ಮನ್ಸೂರ್ ಅಲಿಖಾನ್ ಜು.26ರ ತನಕ ಇಡಿ ವಶಕ್ಕೆ
ಬೆಂಗಳೂರು, ಜುಲೈ 24 : ಐಎಂಎ ಸಮೂಹ ಸಂಸ್ಥೆಗಳ ಮಾಲೀಕ ಮನ್ಸೂರ್ ಖಾನ್ ಜುಲೈ 26ರ ತನಕ ಇಡಿ ವಶದಲ್ಲಿಯೇ ಇರಬೇಕಿದೆ. ಬಹುಕೋಟಿ ಹಗರಣದ ರೂವಾರಿ ಹೇಳಿಕೆಯನ್ನು ಇಡಿ ಇನ್ನೂ ದಾಖಲು ಮಾಡಿಕೊಂಡಿಲ್ಲ.
ಮೊದಲು ಮೂರು ದಿನಗಳ ಕಾಲ ಮನ್ಸೂರ್ ಖಾನ್‌ರನ್ನು ಇಡಿ ವಶಕ್ಕೆ ನೀಡಲಾಗಿತ್ತು. ನ್ಯಾಯಾಲಯ ಈ ಆದೇಶವನ್ನು ಜುಲೈ 26ರ ತನಕ ವಿಸ್ತರಣೆ ಮಾಡಿದೆ. ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಖಾನ್ ಆರೋಗ್ಯವಾಗಿದ್ದಾರೆ ಎಂದು ಹೇಳಿದೆ.
ಜಾರಿ ನಿರ್ದೇಶನಾಲಯ (ಇಡಿ) ವಶದಲ್ಲಿದ್ದ ಮನ್ಸೂರ್ ಖಾನ್‌ರನ್ನು ಎದೆ ನೋವಿನ ಕಾರಣ ಭಾನುವಾರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅನಾರೋಗ್ಯದ ಕಾರಣ ಹೇಳಿಕೆ ದಾಖಲು ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಇಡಿ ಹೇಳಿತ್ತು.

ಇಡಿ ಪರವಾಗಿ ವಾದ ಮಂಡನೆ ಮಾಡಿದ ಹೆಚ್ಚುವರಿ ಸಾಲಿಟರ್ ಜನರಲ್ ಕೆ. ಎಂ. ನಟರಾಜ್ ಜುಲೈ 30ರ ತನಕ ವಶಕ್ಕೆ ನೀಡಬೇಕು ಎಂದು ಮನವಿ ಮಾಡಿದರು. ನ್ಯಾಯಾಲಯ ಜುಲೈ 26ರ ತನಕ ವಶಕ್ಕೆ ನೀಡಿ ಆದೇಶ ಹೊರಡಿಸಿತು.
ಮನ್ಸೂರ್ ಖಾನ್ ಪರ ವಕೀಲ ಎಂ.ನಾರಾಯಣ ರೆಡ್ಡಿ ಐಎಂಎ ಹಗರಣದ ತನಿಖೆಯನ್ನು ಕರ್ನಾಟಕ ಸರ್ಕಾರ ರಚನೆ ಮಾಡಿರುವ ಎಸ್‌ಐಟಿ ನಡೆಸುತ್ತಿದೆ. ಇಡಿ ವಶಕ್ಕೆ ಅವರನ್ನು ನೀಡಿರುವುದು ಏಕೆ? ಎಂದು ವಾದ ಮಂಡನೆ ಮಾಡಿದರು.
ಐಟಿಯಿಂದ ತನಿಖೆ : "ಐಎಂಎ ಹಗರಣದ ಬಗ್ಗೆ ನಮಗೆ ದೂರು ನೀಡಿದರೆ ತನಿಖೆ ನಡೆಸುತ್ತೇವೆ. ಈಗ ಈ ಪ್ರಕರಣದ ತನಿಖೆಯನ್ನು ಇಡಿ ಮತ್ತು ಎಸ್‌ಐಟಿ ನಡೆಸುತ್ತಿದೆ" ಎಂದು ಆದಾಯ ತೆರಿಗೆ ಇಲಾಖೆ ಡಿಜಿ ಬಾಲಕೃಷ್ಣನ್ ಹೇಳಿದ್ದಾರೆ.












Click it and Unblock the Notifications