Mekedatu Project: ಮೇಕೆದಾಟು ಯೋಜನೆಗೆ ಭೂಸ್ವಾಧೀನದ ಸಿದ್ಧತೆ; ರೈತರ ಜಮೀನು ಎಷ್ಟು ಎಕರೆ ವಶಕ್ಕೆ? ಡಿಕೆಶಿ ಕೊಟ್ರು ಮಾಹಿತಿ!
ಮಂಡ್ಯ: ಮಂಡ್ಯ ಎಂದರೆ ಕಾವೇರಿ. ಕಾವೇರಿ ನೀರಿನ ಸಮರ್ಪಕ ನಿರ್ವಹಣೆ ಹಾಗೂ ಸಂಕಷ್ಟದ ಸಂದರ್ಭದಲ್ಲಿ ರಾಜ್ಯದ ರೈತರ ಹಿತ ಕಾಪಾಡಲು ಉದ್ದೇಶಿಸಿರುವ ಮೇಕೆದಾಟು ಯೋಜನೆಗೆ ಸುಪ್ರೀಂಕೋರ್ಟ್ ನಿಂದ ಅನುಮತಿ ದೊರೆತಿದ್ದು, ಯೋಜನೆಗಾಗಿ ಈಗಾಗಲೇ 2,500 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಇದರಲ್ಲಿ ರೈತರ ಖಾಸಗಿ ಜಮೀನು ಕೇವಲ 500 ಎಕರೆ ಮಾತ್ರ ಭೂಸ್ವಾಧೀನವಾಗಲಿದೆ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಮಂಡ್ಯದ ಪಿಇಎಸ್ ಕಾಲೇಜು ಹೆಲಿಪ್ಯಾಡ್ ಬಳಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಡಿ ಕೆ ಶಿವಕುಮಾರ್ ಅವರು ಮೇಕೆದಾಟು ವಿಚಾರವಾಗಿ ಮಾತನಾಡಿ, ಮೇಕೆದಾಟು ಯೋಜನೆಯಿಂದ ಕಾವೇರಿ ನೀರಿನ ನಿರ್ವಹಣೆಗೆ ದೊಡ್ಡ ಅನುಕೂಲವಾಗಲಿದೆ. ಯೋಜನೆಗೆ ಅಗತ್ಯವಾದ ಅರಣ್ಯ ಭೂಮಿಗೆ ಪರ್ಯಾಯವಾಗಿ ಜಮೀನು ನೀಡುವ ಪ್ರಕ್ರಿಯೆ ಆರಂಭವಾಗಿದೆ. ಮುಂದಿನ ಬಜೆಟ್ ವೇಳೆಗೆ ಕೇಂದ್ರ ಸರ್ಕಾರದಿಂದ ಅರಣ್ಯ ಅನುಮತಿ ಪಡೆಯುವ ನಿರೀಕ್ಷೆಯಿದೆ ಎಂದು ಹೇಳಿದರು.

ಮೇಕೆದಾಟು ಯೋಜನೆ: ಸುಪ್ರೀಂಕೋರ್ಟ್ ಅನುಮತಿ
ನನ್ನ ಅವಧಿಯಲ್ಲಿ ಹೋರಾಟ ಮಾಡಿ, ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿ ಪ್ರಕರಣದಲ್ಲಿ ಯಶಸ್ಸು ಸಾಧಿಸಿದ್ದೇವೆ. ಮೇಕೆದಾಟು ಯೋಜನೆ ಆರಂಭಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಈಗಾಗಲೇ ಜಿಲ್ಲಾಧಿಕಾರಿಗಳನ್ನೇ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿ, ಅರಣ್ಯ ಇಲಾಖೆಗೆ ಪರ್ಯಾಯ ಜಮೀನು ನೀಡುವ ಸಂಬಂಧ ಸಭೆ ನಡೆಸಲಾಗಿದೆ. ಪರ್ಯಾಯ ಭೂಮಿ ಗುರುತಿಸುವ ಕೆಲಸವೂ ನಡೆದಿದೆ. ಈಗಾಗಲೇ 2,500 ಎಕರೆ ಗುರುತಿಸಿದ್ದು, ಇನ್ನೂ ಗುರುತಿಸಲಾಗುತ್ತಿದೆ" ಎಂದರು.
66 ಟಿಎಂಸಿ ನೀರು ಸಂಗ್ರಹಕ್ಕೆ ಅವಕಾಶ
ಮೇಕೆದಾಟು ಯೋಜನೆಯ ಪ್ರಮುಖ ಉದ್ದೇಶ ಕಾವೇರಿ ನೀರನ್ನು ಸಂಕಷ್ಟದ ಸಂದರ್ಭದಲ್ಲಿ ಸಂಗ್ರಹಿಸಿಟ್ಟುಕೊಂಡು ಸಮರ್ಪಕವಾಗಿ ನಿರ್ವಹಿಸುವುದಾಗಿದೆ. ಯೋಜನೆಯಡಿ 66 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿರಲಿದೆ. ಕಾವೇರಿ ನೀರು ಹಂಚಿಕೆ ನ್ಯಾಯಾಧಿಕರಣ ಹಾಗೂ ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ವಾರ್ಷಿಕ 177 ಟಿಎಂಸಿ ನೀರು ಬಿಡಬೇಕಿದೆ. ಮಳೆ ಕೊರತೆ ಸೇರಿದಂತೆ ಸಂಕಷ್ಟದ ಸಂದರ್ಭಗಳಲ್ಲಿ ನೀರಿನ ಲಭ್ಯತೆ ಮತ್ತು ಹರಿವಿನ ನಿರ್ವಹಣೆ ಸವಾಲಾಗುತ್ತದೆ. ಇಂತಹ ಸಂದರ್ಭದಲ್ಲಿ ಮೇಕೆದಾಟು ಯೋಜನೆ ನೆರವಾಗಲಿದೆ ಎಂದು ವಿವರಿಸಿದರು.
177 ಟಿಎಂಸಿ ನೀರು ಬಿಡಬೇಕು ಎಂದು ಆದೇಶವಿದೆ. ಮೇಕೆದಾಟಿನಲ್ಲಿ 66 ಟಿಎಂಸಿ ನೀರು ಸಂಗ್ರಹಿಸಿಟ್ಟುಕೊಂಡರೆ, ಸಂಕಷ್ಟದ ಸಂದರ್ಭದಲ್ಲಿ ನೀರಿನ ಹರಿವನ್ನು ನಿರ್ವಹಿಸಲು ಅನುಕೂಲವಾಗುತ್ತದೆ. ಎಷ್ಟು ಪ್ರಮಾಣದಲ್ಲಿ ನೀರು ಬಿಡಬೇಕು ಎಂಬುದನ್ನು ಸಮರ್ಪಕವಾಗಿ ನಿರ್ವಹಿಸಬಹುದು. ಹೇಮಾವತಿ, ಹಾರಂಗಿ, ಕಬಿನಿ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದ ರೈತರಿಗೂ ಇದರಿಂದ ಅನುಕೂಲವಾಗಲಿದೆ. ಕಾವೇರಿ ಪೂಜೆ ಮಾಡಿ ಪ್ರಾರ್ಥಿಸಿದ್ದೇವೆ. ಯೋಜನೆ ಈಗ ಒಂದು ಹಂತಕ್ಕೆ ಬಂದಿದೆ ಎಂದು ಹೇಳಿದರು.
ಅರಣ್ಯ ಅನುಮತಿ ಬಳಿಕ ಭೂಸ್ವಾಧೀನ
ಯೋಜನೆಗೆ ಸಂಬಂಧಿಸಿದ ಅರಣ್ಯ ಭೂಮಿಗೆ ಪರ್ಯಾಯ ಜಮೀನು ನೀಡುವ ವಿವರಗಳನ್ನು ಅರಣ್ಯ ಇಲಾಖೆಯ ಪೋರ್ಟಲ್ ನಲ್ಲಿ ದಾಖಲಿಸಲಾಗುವುದು. ಇದಕ್ಕೆ ಕೇಂದ್ರ ಸರ್ಕಾರ ಶೀಘ್ರ ಅನುಮತಿ ನೀಡಬೇಕು. ಅನುಮತಿ ದೊರೆತ ಬಳಿಕ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ತಿಳಿಸಿದರು.
ನಾವು ಯಾವೆಲ್ಲ ಜಮೀನುಗಳನ್ನು ಪರ್ಯಾಯವಾಗಿ ನೀಡುತ್ತಿದ್ದೇವೆ ಎಂಬುದನ್ನು ಅರಣ್ಯ ಇಲಾಖೆಯ ಪೋರ್ಟಲ್ ನಲ್ಲಿ ದಾಖಲಿಸುತ್ತೇವೆ. ಅವರು ಕೂಡಲೇ ಅನುಮತಿ ನೀಡಬೇಕು. ನಂತರ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸುತ್ತೇವೆ. ಯೋಜನೆಗೆ ಒಟ್ಟಾರೆ 2,500 ಎಕರೆ ಗುರುತಿಸಿದ್ದರೂ, ರೈತರ ಖಾಸಗಿ ಜಮೀನು ಹೋಗುವುದು ಕೇವಲ 500 ಎಕರೆ ಮಾತ್ರ ಎಂದು ಸ್ಪಷ್ಟಪಡಿಸಿದರು.
ಮುಂದಿನ ಬಜೆಟ್ ವೇಳೆಗೆ ಕೇಂದ್ರದ ಅರಣ್ಯ ಅನುಮತಿ ಪಡೆಯುವ ನಿಟ್ಟಿನಲ್ಲಿ ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಬಿಜೆಪಿ ನಾಯಕರೂ ರಾಜಕೀಯ ಬದಿಗಿಟ್ಟು ಸಹಕಾರ ನೀಡಬೇಕು. ಎಲ್ಲರೂ ಒಟ್ಟಾಗಿ ಹೋಗಿ ಯೋಜನೆಗೆ ಅನುಮತಿ ಪಡೆಯೋಣ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮನವಿ ಮಾಡಿದರು.
ವಿಮಾನ ಎಂಜಿನ್ ದುರಸ್ತಿ ಘಟಕಕ್ಕೆ ಜಮೀನು
ವಿಮಾನ ಎಂಜಿನ್ ದುರಸ್ತಿ ಘಟಕಕ್ಕೆ ರಾಜ್ಯ ಸರಕಾರ ಜಮೀನು ನೀಡುತ್ತಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪತ್ರ ಬರೆದಿರುವ ಕುರಿತು ಕೇಳಿದಾಗ, "ನಾವು ಈಗಾಗಲೇ 100 ಎಕರೆ ಜಮೀನು ನೀಡುವುದಾಗಿ ಹೇಳಿದ್ದೇವೆ. ಇನ್ನೂ ಹೆಚ್ಚಿನ ಜಮೀನು ಬೇಕೆಂದು ಕೇಳಿದ್ದಾರೆ. ಖಂಡಿತವಾಗಿಯೂ ಕೊಡುತ್ತೇವೆ. ಯಾರು ಬೇಡ ಎನ್ನುತ್ತಾರೆ? ಮೊದಲು ಅವರು ಕೆಲಸ ಆರಂಭಿಸಲಿ. ಆ ಬಳಿಕ ಎಷ್ಟು ಜಮೀನು ಬೇಕೋ ಅಷ್ಟನ್ನು ನೀಡುತ್ತೇವೆ ಎಂದರು.
ಮೊದಲು 100 ಎಕರೆ ಕೇಳಿದಾಗ ನೀಡಲು ಒಪ್ಪಿದ್ದೇವೆ. ಈಗ ಎರಡು ದಿನಗಳ ಹಿಂದೆ 500 ಎಕರೆ ಬೇಕೆಂದು ಕೇಳಿದ್ದಾರೆ. ರಾಜ್ಯ ಸರಕಾರದಿಂದ ಯಾವುದೇ ಸಹಕಾರದ ಕೊರತೆಯಿಲ್ಲ. ಅವರು ಒಳ್ಳೆಯ ಕೆಲಸ ಮಾಡಲಿ, ಅದಕ್ಕೆ ಅಗತ್ಯವಿರುವ ಎಲ್ಲ ಸಹಕಾರ ನೀಡಲು ಸಿದ್ಧರಿದ್ದೇವೆ. ಕಳೆದ ಎರಡೂವರೆ-ಮೂರು ವರ್ಷಗಳಿಂದ ಅವರು ಈ ವಿಚಾರ ಪ್ರಸ್ತಾಪಿಸುತ್ತಲೇ ಇದ್ದಾರೆ ಎಂದು ಹೇಳಿದರು.
ಎಐಆರ್ ಘಟಕಕ್ಕೆ ವಿವಾದಿತ ಜಮೀನು ನೀಡಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಯಾವ ಜಮೀನು ಬೇಕು ಎಂಬುದನ್ನು ಅವರೇ ತೋರಿಸಲಿ. ಯಾವ ಜಮೀನನ್ನು ಭೂಸ್ವಾಧೀನ ಮಾಡಬೇಕು ಎಂದು ಸೂಚಿಸುತ್ತಾರೋ ಅದನ್ನೇ ಸ್ವಾಧೀನಪಡಿಸಿಕೊಡಲು ಸಿದ್ಧರಿದ್ದೇವೆ. ಅವರು ತೋರಿಸಿದ ಜಮೀನನ್ನು ನೀಡಲು ನಮಗೆ ಅಭ್ಯಂತರವಿಲ್ಲ. ಆದರೆ, ಒಂದು ಕಡೆ ಭೂಸ್ವಾಧೀನಕ್ಕೆ ಹೋದಾಗ ರೈತರು ವಿರೋಧ ವ್ಯಕ್ತಪಡಿಸುವ ಪರಿಸ್ಥಿತಿಯೂ ಇದೆ. ಅದನ್ನೂ ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಪಷ್ಟಪಡಿಸಿದರು.


Click it and Unblock the Notifications
