಿದ್ದ ವಜ್ರಖಚಿತ ರಾಜಮುಡಿ ಕಿರೀಟ, ಶಂಖ, ಚಕ್ರ, ಗದಾ, ಪದ್ಮಪೀಠ ಜೊತೆಗೆ ಇತರ 16 ಆಭರಣಗಳನ್ನು ಸ್ವಾಮಿಗೆ ಧರಿಸಿ, ರಾಜಬೀದಿಯಲ್ಲಿ ಉತ್ಸವ ನೆರವೇರಿಸುವ ಮೂಲಕ ಒಂಬತ್ತು ದಿನಗಳ ಈ ಜಾತ್ರೆಯ ಪ್ರಧಾನ ಘಟ್ಟ 'ತೊಟ್ಟಿಲ ಮಡು ಹರಕೆ' ಸೇವೆಯತ್ತ ಸಾಗುತ್ತೆ. (ಮೇಲುಕೋಟೆ ನಾಪತ್ತೆಯಾಗಿದ್ದ ಆಭರಣ ಹುಂಡಿಯಲ್ಲಿ ಪತ್ತೆ)

ಶಾಸ್ತ್ರೋಕ್ತವಾಗಿ ನಡೆಯುವ ರಾಜಮುಡಿ ಉತ್ಸವ, ಕಟ್ಟುನಿಟ್ಟಾಗಿ ವೃತ ಪಾಲಿಸಿ ಮಹಿಳೆಯರು ನಡೆಸಬೇಕಾಗಿರುವ ತೊಟ್ಟಿಲಮಡು ಹರಕೆಯ ಬಗ್ಗೆ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಸರಕಾರೀ ಖಜಾನೆಯಿಂದ ಬರುವ ವಜ್ರವೈಢೂರ್ಯ

ಸರಕಾರೀ ಖಜಾನೆಯಿಂದ ಬರುವ ವಜ್ರವೈಢೂರ್ಯ

ಪಾಂಡವಪುರ ಉಪವಿಭಾಗಾಧಿಕಾರಿ, ದೇವಾಲಯದ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಉಸ್ತುವಾರಿಯಲ್ಲಿ ದೇವಾಲಯಕ್ಕೆ ಆಗಮಿಸುವ ದೇವರ ಆಭರಣಗಳನ್ನು, ಮೇಲುಕೋಟೆಯ ಆಂಜನೇಯಸ್ವಾಮಿ ಸನ್ನಿಧಿಯ ಬಳಿ ಪೂಜೆ ನೆರವೇರಿಸಿ ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆಯೊಂದಿಗೆ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ತರಲಾಗುವುದು. ಅಲ್ಲಿ ಮತ್ತೊಮ್ಮೆ ಆಭರಣದ ಪೆಟ್ಟಿಗೆಗಳನ್ನು ಪರಿಶೀಲಿಸಿದ ನಂತರ ದೇವಾಲಯದ ಪ್ರಧಾನ ಅರ್ಚಕರ ಜವಾಬ್ದಾರಿಗೆ ಆಭರಣಗಳನ್ನು ಹಸ್ತಾಂತರಿಸಲಾಗುವುದು.

ರಾಜಮುಡಿ ಉತ್ಸವ

ರಾಜಮುಡಿ ಉತ್ಸವ

ತೊಟ್ಟಿಲಮಡು ಹರಕೆ ನಡೆಯುವ ದಿನ ಅಂದರೆ ಕಾರ್ತಿಕ ಶುಕ್ಲ ಪೂರ್ವಾಭಾದ್ರ ನಕ್ಷತ್ರದಂದು, ಶ್ರೀದೇವಿ ಭೂದೇವಿ ಸಹಿತ ಸ್ವಾಮಿಗೆ ವಿಶೇಷ ಅಭಿಷೇಕ, ಪೂಜೆ ಸಲ್ಲಿಸಿ, ಮೈಸೂರು ರಾಜರು ಸಮರ್ಪಿಸಿದ ವಜ್ರಖಚಿತ ಕಿರೀಟ ಮತ್ತು ಇತರ ಹದಿನಾರು ವಜ್ರಾಭರಣಗಳ ಧಾರಣೆ ಮಾಡಲಾಗುವುದು.

ಅಷ್ಠತೀರ್ಥೋತ್ಸವ

ಅಷ್ಠತೀರ್ಥೋತ್ಸವ

ಇದಾದ ನಂತರ ಅಷ್ಠತೀರ್ಥೋತ್ಸವಕ್ಕೆ ಶ್ರೀದೇವಿ ಭೂದೇವಿ ಸಹಿತ ಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಾಚಾರ್ಯರ ವಿಗ್ರಹ ಮೂರ್ತಿಯನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲಾಗುವುದು. ದಾರಿ ಮಧ್ಯೆ ಗಜೇಂದ್ರ ಮೋಕ್ಷ ಮಂಟಪದಲ್ಲಿ ದೇವರ ಪಾದುಕೆಗೆ ಅವಭೃತ ಸ್ನಾನ ಮಾಡಿಸಿ ಪಾದುಕೆಗೆ ಸಹಸ್ರ ಪಾರಾಯಣ ಮಾಡುವುದು ಪೂಜಾ ವಿಧಿವಿದಾನಗಳಲ್ಲೊಂದು.

ಅಷ್ಟ ಪುಷ್ಕರಣಿಗಳು

ಅಷ್ಟ ಪುಷ್ಕರಣಿಗಳು

ಅಲ್ಲಿಂದ ಮೇಲುಕೋಟೆ ದೇವಲಾಯದ ಸುತ್ತಮುತ್ತವಿರುವ ಅಷ್ಟ ಪುಷ್ಕರಣಿಗಳಾದ ವೇದಪುಷ್ಕರಣಿ, ಧನುಷ್ಕೋಟಿ, ಯಾದವತೀರ್ಥ, ದರ್ಭತೀರ್ಥ, ಪಲಾಸತೀರ್ಥ, ಪದ್ಮತೀರ್ಥ, ನಾರಾಯಣತೀರ್ಥ ಮತ್ತು ಮೈತ್ರೀಯ ತೀರ್ಥ ಪುಷ್ಕರಣಿಯಲ್ಲಿ ದೇವರ ಪಾದುಕೆಗೆ ಅಭಿಷೇಕ ಪೂಜೆ ಸಲ್ಲಿಸಿದ ನಂತರ ಕೊನೆಯದಾಗಿ ತೊಟ್ಟಿಲ ಮಡು ಸೇವೆ ಆರಂಭವಾಗುತ್ತದೆ.

ಕಲ್ಯಾಣಿತೀರ್ಥ ಪುಷ್ಕರಣಿ

ಕಲ್ಯಾಣಿತೀರ್ಥ ಪುಷ್ಕರಣಿ

ಕಲ್ಯಾಣಿತೀರ್ಥ ಪುಷ್ಕರಣಿಯಲ್ಲಿ ಮತ್ತೆ ಪಾದುಕೆಗೆ ಸಹಸ್ರ ಪಾರಾಯಣ ಮತ್ತು ಅವಭೃತ ಸ್ನಾನ ಮಾಡಿಸಲಾಗುವುದು. ದೇವರ ಪಾದುಕೆಯನ್ನು ಹೊತ್ತಿರುವ ಪ್ರಧಾನ ಅರ್ಚಕರು ಪಾದುಕೆಯ ಜೊತೆಗೆ ಪುಷ್ಕರಣಿಯಲ್ಲಿ ಮಿಂದೇಳುತ್ತಾರೆ. ಇದಾದ ನಂತರ ಸಂತಾನಭಾಗ್ಯ ಬಯಸುವವರು ಪುಷ್ಕರಣಿಯಲ್ಲಿ ಸ್ನಾನ ಮಾಡುತ್ತಾರೆ.

ಸಂತಾನಭಾಗ್ಯದ ಹರಕೆ

ಸಂತಾನಭಾಗ್ಯದ ಹರಕೆ

ಸಂತಾನಭಾಗ್ಯದ ಹರಕೆ ತೀರಿಸಲು ಬರುವವರು ದಂಪತಿ ಸಮೇತ ಬರಬೇಕಾಗಿದ್ದು, ಸ್ನಾನ ಮಾಡುವ ಮುನ್ನ ಅಕ್ಕಿ, ಬಾಳೆಹಣ್ಣು, ಎಲೆ ಅಡಿಕೆ ಮತ್ತು ಬೆಲ್ಲವನ್ನು ಶ್ವೇತವರ್ಣದ ಬಟ್ಟೆಯಲ್ಲಿ ಕಟ್ಟಿ ಮಡಿಲು ತುಂಬಿಕೊಂಡು ಪುಷ್ಕರಣಿಯಲ್ಲಿ ಮಿಂದೇಳುವುದು ಈ ಹರಕೆಯ ಪದ್ದತಿ.

ಯೋಗನಾರಾಯಣಸ್ವಾಮಿಗೆ ಗಿರಿಪ್ರದಕ್ಷಿಣೆ

ಯೋಗನಾರಾಯಣಸ್ವಾಮಿಗೆ ಗಿರಿಪ್ರದಕ್ಷಿಣೆ

ಇದಾದ ನಂತರ ದೇವರ ಪಾದುಕೆಯನ್ನು ಸುಮಾರು 16-20 ಕಿಲೋಮೀಟರ್ ಗಿರಿಪ್ರದಕ್ಷಿಣೆ ಮಾಡಿಸಿ ಯೋಗನಾರಾಯಣಸ್ವಾಮಿ ದೇವಾಲಯಕ್ಕೆ ತರಲಾಗುವುದು. ಸಂತಾನಪ್ರಾಪ್ತಿ ಹರಕೆ ಹೊತ್ತವರು ಅಷ್ಟ ಪುಷ್ಕರಣಿಯಲ್ಲಿ ಮಿಂದು ಮತ್ತು ತೊಟ್ಟಿಲ ಮಡು ಸೇವೆ ಸಲ್ಲಿಸುವ ತನಕ ಉಪವಾಸದಲ್ಲಿ ಇರಬೇಕಾಗುತ್ತದೆ. ದೇವರ ಪಾದುಕೆಯ ಗಿರಿಪ್ರದಕ್ಷಿಣೆ ಮೆರವಣಿಗೆಯ ಜೊತೆ ಹರಕೆ ಹೊತ್ತವರು ಹೋಗಿ ಯೋಗನಾರಾಯಣಸ್ವಾಮಿ ದೇವಾಲಯದಲ್ಲಿ ಕೊಡುವ ಪ್ರಸಾದವನ್ನು (ಪಿಂಡಪ್ರಸಾದ ಎಂದು ಕರೆಯಲ್ಪಡುತ್ತದೆ) ಸ್ವೀಕರಿಸಿ ಈ ಹರಕೆಯನ್ನು ಸಂಪೂರ್ಣಗೊಳಿಸುತ್ತಾರೆ.

ತೊಟ್ಟಿಲಮಡು ಹರಕೆ

ತೊಟ್ಟಿಲಮಡು ಹರಕೆ

ಕಲ್ಯಾಣಿತೀರ್ಥದಲ್ಲಿ ಮಿಂದೇಳಿದರೆ ಪ್ರೇತಶಾಪ, ಸ್ತ್ರೀಶಾಪ, ಮಾತೃಶಾಪ, ಸರ್ಪಶಾಪ ಪರಿಹಾರವಾಗಿ ಸಂತಾನಪ್ರಾಪ್ತಿಯಾಗುವುದು ಎನ್ನುವುದು ನಂಬಿಕೆ. ಜೊತೆಗೆ ಗಿರಿಯಲ್ಲಿರುವ ವಿವಿಧ ಮೂಲಿಕೆಗಳ ನೀರು ಪುಷ್ಕರಣಿಗೆ ಹರಿದು ಬರುವುದರಿಂದ ಕಲ್ಯಾಣಿ ಸ್ನಾನಕ್ಕೆ ವಿಶೇಷ ಶಕ್ತಿಯಿದೆ ಎನ್ನುವುದು ನಂಬಿಕೆ. ವರ್ಷ ವರ್ಷ ತೊಟ್ಟಿಲಮಡು ಹರಕೆ ತೀರಿಸಲು ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ ಎನ್ನುವುದು ಸ್ಥಳೀಯರ ಮಾತು.

English summary
Melukote Hindu god Cheluvanarayana Swamy fertility blessing ritual. This ritual fall every year during Karthka Masa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X