ಕೈಗಾರಿಕಾ ಪ್ರದೇಶಗಳ ಸಿಎ ನಿವೇಶನ ಹಂಚಿಕೆ ಮಹತ್ವದ ಅಪ್ಡೇಟ್ ಕೊಟ್ಟ ಎಂ.ಬಿ ಪಾಟೀಲ್
ಬೆಳಗಾವಿ, ಡಿಸೆಂಬರ್ 17: ಕೈಗಾರಿಕಾ ಪ್ರದೇಶಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯ ಉದ್ದೇಶಗಳಿಗೆಂದು ಮೀಸಲಿಟ್ಟಿರುವ ಸಿ.ಎ. ನಿವೇಶನಗಳನ್ನು ಪಾರದರ್ಶಕವಾಗಿ ಮತ್ತು ನಿಯಮಗಳಿಗೆ ಅನುಸಾರವಾಗಿ ಹಂಚಲಾಗುತ್ತಿದೆ. ಜೊತೆಗೆ ಇದರಲ್ಲಿ ಎಸ್‌ಸಿ, ಎಸ್ಟಿ ಸಮುದಾಯಗಳ ಅರ್ಹರಿಗೂ ಅವಕಾಶ ಸಿಗಬೇಕೆಂದು ಮೀಸಲಾತಿ ಕಡ್ಡಾಯಗೊಳಿಸಲಾಗಿದೆ. ಇದರಲ್ಲಿ ಸ್ವಜನ ಪಕ್ಷಪಾತವಾಗಲಿ, ಅಕ್ರಮವಾಗಲಿ ನಡೆದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದರು.
ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಕಲಾಪ ವೇಳೆ ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ಅವರು ಕೇಳಿದ ಪ್ರಶ್ನೆಗೆ ಕೈಗಾರಿಕ ಸಚಿವರು ಉತ್ತರಿಸಿದರು. ಕೈಗಾರಿಕಾ ಪ್ರದೇಶಗಳಲ್ಲಿ ಶಾಲೆ, ಆಸ್ಪತ್ರೆ, ವಸತಿ ಸಮುಚ್ಚಯಗಳು, ಬ್ಯಾಂಕು, ಪೆಟ್ರೋಲ್ ಬಂಕ್, ಕ್ಯಾಂಟೀನ್, ಸಮುದಾಯ ಭವನ, ಆರ್ ಆಂಡ್ ಡಿ ಮತ್ತು ನಾವೀನ್ಯತಾ ಕೇಂದ್ರಗಳು ಇತ್ಯಾದಿ ಉದ್ದೇಶಗಳಿಗೆಂದು ಸಿ.ಎ. ನಿವೇಶನಗಳನ್ನು ಇಟ್ಟುಕೊಳ್ಳಲಾಗಿದೆ.

ಹೋಟೆಲ್‌ಗಳು ಸಹ ಇದರಡಿಯಲ್ಲಿಯೇ ಬರುತ್ತವೆ. ಆದರೆ, ಒಬ್ಬರಿಗೆ ಒಂದೇ ಸಿ.ಎ. ನಿವೇಶನವನ್ನು ಮಾತ್ರ ಕೊಡಬೇಕೆಂಬ ನಿರ್ಬಂಧ ಕೂಡ ಇಲ್ಲ. ಅರ್ಹ ಸಂಸ್ಥೆಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಜಾಹೀರಾತು ವ್ಯವಸ್ಥೆ ಜಾರಿ
ಕೈಗಾರಿಕೆ ಪ್ರದೇಶಗಳಲ್ಲಿನ ಸಿಎ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಸರಿಯಾಗಿ ಜಾಹೀರಾತು ನೀಡಿಲ್ಲ ಎನ್ನುವ ಸಿ.ಟಿ. ರವಿ ಅವರ ಆಕ್ಷೇಪಣೆಗೆ ಸಚಿವರು ಉತ್ತರಿಸಿದರು. ಮುಖ್ಯ ವಾಹಿನಿಯ ರಾಜ್ಯ ಪತ್ರಿಕೆಗಳ ಜತೆಗೆ ನಾನು ಸಚಿವನಾದ ಮೇಲೆ ಆನ್ ಲೈನ್ ಮೂಲಕವೂ ಜಾಹೀರಾತು ನೀಡುವ ವ್ಯವಸ್ಥೆ ಜಾರಿಗೊಳಿಸಿದ್ದೇವೆ.
ಒಟ್ಟು 93 ಕಡೆಗೆ ಜಾಹೀರಾತು ನೀಡಲಾಗಿತ್ತು. 42 ಸಿ.ಎ. ನಿವೇಶನಗಳಿಗೆ ಒಂದೊಂದೇ ಅರ್ಜಿ ಬಂದಿದ್ದವು. ಇವುಗಳನ್ನು ತಿರಸ್ಕರಿಸಲಾಗಿದೆ. ಎರಡು ಸಿ.ಎ. ನಿವೇಶನಗಳನ್ನು ಉದ್ಯಮಿಗಳು ರಾಜ್ಯ ಸಕಾರಕ್ಕೆ ಹಿಂತಿರುಗಿಸಿದ್ದಾರೆ. ಇನ್ನೂ 39 ನಿವೇಶನಗಳು ಹಾಗೆಯೇ ಉಳಿದಿವೆ ಎಂದರು ಲೆಕ್ಕ ಕೊಟ್ಟರು.

ಹಿಂದೆಲ್ಲ ಕೈಗಾರಿಕಾ ಸಚಿವರೇ ಈ ನಿವೇಶನಗಳ ಹಂಚಿಕೆ ಸಂಬಂಧ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಆದರೆ, ನಾನು ಸಚಿವನಾಗಿ ಬಂದ ಮೇಲೆ ಇದಕ್ಕಾಗಿ ಕೆಐಎಡಿಬಿ ಸಿಇಒ ನೇತೃತ್ವದ ಉನ್ನತ ಸಮಿತಿಯನ್ನು ರಚಿಸಿದ್ದೇನೆ. ಒಟ್ಟು 95 ಎಕರೆಯಷ್ಟು ಜಾಗದಲ್ಲಿ ಇನ್ನೂ 152 ನಿವೇಶನಗಳಿವೆ. ಹಿಂದಿನ ಬಿಜೆಪಿ ಸರ್ಕಾರವು ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕಿಗೆ ಸೇರಿದ ಜಾಗದಲ್ಲಿ ಒಂದು ಶಿಕ್ಷಣ ಸಂಸ್ಥೆಗೆ ಜಮೀನು ಕೊಟ್ಟಿದ್ದರಿಂದ ಬೊಕ್ಕಸಕ್ಕೆ 135 ಕೋಟಿ ರೂ. ನಷ್ಟವಾಗಿದೆ. ಇಂತಹ ಹಂಚಿಕೆಗಳಲ್ಲಿ ಪ್ರತಿಪಕ್ಷದವರು ರಾಜಕೀಯ ಮಾಡಲು ನೋಡಿದರೆ, ನಮಗೂ ರಾಜಕೀಯ ಮಾಡಲು ಬರುತ್ತದೆ ಎಂದು ಅವರು ತಿರುಗೇಟು ನೀಡಿದರು.
ಮಾರ್ಗಸೂಚಿ ಆಧಾರದಲ್ಲಿ ರೈತರಿಗೆ ನೇರ ಪಾವತಿ
ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಕೈಗಾರಿಕೋದ್ದೇಶಕ್ಕೆ ಜಮೀನನ್ನು ವಶಪಡಿಸಿಕೊಂಡ ಸಂದರ್ಭದಲ್ಲಿ ಆಯಾ ಪ್ರದೇಶದ ಮಾರ್ಗಸೂಚಿ ಬೆಲೆ ಆಧರಿಸಿ ರೈತರಿಗೆ ಆರ್ ಟಿಜಿಎಸ್ ಮೂಲಕ ನೇರವಾಗಿ ಪರಿಹಾರ ಪಾವತಿಸಲಾಗುತ್ತಿದೆ.
ಮಧ್ಯವರ್ತಿಗಳು, ಜಿಪಿಎ ಹೊಂದಿರುವವರಿಗೆ ಹಣ ವರ್ಗಾಯಿಸುವ ವ್ಯವಸ್ಥೆ ಇಲ್ಲ. ನಿಯಮಗಳ ಪ್ರಕಾರ ರೈತರು ಮತ್ತು ಉದ್ಯಮಿಗಳ ಜಂಟಿ ಸಹಭಾಗಿತ್ವಕ್ಕೆ ಅವಕಾಶವಿಲ್ಲ. ಪರಿಹಾರ ಬೇಡ ಎನ್ನುವವರಿಗೆ ಅಭಿವೃದ್ಧಿಪಡಿಸಿದ ನಿವೇಶನ ನೀಡುವುದಕ್ಕೆ ನಿಯಮಗಳಲ್ಲಿ ಅವಕಾಶ ಇದೆ ಎಂದು ತಿಳಿಸಿದರು.












Click it and Unblock the Notifications