ಮೇಕೆದಾಟು ಯೋಜನೆಯ ಇತಿಹಾಸ ತಿಳಿಯಿರಿ!
ಬೆಂಗಳೂರು: ರಾಜ್ಯದಲ್ಲಿ ಬರ ಆವರಿಸಿದೆ, ಅದರಲ್ಲೂ ಕಾವೇರಿ ಕೊಳ್ಳದಲ್ಲಿನ ಪರಿಸ್ಥಿತಿ ಈ ಬಾರಿ ಭೀಕರ ಸ್ಥಿತಿ ತಲುಪಿದೆ. ಈ ಸಂದರ್ಭದಲ್ಲಿ ಕಾವೇರಿ ನೀರಿಗೂ ಕಿರಿಕ್ ಶುರುವಾಗಿದೆ. ಕಳೆದ 4-5 ವರ್ಷದಿಂದ ಉತ್ತಮವಾಗಿ ಮಳೆಯಾಗಿತ್ತು. ಆಗ ಸಾವಿರಾರು ಟಿಎಂಸಿ ನೀರನ್ನ ಕರ್ನಾಟಕದ ಜಲಾಶಯಗಳಿಂದ ತಮಿಳುನಾಡಿಗೆ ಹರಿಸಲಾಗಿತ್ತು. ಈ ಬಾರಿ ಮಳೆ ಕೊರತೆ ನಡುವೆ ಕಾವೇರಿ ಕಿತ್ತಾಟದ ಕಿಚ್ಚು ಹೊತ್ತಿಕೊಂಡಿದೆ.
ತಮಿಳುನಾಡು ರಾಜಕೀಯದಲ್ಲಿ ಕಾವೇರಿ ಹೆಸರು ಎತ್ತದೆ ವೋಟ್ ಬೀಳಲ್ಲ. ಹೀಗಾಗಿಯೇ ಅಲ್ಲಿನ ರಾಜಕಾರಣಿಗಳಿಗೆ ಕಾವೇರಿ ವಿಚಾರವೇ ದೊಡ್ಡ ಅಸ್ತ್ರ. ಕರ್ನಾಟಕದಲ್ಲಿ ನೀರಿದ್ದಾಗ ಸಾವಿರಾರು ಟಿಎಂಸಿ ನೀರನ್ನ ಸಮುದ್ರಕ್ಕೆ ಹರಿಸಲಾಗಿತ್ತು. ಅದೇ ಹೀಗೆ ಬರಗಾಲ ಬಂದಾಗ ರಾಜಕೀಯ ಶುರುವಾಗಿದೆ. ಈಗಲೂ ಕಾವೇರಿ ಹೋರಾಟ ನಡೆಯುವುದು ಬಹುತೇಕ ಪಕ್ಕಾ ಆಗಿದೆ. ಅದರಲ್ಲೂ ಮೇಕೆದಾಟು ಸಮೀಪ ಜಲಾಶಯ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಸಿದ್ಧತೆ ನಡೆಸಿರುವಾಗಲೇ, ದೋಸ್ತಿಗಳ ಮಧ್ಯೆ ನೀರಿಗಾಗಿ ಕುಸ್ತಿ ಶುರುವಾಗುವ ಮುನ್ಸೂಚನೆ ಸಿಕ್ಕಿದೆ. ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ದಶಕಗಳ ದೋಸ್ತಿಗೆ ಬೆಂಕಿ ಬಿದ್ದಿದೆ.

ಮೇಕೆದಾಟು ಯೋಜನೆ ಇತಿಹಾಸ ನಿಮಗೆ ಗೊತ್ತೇ!
ಬೆಂಗಳೂರು ನಗರದಿಂದ ಸುಮಾರು 90 ಕಿಲೋ ಮೀಟರ್ ದೂರದಲ್ಲಿರುವ ರಾಮನಗರದ ಜಿಲ್ಲೆ ಸಮೀಪ ಬರುವ ಸ್ಥಳವೇ ಮೇಕೆದಾಟು. ಕಾವೇರಿ ನದಿ ಇಲ್ಲಿ ರಭಸದಿಂದ ಹರಿದು ಬಂಡೆಗಳ ಕೊರೆದು ವಿಚಿತ್ರ ಆಕೃತಿ ಮೂಡಿಸಿದೆ. ಇದೇ ಸ್ಥಳದಲ್ಲಿ ಆಹಾರ ತಿನ್ನಲು ಬರುವ ಮೇಕೆಗಳು, ಬಂಡೆ ದಾಟುವ ಕಾರಣಕ್ಕೆ ಈ ಪ್ರದೇಶದ ಹೆಸರು ಮೇಕೆದಾಟು ಎಂದಾಗಿದೆ ಎಂಬ ಮಾಹಿತಿ ಇದೆ. ಆದರೆ ಇದೇ ಮೇಕೆದಾಟು ಈಗ ದೇಶಾದ್ಯಂತ ಸದ್ದು ಮಾಡುತ್ತಿದೆ. ಬಿಜೆಪಿ ವಿರುದ್ಧ ಜೊತೆಯಾಗಿ ತೊಡೆತಟ್ಟಿದ್ದ ಕಾಂಗ್ರೆಸ್ & ಡಿಎಂಕೆ ಈ ವಿಚಾರಕ್ಕೆ ಕಚ್ಚಾಟ ಶುರುಮಾಡಿವೆ. ಹಾಗಾದರೆ ಮೇಕೆದಾಟು ಯೋಜನೆ ಕರ್ನಾಟಕಕ್ಕೆ ಏಕೆ ಮುಖ್ಯ? ಮುಂದೆ ಓದಿ.
1) ಮಳೆಗಾಲದಲ್ಲಿ ಸುಖಾಸುಮ್ಮನೆ ವ್ಯರ್ಥವಾಗುವ ನೀರನ್ನು ಕರ್ನಾಟಕದ ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳುವುದು.
2) 65-66 ಟಿಎಂಸಿ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದು ಸಮುದ್ರದ ಪಾಲಾಗುತ್ತಿದೆ, ಇದನ್ನ ತಪ್ಪಿಸುವ ಉದ್ದೇಶ.
3) ಬೆಂಗಳೂರು ಸುತ್ತಮುತ್ತ ಕುಡಿಯುವ ನೀರು ಒದಗಿಸುವ ಜೊತೆಗೆ ಕರ್ನಾಟಕ ರಾಜ್ಯಕ್ಕೆ ಅಗತ್ಯವಿರುವ ವಿದ್ಯುತ್ ಉತ್ಪಾದನೆಗೆ ಸಹಕಾರಿ.
4) 5252 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸುವ ಡ್ಯಾಂಗೆ 3181 ಹೆಕ್ಟೇರ್ ಕಾವೇರಿ ವನ್ಯಜೀವಿ ಅಭಯಾರಣ್ಯದ ಜಾಗ ಅಗತ್ಯ.
5) ಯೋಜನೆ ಬಳಿಕ ಒಟ್ಟು 5 ಹಳ್ಳಿಗಳು ಮುಳುಗಲಿದ್ದು, 201 ಹೆಕ್ಟೇರ್ ಖಾಸಗಿ ಭೂಮಿ ಕೂಡ ಬೇಕಾಗುತ್ತದೆ.

6) ಮೇಕೆದಾಟು ಯೋಜನೆ ಪೂರ್ಣಗೊಂಡರೆ ಬೆಂಗಳೂರು ಹೊರವಲಯದಲ್ಲಿ ನೀರಿನ ಸಮಸ್ಯೆ ಬಹುತೇಕ ಶಮನ.
7) ಮೇಕೆದಾಟು ಯೋಜನೆ ಬರದಲ್ಲಿ ಬೆಂದು ಹೋಗಿರುವ ರಾಮನಗರ ಜಿಲ್ಲೆಗೂ ವರ ನೀಡಬಲ್ಲದು ಎಂಬ ವಿಶ್ವಾಸ.
8) ರಾಮನಗರ ಸುತ್ತಮುತ್ತಲ ಭಾಗದಲ್ಲಿ ಅಂತರ್ಜಲ ಬತ್ತಿ ಹೋಗುತ್ತಿದೆ, ಮೇಕೆದಾಟು ಡ್ಯಾಂ ನಿರ್ಮಾಣವಾದರೆ ಅಂತರ್ಜಲ ಮಟ್ಟ ಏರಿಕೆ.
9) ಅನಿಶ್ಚಿತ ಮಳೆ ಕಾರಣ ರಾಮನಗರ & ಬೆಂಗಳೂರು ಹೊರವಲಯದ ರೈತರಲ್ಲಿರುವ ಆತಂಕವನ್ನು ಮೇಕೆದಾಟು ಡ್ಯಾಂ ದೂರ ಮಾಡುತ್ತದೆ.
10) ಬರದ ಸಂದರ್ಭದಲ್ಲಿ 65-66 ಟಿಎಂಸಿ ಹೆಚ್ಚುವರಿ ನೀರನ್ನು ಬಳಸಿಕೊಂಡು ಮುಂದೆ ತಮಿಳುನಾಡಿಗೂ ಬಿಡಲು ಸಾಧ್ಯವಾಗುತ್ತದೆ.
ತಮಿಳುನಾಡು ಸರ್ಕಾರ ರೊಚ್ಚಿಗೆದ್ದಿರುವುದು ಏಕೆ?
ಹೌದು, ಈ ಪ್ರಶ್ನೆ ಕೂಡ ಕೋಟ್ಯಂತರ ಜನರನ್ನ ಕಾಡುತ್ತಿದೆ. ಆದರೆ ಇದಕ್ಕೆ ಕೆಲವರು ಒನ್‌ಲೈನ್ ಉತ್ತರ ಕೂಡ ಕೊಡುತ್ತಿದ್ದಾರೆ. ಅದೇನೆಂದರೆ ತಮಿಳುನಾಡು ರಾಜಕೀಯದಲ್ಲಿ ಕಾವೇರಿ ವಿವಾದದ ಹೊರತಾಗಿ ರಾಜಕೀಯ ಮಾಡಲು ಸಾಧ್ಯವಿಲ್ಲ. ಹೀಗಾಗಿಯೇ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕಿರಿಕ್ ಶುರುವಾಗಿದೆ. ಮೇಕೆದಾಟು ಯೋಜನೆ ಕುರಿತು ತಮಿಳುನಾಡು ಸರ್ಕಾರ ಕಿರಿಕ್ ತೆಗೆದಿದೆ ಎಂದು. ಹಾಗಾದರೆ ತಮಿಳುನಾಡು ಸರ್ಕಾರ ಈ ಯೋಜನೆಗೆ ವಿರೋಧ ಮಾಡುತ್ತಿರುವುದು ಏಕೆ? ಮುಂದೆ ಓದಿ.

1) ಮೇಕೆದಾಟು ಡ್ಯಾಂ ನಿರ್ಮಾಣವಾದರೆ ನೀರಿನ ಕೊರತೆ ಎದುರಾಗುವ ಭಯವಿದೆ ಎನ್ನುತ್ತಿದೆ ತಮಿಳುನಾಡು ಸರ್ಕಾರ.
2) ಕೆಆರ್‌ಎಸ್ ಡ್ಯಾಂ ಬಳಿಕ ಕಬಿನಿ, ಶಿಂಷಾ, ಅರ್ಕಾವತಿ, ಸುವರ್ಣವತಿ ನದಿಗಳು ಕಾವೇರಿ ನದಿಗೆ ಸೇರಿ ಅನಿಯಂತ್ರಿತವಾಗಿ ನದಿ ಹರಿಯುತ್ತದೆ.
3) ತಮಿಳುನಾಡು ಗಡಿ ಭಾಗದಲ್ಲಿ ಡ್ಯಾಂ ನಿರ್ಮಾಣವಾದರೆ ಅನಿಯಂತ್ರಿತವಾಗಿ ನದಿಯ ಹರಿವು ತಡೆದಂತಾಗುತ್ತದೆ ಎಂಬ ವಾದವಿದೆ.
4) ಈಗಾಗಲೇ ತಮಿಳುನಾಡು ಸರ್ಕಾರ ಕೂಡ ಕಾವೇರಿ ನೀರನ್ನೇ ನಂಬಿಕೊಂಡು ಸಾಕಷ್ಟು ಯೋಜನೆ ಕೈಗೆತ್ತಿಕೊಂಡಿದೆ.
5) ಮೇಕೆದಾಟು ಯೋಜನೆ ತಮಿಳುನಾಡಲ್ಲಿ ಬಹುತೇಕ ರಾಜಕೀಯವಾಗಿ ಬದಲಾಗಿದ್ದು, ದೊಡ್ಡ ಸಮಸ್ಯೆ ಎದುರಾಗಿದೆ.
ಮೇಕೆದಾಟು ಯೋಜನೆಗಾಗಿ ದೆಹಲಿ ದಂಗಲ್!
ಇನ್ನು ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೂ ಮೇಕೆದಾಟು ಯೋಜನೆಗೆ ವೇಗ ಸಿಗಲಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಬಂದ ನಂತರ ಯೋಜನೆ ಪೂರ್ಣಗೊಳಿಸಲು ಬೇಕಂತಲೇ ಅಡ್ಡಿ ಮಾಡಲಾಗುತ್ತಿದೆ ಎಂಬ ಆರೋಪ 'ಕೈ' ನಾಯಕರದ್ದು. ಇದೇ ವಿಚಾರಕ್ಕೆ ಕೆಲ ದಿನಗಳ ಹಿಂದೆ ದೆಹಲಿಗೂ ತೆರಳಿದ್ದರು ಡಿಸಿಎಂ ಡಿಕೆ ಶಿವಕುಮಾರ್. ಈ ವೇಳೆ ಮೇಕೆದಾಟು ಬಗ್ಗೆ ಮಾತನಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್, ಕಾನೂನು ತಜ್ಞರ ಜೊತೆ ಚರ್ಚೆ ಮಾಡಬೇಕಿದೆ. ಯೋಜನೆ ತಡವಾದಷ್ಟು ರಾಜ್ಯಕ್ಕೆ ನಷ್ಟ ಹೆಚ್ಚು. ನಮಗೆ ಯಾವುದೇ ರಾಜ್ಯದ ಜೊತೆಗೆ ಜಗಳ ಮಾಡಲು ಇಷ್ಟವಿಲ್ಲ. ಈ ಕಾರಣಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದರು.
700 ಟಿಎಂಸಿ ನೀರು ಸಮುದ್ರದ ಪಾಲು?
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದೆಹಲಿ ಭೇಟಿ ಸಂದರ್ಭದಲ್ಲಿ ಕೊಟ್ಟ ಲೆಕ್ಕ ಶಾಕ್ ನೀಡುವಂತಿತ್ತು. ಕಳೆದವರ್ಷ ಕರ್ನಾಟಕದಲ್ಲಿ ಭಾರಿ ಮಳೆಯಾಗಿತ್ತು. ಆದರೆ ಹೀಗೆ ಹರಿದಿದ್ದ ಹೆಚ್ಚುವರಿ ನೀರು ಸಮುದ್ರ ಸೇರಿತ್ತು. ಹಾಗೆ ಸಮುದ್ರ ಸೇರಿದ್ದ ನೀರಿನ ಪ್ರಮಾಣ ಎಷ್ಟು ಗೊತ್ತಾ? ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಂತೆ 'ಕಳೆದ ವರ್ಷ 700 ಟಿಎಂಸಿ ನೀರು ಸಮುದ್ರದ ಪಾಲಾಗಿದೆ. ಆದರೆ ಈ ವರ್ಷ ಕುಡಿಯಲೂ ನೀರಿಲ್ಲ. ಆಣೆಕಟ್ಟು ಭದ್ರತೆ ವಿಚಾರವಾಗಿ ಮುಂದಿನ ತಿಂಗಳು ಒಂದು ಸಭೆ ಇದೆ. ಆ ಸಭೆ KRSನಲ್ಲಿಯೇ ಆಯೋಜಿಸುತ್ತಿದ್ದು ಸಭೆಗೆ ಬಂದು ಪರಿಸ್ಥಿತಿ ಕಣ್ಣಾರೆ ನೋಡಲಿ. ನಮ್ಮಲ್ಲಿ ಮಳೆ ಬರುವುದೇ 100 ದಿನ. ಒಂದು ದಿನ ಮಳೆ ಬಂದರೆ ವಿದ್ಯುತ್ ಬಳಕೆಯಲ್ಲಿ ಎಷ್ಟು ಉಳಿತಾಯ ಇದೆ ಎಂದು ನನಗೆ ಅರಿವಿದೆ' ಎಂದು ತಿಳಿಸಿದ್ದರು.












Click it and Unblock the Notifications