ಮೋದಿಗೆ ಪತ್ರ ಬರೆದ ಮಲ್ಲಿಕಾರ್ಜುನ್ ಖರ್ಗೆ: ಪತ್ರದಲ್ಲೇನಿದೆ?
ಬೆಂಗಳೂರು, ಡಿಸೆಂಬರ್ 11: ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳ ಸಮಗ್ರ ಬಹುಗ್ರಾಮ ಕುಡಿಯುವ ನೀರು ಒದಗಿಸುವ ಯೋಜನೆಗಾಗಿ ಅನುಮೋದನೆ ಹಾಗೂ ಜಲ್ ಜೀವನ್ ಮೀಷನ್ ಯೋಜನೆಯಡಿಯಲ್ಲಿ 50% ಕೇಂದ್ರ ಸರ್ಕಾರದ ಹೊಂದಾಣಿಕೆ ಅನುದಾನ ಬಿಡುಗಡೆ ಮಾಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ.
ಈ ಕುರಿತು ಡಿಸೆಂಬರ್ 9 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಮಲ್ಲಿಕಾರ್ಜುನ್ ಖರ್ಗೆ ಅವರು, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳ ಎಲ್ಲಾ ಗ್ರಾಮೀಣ ಜನವಸತಿಗಳಿಗೆ DBOT ( Design, Build, Operation and Transfer - ಡಿಬಿಒಟಿ- ವಿನ್ಯಾಸ, ನಿರ್ಮಾಣ, ಕಾರ್ಯ ಹಾಗೂ ವರ್ಗಾವಣೆ) ಆಧಾರದ ಮೇಲೆ 7,200.00 ಕೋಟಿ ರೂ. ಅಂದಾಜು ಯೋಜನಾ ವೆಚ್ಚದಲ್ಲಿ ಸಮಗ್ರ ಬಹು-ಗ್ರಾಮ ನೀರು ಸರಬರಾಜು ಯೋಜನೆಯ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಕಲಬುರಗಿ ಜಿಲ್ಲೆಯ 11 ತಾಲೂಕುಗಳ 859 ಗ್ರಾಮಗಳು, 1,259 ಜನವಸತಿಗಳಲ್ಲಿ ವಾಸಿಸುತ್ತಿರುವ 25,74,434 ಜನರಿಗೆ ಹಾಗೂ ಬೀದರ್ ಜಿಲ್ಲೆಯ 8 ತಾಲೂಕುಗಳ 597 ಗ್ರಾಮಗಳು 17,61,931 ಜನರಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ. ಕಲಬುರಗಿ ಮತ್ತು ಬೀದರ್ ಜಿಲ್ಲೆಗಳು ಕಲ್ಯಾಣ ಕರ್ನಾಟಕ ಪ್ರದೇಶದ ಕರ್ನಾಟಕದ ಉತ್ತರ ಭಾಗದಲ್ಲಿದ್ದು, ಪ್ರಧಾನವಾಗಿ ಎಸ್‌ಸಿ ಜನಸಂಖ್ಯೆ -28.60% ಮತ್ತು ಎಸ್‌ಟಿ ಜನಸಂಖ್ಯೆ -7.90% ಹೊಂದಿವೆ. ಈ ಜಿಲ್ಲೆಗಳು ಪ್ರಸ್ತುತ ತೀವ್ರ ನೀರಿನ ಗುಣಮಟ್ಟದ ಸಮಸ್ಯೆಗಳನ್ನು ಮತ್ತು ಹೆಚ್ಚು ಏರಿಳಿತದ ಅಂತರ್ಜಲ ಮಟ್ಟವನ್ನು ಎದುರಿಸುತ್ತಿವೆ. ಈ ಸವಾಲುಗಳನ್ನು ಎದುರಿಸಲು, ವಿಜಯಪುರ ಜಿಲ್ಲೆಯ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ನಾರಾಯಣಪುರ ಜಲಾಶಯದಿಂದ ದೀರ್ಘಕಾಲಿಕ ಮತ್ತು ಸುಸ್ಥಿರ ನೀರಿನ ಮೂಲವನ್ನು ಗುರುತಿಸಲಾಗಿದೆ.
ಅದರಂತೆ, ಜಲ ಜೀವನ್ ಮಿಷನ್ (ಜೆಜೆಎಂ) ಅಡಿಯಲ್ಲಿ ಭಾರತ ಸರ್ಕಾರದಿಂದ 50% ಬಂಡವಾಳ ವೆಚ್ಚದ ಬೆಂಬಲದ ನಿರೀಕ್ಷೆಯೊಂದಿಗೆ ರಾಜ್ಯ ಸರ್ಕಾರವು PSR ( Project Status Report - ಪಿ ಎಸ್ ಆರ್ - ಯೋಜನಾ ಸ್ಥಿತಿ ವರದಿ) ತಯಾರಿಕೆ ಪ್ರಾರಂಭಿಸಿದೆ. ಐದು ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ (ಒ & ಎಂ) ಸೇರಿದಂತೆ ಉಳಿದ 50% ರಾಜ್ಯ ಹೊಂದಾಣಿಕೆಯ ಪಾಲನ್ನು ಪೂರೈಸಲು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಹಣವನ್ನು ಬಳಸಿಕೊಳ್ಳಲು ರಾಜ್ಯ ಸಚಿವ ಸಂಪುಟವು ಸ್ಪಷ್ಟವಾಗಿ ಅನುಮೋದನೆ ನೀಡಿದೆ.
ಈ ಎರಡು ಜಿಲ್ಲೆಗಳ ಎಲ್ಲಾ ಗ್ರಾಮೀಣ ವಾಸಸ್ಥಳಗಳಿಗೆ ಸುಸ್ಥಿರ ಕುಡಿಯುವ ನೀರಿನ ಪರಿಹಾರವನ್ನು ಒದಗಿಸುವ ಈ ಯೋಜನೆಯು ಬಹಳ ದೀರ್ಘ ಕಾಲದವರೆಗೆ ಅನುಕೂಲವಾಗಲಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರದಿಂದ 50% ಹೊಂದಾಣಿಕೆಯ ಕೊಡುಗೆಯೊಂದಿಗೆ ಜಲ ಜೀವನ್ ಮಿಷನ್ ಅಡಿಯಲ್ಲಿ ಪ್ರಸ್ತಾವಿತ ಯೋಜನೆಗೆ ಆರಂಭಿಕ ಅನುಮೋದನೆಗಾಗಿ ಮಧ್ಯೆ ಪ್ರವೇಶಿಸುವಂತೆ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರಿಗೆ ಪತ್ರದಲ್ಲಿ ಕೋರಿದ್ದಾರೆ.












Click it and Unblock the Notifications