ಮಾಸ್ತಿಗುಡಿ ದುರಂತ: ಹೈಕೋರ್ಟಲ್ಲಿ ನಿರ್ಮಾಪಕ ಸುಂದರ್ ಅರ್ಜಿ ವಜಾ
ಬೆಂಗಳೂರು, ನವೆಂಬರ್ 25: ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ಸಂದರ್ಭದಲ್ಲಿ ಖಳನಟ ಅನಿಲ್ ಹಾಗೂ ರಾಘವ್ ಉದಯ್ ಅವರ ದುರಂತ ಸಾವಿಗೀಡಾಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಸೆಷನ್ಸ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಹೈಕೋರ್ಟಿಗೆ ಅರ್ಜಿ ಹಾಕಿದ್ದ ನಿರ್ಮಾಪಕ ಸೂಮ್ದರ್ ಪಿ . ಗೌಡಗೆ ಮತ್ತೆ ಹಿನ್ನಡೆಯಾಗಿದೆ.
ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಚಿತ್ರೀಕರಣದ ವೇಳೆ ಸಂಭವಿಸಿದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಗಡಿಯ ಜೆ ಎಂ ಎಫ್ ಸಿ ಕೋರ್ಟಿನಲ್ಲಿ ಆರು ಮಂದಿ ಆರೋಪಿಗಳ ಮೇಲೆ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ತಾವರೆಕೆರೆ ಪೊಲೀಸರು ಈಗಾಗಲೇ ಚಿತ್ರತಂಡದ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಿದ್ದರು.
ತಮ್ಮ ಮೇಲಿನ ಆರೋಪಗಳನು ಕೈ ಬಿಟ್ಟು, ಪ್ರಕರಣದಿಂದ ಮುಕ್ತಗೊಳಿಸುವಂತೆ ಕೋರಿ ನಿರ್ದೇಶಕ ನಾಗಶೇಖರ್ ಸೇರಿದಂತೆ ಐವರು ರಾಮನಗರದ ಜಿಲ್ಲಾ ಸೆಷನ್ಸ್ ನ್ಯಾಯಲಯಕ್ಕೆ ಅರ್ಜಿ ಹಾಕಿದ್ದರು. ಅರ್ಜಿ ವಿಚಾರಣೆ ನಡೆಸಿದ ರಾಮನಗರ 3ನೇ ಜೆಎಂಎಫ್ ಸಿ ನ್ಯಾಯಾಧೀಶ ಸಿದ್ದಲಿಂಗಪ್ರಭು ಅವರು ಒಬ್ಬರನ್ನು ಮಾತ್ರ ಕೇಸಿನಿಂದ ಮುಕ್ತಗೊಳಿಸಿ, ಉಳಿದ ಐವರ ಅರ್ಜಿಯನ್ನು ವಜಾಗೂಳಿಸಿ ಆದೇಶ ನೀಡಿದ್ದಾರೆ. ಇದನ್ನು ಪ್ರಶ್ನಿಸಿದ್ದ ಸುಂದರ್ ಗೆ ಹೈಕೋರ್ಟಿನಲ್ಲೂ ನಿರಾಶೆಯಾಗಿದೆ.
ಪ್ರಕರಣದ 6ನೇ ಆರೋಪಿಯಾಗಿದ್ದ ಹೆಲಿಕಾಪ್ಟರ್ ಪೈಲೆಟ್ ಪ್ರಕಾಶ್ ಬಿರಾದರ್ ಅವರನ್ನು ಸಾಕ್ಷ್ಯಾಧಾರ ಕೊರತೆಯಿಂದ ಕೇಸಿನಿಂದ ಮುಕ್ತಗೊಳಿಸಲಾಗಿದೆ. ಮಿಕ್ಕಂತೆ ನಿರ್ದೇಶಕ ನಾಗಶೇಖರ್, ನಿರ್ಮಾಪಕ ಸುಂದರ್ ಪಿ ಗೌಡ, ಸಾಹಸ ನಿರ್ದೇಶಕ ರವಿವರ್ಮಾ, ವ್ಯವಸ್ಥಾಪಕ ಭರತ್ ರಾವ್ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಸುಂದರ್ ಪಿ ಗೌಡ ವಿಚಾರಣೆ ಅಗತ್ಯವಿದ್ದು, ಉದಯ್ ಹಾಗೂ ಅನಿಲ್ ಸಾವು ಪ್ರಕರಣದ ದೋಷಾರೋಪ ಪಟ್ಟಿಯಿಂದ ಕೈ ಬಿಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ನಿರ್ಮಾಪಕ ಸುಂದರ್ ಗೌಡ ಎ-1 ಆರೋಪಿ
ಚಿತ್ರದ ನಿರ್ಮಾಪಕ ಸುಂದರ್ ಗೌಡ ಅವರನ್ನು ಎ-1 ಆರೋಪಿಯಾಗಿದ್ದು, ನಿರ್ದೇಶಕ ನಾಗಶೇಖರ್ ಅವರು ಎ-2 ಆರೋಪಿ, ಸಹ ನಿರ್ದೇಶಕ ಎ-3 ಆರೋಪಿ, ಸಾಹಸ ನಿರ್ದೇಶಕ ರವಿವರ್ಮ ಅವರನ್ನು ಎ-4 ಆರೋಪಿಯನ್ನಾಗಿ ಪ್ರಕರಣ ದಾಖಲಿಸಲಾಗಿದೆ. ವ್ಯವಸ್ಥಾಪಕ ಭರತ್ ಎ-5 ಆರೋಪಿಯಾಗಿದ್ದಾರೆ. ತಾವರೆಕೆರೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಗೋವಿಂದ ರಾಜು, ದುನಿಯಾ ವಿಜಯ್ ವಿರುದ್ಧ ದೂರು ನೀಡಿದ್ದರು.. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ಐ.ಪಿ.ಸಿ ಸೆಕ್ಷನ್ 363 ಅನ್ವಯ ನಟ ದುನಿಯಾ ವಿಜಯ್ ಮೇಲೆ ಸದ್ಯ ಎಫ್.ಐ.ಆರ್ ದಾಖಲಾಗಿತ್ತು. ಆದರೆ, ಕೋರ್ಟಿಗೆ ಹಾಜರಾಗಿ ವಿಜಯ್ ಕ್ಷಮೆಯಾಚನೆ ಮಾಡಿದ ಬಳಿಕ, ಸಾಕ್ಷ್ಯಾಧಾರ ಕೊರತೆಯಿಂದ ಕೇಸಿನಿಂದ ಬಚಾವಾದರು.

ದುನಿಯಾ ವಿಜಯ್ ವಿರುದ್ಧ ಚಾರ್ಜ್ ಶೀಟ್ ಹಾಕಿಲ್ಲ
ನಟ ಅನಿಲ್ ಮತ್ತು ರಾಘವ್ ಉದಯ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ತಿಗುಡಿ ಚಿತ್ರ ತಂಡದ ಐವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಐಪಿಸಿ ಸೆಕ್ಷನ್ 304(A) ಹಾಗೂ 308 ಅನ್ವಯ ಕೇಸು ದಾಖಲಾಗಿದೆ. ಮಾಗಡಿಯ ಜೆಎಂಎಫ್ಸಿ ಕೋರ್ಟ್, ಐ.ಪಿ.ಸಿ 304 (ಅಜಾಕರೂಕತೆಯಿಂದ ಉಂಟಾದ ಸಾವು ) ರಲ್ಲಿ ನಿರ್ಮಾಪಕ ನಾಗಶೇಖರ್, ಸುಂದರಗೌಡ, ಸಾಹಸ ನಿರ್ದೇಶಕ ರವಿವರ್ಮ, ಪೈಲಟ್ ಸೇರಿದಂತೆ ಆರು ಜನರ ವಿರುದ್ಧ ಸುಮಾರು 450 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಆದರೆ, ಇಲ್ಲಿ ದುನಿಯಾ ವಿಜಯ್ ವಿರುದ್ಧ ಯಾವುದೇ ಚಾರ್ಜ್ ಶೀಟ್ ಹಾಕಲಾಗಿಲ್ಲ

ಮಾಸ್ತಿಗುಡಿ ದುರಂತಕ್ಕೆ ಮೂರು ವರ್ಷ
ಮಾಸ್ತಿ ಗುಡಿ ಚಿತ್ರದ ಅಂತಿಮ ಹಂತದ ಚಿತ್ರೀಕರಣವನ್ನು ಬೆಂಗಳೂರು ಹೊರವಲಯದಲ್ಲಿರುವ ರಾಮನಗರ ಜಿಲ್ಲೆ ತಿಪ್ಪಗೊಂಡನಹಳ್ಳಿ ಕೆರೆ ಬಳಿ 2016ನವೆಂಬರ್ 09ರಂದು ಬೆಳಗ್ಗೆ ನಡೆದಿತ್ತು. ಮಧ್ಯಾಹ್ನದ ವೇಳೆ ಕೆರೆಯ ಮಧ್ಯ ಭಾಗದಲ್ಲಿ ಹೆಲಿಕಾಪ್ಟರ್ ನಿಂದ ನೀರಿಗೆ ಹಾರುವ ದೃಶ್ಯದ ಶೂಟಿಂಗ್ ನಡೆಯುವಾಗ ಈ ದುರಂತ ಸಂಭವಿಸಿತ್ತು. ಭಜರಂಗಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಖಳನಟ ಉದಯ್ ಹಾಗೂ ಅನಿಲ್ ಎಂಬುವರು ಮಧ್ಯಾಹ್ನ 2.50ರ ಸುಮಾರಿಗೆ ಹೆಲಿಕಾಪ್ಟರ್ ನಿಂದ ಕೆರೆಗೆ ಹಾರಿದ್ದರು. ಆದರೆ, ನಂತರ ನೀರಿನಿಂದ ಮೇಲಕ್ಕೆ ಬಂದಿಲ್ಲ. ದುನಿಯಾ ವಿಜಯ್ ಕೂಡಾ ಕೆರೆಗೆ ಹಾರಿದ್ದರು ಆದರೆ, ಈಜಿಕ್ಕೊಂಡು ದಡ ಸೇರಿ ಪಾರಾಗಿದ್ದರು.

ದುನಿಯಾ ವಿಜಯ್ ಮೇಲೆ ಕೇಸಿಲ್ಲ
ಮಾಸ್ತಿಗುಡಿ ಚಿತ್ರದ ನಿರ್ದೇಶಕ, ನಿರ್ಮಾಪಕ, ಸಾಹಸ ನಿರ್ದೇಶಕ ಸೇರಿದಂತೆ ಆರು ಜನರ ವಿರುದ್ಧ ಸುಮಾರು 450 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಚಿತ್ರದ ನಿರ್ಮಾಪಕ ಸುಂದರ್ ಗೌಡ ಹಾಗೂ ನಿರ್ದೇಶಕ ನಾಗಶೇಖರ್ ಅವರು ಜಾಮೀನಿನ ಮೇಲೆ ಹೊರಬಂದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರ ನಿರ್ಮಾಪಕ ಸುಂದರ್ ಪಿ ಗೌಡ ಅವರನ್ನು ಪೊಲೀಸರು ಬಂಧಿಸಲು ತೆರಳಿದ್ದ ಸಂದರ್ಭದಲ್ಲಿ ಅವರು ತಪ್ಪಿಸಿಕೊಳ್ಳಲು ದುನಿಯಾ ವಿಜಯ್ ನೆರವು ನೀಡಿದ್ದರು, ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂದು ಆರೋಪಿಸಿ ವಿಜಯ್ ವಿರುದ್ಧ ಎಫ್ ಐಆರ್ ದಾಖಲಿಸಲಾಗಿತ್ತು. ನಂತರ ಜಾಮೀನು ಪಡೆದರು, ಕೇಸಿನಿಂದಲೂ ಖುಲಾಸೆಗೊಂಡರು.












Click it and Unblock the Notifications