ಮಂಡ್ಯ: ಬಾವಿಗೆ ತಳ್ಳಿ ಯುವ ಗೃಹಿಣಿ ಹತ್ಯೆ ಮಾಡಿದರಯ್ಯಾ

ಮಂಡ್ಯ, ಏ.28: ಮರ್ಯಾದಾ ಹತ್ಯೆ ಪಿಡುಗಿಗೆ ಜೀವಂತ ಬಲಿಯಾದ ನತದೃಷ್ಟೆ ಯುವ ಶಿಲ್ಪಾಳ ಚಿತೆಯಾರುವ ಮುನ್ನವೇ ಮತ್ತೊಂದು ಯುವತಿ ವರದಕ್ಷಿಣೆ ಭೂತಕ್ಕೆ ಬಲಿಯಾಗಿರುವ ಸಂಗತಿ ಇದೇ ಭಾಗದಿಂದ ಕೇಳಿಬಂದಿದೆ.

ಎರಡು ತಿಂಗಳ ಹಿಂದಷ್ಟೆ ವಿವಾಹವಾಗಿದ್ದ ಗೃಹಿಣಿಗೆ ದೈಹಿಕ ಹಲ್ಲೆ ನಡೆಸಿ, ಬಾವಿಗೆ ತಳ್ಳಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ವಸಂತಪುರ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಹೆಮ್ಮನಹಳ್ಳಿ ಗ್ರಾಮದ ದಿವಂಗತ ರಾಮೇಗೌಡ ಮತ್ತು ಭಾಗ್ಯಮ್ಮ ದಂಪತಿಗಳ ಪುತ್ರಿ ರಾಣಿ (20) ವರದಕ್ಷಿಣೆ ದಾಹಕ್ಕೆ ಬಲಿಯಾದ ನತದೃಷ್ಟ ಹೆಣ್ಣುಮಗಳಾಗಿದ್ದಾಳೆ.

ಎರಡು ತಿಂಗಳ ಹಿಂದಷ್ಟೆ ಶೀಳನೆರೆ ಹೋಬಳಿ ವಸಂತಪುರ ಗ್ರಾಮದ ಪಟೇಲ್ ಬಸವೇಗೌಡ ಅವರ ಮಗ ಬಸವರಾಜು (26) ಎಂಬಾತನಿಗೆ 100 ಗ್ರಾಂ. ಚಿನ್ನದ ಆಭರಣ, 1.5 ಲಕ್ಷ ರೂ. ನಗದು ಸೇರಿದಂತೆ ಸಾಕಷ್ಟು ವರೋಪಚಾರ ನೀಡಿ ಮದುವೆ ಮಾಡಿಕೊಡಲಾಗಿತ್ತು.

ಆದರೂ ಮೃತ ರಾಣಿಯ ಗಂಡ ಬಸವರಾಜು, ಮಾವ ಪಟೇಲ್ ಬಸವೇಗೌಡ, ಅತ್ತೆ ದೇವಮ್ಮ ಮತ್ತು ಭಾವ ಗಿರೀಶ್ ಹಾಗೂ ಮನೆಯವರು ಮತ್ತಷ್ಟು ವರದಕ್ಷಿಣೆ ತರುವಂತೆ ಪದೇ ಪದೇ ಪೀಡಿಸುತ್ತಿದ್ದರಲ್ಲದೇ ನಿತ್ಯ ದೈಹಿಕವಾಗಿ ಹಲ್ಲೆ ನಡೆಸುವುದು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು ಎನ್ನಲಾಗಿದೆ.

ಇಷ್ಟಾದರೂ ರಾಣಿ ಈ ಬಗ್ಗೆ ತವರು ಮನೆಗೆ ಹೇಳದೆ ತನ್ನ ನೋವನ್ನು ನುಂಗಿಕೊಂಡಿದ್ದಳು. ಬೆಳಗ್ಗೆ ಈಕೆ ತೋಟದ ಬಳಿ ಹೋಗಿದ್ದ ಸಂದರ್ಭದಲ್ಲಿ ಗಂಡ ಬಸವರಾಜು ಮತ್ತು ಮನೆಯವರು ಸೇರಿಕೊಂಡು ರಾಣಿಯ ಮೈಮೇಲೆ ಹಲ್ಲೆ ನಡೆಸಿ ತೋಟದ ಬಳಿ ಇರುವ ತೆರೆದ ಬಾವಿಗೆ ತಳ್ಳಿ ಆಕೆಯು ಮೃತಪಟ್ಟ ನಂತರ ಆಕೆಯ ತವರು ಮನೆಗೆ ನಿಮ್ಮ ಮಗಳು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿರುವುದಾಗಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಶವವನ್ನು ಬಾವಿಯಿಂದ ಮೇಲೆತ್ತಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತಂದು ನಂತರ ರಾಣಿಯ ಗಂಡ ಬಸವರಾಜು ನಾಪತ್ತೆಯಾಗಿದ್ದಾನೆ.

ತಮ್ಮ ಗ್ರಾಮದ ಹೆಣ್ಣು ಮಗಳು ವರದಕ್ಷಿಣೆ ದಾಹಕ್ಕೆ ಬಲಿಯಾದ ಸುದ್ದಿ ತಿಳಿಯುತ್ತಿದ್ದಂತೆ ಹೆಮ್ಮನಹಳ್ಳಿ ಗ್ರಾಮದ ಗ್ರಾಮಸ್ಥರು ಮತ್ತು ಬಂಧುಗಳು ಭಾರಿ ಸಂಖ್ಯೆಯಲ್ಲಿ ಪಟ್ಟಣದ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ ತಕ್ಷಣ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

ಶಿಲ್ಪಾ ಹಂತಕರ ಬಂಧನ:

ಈ ಮಧ್ಯೆ ಮಂಡ್ಯದ ಮಳವಳ್ಳಿ ತಾಲೂಕಿನ ಕನ್ನಹಳ್ಳಿ ಗ್ರಾಮದ ಬಳಿ ಕಳೆದ 24 ರಂದು ನಡೆದ ಶಿಲ್ಪಾಳ ಕೊಲೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ ಬೊರಸೆ ತಿಳಿಸಿದರು. ಈ ಹಿಂದೆ ಪ್ರಮೀಳಾ ಹಾಗೂ ನಾಗಮ್ಮಳನ್ನು ಬಂಧಿಸಲಾಗಿತ್ತು. ನಿನ್ನೆ ಪುಟ್ಟಸ್ವಾಮಿ ಹಾಗೂ ಬಿಲ್ಲಯ್ಯ ಅವರನ್ನು ಬಂಧಿಸಲಾಗಿದ್ದು. ಈ ಕೊಲೆಯಲ್ಲಿ ಶಿಲ್ಪಾಳ ಪತಿ ಅಭಿಜಿತನ ಪಾತ್ರವಿಲ್ಲ ಎಂದ ಎಸ್ಪಿ ಭೂಷಣ್, ಅಭಿಜಿತ್‌ ತಂಗಿಯ ಮದುವೆಗೆ ತನ್ನ ಮಗನ ಅಂತರ್ಜಾತಿ ವಿವಾಹ ಅಡ್ಡಿಯಾಗುತ್ತದೆ ಎನ್ನುವ ಹಿನ್ನಲೆಯಲ್ಲಿ ಶಿಲ್ಪಾಳ ಕೊಲೆಗೆ ಸಂಚು ರೂಪಿಸಿ, ಕೊಲೆ ಮಾಡಲಾಗಿದೆ ಎಂದು ಭೂಷಣ್ ಜಿ ಬೊರಸೆ, ಮಂಡ್ಯ ಎಸ್ಪಿ ವಿವರಿಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+