ಮೇಕೆದಾಟು ಯೋಜನೆ: ಕೇಂದ್ರದ ಬಳಿ ಸರ್ವಪಕ್ಷ ನಿಯೋಗ ಕರೆದೊಯ್ಯಲು ನಿರ್ಧಾರ
ಬೆಂಗಳೂರು, ಮಾರ್ಚ್ 18: ಮೇಕೆದಾಟು ಯೋಜನೆ ಜಾರಿ ವಿಚಾರದ ಬಗ್ಗೆ ಇಂದು (ಶುಕ್ರವಾರ, ಮಾರ್ಚ್ 18) ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಸಲಾಯಿತು.
ಈ ಸರ್ವಪಕ್ಷ ಸಭೆಯಲ್ಲಿ ರಾಜ್ಯದ ನದಿ ನೀರು ಹಂಚಿಕೆ ಕುರಿತು ವಿವಿಧ ಪಕ್ಷಗಳ ರಾಜಕೀಯ ಮುಖಂಡರೊಂದಿಗೆ ಚರ್ಚೆ ನಡೆಸಲಾಗಿದೆ. ಮೇಕೆದಾಟು ಅಣೆಕಟ್ಟನ್ನು ಯೋಜನೆ ವಿಚಾರವಾಗಿ ನಿಯೋಗ ತೆಗೆದುಕೊಂಡು ಹೋಗಲು ನಿರ್ಧರಿಸಲಾಯಿತು.
ಅಗತ್ಯ ಬಿದ್ದರೆ ಸರ್ವ ಪಕ್ಷ ನಿಯೋಗವನ್ನು ನವದೆಹಲಿಗೆ ಕೊಂಡೊಯ್ಯಲು ಸಭೆಯಲ್ಲಿ ನಿರ್ಣಯ ಮಾಡಲಾಗಿದ್ದು, ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ. ತಮಿಳುನಾಡು ಸರ್ಕಾರ ಮತ್ತು ಅಲ್ಲಿನ ಪಕ್ಷಗಳ ವಿರೋಧಕ್ಕೆ ಕ್ಯಾರೆ ಎನ್ನದಿರಲು ಸಭೆಯಲ್ಲಿ ಸಹಮತ ದೊರೆತಿದೆ.

ಮೇಕೆದಾಟು ಯೋಜನೆ ವಿವಾದದ ಬಗ್ಗೆ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ನೀಡಿದ ಹೇಳಿಕೆಗೆ ಸರ್ವಪಕ್ಷ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಆದರೆ ಇಂದು ಕಾನೂನು ತಜ್ಞರು ಸಭೆಯಲ್ಲಿ ಸಹಮತ ವ್ಯಕ್ತಪಡಿಸಿದ್ದು, ಕಾವೇರಿ ನೀರು ಹಂಚಿಕೆಯಾಗಿರುವಾಗ ಮೇಕೆದಾಟು ಯೋಜನೆ ಮಾಡಲು ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ಬೆಂಗಳೂರಿನಲ್ಲಿ ಅಂತರ ರಾಜ್ಯ ಜಲ ವಿವಾದಗಳ ಕುರಿತು ವಿಧಾನಮಂಡಲ ಉಭಯ ಸದನಗಳ ನಾಯಕರ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕಾಂಗ್ರೆಸ್ ಮುಖಂಡ ಎಚ್.ಕೆ. ಪಾಟೀಲ್, ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ್, ಜೆಡಿಎಸ್ ಪಕ್ಷದ ಬಂಡೆಪ್ಪ ಕಾಶೆಂಪೂರ, ಕಾನೂನು ತಜ್ಞರು ಮತ್ತು ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಬಗ್ಗೆ ಚರ್ಚೆ: ಸಿಎಂ ಬಸವರಾಜ ಬೊಮ್ಮಾಯಿ
ಅಂತರ್ ರಾಜ್ಯ ಜಲ ವಿವಾದಗಳ ಬಗ್ಗೆ ಚರ್ಚೆಸಲು ಸರ್ವ ಪಕ್ಷದವರನ್ನು ಆಹ್ವಾನಿಸಿದ್ದೆ. ಮಾಜಿ ನೀರಾವರಿ ಸಚಿವರನ್ನು ಕೂಡ ಆಹ್ವಾನಿಸಿ ಚರ್ಚೆ ನಡೆಸಿದೆ. ಈ ಚರ್ಚೆಯಲ್ಲಿ ಮೊದಲನೆಯದಾಗಿ ಮೇಕೆದಾಟು ಬಗ್ಗೆ ಚರ್ಚೆ ಮಾಡಿದ್ದೇವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಏನಿದೆ ಅದರ ಬಗ್ಗೆ ಚರ್ಚೆ ಮಾಡಿದೆವು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಡಿಪಿಆರ್ ಚರ್ಚೆ ನಡೆಸಿ ಒಪ್ಪಿಕೊಳ್ಳಬೇಕು ಅನ್ನುವುದರ ಬಗ್ಗೆ ಚರ್ಚೆ ಮಾಡಿದ್ದೇವೆ. ನಾನು ನಮ್ಮ ಕೇಂದ್ರ ಜಲಮಂತ್ರಿ ಜೊತೆ ಚರ್ಚೆ ಮಾಡಿ ಸಭೆ ಫಿಕ್ಸ್ ಮಾಡುವುದರ ಬಗ್ಗೆ ಸಭೆಯಲ್ಲಿ ತಿಳಿಸಿದ್ದೇನೆ. ಅಧಿವೇಶನ ಮುಗಿದ ಕೂಡಲೇ ನಾನು ದೆಹಲಿಗೆ ತೆರಳಿ ಇದರ ಬಗ್ಗೆ ನಮ್ಮ ಕೇಂದ್ರ ಸಚಿವರ ಜೊತೆ ಚರ್ಚಿಸಿ ಒತ್ತಾಯ ಮಾಡುತ್ತೇನೆ. ಬಳಿಕ ಇಲ್ಲಿ ಬಂದು ಎಲ್ಲರ ಜೊತೆ ಚರ್ಚೆ ನಡೆಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.












Click it and Unblock the Notifications