ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಆದ ಚರ್ಚೆ ಏನು? ಯತ್ನಾಳ್‌ಗೆ ಎದುರಾಯ್ತಾ ಕಂಟಕ!
ಇಂದು ಬಿಜೆಪಿ ಪಕ್ಷದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಿತು. ಇದರಲ್ಲಿ ಬಿಜೆಪಿ ನಾಯಕರು ಮಹತ್ವದ ಚರ್ಚೆಗಳನ್ನು ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ನಡೆಯುತ್ತಿರುವ ಸಂಘಟನಾ ಪರ್ವ ಹಾಗೂ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳ ಕುರಿತೂ ಸಭೆಯಲ್ಲಿ ಚರ್ಚೆ ನಡೆದಿದೆ.
ಈ ಸಂದರ್ಭದಲ್ಲಿ ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸದಸ್ಯರಾದ ಬಿಎಸ್.ಯಡಿಯೂರಪ್ಪ, ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ವಿರೋಧ ಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಸಿ.ಎನ್.ಅಶ್ವತ್ಥ್ ನಾರಾಯಣ್, ಮಾಜಿ ಕೇಂದ್ರ ಸಚಿವ ಹಾಗೂ ಚುನಾವಣಾ ವೀಕ್ಷಕ ರಾಧಾಕೃಷ್ಣ, ಮಾಜಿ ಸಚಿವರಾದ ಸಿ.ಟಿ.ರವಿ, ಶ್ರೀರಾಮುಲು ಸೇರಿದಂತೆ ಹಲವು ನಾಯಕರು ಸಭೆಯಲ್ಲಿದ್ದರು.

ಸುಮಾರು 4 ಗಂಟೆಗಳ ಕಾಲ ಕೋರ್ ಕಮಿಟಿ ಸಭೆ ನಡೆದಿದ್ದು, ಈ ವೇಳೆ ರಾಜ್ಯ ಬಿಜೆಪಿಯಲ್ಲಿನ ಬಣ ಬಡಿದಾಟದ ಬಗ್ಗೆಯೂ ಗಂಭೀರ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ. ತರುಣ್ ಚುಗ್ ಮುಂದೆ ಒಂದಷ್ಟು ಮಂದಿ ಬಣ ಜಗಳದ ಬಗ್ಗೆ ಪರೋಕ್ಷವಾಗಿ ಉಲ್ಲೇಖಿಸಿದ್ದಾರಂತೆ. ಈ ಹಿನ್ನೆಲೆ ಆ ಗುಂಪಿನ ಮೇಲೆ ಕ್ರಮ ಜರುಗಿಸುವಂತೆ ನಾಯಕರಿಗೆ ಸೂಚನೆಯೂ ನೀಡಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ಮೊದಲಿಗೆ ಬಿಜೆಪಿ ಸಂಘಟನೆಯ ವಿಚಾರಗಳನ್ನಷ್ಟೇ ಮಾತನಾಡುವಂತೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಸೂಚಿಸಿದ್ದರು. ಆದರೆ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಅವರು ಇತ್ತೀಚೆಗೆ ಬಿಜೆಪಿಯಲ್ಲಿನ ಬಣ ರಾಜಕಾರಣದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದರಿಂದ ಪಕ್ಷಕ್ಕೆ ಭಾರಿ ಮುಖಭಂಗ ಆಗುತ್ತಿದೆ ಎಂದೂ ಯತ್ನಾಳ್ ಅವರ ಗುಂಪಿನ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ. ಡಿಸೆಂಬರ್ 7ರಂದು ರಾಧಾ ಮೋಹನ್ ದಾಸ್ ಅವರು ರಾಜ್ಯಕ್ಕೆ ಬರಲಿದ್ದು, ಅವರೊಂದಿಗೆ ಈ ವಿಚಾರಗಳನ್ನು ಮಾತನಾಡಿ ಎಂದು ನಾಯಕರು ಸಲಹೆ ನೀಡಿದ್ದಾರಂತೆ.

ಕೇಂದ್ರ ನಾಯಕರು ಇಂದು ಸಕ್ರಿಯ ಸದಸ್ಯತ್ವ ಅಭಿಯಾನ, ಬೂತ್ ಸಮಿತಿ ರಚನೆ, ಮಂಡಲ ಸಮಿತಿ ರಚನೆ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಬಲಪಡಿಸುವ ದೃಷ್ಟಿಯಲ್ಲಿ ನಾವೆಲ್ಲರೂ ಶ್ರಮಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ನನ್ನನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಪಕ್ಷದ ಹಿರಿಯ ನಾಯಕರು ಘೋಷಿಸಿದ್ದಾರೆ. ಮುಂದೆ ನಮ್ಮ ಬಿಜೆಪಿಯು ಸ್ವಂತ ಬಲದಿಂದ ಅಧಿಕಾರಕ್ಕೆ ಬರಬೇಕು. ಹೊಂದಾಣಿಕೆ ರಾಜಕೀಯಕ್ಕೂ ಅಂತ್ಯ ಹಾಡಬೇಕಾಗಿದ್ದು, ಬಸನಗೌಡ ಪಾಟೀಲ್ ಯತ್ನಾಳ್‌ಗೆ ನೋಟಿಸ್ ನೀಡಲಾಗಿದೆ. ಇಲ್ಲಿನ ಬೆಳವಣಿಗೆಗಳನ್ನು ಹೈಕಮಾಂಡ್ ಗಮನಿಸುತ್ತಿದ್ದು, ಶಿಸ್ತು ಕ್ರಮ ಬೇಕಾ, ಬೇಡವಾ ಎಂದು ತೀರ್ಮಾನಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪಕ್ಷದ ಎಲ್ಲ ವಿಚಾರದ ಬಗ್ಗೆ ಚರ್ಚೆ ನಡೆದಿದೆ. ಪಕ್ಷದೊಳಗಿನ ಅಸಮಾಧಾನಗಳನ್ನು ಶಮನಗೊಳಿಸುವ ಶಕ್ತಿ ಬಿಜೆಪಿ ಹೈಕಮಾಂಡ್‌ಗೆ ಇದೆ. ಇನ್ನೊಂದು ವಾರದೊಳಗೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲಿದ್ದು, ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ ಎಂದು ಅಶೋಕ್ ಹೇಳಿದ್ದಾರೆ.
ದೇಶವನ್ನು ಒಡೆಯುವುದು, ಭಾರತದಲ್ಲಿ ಮಿನಿ ಪಾಕಿಸ್ಥಾನಗಳನ್ನು ಸೃಷ್ಟಿಸುವುದು ಕಾಂಗ್ರೆಸ್ ಕುತಂತ್ರವಾಗಿದೆ. ಬೆಂಕಿ ಹಚ್ಚುವುದು, ಒಡೆದು ಆಳುವ ನೀತಿ ಬ್ರಿಟೀಷರಿಂದಲೇ ಕಾಂಗ್ರೆಸ್‌ಗೆ ಬಳುವಳಿಯಾಗಿ ಬಂದಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.












Click it and Unblock the Notifications