ಕೋಮು ಗಲಭೆ ನಿಯಂತ್ರಿಸದ ಪೊಲೀಸ್ ಇಲಾಖೆ ಮುಚ್ಚಿಬಿಡಿ: ಜಿ.ಪರಮೇಶ್ವರ ವಿರುದ್ಧ ಯತ್ನಾಳ್ ಕೆಂಡಾಮಂಡಲ
ಮಂಡ್ಯ, ಸೆಪ್ಟಂಬರ್ 12: ಮಂಡ್ಯದ ನಾಗಮಂಗಲದಲ್ಲಿ ನೆನೆ ನಡೆದ ಘಟನೆ ಉದ್ದೇಶಪೂರ್ವಕವಾದ ಘಟನೆಯೇ ಹೊರತು ಆಕಸ್ಮಿಕವಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಹೀಗಿದ್ದರು ನೀವು ನಿಷ್ಪಕ್ಷಪಾತವಾಗಿ ಮಾತನಾಡುವ ಬದಲಾಗಿ 'ಆಕಸ್ಮಿಕ' ಎಂದು ಹೇಳಿದ್ದೀರಿ. ಸೂಕ್ತ ಭದ್ರತೆ ಕೊಡದ ನಿಮ್ಮ ಪೊಲೀಸ್ ಇಲಾಖೆ, ಬೇಹುಗಾರಿಕೆ ಇಲಾಖೆಯನ್ನು ಮುಚ್ಚಿಬಿಡಿ ಎಂದು ಗೃಹ ಸಚಿವರ ಜಿ.ಪರಮೇಶ್ವರ ಹೇಳಿಕೆಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಿಡಿ ಕಾರಿದರು.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಅವರು, ಬುಧವಾರ ತಡರಾತ್ರಿ ಜಿಲ್ಲೆಯ ನಾಗಮಂಗಲದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲೆಸೆತ, ಪೆಟ್ರೋಲ್ ಬಾಂಬ್ ಮಾಡಲಾಗಿದೆ. ಇದು ಉದ್ದೇಶಪೂರ್ವಕ ಎಂದು ಗೊತ್ತಾಗುತ್ತದೆ. ಹೀಗಿದ್ದರೂ ಇದು 'ಆಕಸ್ಮಿಕ' ಎಂದು ಹೇಳುವ ಮೂಲಕ ಗೃಹ ಸಚಿವರು ಆ ಕೋಮಿನವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ಯತ್ನಾಳ್ ಅವರು ನೇರವಾಗಿ ದೂಷಿಸಿದರು.

ಗೃಹ ಸಚಿವರ ಮೇಲೆ ಪ್ರಶ್ನೆಗಳ ಸುರಿಮಳೆ
ಒಂದು ವೇಳೆ ನಿಮ್ಮ ತರ್ಕವೇ ಸರಿಯಿದ್ದರೆ ಪೆಟ್ರೋಲ್ ಬಾಂಬ್ ಹೇಗೆ ಎಸೆದರು? .ಇದನ್ನು ತಯಾರು ಮಾಡಲು ಸಮಯ ಬೇಡವೇ? ಗಣಪತಿ ಮೆರವಣಿಗೆ ಹೋಗುವವರು ಯಾರ ಮೇಲೆ ಕಲ್ಲೆಸೆದರು? ಶಾಂತಿಯುತವಾಗಿ ಹೋಗುತ್ತಿದ್ದ ಗಣಪತಿ ವಿಸರ್ಜನಾ ಮೆರವಣಿಗೆಯ ಮೇಲೆ ಚಪ್ಪಲಿ ಬಿಸಾಡುವುದು, ಕಲ್ಲೆಸೆಯುವುದು, ಪೆಟ್ರೋಲ್ ಬಾಂಬ್ ಹಾಕುವುದು ಆಕಸ್ಮಿಕವೇ? ನಿಮ್ಮ ಕಾಗಕ್ಕ-ಗುಬ್ಬಕ್ಕ ಕಥೆ ನಂಬುವುದಕ್ಕೆ ಆಗುತ್ತಾ? ಎಂದು ಪ್ರಶ್ನೆಗಳ ಮಳೆ ಸುರಿಸಿದರು.
ಪೊಲೀಸ್ ದೊಡ್ಡ ವೈಫಲ್ಯ ಎದ್ದು ಕಾಣುತ್ತಿದೆ
ಹಿಂದೂಗಳ ಹಬ್ಬ ನಡೆಯುವಾಗ ಗಲಾಟೆ ಮಾಡಿದ ಆ ಕೋಮಿನ ಹೆಸರನ್ನು ಹೇಳಲು ನಿಮಗೆ ಧೈರ್ಯವಿಲ್ಲವೇ?. ಸೂಕ್ಷ್ಮ ಪ್ರದೇಶದಲ್ಲಿ ಮೆರವಣಿಗೆ ಹೋಗಬೇಕಾದರೆ ಸೂಕ್ತ ಬಂದೋಬಸ್ತ್ ಕಲ್ಪಿಸದೆ ಇರುವುದು ನಿಮ್ಮ ಗೃಹ ಇಲಾಖೆಯ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ದೊಡ್ಡ ವೈಫಲ್ಯ. ನಿಮ್ಮ ಬೇಹುಗಾರಿಕೆ ಇಲಾಖೆಯನ್ನು ಮುಚ್ಚಿಬಿಡಿ ಎಂದು ಪುನರುಚ್ಚರಿಸಿದರು.
ನಿಮ್ಮ ಬೇಹುಗಾರಿಕೆಯವರು ಹಾಗೂ ಜಿಲ್ಲಾ ಪೊಲೀಸ್ ಮುಂಚೆಯೇ ಈ ರೀತಿ ಆಗಬಹದು ಎಂದು ಎಚ್ಚರಿಸಬೇಕಿತ್ತು. ಅಲ್ಲದೇ ಸೂಕ್ತ ಪ್ರದೇಶಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಿತ್ತು. ನಿಮ್ಮ ವೈಫಲ್ಯವನ್ನು ಮುಚ್ಚಿಡಲು ಹೊಸ ಕಥೆ ಸೃಷ್ಟಿಸಬೇಡಿ ಎಂದು ಎಚ್ಚರಿಕೆ ಕೊಟ್ಟರು.

ನಡೆದ ಗಲಭೆ ವಿರುದ್ಧ ಯಾವುದೇ ಮುಲಾಜು ನೋಡದೆ ತಪ್ಪಿತಸ್ಥರ ಮೇಲೆ ಗೂಂಡಾ ಕಾಯ್ದೆ ಹಾಕಿ. ಸರ್ಕಾರದಿಂದ ತೆಗೆದುಕೊಳ್ಳುತ್ತಿರುವ ಯೋಜನೆಗಳನ್ನು ಕೂಡಲೇ ನಿಲ್ಲಿಸಬೇಕು. ಅವರಿಗೆ ಅರ್ಥ ಆಗುವ ಭಾಷೆಯಲ್ಲಿ ವ್ಯವಹರಿಸಿ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಸಲಹೆ ನೀಡಿದರು.
ಘಟನೆ ಖಂಡಿಸಿದ ಯತ್ನಾಳ್
ಇದಕ್ಕೂ ಮೊದಲು ಘಟನೆ ಖಂಡಿಸಿ ಟ್ವೀಟ್ ಮಾಡಿದ್ದ ಅವರು, ಲಾಂಗ್ ಹಿಡಿದು ಮಸಿದಿ ಮುಂದೆ ಗಣಪತಿ ಮೆರವಣಿಗೆ ಹೋಗದಂತೆ ಆ ಕೋಮಿನವರು ತಡೆದಿದ್ದಾರೆ. ಶಾಂತಿ ಭಂಗ ಮಾಡಿ ಕ್ರೌರ್ಯ ಮೆರೆದಿರುವುದು ಖಂಡನೀಯ. ಸ್ಥಳದಲ್ಲಿ ಸೂಕ್ತ ಭದ್ರತೆ ಕಲ್ಪಿಸದೇ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ, ಪೊಲೀಸ್ ಇಲಾಖೆ ವಿಫಲಗೊಂಡಿದೆ ಎಂದು ಯತ್ನಾಳ್ ಅವರು ಪ್ರತಿಕ್ರಿಯಿಸಿದ್ದರು.












Click it and Unblock the Notifications