HD Kumaraswamy: ಎಚ್.ಡಿ ಕುಮಾರಸ್ವಾಮಿಗೆ "ತಾಕತ್ತು ಪ್ರದರ್ಶನ"ದ ಸವಾಲು ಹಾಕಿದ ಕಾಂಗ್ರೆಸ್!
Mekedatu Project: ಮೇಕೆದಾಟು ಆಣೆಕಟ್ಟು ನಿರ್ಮಾಣದ ವಿಚಾರವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ವಾಕ್ಸಮರ ಮುಂದುವರಿದೆ. ಇದೀಗ ಕಾಂಗ್ರೆಸ್ ಪಕ್ಷವು ಮೇಕೆದಾಟು ಆಣೆಕಟ್ಟು ನಿರ್ಮಾಣ ವಿಚಾರವಾಗಿ ಜೆಡಿಎಸ್ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿಗೆ ಸವಾಲು ಹಾಕಿದೆ. ಈ ಬೆಳವಣಿಗೆ ಪರ - ವಿರೋಧಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ನೀರಿನ ಬೆಲೆ ಹೆಚ್ಚಳ ಅನಿವಾರ್ಯ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ ಬೆನ್ನಲ್ಲೇ ಜೆಡಿಎಸ್ ಸಹ ಟ್ವೀಟ್ ಮಾಡಿದೆ. ಇದರ ಬೆನ್ನಲ್ಲೇ ಜೆಡಿಎಸ್ ಪಕ್ಷಕ್ಕೆ ಕಾಂಗ್ರೆಸ್ ಪಕ್ಷವು ತಿರುಗೇಟು ಕೊಟ್ಟಿದೆ. ಅದೇನು ಎನ್ನುವ ವಿವರ ಇಲ್ಲಿದೆ. ಜಾತ್ಯಾತೀತ ಜನತಾದಳದ ಸನ್ಮಾನ್ಯ ಗೋಸುಂಬೆಗಳೇ ಎನ್ನುವ ಸಾಲುಗಳೊಂದಿಗೆ ಕಾಂಗ್ರೆಸ್ ಟ್ವೀಟ್ ಮಾಡಿದೆ. ಈ ಟ್ವೀಟ್ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಮೇಕೆದಾಟು ಆಣೆಕಟ್ಟು ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ಜೆಡಿಎಸ್ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ಕೆಣಕಿದೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಮೇಕೆದಾಟು ಆಣೆಕಟ್ಟು ನಿರ್ಮಾಣಕ್ಕೆ ನಮ್ಮ ಸರ್ಕಾರ ಹಾಗೂ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬದ್ಧರಾಗಿದ್ದಾರೆ. ಅದಕ್ಕಾಗಿಯೇ ಸರ್ಕಾರದ ವತಿಯಿಂದ ಕಾನೂನು ಹೋರಾಟ ಮುಂದುವರಿಸುತ್ತಿದ್ದೇವೆ ಎಂದು ಹೇಳಿದೆ. ಮುಂದುವರಿದು ಚುನಾವಣೆ ಸಮಯದಲ್ಲಿ ನನ್ನನ್ನು ಗೆಲ್ಲಿಸಿದರೆ, ಮೇಕೆದಾಟು ಯೋಜನೆಗೆ ಮೋದಿ ಅವರಿಂದ ಕೇವಲ 5 ನಿಮಿಷದಲ್ಲಿ ಅನುಮೋದನೆ ಕೊಡಿಸುತ್ತೇನೆ ಎಂದು ಬೊಗಳೆ ಬಿಟ್ಟು, ಕಣ್ಣೀರು ಸುರಿಸಿದ್ದ ಮಹಾನುಭಾವ ನಿಮ್ಮ ಯೂಟರ್ನ್ ಸ್ವಾಮಿಯೇ ಅಲ್ಲವೇ ಎಂದು ವ್ಯಂಗ್ಯವಾಡಿದೆ.

ಚುನಾವಣೆ ಇದ್ದಾಗ ಮಾತ್ರ ಮಣ್ಣಿನ ಮಕ್ಕಳ ವೇಷ ತೊಡುವ ಜೆಡಿಎಸ್ ಪಕ್ಷದ ಡೋಂಗಿತನ ಈಗಾಗಲೇ ಜನರಿಗೆ ಅರ್ಥವಾಗಿದೆ. ಚುನಾವಣಾ ಪೂರ್ವದಲ್ಲಿ ಜನತೆಗೆ ಕೊಟ್ಟ ಮಾತಿನಂತೆ ಕೇಂದ್ರ ಸಚಿವರಾದ ಎಚ್.ಡಿ ಕುಮಾರಸ್ವಾಮಿ ಅವರು, ಮೊದಲು ಪ್ರಧಾನಿಗಳಿಂದ ಯೋಜನೆಗೆ ಅನುಮೋದನೆ ಕೊಡಿಸಿ ತಾಕತ್ತು ಪ್ರದರ್ಶಿಸಲಿ. ತದನಂತರ ನುಡಿದಂತೆ ನಡೆಯುವ ಕಾಂಗ್ರೆಸ್ ಸರ್ಕಾರ ಅಣೆಕಟ್ಟು ನಿರ್ಮಿಸಿ ಧಮ್ಮು ತಾಕತ್ತು ಪ್ರದರ್ಶಿಸಲಿದೆ ಎಂದು ಹೇಳಿದೆ.
ಮುಂದುವರಿದು ಕಳಾಸ ಬಂಡೂರಿ ಯೋಜನೆ ವಿಚಾರದಲ್ಲಿ ನ್ಯಾಯಾಲಯದ ಆದೇಶವಿದೆ. ಇಷ್ಟಾದರೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ಅನುಮತಿ ಕೊಡಿಸಲು ಸಾಧ್ಯವಾಗಿಲ್ಲ ಯಾಕೆ. ಅಲ್ಲಿ ನಿಮ್ಮ ಧಮ್ಮು ತಾಕತ್ತು ಪ್ರದರ್ಶಿಸುತ್ತಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದೆ. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ತೆರಿಗೆ ಪಾಲಿನ ಅನ್ಯಾಯ, ಅನುದಾನ ತಾರತಮ್ಯ ನಿರಂತರವಾಗಿದ್ದರೂ ಅದರ ವಿರುದ್ಧ ತುಟಿ ಬಿಚ್ಚದ ನಿಮ್ಮ ಧಮ್ಮು, ತಾಕತ್ತು ಎಲ್ಲರಿಗೂ ಗೊತ್ತಿದೆ ಎಂದೂ ಹೇಳಿದೆ.
ಅಂದಹಾಗೆ ನಿಮ್ಮ ನಾಯಕ ತಾಜ್ ವೆಸ್ಟ್ ಎಂಡ್‌ನಲ್ಲಿ ತೋರಿಸುವ ಧಮ್ಮು ತಾಕತ್ತನ್ನು ಸಂಸತ್ತಿನಲ್ಲಿ ತೋರಿಸಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ತಪ್ಪಿಸಲಿ ಎಂದು ಕೊನೆಯದಾಗಿ ಸೇರಿಸಿದೆ. ಈ ಟ್ವೀಟ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.












Click it and Unblock the Notifications