ಫಿಶ್, ಚಿಕನ್, ಮಟನ್, ಫೋರ್ಕ್, ಬೀಫ್: ದೇವಾಲಯಕ್ಕೆ ತೆರಳುವ ಮುನ್ನ ಸಿಟಿ ರವಿ ತಿಂದ ಮಾಂಸದ ಮೆನು- ಕಾಂಗ್ರೆಸ್ ಹೇಳಿದ್ದೇನು?
ಸಿಟಿ ರವಿ ಅವರು ಏನೇನು ತಿಂದು ದೇವಸ್ಥಾನಕ್ಕೆ ತೆರಳಿದರು ಎಂದು ಕಾಂಗ್ರೆಸ್ ಪಟ್ಟಿ ಮಾಡಿದೆ. ಇದನ್ನೂ ಟ್ವೀಟ್ ಮಾಡುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನು ಟೀಕಿಸಿದೆ.
ಬೆಂಗಳೂರು, ಫೆಬ್ರವರಿ 22: ಬಿಜೆಪಿ ಶಾಸಕ ಸಿಟಿ ರವಿ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ. ಅವರು ದೇವಸ್ಥಾನಕ್ಕೆ ಹೋಗುವ ಮೊದಲು ತಿಂದ ಮಾಂಸ ಖಾಧ್ಯಗಳ ಮೆನುವನ್ನು ನೀಡಿದೆ. ಸಿಟಿ ರವಿ ಅವರು ಏನೇನು ತಿಂದು ದೇವಸ್ಥಾನಕ್ಕೆ ತೆರಳಿದರು ಎಂದು ಕಾಂಗ್ರೆಸ್ ಪಟ್ಟಿ ಮಾಡಿದೆ. ಇದನ್ನೂ ಟ್ವೀಟ್ ಮಾಡುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನು ಟೀಕಿಸಿದೆ.
ಈ ವಿಚಾರವಾಗಿ ಬುಧವಾರ ಟ್ವೀಟ್ ಮಾಡಿರುವ ಕರ್ನಾಟಕ ರಾಜ್ಯ ಕಾಂಗ್ರೆಸ್ ಘಟಕವು, ' ದ್ವೇಷ ಕಾರುವುದನ್ನೇ ಧರ್ಮ ಎಂದುಕೊಂಡಿರುವ ಬಾಯಿಹರುಕ ಸಿಟಿ ರವಿ ಅವರು ದೇವಸ್ಥಾನಕ್ಕೆ ಹೋಗುವ ಮುನ್ನ ತಿಂದ ಮಾಂಸದ ಮೆನು ಏನು? ಎಂದು ಬಿಜೆಪಿಗೆ ಪ್ರಶ್ನಿಸಿದೆ.

'ಫಿಶ್ ಫ್ರೈ, ಚಿಕನ್ ಕಬಾಬ್, ಲೆಗ್ ಪೀಸ್, ಮಟನ್ ಕುರ್ಮಾ, ಚಿಕನ್ ಟಿಕ್ಕಾ, ನಾಟಿಕೋಳಿ ಸಾಂಬಾರ್, ಫೋರ್ಕ್ ಫ್ರೈ ಬೀಫ್ ಬಿರಿಯಾನಿ? ಸಿಟಿ ರವಿ ತಟ್ಟೆಯನ್ನು ಬಿಜೆಪಿಗರು ಇಣುಕಿ ನೋಡಿಲ್ಲವೇ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
'ಕಾಂಗ್ರೆಸ್‌ನವರು ತಿಂದರೆ ಮಾಂಸ, ಬಿಜೆಪಿಗರು ತಿಂದರೆ ಮಾಂಸವೂ ಕ್ಯಾರೆಟ್ ಹಲ್ವಾದಂತಾಗುತ್ತದೆಯೇ? ಮಾಂಸದೂಟ ಸೇವಿಸಿ ಹನುಮನ ದೇವಸ್ಥಾನಕ್ಕೆ ಹೋಗಿದ್ದ ಸಿಟಿ ರವಿ ಹಿಂದೂ ವಿರೋಧಿ ಎಂದು ಬಿಜೆಪಿ ನಾಯಕರು ಬಾಯಿ ಬಡಿದುಕೊಳ್ಳುತ್ತಿಲ್ಲವೇಕೆ? ಈಗ ದೇವಾಲಯ ಮೈಲಿಗೆಯಾಗಿಲ್ಲವೇ? ಗೋಮೂತ್ರ ಎರಚುವುದಿಲ್ಲವೇ' ಎಂದು ಬಿಜೆಪಿಯನ್ನು ಕಾಂಗ್ರೆಸ್ ಕೇಳಿದೆ. ಇದರೊಂದಿಗೆ ವಿಡಿಯೊವೊಂದನ್ನು ಶೇರ್ ಮಾಡಿಕೊಂಡಿದೆ.
ಚುನಾವಣೆಗಾಗಿ ಕಮಿಷನ್ ದರ 80 ಪರ್ಸೆಂಟ್‌ಗೆ ಏರಿಕೆಯಾಗಿದೆಯೇ?
ಪಾರ್ಟಿ ಪರ್ಸೆಂಟ್ ಆರೋಪ ಎದುರಿಸುತ್ತಿರುವ ಬಸವರಾಜ ಬೊಮ್ಮಾಯಿ ಸರ್ಕಾರವನ್ನು ಕಾಂಗ್ರೆಸ್ ಮತ್ತೆ ತರಾಟೆಗೆ ತೆಗೆದುಕೊಂಡಿದೆ. ದುರಸ್ತಿ ಮಾಡಿದ ರಸ್ತೆಯೊಂದರ ದುರಾವಸ್ಥೆಯ ವಿಡಿಯೊವೊಂದನ್ನು ಕಾಂಗ್ರೆಸ್ ಹಂಚಿಕೊಂಡಿದೆ.

'ಕಾವಲಿಯಲ್ಲಿ ಹಾಕಿದ ದೋಸೆಯನ್ನು ಎತ್ತುವುದಕ್ಕಿಂತ ಸುಲಭದಲ್ಲಿ ರಸ್ತೆಗೆ ಬಿಜೆಪಿ ಹಾಕಿದ ಡಾಂಬಾರನ್ನು ಎತ್ತಬಹುದು. ಚುನಾವಣೆ ಸಮೀಪದಲ್ಲಿ ಹಾರೆ, ಗುದ್ದಲಿ ಹಿಡಿದು ಹೊರಟ ಬಿಜೆಪಿ ಸರ್ಕಾರದ 40% ಕಮಿಷನ್ ಅಸಲಿಯತ್ತನ್ನು ಜನರೇ ಬಯಲು ಮಾಡ್ತಿದಾರೆ. ಚುನಾವಣೆಗಾಗಿ ಕಮಿಷನ್ ದರ 80 ಪರ್ಸೆಂಟ್‌ಗೆ ಏರಿಕೆಯಾಗಿದೆಯೇ?' ಎಂದು ಪ್ರಶ್ನಿಸಿದೆ.
'ಬಸವರಾಜ ಬೊಮ್ಮಾಯಿ ಅವರೇ, ರಸ್ತೆಗೆ ಡಂಬಾರು ಹಾಕಿದ್ದೋ? ರಸ್ತೆ ಮೇಲೆ ಕಪ್ಪು ಹಿಟ್ಟಿನ ದೋಸೆ ಹೊಯ್ದಿದ್ದೋ? ಜಲ್ಲಿ ಇಲ್ಲದೆ ಮಣ್ಣಿನ ಮೇಲೆ ತೆಳುವಾದ ಡಂಬಾರು ಸುರಿಯುವುದು ಬಿಜೆಪಿ ಸರ್ಕಾರದ ಅಭಿವೃದ್ದಿಯೇ? ಬಿಜೆಪಿಯ 40 ಪರ್ಸೆಂಟ್ ಕಮಿಷನ್ ವಿಧಾನಸೌಧದಿಂದ ಹಿಡಿದು ಪ್ರತಿ ಹಳ್ಳಿಗಳವೆರೆಗೂ ಸಾರ್ವವ್ಯಾಪಿ, ಸರ್ವಸ್ಪರ್ಶಿ' ಎಂದು ಕಾಂಗ್ರೆಸ್ ಆರೋಪಿಸಿದೆ.
ಧರ್ಮಸ್ಥಳಕ್ಕೆ ಮಾಂಸ ತಿಂದು ಹೋಗಿದ್ದ ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿ ಆರೋಪಗಳನ್ನು ಮಾಡಿತ್ತು. ಸಿದ್ದರಾಮಯ್ಯ ಅವರು ಹಿಂದೂ ವಿರೋಧಿ ಎಂದು ವಾಗ್ದಾಳಿ ನಡೆಸಿಕೊಂಡು ಬಂದಿದೆ. ಕರ್ನಾಟಕ ಚುನಾವಣೆಗೆ ಇನ್ನೇನು ಎರಡು ತಿಂಗಳು ಬಾಕಿ ಇದೆ. ಮಾಂಸಾಹಾರ ಹಾಗೂ ಸಸ್ಯಾಹಾರದ ವಿಚಾರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಸಂಘರ್ಷ ನಡೆಸುತ್ತಲೇ ಬಂದಿವೆ.

ಬಿಜೆಪಿಯ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಾನು ಮಾಂಸಾಹಾರಿಯಾಗಿದ್ದೇನೆ. ಅದು ನನ್ನ ಆಹಾರ ಪದ್ದತಿ. ಇದರಲ್ಲಿ ತಪ್ಪೇನಿದೆ. ಬಿಜೆಪಿಯವರು ಡೋಂಗಿ ದೇಶಭಕ್ತರು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದರು.












Click it and Unblock the Notifications