ಕೆಆರ್‍ಎಸ್ ಅಣೆಕಟ್ಟು ಸಮೀಪ ಮೋಜು-ಮಸ್ತಿ, ಪಾರ್ಟಿ!
ಮಂಡ್ಯ, ಡಿಸೆಂಬರ್ 15 : ಆಕಾಶ ವೀಕ್ಷಣೆ ಮತ್ತು ನಕ್ಷತ್ರ ವೀಕ್ಷಣೆಗಳಂತಹ ಖಗೋಳ ವಿಜ್ಞಾನ ಚಟುವಟಿಕೆ ನಡೆಸಲು ಕೆಆರ್‍ಎಸ್‌ಗೆ ಬಂದವರು ಮೋಜು ಮಸ್ತಿ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರ ಕಾರ್ಯವೈಖರಿಯನ್ನು ಜನರು ಪ್ರಶ್ನಿಸುವಂತಾಗಿದೆ.
ಕೆಆರ್‌ಎಸ್ ಅಣೆಕಟ್ಟು ಉಗ್ರರ ಹಿಟ್ ಲಿಸ್ಟ್‌ನಲ್ಲಿದೆ. ಆದ್ದರಿಂದ, ಕಣ್ಣಲ್ಲಿ ಕಣ್ಣಿಟ್ಟು ಕಾಯಲಾಗುತ್ತಿದೆ. ಹೀಗಿರುವಾಗಲೇ ನಿಯಮ ಉಲ್ಲಂಘಿಸಿ ಹಿನ್ನೀರಿನಲ್ಲಿ ಶಾಮಿಯಾನ ಹಾಕಿ, ಗುಂಡು ತುಂಡು ಪಾರ್ಟಿ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. [KRS ಜಲಾಶಯದ 136 ಕ್ರೆಸ್ಟ್ ಗೇಟ್ ಬದಲಾವಣೆ]
ಬೆಂಗಳೂರಿನ ಲಿಂಗರಾಜಪುರದ ಆ್ಯಸ್ಟ್ರೋ ಟೂರ್ಸ್ ಅಂಡ್ ಟ್ರಾವೆಲ್ಸ್ ಸಂಸ್ಥೆ ಪ್ರಾಯೋಜಿಸಿದ್ದ ಆಕಾಶ ವೀಕ್ಷಣೆ ಮತ್ತು ನಕ್ಷತ್ರ ವೀಕ್ಷಣೆಗಳಂತಹ ಖಗೋಳ ವಿಜ್ಞಾನ ಚಟುವಟಿಕೆ ಕಾರ್ಯಕ್ರಮಕ್ಕೆಂದು ಹಲವಾರು ಜನರು ಕೆಆರ್‍ಎಸ್‍ಗೆ ಬಂದಿದ್ದರು.

ಅಲ್ಲಿ ಅದೇನು ಕಾರ್ಯಕ್ರಮ ನಡೆಯಿತೋ? ಹೆಚ್ಚಿನವರಿಗೆ ಗೊತ್ತಾಗಿಲ್ಲ. ಆದರೆ, ವೀಕೆಂಡ್ ಮಸ್ತಿ ಮಾಡಿದ್ದಂತು ಈಗ ಸುದ್ದಿಯಾಗಿದೆ. ಸಂಸ್ಥೆಯ ಪ್ರತಿನಿಧಿಗಳು ಕೆಆರ್‍ಎಸ್ ಮುಖ್ಯದ್ವಾರದಿಂದ ಅಲ್ಪ ದೂರದಲ್ಲೇ ಅಣೆಕಟ್ಟೆಯ ಹಿನ್ನೀರು ಪ್ರದೇಶದಲ್ಲಿ ಟೆಂಟ್ ಹಾಕಿ ಕುಡಿದು, ಸಂಗೀತಕ್ಕೆ ಕುಣಿದು ಕುಪ್ಪಳಿಸಿ, ಪಾರ್ಟಿ ಮಾಡಿದ್ದಾರೆ. [ತಮಿಳುನಾಡಿಗೆ ಹರಿದ ಕಾವೇರಿ, ರೈತರ ಪ್ರತಿಭಟನೆ]
ಪೊಲೀಸರು ಮೌನವಾಗಿದ್ದರು : ಕೆಆರ್‌ಎಸ್‌ನಲ್ಲಿ ಇಷ್ಟೆಲ್ಲ ನಡೆದರೂ ಪೊಲೀಸರು ಇಲ್ಲಿಗೆ ಆಗಮಿಸಿ ಅವರನ್ನು ಆಚೆ ಕಳುಹಿಸುವ ಕ್ರಮ ಕೈಗೊಂಡಿಲ್ಲ. ಕೆಆರ್‍ಎಸ್‍ನಲ್ಲಿ ಮುಕ್ತ ಪ್ರವೇಶ ಮತ್ತು ಮೋಜು ಮಸ್ತಿಗೆ ನಿರ್ಬಂಧವಿದೆ. ಆದರೂ ಶನಿವಾರ ರಾತ್ರಿಯಿಂದ ಭಾನುವಾರ ಬೆಳಗ್ಗೆ ತನಕ ಪಾನಗೋಷ್ಠಿ, ಕ್ಯಾಂಪ್ ಫೈರ್, ಡ್ಯಾನ್ಸ್ ಎಲ್ಲವೂ ನಡೆದಿದೆ. ಹೋಗುವ ಮುನ್ನ ಕುಡಿದು ಎಸೆದ ಬಾಟಲಿಗಳನ್ನು ಸುಟ್ಟು ಹಾಕಲಾಗಿದೆ. [ಕನ್ನಂಬಾಡಿ ಕಟ್ಟೆಗೆ Z ಶ್ರೇಣಿ ಭದ್ರತೆ ಪ್ರಾಪ್ತಿಯಾಗಲಿದೆ]
ಅನುಮತಿ ಇತ್ತೇ? : ಕೆಆರ್‌ಎಸ್ ಅಣೆಕಟ್ಟೆಯ ಸುತ್ತಲ ಪ್ರದೇಶದಲ್ಲಿ ಯಾವುದೇ ಕಾರ್ಯಕ್ರಮವನ್ನು ನಡೆಸಬೇಕಾದರೂ ಪೂರ್ವಾನುಮತಿ ಕಡ್ಡಾಯ. ಕಾರ್ಯಕ್ರಮದ ರೂಪು ರೇಷೆ ಆಧರಿಸಿ ಕಾವೇರಿ ನೀರಾವರಿ ನಿಗಮ ಮತ್ತು ಪೊಲೀಸ್ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯಿತಿ ಅನುಮತಿ ನೀಡಬೇಕಾಗುತ್ತದೆ. ಆದರೆ ಇಲ್ಲಿ ನಡೆದ ಪಾರ್ಟಿಗೆ ಯಾವುದೇ ಅನುಮತಿ ಪಡೆದಿರಲಿಲ್ಲ.

ತನಿಖೆ ನಡೆಸುತ್ತೇವೆ : ಕೆಆರ್‌ಎಸ್‌ನಲ್ಲಿ ನಡೆದ ಪಾರ್ಟಿ ವಿಚಾರದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಂಡ್ಯ ಎಸ್ಪಿ ಭೂಷಣ್ ಜಿ ಬೊರಸೆ ಅವರು, 'ಘಟನೆ ನಡೆದಿರುವ ಪ್ರದೇಶ ಪೊಲೀಸ್ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ಅಲ್ಲಿ ಪಾನಗೋಷ್ಠಿ ಮತ್ತು ನಡುರಾತ್ರಿಯೂ ಕಾರ್ಯಕ್ರಮ ಆಯೋಜಿಸಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಇಲಾಖೆಯು ತನಿಖೆ ನಡೆಸಲಿದೆ' ಎಂದು ತಿಳಿಸಿದ್ದಾರೆ.












Click it and Unblock the Notifications