'ಮಾಂಡೌಸ್' ಸೈಕ್ಲೋನ್ ಭೀತಿ: ಕರ್ನಾಟಕದಲ್ಲಿ ಭಾರಿ ಮಳೆ, 11ಜಿಲ್ಲೆಗೆ ಹಳದಿ ಎಚ್ಚರಿಕೆ
ಬೆಂಗಳೂರು, ಡಿಸೆಂಬರ್ 08: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ 'ಮಾಂಡೌಸ್' ಚಂಡಮಾರುತ ಇನ್ನಷ್ಟು ತೀವ್ರಗೊಂಡಿದೆ. ಇದರಿಂದ ಬೆಂಗಳೂರು ಸೇರಿದಂತೆ ಕರ್ನಾಟಕ ಹಾಗೂ ನೆರೆಯ ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಭಾರಿ ಮಳೆ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನೈರತ್ಯ ಬಂಗಾಳಕೊಲ್ಲಿಯಲ್ಲಿ ಪ್ರದೇಶದಲ್ಲಿರುವ ಈ 'ಮಾಂಡೌಸ್' (Mandous) ಚಂಡಮಾರುತವು ಚೆನ್ನೈನಿಂದ ಆಗ್ನೇಯ ದಿಕ್ಕಿಗೆ 250ಕಿಲೋ ಮೀಟರ್ ದೂರದಲ್ಲಿ ಕೇಂದ್ರಿಕೃತವಾಗಿದೆ. 'ಮಾಂಡೌಸ್' ತನ್ನ ಮೂಲ ಸ್ಥಳದಿಂದ ಪಶ್ವಿಮ ಮತ್ತು ವಾಯುವ್ಯ ದಿಕ್ಕಿನತ್ತ ಸಂಚರಿಸಲಿದೆ. ಶುಕ್ರವಾರ ರಾತ್ರಿ ವೇಳೆಗೆ ಪುದುಚೇರಿ ಮಾರ್ಗವಾಗಿ ತಮಿಳುನಾಡಿನ ಉತ್ತರ ಕರಾವಳಿ, ಆಂಧ್ರ ಪ್ರದೇಶದ ದಕ್ಷಿಣ ಕರಾವಳಿಗೆ ಬಂದಪ್ಪಳಿಸಲಿದೆ.
ನೆರೆ ರಾಜ್ಯದ ಕರಾವಳಿ ಭಾಗಕ್ಕೆ 'ಮಾಂಡೌಸ್' ಸಮೀಪಿಸಿದಾಗ ಅದರ ವೇಗ ಪ್ರತಿ ಗಂಟೆಗೆ 65-75ಕಿಲೋ ಮೀಟರ್ ಇರಲಿದೆ. ಇದು ಒಮ್ಮೊಮ್ಮೆ ಗರಿಷ್ಠ ಗರಿಷ್ಠ 85ಕಿ.ಮೀ. ತಲುಪುವ ಸಾಧ್ಯತೆ ಇದೆ. ಈ ಕಾರಣಗಳಿಂದ ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ವಿಜ್ಞಾನಿ ಡಾ.ಸದಾನಂದ ಅಡಿಗ ತಿಳಿಸಿದರು.

ಕರ್ನಾಟಕಕ್ಕೆ ಭಾರಿ ಮಳೆ, 'ಹಳದಿ' ಎಚ್ಚರಿಕೆ
ಚಂಡಮಾರುತದ ಪ್ರಭಾವದಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಡಿ.10ರಿಂದ 12ರವರೆಗೆ ಗುಡುಗು ಸಹಿತ ವ್ಯಾಪಕವಾಗಿ ಮಳೆ ಅಬ್ಬರಿಸಲಿದೆ. ಅದರಲ್ಲೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ತೀವ್ರಗೊಳ್ಳಲಿದೆ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರಕ್ಕೆ ಡಿಸೆಂಬರ್ 10ರಂದು ಹಾಗೂ ನಂತರ ಡಿಸೆಂಬರ್ 12ರವರೆಗೆ ಶಿವಮೊಗ್ಗ, ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಹಲವೆಡೆ ಭಾರಿ ಮಳೆ ಆಗಲಿದೆ. ಹೀಗಾಗಿ ಇಷ್ಟೂ ಜಿಲ್ಲೆಗಳಿಗೆ ಮೂರು ದಿನ 'ಹಳದಿ' ಎಚ್ಚರಿಕೆ ನೀಡಲಾಗಿದೆ.

ಒಣಹವೆಯ ಪ್ರದೇಶಕ್ಕೆ ತಂಪೆರೆಯಲಿರುವ ಮಳೆ
ಇದೇ ಅವಧಿಯಲ್ಲಿ ಕರ್ನಾಟಕದ ಕರಾವಳಿಯಲ್ಲಿ ಡಿಸೆಂಬರ್ 9ರಂದು ಹಗುರವಾಗಿ ಮಳೆ ಬರಲಿದೆ. ನಂತರದ ಮೂರು ದಿನ ಸಾಧಾರಣವಾಗಿ ಮಳೆ ಬೀಳಲಿದೆ. ಇನ್ನೂ ಉತ್ತರ ಒಳನಾಡಿನಲ್ಲಿ ಗುರುವಾರ ಸಹ ಒಣಹವೆ ದಾಖಲಾಗಿದೆ. ಶುಕ್ರವಾರ ಒಂದೆರಡು ಜಿಲ್ಲೆಗಳಲ್ಲಿ ಮಳೆ ಬಂದರೆ, ಡಿಸೆಂಬರ್ 10ರಂದು ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆ ಹೊರತುಪಡಿಸಿ ಉಳಿದೆಡೆ ಹಗುರ ಮಳೆಯಾಗಲಿದೆ. ಬಳಿಕ ಡಿಸೆಂಬರ್ 11 ಮತ್ತು 12ರಂದು ಉತ್ತರ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿಯೂ ಮಳೆಯ ಸಿಂಚನವಾಗಲಿದೆ. ಇದರಿಂದ ಒಣಹವೆಯ ಪ್ರದೇಶ ತುಸು ತಂಪಾಗಲಿದೆ.

'ಮಾಂಡೌಸ್'ನಿಂದ ಆಂಧ್ರ-ತಮಿಳುನಾಡು ತತ್ತರ?
ಚಂಡಮಾರುತ 'ಮಾಂಡೌಸ್' ಗಂಟೆಗೆ ಸುಮಾರು 75 ಕಿ.ಮೀ. ವೇಗದಲ್ಲಿ ಆಂಧ್ರ ಪ್ರದೇಶದ ಕರಾವಳಿ ಹಾಗೂ ತಮಿಳುನಾಡಿನ ಕರಾವಳಿಗೆ ಭಾಗಕ್ಕೆ ಬಂದಪ್ಪಿಳಿಸಲಿದೆ. ಸದ್ಯಕ್ಕೆ ಈ ಮಹಾವೈಪರಿತ್ಯ ತಣ್ಣಗಾಗುವ ಲಕ್ಷಣಗಳು ಇಲ್ಲ. ಹೀಗಾಗಿ ಸಮುದ್ರ ತೀರದ ರಾಜ್ಯಗಳು ಭಾರಿ ಸಂಕಷ್ಟ ಎದುರಿಸುವ ಸಾಧ್ಯತೆ ಇದೆ. ಇದರಿಂದ ಜನಜೀವನ ಅಸ್ತವೆಸ್ತವಾಗಿ, ಅಪಾರ ಪ್ರಮಾಣದಲ್ಲಿ ಬೆಳೆ, ಆರ್ಥಿಕ ನಷ್ಟು ಉಂಟಾಗಲಿದೆ. ಗುರುವಾರ ಬೆಳಗ್ಗೆಯಿಂದಲೇ ಈ ರಾಜ್ಯಗಳಲ್ಲಿ ಮಳೆ ಆರಂಭವಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ಬೆಂಗಳೂರಿಗೆ 2ದಿನ ವ್ಯಾಪಕ ಮಳೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶುಕ್ರವಾರದಿಂದ ಮಳೆಯ ವಾತಾವರಣ ಕಂಡು ಬರಲಿದೆ. ಡಿಸೆಂಬರ್ 10 ಮತ್ತು 11ರಂದು ನಗರದಲ್ಲಿ ಮಳೆ ತೀವ್ರಗೊಳ್ಳಲಿದೆ. ಅಂದು ಬೆಂಗಳೂರಿನ ಬಹಳಷ್ಟು ಕಡೆಗಳಲ್ಲಿ ಗುಡುಗು ಸಹಿತ ಜೋರು ಮಳೆ ಬೀಳಲಿದೆ. ಇಡಿ ದಿವಸ ಮಬ್ಬು ವಾತಾವರಣ ಹಾಗೂ ಬೆಳಗ್ಗೆ ನಸುಕಿನ ಜಾವ ಮತ್ತು ಸಂಜೆ ನಂತರ ಚಳಿ ದಾಖಲಾಗಲಿದೆ. ನಂತರ ಡಿಸೆಂಬರ್ 14ರವರೆಗೂ ಹಗುರ ಮಳೆ ಆಗಲಿದೆ. ಈ ಅವಧಿಯಲ್ಲಿ ಗರಿಷ್ಠ 27 ಮತ್ತು ಕನಿಷ್ಠ 19ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ವಿಜ್ಞಾನಿ ಡಾ. ಸದಾನಂದ ಅಡಿಗ ಹೇಳಿದರು.












Click it and Unblock the Notifications