ಕಾಂಗ್ರೆಸ್ ಪಾದಯಾತ್ರೆಗೆ ತಮಿಳುನಾಡಿನ ಕಾಂಗ್ರೆಸ್ ಬೆಂಬಲ ಇದೆಯೇ? ಸಿಎಂ ಬೊಮ್ಮಾಯಿ ಪ್ರಶ್ನೆ
ರಾಮನಗರ, ಜ.3: ಕಾಂಗ್ರೆಸ್ ಜನವರಿ 9 ರಿಂದ ಕೈಗೊಂಡಿರುವ ಮೇಕೆದಾಟು ಪಾದಯಾತ್ರೆ ರಾಜಕೀಯ ಪ್ರೇರಿತವಾದ ಕಾರ್ಯಕ್ರಮ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಪಾದಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಕೆದಾಟು ಯೋಜನೆ ಜಾರಿಗೊಗೊಳಿಸದಂತೆ ತಮಿಳುನಾಡಿನಲ್ಲಿ ಬಿಜೆಪಿಯವರು ಪ್ರಚೋದನೆ ಮಾಡುತ್ತಿರುವುದಾಗಿ ದೂರಿದ್ದಾರೆ. ಹಾಗಾದರೆ ಇಲ್ಲಿ ಕಾಂಗ್ರೆಸ್ ಮಾಡುತ್ತಿರುವ ಪಾದಯಾತ್ರೆಗೆ ತಮಿಳುನಾಡಿನ ಕಾಂಗ್ರೆಸ್ ಪಕ್ಷದವರು ಇವರ ಪಾದಯಾತ್ರೆಗೆ ಬೆಂಬಲಿಸುತ್ತಾರೆಯೇ? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.
ಕನ್ನಡ ನಾಡು, ನೆಲ, ಜಲದ ವಿಷಯ ಬಂದಾಗ ನಾವು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಮೇಕೆದಾಟು ಯೋಜನೆ ಡಿಪಿಆರ್ ಆಗಿದ್ದು, ಸಿಡಬ್ಲ್ಯೂಸಿ ಮುಂದಿದೆ. ಈ ಯೋಜನೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು

ಜಿಲ್ಲೆಗೆ ಶೋಭೆ ತರುವಂತದ್ದಲ್ಲ:
ರಾಮನಗರದಲ್ಲಿ ವೇದಿಕೆ ಮೇಲೆ ನಡೆದ ಘಟನೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಪೂರ್ವನಿಯೋಜಿತವಾಗಿದೆ. ಈ ಸಂಬಂಧ ಈಗಾಗಲೇ ಸಾಕಷ್ಟು ಸಭೆಗಳು ನಡೆದಿವೆ. ಈ ವಾಗ್ವಾದವನ್ನು ಯಾರು ಹುಟ್ಟುಹಾಕಿದರು ಎಂಬುದಕ್ಕೆ ಮಾಧ್ಯಮಗಳೇ ಸಾಕ್ಷಿಯಾಗಿವೆ. ಈ ಬೆಳವಣಿಗೆ ಬಹಳ ದುರದೃಷ್ಟಕರ. ಈ ರೀತಿಯ ಘಟನೆ ಜಿಲ್ಲೆಗೆ ಶೋಭೆ ತರುವಂಥದ್ದಲ್ಲ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಘಟನೆಗೆ ಆರ್‌ಎಸ್‌ಎಸ್ ಆಗಲಿ ಅಥವಾ ಬಿಜೆಪಿಯಾಗಲಿ ಯಾವುದೇ ಸಂಬಂಧವಿಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಕೆಂಪೇಗೌಡರ ಸಮಾಧಿಯನ್ನು ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ:
ಇದಕ್ಕೂ ಮುನ್ನ ನಡೆದ ಮಾಗಡಿ ತಾಲ್ಲೂಕಿನ ಕೆಂಪಾಪುರದಲ್ಲಿ ನಾಡಪ್ರಭು ಕೆಂಪೇಗೌಡರ ವೀರ ಸಮಾಧಿಗೆ ಗೌರವ ನಮನಗಳನ್ನು ಸಮರ್ಪಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, 'ನಾಡಪ್ರಭು ಕೆಂಪೇಗೌಡರ ವೀರ ಸಮಾಧಿಯನ್ನು ಪ್ರೇಕ್ಷಣೀಯ ಹಾಗೂ ಪ್ರೇರಣಾ ಸ್ಥಳವನ್ನಾಗಿ ಅಭಿವೃದ್ಧಿ ಮಾಡುವುದು ಸರ್ಕಾರದ ಉದ್ದೇಶ' ಎಂದು ಹೇಳಿದರು.
ಕೆಂಪಾಪುರದಲ್ಲಿ ವೀರಸಮಾಧಿಯನ್ನು 40 ಎಕರೆ ಪ್ರದೇಶದಲ್ಲಿ ನಿಮಾಣ ಮಾಡಲಾಗುತ್ತಿದೆ. 20 ಎಕರೆ ಕೆರೆ ಇದ್ದು, ಮಿಕ್ಕಿದ್ದು ಅಭಿವೃದ್ಧಿಗೆ ಬಳಸಲಾಗುತ್ತದೆ. ಸುಮಾರು 100 ಕೋಟಿ ರೂ.ಗಳ ವೆಚ್ಚದಲ್ಲಿ ಈ ಸ್ಥಳ ಅಭಿವೃದ್ಧಿಯಾಗಲಿದೆ. ಇದಕ್ಕೆ ಈಗಾಗಲೇ 50 ಕೋಟಿ ರೂ.ಗಳನ್ನು ಹಾಗೂ ಮೂರ್ತಿಗಾಗಿಯೇ ಪ್ರತ್ಯೇಕ ಅನುದಾನವನ್ನು ಒದಗಿಸಲಾಗಿದೆ. ಇನ್ನೂ ಹೆಚ್ಚಿನ ಅನುದಾನದ ಅಗತ್ಯವಿದೆ ಎನ್ನುವ ಮಾಹಿತಿಯಿದ್ದು, ಅಗತ್ಯ ಹಣಕಾಸಿನ ನೆರವನ್ನು ಆಯವ್ಯಯದಲ್ಲಿ ಒದಗಿಸಿ, ಕಾರ್ಯ ನಿಲ್ಲದಂತೆ ನೋಡಿಕೊಳ್ಳಲಾಗುವುದು. ಇಲ್ಲಿ ಆಂಫಿಥಿಯೇಟರ್, ಮುಂತಾದವುಗಳನ್ನು ನಿರ್ಮಿಸಲಾಗುವುದು. ಆದಷ್ಟು ಬೇಗನೆ ಕೆಲಸ ಪೂರ್ಣಗೊಳ್ಳಲಿ ಎಂದರು.












Click it and Unblock the Notifications