ಮಂಡ್ಯ : ಕೋ-ಆಪರೇಟಿವ್ ಸೊಸೈಟಿಯಿಂದ ಪಂಗನಾಮ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮಂಡ್ಯ, ಫೆಬ್ರವರಿ 05 : ಜನರಲ್ಲಿ ನಂಬಿಕೆ ಬರುವಂತೆ ಮಾಡಿ ಕೋಟ್ಯಾಂತರ ರೂ.ಹಣ ಸಂಗ್ರಹಣೆ ಮಾಡಿದ ಕೋ ಆಪರೇಟಿವ್ ಸೊಸೈಟಿ ಬಾಗಿಲು ಮುಚ್ಚಿದೆ. ಸೊಸೈಟಿ ನಂಬಿ ಹಣವನ್ನು ಠೇವಣಿ ಇಟ್ಟವರು ಹಣ ವಾಪಸ್ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾರೆ.

ಕೆ.ಆರ್.ಪೇಟೆ ಪಟ್ಟಣದ ಹಳೆ ಕಿಕ್ಕೇರಿ ರಸ್ತೆಯಲ್ಲಿ ಮೂರು ವರ್ಷಗಳ ಹಿಂದೆ ಸೆವೆನ್‍ಹಿಲ್ಸ್ ವಿವಿದೋದ್ಧೇಶ ಸೌಹಾರ್ದ ಕೋ-ಆಪರೇಟಿವ್ ಲಿಮಿಟೆಡ್ ಸಂಸ್ಥೆ ಆರಂಭವಾಗಿತ್ತು. ಹಣದ ವಹಿವಾಟು ನಡೆಸುವ ಸಲುವಾಗಿ ಸ್ಥಳೀಯ ನಿರುದ್ಯೋಗಿಗಳನ್ನು ಕೆಲಸಕ್ಕೆ ಬಳಸಿಕೊಂಡು ಉದ್ಯೋಗಸ್ಥ ಮಹಿಳೆಯರಿಗೆ ಕಮೀಷನ್ ಆಮಿಷವೊಡ್ಡಿ ಹಣ ಸಂಗ್ರಹಕ್ಕೆ ನೇಮಕ ಮಾಡಿಕೊಳ್ಳಲಾಗಿತ್ತು. [ಮುತ್ತೂಟ್ ಫೈನಾನ್ಸ್ ದರೋಡೆ ಯತ್ನ]

money

ಕಮೀಷನ್ ಆಸೆಗೆ ಬಿದ್ದ ಏಜೆಂಟ್‍ಗಳು ಹೆಚ್ಚಿನ ಬಡ್ಡಿ ನೀಡುತ್ತಾರೆ ಎಂದು ತಮ್ಮ ಸಂಬಂಧಿಕರು, ಪರಿಚಿತರಿಂದ ಹಣ ಸಂಗ್ರಹಿಸಿ ಠೇವಣಿ ಇಟ್ಟಿದ್ದರು. ಎರಡು ವರ್ಷ ಗ್ರಾಹಕರಿಗೆ ಹಣವನ್ನು ಸಂಸ್ಥೆ ಪ್ರಾಮಾಣಿಕವಾಗಿ ಹಿಂತಿರುಗಿಸಿ ನಂಬಿಕೆ ಬರುವಂತೆ ಮಾಡಿತ್ತು. ಇದರಿಂದ ಗ್ರಾಮೀಣ ಭಾಗದ ಜನರು ಸೊಸೈಟಿ ಮೇಲೆ ನಂಬಿಕೆ ಇಟ್ಟು ಹಣ ಇಟ್ಟಿದ್ದರು. [ಮೊಬೈಲ್ ಕರೆಗೆ ಓಗೊಟ್ಟು ಬ್ಯಾಂಕ್ ಮಾಹಿತಿ ಕೊಟ್ಟೀರಾ ಜೋಕೆ!]

ಠೇವಣಿಯಿಟ್ಟ ಹಣಕ್ಕೆ ಉತ್ತಮ ಬಡ್ಡಿ ಸಿಗುತ್ತೆ ಎಂಬ ಸಂತಸದಲ್ಲಿ ಹೆಚ್ಚು ಹಣವನ್ನು ಹೂಡಿಕೆ ಮಾಡಿದ್ದರು. ಆದರೆ, ಕಳೆದೊಂದು ವರ್ಷದಿಂದ ಸಂಸ್ಥೆ ಕಚೇರಿಗೆ ಬೀಗ ಜಡಿದಿದ್ದು ಗ್ರಾಹಕರು ಚಿಂತಾಕ್ರಾಂತರಾಗಿದ್ದಾರೆ. 500ಕ್ಕೂ ಅಧಿಕ ಮಹಿಳೆಯರು ಪ್ರತಿಭಟನೆ ನಡೆಸಿ, ಹಣವನ್ನು ವಾಪಸ್ ಕೊಡಿಸುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.

ಕೆ.ಆರ್.ಪೇಟೆ ತಾಲೂಕಿನ ಚಿಕ್ಕಗಾಡಿಗನಹಳ್ಳಿ, ಬೆಳತೂರು, ಮಾಂಬಳ್ಳಿ, ಬೂಕನಕೆರೆ, ದೊಡ್ಡಗಾಡಿಗನಹಳ್ಳಿ, ಪಾಂಡವಪುರ ತಾಲೂಕಿನ ಇಳ್ಳೇನಹಳ್ಳಿ, ಚಿನಕುರಳಿ, ರಾಗಿಮುದ್ದನಹಳ್ಳಿ, ಸಣಬ, ಕಾಮನಾಯಕನಹಳ್ಳಿ, ಗುಮ್ಮನಹಳ್ಳಿ ಮುಂತಾದ ಗ್ರಾಮಗಳ ನೂರಾರು ಜನರು ಹಣವನ್ನು ಹೂಡಿಕೆ ಮಾಡಿದ್ದಾರೆ. ಕೆ.ಆರ್.ಪೇಟೆ ತಾಲೂಕು ಪಟ್ಟಣ ಪೋಲಿಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mandya district Krishnarajpet (K.R.Pet) police registered a cheating case against Seven Hills Vividhodhesha Souharda Co-Operative Limited.
Please Wait while comments are loading...