ಕರ್ನಾಟಕದ ಇತಿಹಾಸದಲ್ಲೇ ಅತೀ ದೊಡ್ಡ ಕಾರ್ಯಾಚರಣೆ: 75 ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್; ಇಬ್ಬರು ಬಂಧನ
ಮಂಗಳೂರು, ಮಾರ್ಚ್ 17: ಕರ್ನಾಟಕದ ಇತಿಹಾಸದಲ್ಲೇ ಅತಿ ದೊಡ್ಡ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ₹ 75 ಕೋಟಿ ಮೌಲ್ಯದ 37 ಕೆಜಿಗೂ ಹೆಚ್ಚು ಎಂಡಿಎಂಎ ವಶಪಡಿಸಿಕೊಂಡಿದ್ದಾರೆ ಮತ್ತು ಇಬ್ಬರು ದಕ್ಷಿಣ ಆಫ್ರಿಕಾದ ಪ್ರಜೆಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಆರು ತಿಂಗಳ ಹಿಂದೆ ಹೈದರ್ ಆಲಿ ಎಂಬಾತನನ್ನು ಪಂಪ್ ವೆಲ್ ಬಳಿ ಬಂಧಿಸಲಾಗಿತ್ತು. ಆತನಿಂದ 15 ಗ್ರಾಂ ಎಂಡಿಎಂಎ ವಶಪಡಿಸಿಕೊಂಡು ವಿಚಾರಣೆ ನಡೆಸಲಾಗಿತ್ತು. ಈ ವೇಳೆ ನೈಜೀರಿಯಾ ಪ್ರಜೆಯೊಬ್ಬನೊಂದಿಗೆ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದಿತ್ತು. ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಪೀಟರ್ ಎಂಬ ನೈಜೀರಿಯಾ ಪ್ರಜೆಯನ್ನು ಬೆಂಗಳೂರಿನಲ್ಲಿ ಆರು ಕೋಟಿ ರೂಪಾಯಿ ಮೌಲ್ಯದ ಎಂಡಿಎಂಎ ಜೊತೆ ಬಂಧಿಸಲಾಗಿತ್ತು.

ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಅವರು ಮಾತನಾಡಿ, ಆರು ತಿಂಗಳ ಹಿಂದೆ ನಡೆದ ಬಂಧನದಿಂದ ಈ ಪ್ರಗತಿ ಕಂಡುಬಂದಿದೆ ಎಂದು ಬಹಿರಂಗಪಡಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಸೆಪ್ಟೆಂಬರ್‌ನಲ್ಲಿ ಮಂಗಳೂರಿನ ಪಂಪ್‌ವೆಲ್‌ನಲ್ಲಿ ಹೈದರ್ ಅಲಿಯನ್ನು ಪೊಲೀಸರು ಬಂಧಿಸಿ, ಆತನಿಂದ 15 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದರು. ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಪೀಟರ್ ಎಂಬ ನೈಜೀರಿಯಾ ಪ್ರಜೆಯನ್ನು ಬೆಂಗಳೂರಿನಲ್ಲಿ ಆರು ಕೋಟಿ ರೂಪಾಯಿ ಮೌಲ್ಯದ ಎಂಡಿಎಂಎ ಜೊತೆ ಬಂಧಿಸಲಾಗಿತ್ತು ಎಂದು ವರದಿ ತಿಳಿಸಿದೆ.
ತನಿಖೆಯನ್ನು ವಿಸ್ತರಿಸಿದ ಪೊಲೀಸರು, ದೆಹಲಿ ಮತ್ತು ಬೆಂಗಳೂರು ನಡುವಿನ ವಾಯು ಮಾರ್ಗಗಳನ್ನು ಬಳಸಿಕೊಂಡು ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಅಂತಾರಾಷ್ಟ್ರೀಯ ಮಾದಕವಸ್ತು ಸಿಂಡಿಕೇಟ್‌ನ ಸಂಪರ್ಕವನ್ನು ಬಯಲು ಮಾಡಿದರು. ತನಿಖೆಯು ಅಂತಿಮವಾಗಿ ಬೆಂಗಳೂರಿನಲ್ಲಿ ಇಬ್ಬರು ದಕ್ಷಿಣ ಆಫ್ರಿಕಾದ ಪ್ರಜೆಗಳನ್ನು ಬಂಧಿಸಲು ಕಾರಣವಾಯಿತು, ಇದು ಮಾದಕವಸ್ತು ಕಳ್ಳಸಾಗಣೆಯ ಆಳವಾದ ಜಾಲವನ್ನು ಬಹಿರಂಗಪಡಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿಗಳ ಮಾಹಿತಿ ಕಲೆ ಹಾಕಲು ಪೊಲೀಸರು ಆರು ತಿಂಗಳ ಕಾಲ ಕಾರ್ಯಾಚರಣೆ ನಡೆಸಿದ್ದರು. ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ವಿದೇಶಿ ಮಹಿಳೆಯರು ಮಾದಕ ವಸ್ತು ಸಾಗಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಮಾರ್ಚ್ 14 ರಂದು ದೆಹಲಿಯಿಂದ ಬೆಂಗಳೂರಿಗೆ ಆ ಮಹಿಳೆಯರು ಬರುತ್ತಿರುವ ಬಗ್ಗೆ ನಿಖರ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಬಾಂಬಾ ಫಾಂಟ (31) ಮತ್ತು ಅಬಿಗೈಲ್ ಅಡೋನಿಸ್ (30) ಬಂಧಿತರು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದಲ್ಲಿ ಇವರನ್ನು ಬಂಧಿಸಲಾಗಿದೆ. ಇವರು ತಮ್ಮೊಂದಿಗೆ ತಂದಿದ್ದ ಟ್ರಾಲಿ ಬ್ಯಾಗ್‌ನಲ್ಲಿ 75 ಕೋಟಿ ರೂಪಾಯಿ ಮೌಲ್ಯದ 37.878 ಕೆಜಿ ತೂಕದ ಎಂಡಿಎಂಎ ಡ್ರಗ್ಸ್ ಪತ್ತೆಯಾಗಿದೆ. ನಾಲ್ಕು ಮೊಬೈಲ್ ಫೋನ್‌ಗಳು, ಪಾಸ್‌ಪೋರ್ಟ್, 18 ಸಾವಿರ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರಗ್ಸ್ ಜಾಲ ಕಿತ್ತೊಗೆಯುವುದು ನಮ್ಮ ಸರ್ಕಾರ ಗುರಿ: ಸಿಎಂ
ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಪ್ರಮಾಣದ ಮಾದಕ ದ್ರವ್ಯವನ್ನು ಪತ್ತೆಹಚ್ಚಿ, ಇಬ್ಬರು ಆರೋಪಿಗಳನ್ನು ಬಂಧಿಸಿರುವ ಮಂಗಳೂರು ಸಿಟಿ ಪೊಲೀಸರ ಕಾರ್ಯಾಚರಣೆ ಶ್ಲಾಘನೀಯ. ಸುಮಾರು ₹75 ಕೋಟಿಗೂ ಅಧಿಕ ಮೌಲ್ಯದ 37 ಕೆ.ಜಿ ಎಂಡಿಎಂಎ ಮಾದಕ ದ್ರವ್ಯವನ್ನು ವಶಕ್ಕೆ ಪಡೆದು, ಸಾವಿರಾರು ಯುವ ಜನರ ಬದುಕಿಗೆ ಎದುರಾಗಲಿದ್ದ ಬಹುದೊಡ್ಡ ಅಪಾಯವೊಂದನ್ನು ನಮ್ಮ ಪೊಲೀಸರು ನಿವಾರಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ನಾವು ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಮಾದಕದ್ರವ್ಯ ವ್ಯಸನಮುಕ್ತ ಸಮಾಜ ನಿರ್ಮಾಣದ ಪಣತೊಟ್ಟು, ಡ್ರಗ್ಸ್ ಮಾರಾಟ ಮತ್ತು ಸೇವನೆಯ ವಿರುದ್ಧ ಸಮರ ಸಾರಿದ್ದೇವೆ. ಕೆಲವು ತಿಂಗಳುಗಳ ಹಿಂದೆ ನಾನು ಮಂಗಳೂರಿಗೆ ಭೇಟಿನೀಡಿದ್ದ ವೇಳೆ ಜಿಲ್ಲೆಯಲ್ಲಿ ಡ್ರಗ್ಸ್ ಹಾವಳಿ ತಡೆಗಟ್ಟಿ ಸ್ವಸ್ಥ ಪರಿಸರ ಕಟ್ಟಿಕೊಡುವ ವಾಗ್ದಾನವನ್ನು ಜಿಲ್ಲೆಯ ಜನರಿಗೆ ನೀಡಿದ್ದೆ. ನಮ್ಮ ಈ ಪ್ರಯತ್ನದ ಭಾಗವಾಗಿ ಈಗ ಬಹುದೊಡ್ಡ ಡ್ರಗ್ಸ್ ಜಾಲವೊಂದನ್ನು ಪತ್ತೆ ಮಾಡಲಾಗಿದೆ. ರಾಜ್ಯಾದ್ಯಂತ ಹಬ್ಬಿರುವ ಡ್ರಗ್ಸ್ ಜಾಲವನ್ನು ಬೇರುಸಹಿತ ಕಿತ್ತೊಗೆಯುವುದು ನಮ್ಮ ಸರ್ಕಾರದ ಗುರಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.












Click it and Unblock the Notifications