ಮಲಹೊರುವ ಪದ್ಧತಿ: ಶೂನ್ಯ ಶಿಕ್ಷೆಗೆ ಹೈಕೋರ್ಟ್ ಕಿಡಿ
ಬೆಂಗಳೂರು, ಜನವರಿ 09: ಮಲ ಹೊರುವ ಪದ್ಧತಿಯನ್ನು ಜೀವಂತವಾಗಿಟ್ಟಿದ್ದರೂ ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ ಏಕೆ? ಎಂದು ಕರ್ನಾಟಕ ಹೈಕೋರ್ಟ್ ಕಿಡಿ ಕಾರಿದೆ. ಮ್ಯಾನುವೆಲ್ ಸ್ಕ್ಯಾವೆಂಜರ್ಸ್‌ಗೆ ನಿಷೇಧ ಇದ್ದರೂ ಅದನ್ನು ಚಾಲ್ತಿಯಲ್ಲಿಟ್ಟಿರುವ ಕುರಿತು ಮಾಧ್ಯಮ ವರದಿಯ ಆಧರಿಸಿ ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ಅರ್ಜಿ ವಿಚಾರಣೆ ವೇಳೆ ಸರ್ಕಾರವನ್ನು ಹಿಗ್ಗಾ ಮುಗ್ಗಾ ಜಾಡಿಸಿತು. ಅಲ್ಲದೆ, ಇದೊಂದು ರೀತಿಯಲ್ಲಿ ನ್ಯಾಯದ ವಿಡಂಬನೆ ಎಂದು ರಾಜ್ಯ ಸರ್ಕಾರವನ್ನು ಕುರಿತು ಹೇಳಿತು.

"ಮಲ ಹೊರುವ ಪದ್ಧತಿ ನಿಷೇಧಿಸಿ 2013ರಲ್ಲಿ ಕಾಯಿದೆ ತಂದರೂ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳದ ಸರ್ಕಾರದ ವಕೀಲರು, ಸರ್ಕಾರಿ ಅಭಿಯೋಜಕರ ವಿರುದ್ದ ಯಾವ ಕ್ರಮಕೈಗೊಂಡಿದ್ದೀರಿ?. ಮಹತ್ವ ಇಲ್ಲದ ಪ್ರಕರಣಗಳಲ್ಲಿ ಶಿಕ್ಷೆಯಾಗುತ್ತದೆ. ಇಂಥ ಪ್ರಕರಣದಲ್ಲಿ ಕ್ರಮ ಎಲ್ಲಿದೆ?. ಇಂಥ ಪ್ರಕರಣ ನಡೆಸಿದ ಕಳಪೆ ಸರ್ಕಾರಿ ಅಭಿಯೋಜಕರ ವಿರುದ್ದ ಯಾವ ಕ್ರಮಕೈಗೊಳ್ಳಲಾಗಿದೆ?. ಇಲ್ಲಿ ಶೂನ್ಯ ಶಿಕ್ಷೆ ಪ್ರಮಾಣ ಹೇಗೆ?" ಎಂದು ಖಾರವಾಗಿ ಪ್ರಶ್ನಿಸಿತು.
ಘೋರಿಯಲ್ಲೇ ಬೆವರುತ್ತಾರೆ: ಒಂದೇ ಒಂದು ಪ್ರಕರಣದಲ್ಲಿ ಶಿಕ್ಷೆಯಾಗಿಲ್ಲ ಏಕೆ?. ನಿಮ್ಮ ಚೌಕಟ್ಟು ಹೇಗಿದೆ? ಇದೆಲ್ಲವನ್ನೂ ನೀವು (ಸರ್ಕಾರ) ಹೇಗೆ ಮಾಡುತ್ತೀರಿ?. ನಾವು ಮಾಡುತ್ತಿರುವುದನ್ನು ನೋಡಿದರೆ ಸಂವಿಧಾನದ ನಿರ್ಮಾತೃಗಳು ಘೋರಿಗಳಲ್ಲಿ ಬೆವರುತ್ತಾರೆ. ಎಲ್ಲದಕ್ಕೂ ನ್ಯಾಯಾಲಯವೇ ಏಕೆ ಮುಂದಾಗಬೇಕು?. ನ್ಯಾಯಾಲಯ ಸ್ಥಾಪನೆಯ ಉದ್ದೇಶ ಇದಲ್ಲ. ಇದನ್ನು ನಾವು ಮಾಡಿದರೆ ನ್ಯಾಯಾಲಯ ಅಂಕೆ ಮೀರುತ್ತಿದೆ ಎನ್ನುತ್ತೀರಿ ಎಂದು ಹೇಳಿತು.
ಅಮಿಕಸ್ ಕ್ಯೂರಿ ಶ್ರೀಧರ್ ಪ್ರಭು, ಮಲ ಹೊರುವುದಕ್ಕೆ ಪರಿಶಿಷ್ಟ ಜಾತಿಯ ಜನರನ್ನು ಬಳಕೆ ಮಾಡಿದರೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ನಿಷೇಧ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲು ಅವಕಾಶವಿದ್ದರೂ ಅದನ್ನು ಬಳಕೆ ಮಾಡದಿರುವುದರ ಕುರಿತು ನ್ಯಾಯಾಲಯದ ಗಮನಸೆಳೆದರು.
2023ರ ಡಿಸೆಂಬರ್ 23ರಂದು ಮಲಗುಂಡಿ ಸ್ವಚ್ಛಗೊಳಿಸುವಾಗ ಕಾರ್ಮಿಕರು ಮೃತಪಟ್ಟ ಪ್ರಕರಣದಲ್ಲಿ ಆರೋಪಿತರ ವಿರುದ್ಧ ಎಸ್ಸಿ/ ಎಸ್ಟಿ ಕಾಯಿದೆಯ ಸೆಕ್ಷನ್ 3(ಜೆ) ಅನ್ವಯಿಸಲಾಗಿಲ್ಲ. ಈ ವಿಚಾರದ ಕುರಿತು ಸಂಬಂಧಪಟ್ಟವರು ಗಮನಹರಿಸಬೇಕು ಎಂದು ನ್ಯಾಯಾಲಯ ಹೇಳಿತು. ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ "ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹಂತಹಂತವಾಗಿ ಮಲ ಸ್ವಚ್ಛತೆಗೆ ಯಂತ್ರಗಳ ಖರೀದಿ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿದೆ" ಎಂದರು.
ಸಿಎಸ್ ಆರ್ ನಿಧಿ ಬಳಸಲು ಸಲಹೆ: ಆಗ ಮುಖ್ಯ ನ್ಯಾಯಮೂರ್ತಿಗಳು, "ಇದಕ್ಕೆ ದೊಡ್ಡ ಕಂಪನಿಗಳ ಸಾಮಾಜಿಕ ಜವಾಬ್ದಾರಿ ನಿಧಿ ಬಳಕೆ ಮಾಡಬಹುದು. ಯಾಂತ್ರಿಕ ವ್ಯವಸ್ಥೆಗೆ ಜೋತು ಬೀಳುವ ಅಥವಾ ಸರ್ಕಾರಿ ಆಡಳಿತದಲ್ಲಿ ಮಂದಗತಿಗೆ ಆಸ್ಪದ ನೀಡಬಾರದು" ಎಂದರು.
ರಾಜ್ಯದ ಕೆಲವು ಕಡೆ ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ಇದೇ ಪ್ರಕರಣದ ಜೊತೆ ಸೇರ್ಪಡೆ ಮಾಡಲು ನ್ಯಾಯಾಲಯ ಆದೇಶಿಸಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ವಿಸ್ತೃತ ಆಕ್ಷೇಪಣೆ ಸಲ್ಲಿಸಲು ಆದೇಶಿಸಿದೆ. ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಲಾಗಿದೆ.












Click it and Unblock the Notifications