ಯೋಗಿಯ ಬುಲ್ಡೋಜರ್ ರಾಜ್ಯಕ್ಕೂ ಬರುತ್ತೆ ಹುಷಾರ್ ಎಂದ ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ ಮೇ 4: ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕದಿದ್ದರೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬುಲ್ಡೋಜರ್ ದಕ್ಷಿಣ ರಾಜ್ಯಕ್ಕೂ ಬರಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕಲಬುರಗಿಯ ಆಳಂದದಲ್ಲಿ ಬುಧವಾರ ನಡೆದ ಸಾರ್ವಜನಿಕ ರ್‍ಯಾಲಿಯಲ್ಲಿ ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು. 'ಇತ್ತೀಚಿನ ದಿನಗಳಲ್ಲಿ ಯುಪಿ ಸಿಎಂ ಆಗಾಗ ಕರ್ನಾಟಕಕ್ಕೆ ಬರುತ್ತಿದ್ದಾರೆ. ಅವರು ಸಾಧುವಿನಂತೆ ಕಾಣುತ್ತಾರೆ ಮತ್ತು ಸಾಧು ವಸ್ತ್ರಗಳನ್ನು ಧರಿಸುತ್ತಾರೆ, ಆದರೆ ಮಾನವೀಯತೆಗೆ ಸರಿಯಾದ ದಾರಿ ತೋರಿಸುವ ಬದಲು ಜನರ ನಡುವೆ ಘರ್ಷಣೆಗೆ ಪ್ರಚೋದನೆ ನೀಡುತ್ತಾರೆ' ಎಂದು ಖರ್ಗೆ ಪರೋಕ್ಷವಾಗಿ ಉತ್ತರ ಪ್ರದೇಶ ಯೋಗಿ ಆದಿತ್ಯನಾಥ್ ವಿರುದ್ಧ ಕಿಡಿ ಕಾರಿದರು.

'ಯಾರು ನಮ್ಮ ಮಾತು ಕೇಳುವುದಿಲ್ಲವೋ ಅವರನ್ನು ಬುಲ್ಡೋಜರ್ ಬಳಸಿ ಓಡಿಸಲಾಗುತ್ತದೆ. ಅವರು ಈ ದೇಶದಲ್ಲಿ ಬದುಕಲು ಸಾಧ್ಯವಿಲ್ಲ ಎಂದು ಯೋಗಿ ಹೇಳುತ್ತಾರೆ' ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಅವರು ವಿದೇಶಿಗಳನ್ನು ಇಲ್ಲಿಂದ ಹೋಗಲು ಹೇಳಬೇಕು, ಸ್ಥಳೀಯರಾದ ನಮ್ಮನ್ನು ಅಲ್ಲ. ಹಾಗಾಗಿ, ನೀವು ಕಾಂಗ್ರೆಸ್‌ಗೆ ಮತ ಹಾಕದಿದ್ದರೆ, ಯೋಗಿಯ ಬುಲ್ಡೋಜರ್ ಇಲ್ಲಿಯೂ ಬರುತ್ತದೆ ಎಂದು ಖರ್ಗೆ ಯುಪಿ ಯೋಗಿ ವಿರುದ್ಧ ಕಿಡಿ ಕಾರಿದರು.
ಮುಖ್ಯಮಂತ್ರಿ ಬೊಮ್ಮಾಯಿ ಮೋದಿ ಮತ್ತು ಅಮಿತ್ ಶಾ ಬಗ್ಗೆ ಎಚ್ಚರದಿಂದಿರಬೇಕು. ಕರ್ನಾಟಕದಲ್ಲಿ ತುಂಬಾ ಒಳ್ಳೆಯ ಸರ್ಕಾರವನ್ನು ತರುವುದಾಗಿ ಬಿಜೆಪಿ ಭರವಸೆಯನ್ನು ನೀಡುತ್ತಿದೆ. ಆದರೆ ಅವರು ಅನೇಕ ಸಿಎಂಗಳನ್ನು ಬದಲಾಯಿಸಿದ್ದಾರೆ. ಕರ್ನಾಟಕದ ಪಾಲಿಗೆ ಇದು ಮಹತ್ವದ 'ಮಾಡು ಇಲ್ಲವೇ ಮಡಿ' ಚುನಾವಣೆ. 40 ಪರ್ಸೆಂಟ್ ಕಮಿಷನ್ ರಾಜ್ಯ ಸರ್ಕಾರಕ್ಕೆ ಶಾಪವಾಗಿದೆ. ಇದು ನಮ್ಮ ಜನರಿಗೆ ಮೋಸ ಮಾಡಿದೆ. ಹೀಗಾಗಿ ಇಂತಹ ಸರ್ಕಾರ ನಮಗೆ ಬೇಡ ಎಂದು ಖರ್ಗೆ ಹೇಳಿದರು.

ಈ ಚುನಾವಣೆ ಕರ್ನಾಟಕಕ್ಕೆ ಮಾತ್ರವಲ್ಲ, ರಾಷ್ಟ್ರಕ್ಕೂ ಮಹತ್ವದ್ದಾಗಿದೆ. ಕರ್ನಾಟಕ ಭ್ರಷ್ಟಾಚಾರ ಮುಕ್ತವಾಗಬೇಕು. 40 ಪರ್ಸೆಂಟ್ ಬಿಜೆಪಿ ದುರಾಡಳಿತದಿಂದ ಮುಕ್ತವಾಗಬೇಕು ಎಂದು ಖರ್ಗೆ ಹೇಳಿದರು.
ನಾನು ಲಂಚ ತೆಗೆದುಕೊಳ್ಳುವುದಿಲ್ಲ, ಇತರರನ್ನು ಲಂಚ ತೆಗೆದುಕೊಳ್ಳಲು ಬಿಡುವುದಿಲ್ಲ ಎಂದು ಮೋದಿಯವರು ತಮ್ಮ ಭಾಷಣಗಳಲ್ಲಿ ಆಗಾಗ ಹೇಳುತ್ತಿರುತ್ತಾರೆ. ಆದರೆ ಬೊಮ್ಮಾಯಿ ಅವರ ಪಕ್ಕದಲ್ಲಿ ಕುಳಿತಿರುತ್ತಾರೆ. ಪ್ರಧಾನಿ ಅವರಿಗೆ ಶೇ.40 ಕಮಿಷನ್ ಬಗ್ಗೆ ಕೇಳಲಿ ಎಂದು ಖರ್ಗೆ ಲೇವಡಿ ಮಾಡಿದರು.
'ಮೋದಿ ಜಿ ನನ್ನ ಬಗ್ಗೆ ದೂರುತ್ತಾರೆ. (ತಂದೆ ಮತ್ತು ಮಗ ನನ್ನ ವಿರುದ್ಧ ದೂರಿದ್ದಾರೆ) ಆದರೆ ಅವರು ನಮ್ಮ ಪ್ರಧಾನಿ, ನಾವು ಅವರನ್ನು ಹೇಗೆ ಅವಮಾನಿಸುತ್ತೇವೆ? ಅವರು ಯಾವುದೇ ಪಕ್ಷಕ್ಕೆ ಸೇರಿದವರಾಗಿರಲಿ, ನಾವು ನಮ್ಮ ಪ್ರಧಾನಿಯನ್ನು ಒಪ್ಪಿಕೊಳ್ಳುತ್ತೇವೆ! ನಾವು ಅವರಿಗೆ ಅವಮಾನ ಮಾಡಿಲ್ಲ ಬದಲಾಗಿ ಮೋದಿಯವರು ಕರ್ನಾಟಕಕ್ಕೆ ಅವಮಾನ ಮಾಡಿದ್ದಾರೆ' ಎಂದರು.
ನಾವು ಈ ಪ್ರದೇಶದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯವನ್ನು ತಂದಿದ್ದೇವೆ. ಕಟ್ಟಡಕ್ಕೆ 400ರಿಂದ 500 ಕೋಟಿ ರೂ. ಅನುದಾನ ತಂದಿದ್ದೇವೆ. ಆದರೆ ಇಲ್ಲಿ ಶಿಕ್ಷಕರು ಪೂರ್ಣ ಪ್ರಮಾಣದಲ್ಲಿ ಇಲ್ಲ. ಹುದ್ದೆಗಳು ಖಾಲಿ ಇದ್ದು, ಇಲಾಖೆಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಆರೋಪಿಸಿದರು.
ಇಲ್ಲಿ ಮೆಗಾ ಇಎಸ್‌ಐ ಆಸ್ಪತ್ರೆ ನಿರ್ಮಿಸಿದ್ದೇವೆ. ಬಳಿಕ ಇಲ್ಲಿ ಏಮ್ಸ್ ಆರಂಭಿಸುವಂತೆ ಬಿಜೆಪಿ ಸರ್ಕಾರಕ್ಕೆ ಮನವಿ ಮಾಡಿದ್ದೆ. ಮೂಲಸೌಕರ್ಯಕ್ಕೆ ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಆಸ್ಪತ್ರೆಯ ಮುಖ್ಯ ಸಭಾಂಗಣದಲ್ಲಿ, 5,000 ಜನರು ಕುಳಿತುಕೊಳ್ಳಬಹುದು, ಅದು ಅಂತಹ ಭವ್ಯವಾದ ಕಟ್ಟಡವಾಗಿದೆ. ಆದರೆ ಬಿಜೆಪಿ ಸರಕಾರಕ್ಕೆ ಇದ್ಯಾವುದರ ಬಗ್ಗೆಯೂ ಕಾಳಜಿ ಇಲ್ಲ. ಆಸ್ಪತ್ರೆ ನಿರ್ವಹಣೆ ಮಾಡುತ್ತಿಲ್ಲ. ಈಗ ಅದು ನಿಧಾನವಾಗಿ ಗೋಶಾಲೆಯಾಗಿ ಬದಲಾಗತೊಡಗಿದೆ ಎಂದು ಖರ್ಗೆ ಆರೋಪಿಸಿದರು.
ಸೊಲ್ಲಾಪುರದಿಂದ ಬೆಂಗಳೂರು, ಬೀದರ್‌ನಿಂದ ಹಿರಿಯೂರು ಮತ್ತು ಬೀದರ್‌ನಿಂದ ಮೈಸೂರಿಗೆ ಹೆದ್ದಾರಿಗೆ ಅನುಮೋದನೆ ಪಡೆದಿದ್ದೆವು. ಆದರೆ ಈಗಿನ ಸರಕಾರ ಈ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಿದೆ. ಬದಲಿಗೆ ಈಗಾಗಲೇ ಅಸ್ತಿತ್ವದಲ್ಲಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಕಾರಿಡಾರ್ ಉದ್ಘಾಟನೆಗೆ ಕೋಟಿಗಟ್ಟಲೆ ಹಣ ಖರ್ಚು ಮಾಡಿದ್ದಾರೆ ಎಂದು ಖರ್ಗೆ ಆರೋಪಿಸಿದರು.












Click it and Unblock the Notifications