Sumalatha: ಸುಮಲತಾ ಬಿಜೆಪಿ ಸೇರ್ಪಡೆ: ಇದು ಹೊಸ ಅಧ್ಯಯ ಎಂದ ರೆಬಲ್ ಲೇಡಿ
ಬೆಂಗಳೂರು, ಏಪ್ರಿಲ್ 06: ಮಂಡ್ಯ ಸೊಸೆ ಸುಮಲತಾ ಅಂಬರೀಶ್ ಅವರು 2019 ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸಿ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಿದ್ದರು. 2023 ರ ವಿಧಾನಸಭಾ ಚುನಾವಣೆಯಲ್ಲಿ ಬಾಹ್ಯ ಬೆಂಬಲ ಘೋಷಿಸಿದ್ದ ಸುಮಲತಾ ಅಂಬರೀಶ್ ಅವರು, ಶುಕ್ರವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಹೌದು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಮಂಡ್ಯದಿಂದ ಸ್ಪರ್ಧಿಸಲು ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಗೆ ಠಕ್ಕರ್ ಕೊಡುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದ್ದು, ಬದಲಾದ ಪರಿಸ್ಥಿತಿಯಿಂದಾಗಿ ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರವನ್ನ ಜೆಡಿಎಸ್ ಗೆ ಬಿಟ್ಟುಕೊಡಲಾಗಿದ್ದು, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಸ್ಪರ್ಧೆ ನಡೆಸಿದ್ದಾರೆ.

ಮಂಡ್ಯ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಮುಂದಿನ ರಾಜಕೀಯ ಭವಿಷ್ಯದ ಕುರಿತು ಸಾಕಷ್ಟು ಗೊಂದಲದಲ್ಲಿದ್ದ ಸುಮಲತಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಗೆ ಮೆಚ್ಚಿ ಇಂದು ( ಶುಕ್ರವಾರ) ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಪಕ್ಷದ ಬಾವುಟವನ್ನು ಹಸ್ತಾಂತರಿಸುವ ಮೂಲಕ ಎಲ್ಲ ಮುಖಂಡರಿಗೆ ಬಿಜೆಪಿಗೆ ಸ್ವಾಗತ ಕೋರಲಾಯಿತು.
ಇನ್ನೂ ಈ ವೇಳೆ ಸುಮಲತಾ ಅಂಬರೀಶ್ ಅವರು ಮಾತನಾಡಿ, ಇದು ಹೊಸ ಅಧ್ಯಯ ಎಂದು ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನನ್ನ ಮೂಲ ಮಂತ್ರವಾಗಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂಬ ಆಶಯದಿಂದ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ. ಮಂಡ್ಯದ ನನ್ನ ಅಭಿಮಾನಿಗಳು, ನಟ ದಿ.ಅಂಬರೀಶ್ ಅಭಿಮಾನಿಗಳು ಹಿತೈಷಿಗಳ ಹಾರೈಕೆ ಮತ್ತು ಆಶೀರ್ವಾದವಿರಲಿ ಎಂದು ತಿಳಿಸಿದ್ದಾರೆ.
ಬಿಜೆಪಿಯ ಹಿರಿಯರಿಂದ ಮಾರ್ಗದರ್ಶನ ಲಭಿಸಿದೆ. ಅದಕ್ಕಾಗಿ ಧನ್ಯವಾದಗಳು ಎಂದು ತಿಳಿಸಿದರು. ಅದೇ ನನಗೆ ಸ್ಫೂರ್ತಿ ಎಂದ ಅವರು, ಪ್ರಧಾನಿ ಮೋದಿಜೀ ಅವರ ನಾಯಕತ್ವ, ಪರಿಕಲ್ಪನೆ, ಅವರ ಕನಸುಗಳು, ಸಂಕಲ್ಪವು ಹೊಸ ಸ್ಫೂರ್ತಿ, ತಿಳುವಳಿಕೆಗೆ ಕಾರಣವಾಗಿದೆ ಎಂದು ಹೇಳಿದರು.
ಬಿಜೆಪಿ ಸೇರುವುದು ಉತ್ತಮ ಆಯ್ಕೆ ಅನಿಸಿದೆ. ಇಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಸಾಕಷ್ಟು ಸಹಕಾರವನ್ನು ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಒತ್ತು ಕೊಟ್ಟಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಮೈಶುಗರ್ ಕಾರ್ಖಾನೆ ಪುನರಾರಂಭಕ್ಕೆ ಮುಂದಾದರು ಎಂದು ತಿಳಿಸಿದರು. ಇವತ್ತು ಅದರ ಪುನರ್ ಉದ್ಘಾಟನೆ ಆಗಿದೆ. ಇದಕ್ಕೆ ಜನರೇ ತಕ್ಕ ಉತ್ತರ ಕೊಡಬೇಕು ಎಂದು ಆಶಿಸಿದರು.
ನುಡಿದಂತೆ ನಡೆಯುವ ನಾಯಕತ್ವ ಮೋದಿಜೀ ಅವರದು. 2047ರವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಮಾಡಲು ಸಹಕರಿಸಬೇಕಿದೆ. ನನಗೆ ನನ್ನ ಭವಿಷ್ಯಕ್ಕಿಂತ ನನ್ನ ದೇಶ, ಜಿಲ್ಲೆ, ರಾಜ್ಯ ಪ್ರಮುಖ. ಬಿಜೆಪಿ ಸೇರುವುದು ಅತ್ಯಂತ ಹೆಮ್ಮೆ- ಸಂಸಸ ತಂದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್‍ದಾಸ್ ಅಗರವಾಲ್, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ್, ಮಾಜಿ ಸಚಿವ ಮುನಿರತ್ನ, ಶಾಸಕ ಜನಾರ್ದನ ರೆಡ್ಡಿ, ಮಾಜಿ ಸಚಿವ ನಾರಾಯಣಗೌಡ, ಬಿಜೆಪಿ ಮಂಡ್ಯ ಜಿಲ್ಲಾಧ್ಯಕ್ಷ ಇಂದ್ರೇಶ್‍ಕುಮಾರ್, ಕೊಪ್ಪಳ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ್, ಪಕ್ಷದ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.












Click it and Unblock the Notifications