ಎಂಬಿಬಿಎಸ್ ಪ್ರವೇಶ: ಹೊಸದಾಗಿ ರಾಜ್ಯ ಕ್ರೀಡಾ ಕೋಟಾ ನಿಗದಿಗೆ ಆದೇಶ
ಬೆಂಗಳೂರು, ಡಿಸೆಂಬರ್ 20; ಎಂಬಿಬಿಎಸ್ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ರಾಜ್ಯದ ಕ್ರೀಡಾ ಕೋಟಾದ ಶ್ರೇಯಾಂಕ ಮರು ನಿಗದಿಗೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೊಸದಾಗಿ ಕೋಟಾ ನಿಗದಿ ಮಾಡಿ ಆ ಕುರಿತ ವರದಿಯನ್ನು ಸಲ್ಲಿಸುವಂತೆ ಹೈಕೋರ್ಟ್, ಸರಕಾರ ಮತ್ತು ರಾಜ್ಯ ಯುವಜನ ವ್ಯವಹಾರ ಮತ್ತು ಕ್ರೀಡಾ ಇಲಾಖೆಗೆ ಆದೇಶ ನೀಡಿದೆ.
ಆ ಮೂಲಕ 18 ವರ್ಷದ ಡೈವಿಂಗ್ ಚಾಂಪಿಯನ್ ಅದಿತಿ ದಿನೇಶ್‌ರಾವ್ ನೆರವಿಗೆ ಧಾವಿಸಿದೆ. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹೊಸದಾಗಿ ರೂಪಿಸುವ ranking ಅನ್ವಯ ಅರ್ಹ ಅಭ್ಯರ್ಥಿಗಳಿಗೆ ಪ್ರವೇಶವನ್ನು ಖಾತ್ರಿಪಡಿಸಬೇಕು ಎಂದೂ ಸಹ ನ್ಯಾಯಪೀಠ ಕೆಇಎಗೆ ನಿರ್ದೇಶಿಸಿದೆ. ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯಪೀಠ ಈ ಆದೇಶವನ್ನು ನೀಡಿದೆ.

ಕೋರ್ಟ್ ಆದೇಶವೇನಿದೆ?; 'ಕ್ರೀಡಾ ಕೋಟಾದಡಿ ಅರ್ಹತಾ ಮಾನದಂಡ ಅತ್ಯಂತ ಸ್ಪಷ್ಟವಾಗಿದೆ, ಅದೆಂದರೆ ಅಭ್ಯರ್ಥಿಗಳು ಅಂತಾರಾಷ್ಟ್ರೀಯ ಸ್ಪರ್ಧೆಗಳು/ ಚಾಂಪಿಯನ್‌ಶಿಪ್‌ಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಪದಕ/ ಕಪ್‌ಗಳನ್ನು ಜಯಿಸಿರಬೇಕು. ಅದರಂತೆ ಅರ್ಜಿದಾರರು ಭಾರತೀಯ ಈಜು ಫೆಡರೇಷನ್ ಆಯೋಜಿಸಿದ್ದ ಚಾಂಪಿಯನ್‌ಶಿಪ್ ಗಳಲ್ಲಿ 4 ಚಿನ್ನ, 3 ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದಿದ್ದಾರೆ, ಆ ಬಗ್ಗೆ ಯಾವುದೇ ತಕರಾರು ಎತ್ತಿಲ್ಲ' ಎಂದು ನ್ಯಾಯಪೀಠ ಹೇಳಿದೆ.
ಪ್ರತಿವಾದಿ ಮೂವರು ಆಟಗಾರರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿರಬಹುದು, ಆದರೆ ಅವರು ಪದಕಗಳನ್ನು ಜಯಿಸಿಲ್ಲ, ಹಾಗಾಗಿ ಅವರು ಕ್ರೀಡಾಕೋಟಾದ ಅರ್ಹ ಮಾನದಂಡದ ವ್ಯಾಪ್ತಿಗೆ ಒಳಪಡುವುದಿಲ್ಲ. ಈ ಅಂಶವನ್ನು ಪರಿಗಣಿಸುವಲ್ಲಿ ಸಮಿತಿ ವಿಫಲವಾಗಿದೆ. ಮೊದಲು ಪ್ರಕಟಿಸಿದ್ದ ಪಟ್ಟಿಯಲ್ಲಿ ಅರ್ಜಿದಾರರು 10ನೇ ಶ್ರೇಯಾಂಕದಲ್ಲಿದ್ದರು, ಆನಂತರ ಪ್ರತಿವಾದಿಗಳಿದ್ದರು.
ಆದರೆ ಆನಂತರ ಪರಿಷ್ಕೃತ ಶ್ರೇಯಾಂಕದಲ್ಲಿ ಅರ್ಜಿದಾರರು 16ನೇ ಸ್ಥಾನದಲ್ಲಿದ್ದರು, ಅದಕ್ಕೂ ಮೊದಲಿನ ಶ್ರೇಯಾಂಕದಲ್ಲಿ ಮೂವರು ಆಟಗಾರರಿದ್ದಾರೆ. ಇದು ಸರಿಯಲ್ಲ. ಹಾಗಾಗಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹೊಸದಾಗಿ ಶ್ರೇಯಾಂಕ ನಿಗದಿಪಡಿಸಿ, ಕೆಇಎಗೆ ಸಲ್ಲಿಕೆ ಮಾಡಬೇಕೆಂದು ನ್ಯಾಯಾಲಯ ನಿರ್ದೇಶನ ನೀಡಿದೆ.
ಅರ್ಜಿದಾರರ ವಾದವೇನು?; ಎಂಬಿಬಿಎಸ್ ಸೀಟು ಸಿಗದೆ ಬಿಡಿಎಸ್ ಕೋರ್ಸ್ ಸೇರಿದ್ದ ಅರ್ಜಿದಾರ ಅಭ್ಯರ್ಥಿ ಅದಿತಿ, ಮೂವರು ಚೆಸ್ ಆಟಗಾರರಾದ ಸಾತ್ವಿಕ್ ಶಿವಾನಂದ್, ಎಸ್. ಆರ್. ಪ್ರತಿಮಾ ಮತ್ತು ಖುಷಿ ಎಂ. ಹೊಂಬಾಳ್ ಅವರಿಗೆ ಕ್ರೀಡಾಕೋಟಾದಲ್ಲಿ ಪ್ರವೇಶ ನೀಡಿರುವ ಕ್ರಮವನ್ನು ಪ್ರಶ್ನಿಸಿದ್ದರು.
ಅರ್ಜಿದಾರರ ಪರ ವಕೀಲರು, ಅಧಿಕಾರಿಗಳು ಚೆಸ್ ಅನ್ನು ಅಂತಾರಾಷ್ಟ್ರೀಯ ಕ್ರೀಡೆ ಎಂದು ಪರಿಗಣಿಸಿ ಮೂವರು ಆಟಗಾರರ ಹೆಸರನ್ನು ಅರ್ಜಿದಾರರಿಗಿಂತ ಶ್ರೇಯಾಂಕ ಪಟ್ಟಿಯಲ್ಲಿ ಮೇಲೆ ಸೇರಿಸಿ ಅವರಿಗೆ ಪ್ರವೇಶ ಸಿಗುವಂತೆ ಮಾಡಲಾಗಿದೆ. ಆ ವೇಳೆ ಕನಿಷ್ಠ ಅರ್ಜಿದಾರರಿಗೆ ತಮ್ಮ ಅಹವಾಲು ಸಲ್ಲಿಸಲೂ ಸಹ ಅವಕಾಶ ನೀಡಿಲ್ಲ ಎಂದರು.












Click it and Unblock the Notifications