Lok Sabha Election 2024: ಮಮತಾ, ಕೇಜ್ರಿವಾಲ್ ಕೊಟ್ಟ ಸಲಹೆಗೆ ಬೆಚ್ಚಿ ಬಿದ್ದ ಕಾಂಗ್ರೆಸ್ ನಾಯಕರು!
ಬೆಂಗಳೂರು, ಡಿಸೆಂಬರ್ 21: ರಾಷ್ಟ್ರ ರಾಜಕೀಯದಲ್ಲಿ ಕರ್ನಾಟಕದ ಹಿರಿಯ ನಾಯಕರೊಬ್ಬರ ಹೆಸರು ಮುನ್ನಲೆಗೆ ಬಂದಿದೆ. ಇಂಡಿಯಾ(ಐಎನ್ ಡಿಐಎ) ಒಕ್ಕೂಟದ ಸಭೆಯಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮತ್ತು ಎಎಪಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಂಡಿಯಾ ಒಕ್ಕೂಟದ ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುವಂತೆ ಸಲಹೆ ನೀಡಿರುವುದು ರಾಷ್ಟ್ರ ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ.
ಲೋಕಸಭಾ ಚುನಾವಣೆಗೆ ಐದಾರು ತಿಂಗಳಷ್ಟೆ ಬಾಕಿಯಿದ್ದು, ಇಂಡಿಯಾ ಒಕ್ಕೂಟ ಚುನಾವಣೆಗೆ ಇನ್ನಷ್ಟೆ ತಯಾರಿ ಮಾಡಿಕೊಳ್ಳಬೇಕಿದೆ. ಕಾಂಗ್ರೆಸ್ ನಾಯಕರು ಮೊದಲಿನಿಂದಲೂ ರಾಹುಲ್ ಗಾಂಧಿ ಅವರನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗಿದ್ದು, 2014 ಮತ್ತು 2019ರ ಎರಡು ಚುನಾವಣೆಗಳು ಕೂಡ ಕಾಂಗ್ರೆಸ್‌ನ್ನು ಕೈಹಿಡಿದಿಲ್ಲ. ಹೀಗಾಗಿ ಇಂಡಿಯಾ ಒಕ್ಕೂಟದ ಪಕ್ಷಗಳು ಇದೀಗ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ತೇಲಿ ಬಿಡುವ ಮೂಲಕ ರಾಹುಲ್ ಗಾಂಧಿ ಅವರು ಪ್ರಧಾನಿ ಅಭ್ಯರ್ಥಿಯಾಗುವುದಕ್ಕೆ ನಮ್ಮ ವಿರೋಧವಿದೆ ಎಂಬ ಪರೋಕ್ಷ ಸಂದೇಶವನ್ನು ರವಾನಿಸಿದ್ದಾರೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಕಳೆದ ಕೆಲವು ವರ್ಷಗಳಿಂದ ಮಮತಾ ಬ್ಯಾನರ್ಜಿ ಮತ್ತು ಅರವಿಂದ ಕೇಜ್ರಿವಾಲ್ ಅವರು ನೇರವಾಗಿಯೇ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸುತ್ತಲೇ ಬಂದವರು ಅಷ್ಟೇ ಅಲ್ಲದೆ ಅವರಿಗೆ ಸರಿಸಮಾನವಾಗಿ ತಮ್ಮನ್ನು ತಾವು ರಾಜಕೀಯದಲ್ಲಿ ಗುರುತಿಸಿಕೊಂಡವರು. ಇವರಿಬ್ಬರನ್ನು ಮೋದಿಗೆ ಸಮನಾಗಿ ಬಿಂಬಿಸಿ ಮುಂದಿನ ಪ್ರಧಾನಿ ಆಗುವ ಅರ್ಹತೆವುಳ್ಳ ನಾಯಕರು ಎಂದು ಬೆಂಬಲಿಗರೇ ಹೇಳಿಕೆ ನೀಡುತ್ತಾ ಬಂದಿದ್ದರು. ಅಷ್ಟೇ ಅಲ್ಲದೆ ಇವರಿಬ್ಬರು ಕೂಡ ಪ್ರಧಾನಿ ಪಟ್ಟದ ಮೇಲೆ ಕಣ್ಣಿಟ್ಟವರೇ ಆದರೆ ಇತ್ತೀಚೆಗಿನ ಬೆಳವಣಿಗೆಯನ್ನು ಗಮನಿಸಿದರೆ ಕಾಂಗ್ರೆಸ್ ಗೆ ಬೆಂಬಲ ನೀಡಿ ಹಿಂದೆ ಸರಿದಂತೆ ಕಾಣಿಸುತ್ತಿದೆ. ಆದರೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೇಲೆ ನಂಬಿಕೆಯಿಂದ ಈ ಮಾತನ್ನು ಹೇಳಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ.
ಇಕ್ಕಟ್ಟಿಗೆ ಸಿಲುಕಿದ 'ಕೈ' ನಾಯಕರು
ಇದೀಗ ಪ್ರಭಾವಿ ನಾಯಕರಿಬ್ಬರು ಇಂಡಿಯಾ ಒಕ್ಕೂಟದಿಂದ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿಯಾಗಲಿ ಎಂದು ಸಲಹೆ ನೀಡಿರುವುದು ಕಾಂಗ್ರೆಸ್ ನಾಯಕರಿಗೆ ಅರಗಿಸಿಕೊಳ್ಳಲಾರದಂತಾಗಿದೆ. ಇದುವರೆಗೂ ನೆಹರು ಕುಟುಂಬದ ವಿರುದ್ಧ ಮಾತನಾಡಲಾಗದೆ, ಪಕ್ಷದಲ್ಲಿ ಅರ್ಹ ಪ್ರಭಾವಿ ನಾಯಕರಿದ್ದರೂ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಅವರ ವಿರೋಧ ಕಟ್ಟಿಕೊಳ್ಳಲಾಗದೆ ಮೌನವಾಗಿಯೇ ಇದ್ದ ನಾಯಕರು ಇಕ್ಕಟ್ಟಿಗೆ ಸಿಲುಕುವಂತಾಗಿದೆ. ಸಾಮಾನ್ಯವಾಗಿ ಕಾಂಗ್ರೆಸ್ ನಾಯಕರ ಮನದಲ್ಲಿರುವುದು ರಾಹುಲ್ ಗಾಂಧಿ ಮಾತ್ರ. ಅದನ್ನು ಹೊರತುಪಡಿಸಿ ಅರ್ಹ ನಾಯಕರಿದ್ದರೂ ಅವರ ಹೆಸರನ್ನು ಹೇಳುವ ಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರಿಲ್ಲ.
ಇವತ್ತು ಮಮತಾ ಬ್ಯಾನರ್ಜಿ ಮತ್ತು ಅರವಿಂದ ಕೇಜ್ರಿವಾಲ್ ಅವರ ಸಲಹೆಯನ್ನು ಸ್ವತಃ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇದನ್ನು ಒಪ್ಪಿಕೊಳ್ಳಲಾಗದ ಅವರು ಮೊದಲು ಚುನಾವಣೆಯಲ್ಲಿ ಗೆಲ್ಲುವುದರತ್ತ ಒತ್ತು ನೀಡೋಣ ನಂತರ ಪ್ರಜಾತಂತ್ರದ ವ್ಯವಸ್ಥೆಯಂತೆ ಪ್ರಧಾನಮಂತ್ರಿ ಆಯ್ಕೆ ಬಗ್ಗೆ ಯೋಚಿಸೋಣ ಎನ್ನುವ ಮೂಲಕ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಮುಜುಗರ ಆಗದಂತೆ ನೋಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಪ್ರಧಾನಿ ಅಭ್ಯರ್ಥಿ ವಿಚಾರದಲ್ಲೂ ಪೈಪೋಟಿ
ಈ ನಡುವೆ ಇಂಡಿಯಾ ಒಕ್ಕೂಟದ ಇನ್ನೊಬ್ಬ ಪ್ರಭಾವಿ ನಾಯಕ ನಿತೀಶ್ ಕುಮಾರ್ ಬೆಂಬಲಿಗರು ಕೂಡ ಪ್ರಧಾನಿ ಅಭ್ಯರ್ಥಿಯನ್ನಾಗಿ ನಿತೀಶ್ ಕುಮಾರ್ ಅವರನ್ನು ಘೋಷಣೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಇಂಡಿಯಾ ಒಕ್ಕೂಟಕ್ಕೆ ಪ್ರಧಾನಿ ಅಭ್ಯರ್ಥಿ ಘೋಷಣೆ ಕಬ್ಬಿಣದ ಕಡಲೆಯಾಗುವ ಎಲ್ಲ ಸಾಧ್ಯತೆಗಳು ಇರುವುದನ್ನು ತಳ್ಳಿಹಾಕಲಾಗದು. ಇವತ್ತು ಇಂಡಿಯಾ ಒಕ್ಕೂಟ ಅಸ್ತಿತ್ವಕ್ಕೆ ಬಂದಿರುವುದೇ ಪ್ರಧಾನಿ ನರೇಂದ್ರ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸುವ ಸಲುವಾಗಿ. ಹೀಗಿರುವಾಗ ಮೋದಿಗೆ ಎಲ್ಲ ರೀತಿಯಲ್ಲೂ ಪೈಪೋಟಿ ನೀಡಬಲ್ಲ ಸಮರ್ಥ ಅಭ್ಯರ್ಥಿಯನ್ನು ಇಂಡಿಯಾ ಒಕ್ಕೂಟ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸದಿದ್ದರೆ ಹೇಗೆ?
ಎನ್‌ಡಿಎ ಪ್ರಧಾನಿ ನರೇಂದ್ರಮೋದಿಯವರನ್ನೇ ಮುಂದಿಟ್ಟುಕೊಂಡು 2024ರ ಲೋಕಸಭಾ ಚುನಾವಣೆಗೆ ಹೋಗುತ್ತಿರುವಾಗಲೇ ಇಂಡಿಯಾ ಒಕ್ಕೂಟ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸದೆ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗಳು ಮತದಾರರ ಮನದಲ್ಲಿ ಹುಟ್ಟಿಕೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ ಖರ್ಗೆ ಅವರ ಮೊದಲು ಗೆಲ್ಲೋಣ ಆಮೇಲೆ ಪ್ರಧಾನಿ ಯಾರಾಗಬೇಕೆಂದು ತೀರ್ಮಾನ ಮಾಡೋಣ ಎಂಬ ಸೂತ್ರ ಕೆಲಸಕ್ಕೆ ಬರುವುದು ಕಷ್ಟಸಾಧ್ಯವಾಗಿದೆ.
ಮತದಾರ ಯಾರನ್ನು ನೋಡಿ ಮತಹಾಕೋದು?
ಮೋದಿ ವಿರುದ್ಧವೇ ಚುನಾವಣೆಗೆ ಹೋಗುವುದಕ್ಕೆ ತಯಾರಿ ಮಾಡಿಕೊಂಡ ಬಳಿಕ ಅವರಿಗೆ ಸರಿ ಸಮಾನವಾದ ನಾಯಕನನ್ನು ಮತದಾರರ ಮುಂದಿಡದೆ ಹೋದರೆ ಮತಹಾಕುವುದು ಯಾರನ್ನು ನೋಡಿ ಎಂಬ ಪ್ರಶ್ನೆಯೂ ಎದ್ದೇಳಲಿರದು. ಇದನ್ನು ಬಿಜೆಪಿ ಚುನಾವಣೆಯಲ್ಲಿ ತುಂಬಾ ಚೆನ್ನಾಗಿ ಬಳಸಿಕೊಳ್ಳಲಿದೆ. ಸದ್ಯದ ರಾಜಕೀಯ ಲೆಕ್ಕಾಚಾರಗಳನ್ನು ಗಮನಿಸಿದರೆ ಅಧಿಕಾರರೂಢ ಬಿಜೆಪಿ ನೇತೃತ್ವದ ಎನ್ ಡಿಎ 323 ಸ್ಥಾನಗಳನ್ನು ಪಡೆದಿದ್ದು ಇಲ್ಲಿ ಬಿಜೆಪಿ ಬರೋಬ್ಬರಿ 290 ಸ್ಥಾನಗಳನ್ನು ಗೆದ್ದುಕೊಂಡಿದೆ.

ಎನ್ ಡಿಎಗೆ ಹೋಲಿಸಿದರೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದಲ್ಲಿ 138 ಸ್ಥಾನಗಳಿದ್ದು, ಅದರಲ್ಲಿ ಕಾಂಗ್ರೆಸ್ ಇರುವುದು 47 ಸ್ಥಾನಗಳಲ್ಲಿ ಮಾತ್ರ. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಅಜಗಜಾಂತರ ವ್ಯತ್ಯಾಸಗಳಿದ್ದು, ಇಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆದ್ದರೆ ಮಾತ್ರ ತಮ್ಮ ಒಕ್ಕೂಟದ ನಾಯಕರ ಮೇಲೆ ಹಿಡಿತ ಸಾಧಿಸಲು ಸಾಧ್ಯ. ಇಷ್ಟೇ ಅಲ್ಲದೆ ಇಂಡಿಯಾ ಒಕ್ಕೂಟದಲ್ಲಿರುವ ಪಕ್ಷಗಳು ಕೆಲವು ಕಡೆ ಕಾಂಗ್ರೆಸ್ ಗಿಂತಲೂ ಬಲಿಷ್ಠವಾಗಿವೆ. ಹೀಗಾಗಿ ಅದರ ನಾಯಕರು ಅಧಿಕಾರ ಸಾಧಿಸಲು ಮುಂದಾದರೂ ಅಚ್ಚರಿಯಿಲ್ಲ.
ಇಂಡಿಯಾ ಒಕ್ಕೂಟದ ಸುತ್ತ ಪ್ರಶ್ನೆಗಳ ಹುತ್ತ!
ಸದ್ಯಕ್ಕೆ ಎನ್ ಡಿಎಗೆ ವಿರುದ್ಧವಾಗಿ ಇಂಡಿಯಾ ಒಕ್ಕೂಟವನ್ನು ಕಟ್ಟಿರುವ ನಾಯಕರು ಸ್ಪರ್ಧೆಗೆ ಮುನ್ನ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡುತ್ತಾರೆ. ಮತ್ತು ಯಾರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತಾರೆ? ಯಾರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುತ್ತಾರೆ? ಅಥವಾ ಸಾಮೂಹಿಕ ನಾಯಕತ್ವದ ಜಪ ಮಾಡಿಕೊಂಡು ಚುನಾವಣೆಗೆ ಹೋಗುತ್ತಾರಾ? ಇಷ್ಟಕ್ಕೂ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನ ಮಂತ್ರಿ ಅಭ್ಯರ್ಥಿಯಾಗಲಿ ಎಂಬ ಸಲಹೆಯನ್ನು ಕಾಂಗ್ರೆಸ್ ನಾಯಕರು ಒಪ್ಪಿಕೊಳ್ಳುತ್ತಾರಾ? ಹೀಗೆ ಇಂಡಿಯಾ ಒಕ್ಕೂಟದ ಸುತ್ತಲೂ ಪ್ರಶ್ನೆಗಳ ಹುತ್ತ ಬೆಳೆಯುತ್ತಲೇ ಇದೆ. ಇದೆಲ್ಲವನ್ನು ಕೊಡವಿಕೊಂಡು ಇಂಡಿಯಾ ಒಕ್ಕೂಟ ಹೇಗೆ ಮೇಲೇಳುತ್ತದೆ ಎಂಬುದೇ ಸದ್ಯದ ಕುತೂಹಲವಾಗಿದೆ.












Click it and Unblock the Notifications