ಚುನಾವಣಾ ಅಭ್ಯರ್ಥಿಗಳ ಆಯ್ಕೆ ಜವಾಬ್ದಾರಿ ಇವರಿಗೆ: ಹೊಸ ಟಾರ್ಗೆಟ್ ಕೊಟ್ಟ ಖರ್ಗೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ಸಂಘಟನೆ ವಿಚಾರವಾಗಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ. ಗುಜರಾತಿನ ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲೂ ಇದರ ಬಗ್ಗೆ ಅವರು ಮಾತನಾಡಿದ್ದಾರೆ. ಯಾರು ಪಕ್ಷದ ಕೆಲಸದಲ್ಲಿ ಸಹಾಯಕ್ಕೆ ಬರುವುದಿಲ್ಲವೋ ಅವರು ರೆಸ್ಟ್ ಮಾಡಲಿ, ಪಕ್ಷದ ಜವಾಬ್ದಾರಿಯನ್ನು ನಿರ್ವಹಿಸದವರು ನಿವೃತ್ತಿ ಪಡೆಯಲಿ ಎಂದು ನೇರವಾಗಿ ಎಚ್ಚರಿಕೆ ನೀಡಿದ್ದಾರೆ.
ಇನ್ನು ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಜಿಲ್ಲಾಧ್ಯಕ್ಷರ ಪಾತ್ರ ಬಹಳ ಮಹತ್ವದ್ದು, ಹಾಗಾಗಿ ಎಐಸಿಸಿ ಮಾರ್ಗಸೂಚಿಯಂತೆ ಜಿಲ್ಲಾಧ್ಯಕ್ಷರ ನೇಮಕವನ್ನು ಕಟ್ಟುನಿಟ್ಟಾಗಿ ಮತ್ತು ನಿಷ್ಪಕ್ಷಪಾತವಾಗಿ ಮಾಡಬೇಕು. ಅಲ್ಲದೆ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡವರು ಒಂದು ವರ್ಷದೊಳಗೆ ಜನರನ್ನು ಸೇರಿಸಿಕೊಂಡು ಬೂತ್ ಸಮಿತಿ, ಮಂಡಲ ಸಮಿತಿ, ಬ್ಲಾಕ್ ಸಮಿತಿ ಮತ್ತು ಜಿಲ್ಲಾ ಸಮಿತಿಗಳನ್ನು ರಚಿಸಲೇಬೇಕು ಎಂದು ಜಿಲ್ಲಾ ಮುಖಂಡರಿಗೆ ಟಾರ್ಗೆಟ್ ನೀಡಿದ್ದಾರೆ.

ದೇಶದ ಎಲ್ಲ ಜಿಲ್ಲಾಧ್ಯಕ್ಷರೊಂದಿಗೆ ಮೂರು ಸುತ್ತಿನ ಸಭೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ನಾನು ಮತ್ತು ರಾಹುಲ್ ಗಾಂಧಿ ಅವರು ಜಿಲ್ಲಾಧ್ಯಕ್ಷರೊಂದಿಗೆ ಚರ್ಚಿಸಿ ಅಭಿಪ್ರಾಯಗಳನ್ನೂ ಪಡೆದುಕೊಂಡಿದ್ದೇವೆ. ಮುಂದೆ ನಡೆಯುವ ಚುನಾವಣೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಜಿಲ್ಲಾಧ್ಯಕ್ಷರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದೂ ಅವರು ಹೊಸ ಜವಾಬ್ದಾರಿಯ ಸುಳಿವು ಕೊಟ್ಟಿದ್ದಾರೆ.
ನಾವು ಮತ್ತೆ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಈ ಹೋರಾಟದಲ್ಲಿ ನಮ್ಮ ಶತ್ರುಗಳು ಮತ್ತೆ ಅನ್ಯಾಯ, ಅಸಮಾನತೆ, ತಾರತಮ್ಯ, ಬಡತನ ಮತ್ತು ಕೋಮುವಾದವನ್ನು ಉತ್ತೇಜಿಸುತ್ತಲೇ ಇದ್ದಾರೆ. ಈ ಕೆಲಸವನ್ನು ಮೊದಲು ವಿದೇಶಿಯರು ನಮ್ಮ ಮೇಲೆ ಮಾಡುತ್ತಿದ್ದರು, ಈಗ ನಮ್ಮದೇ ಸರ್ಕಾರ ಮಾಡುತ್ತಿದೆ. ಇಷ್ಟೇ ವ್ಯತ್ಯಾಸ. ಈ ಯುದ್ಧದಲ್ಲೂ ನಾವು ಜಯ ಸಾಧಿಸಲಿದ್ದೇವೆ ಎಂದು ಮಲ್ಲಿಕಾರ್ಜುನ್ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿರೋಧಿಗಳ ದಮನ ಹಾಗೂ ರೈತರ ವಿಷಯಗಳ ನಿರ್ವಹಣೆ ನೋಡಿದಾಗ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಬ್ರಿಟಿಷ್ ವಸಾಹತುಶಾಹಿ ಆಡಳಿತದಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎನ್ನುವುದು ಸಾಬೀತಾಗುತ್ತಿದೆ. ಬಿಜೆಪಿ ಆಡಳಿತದಲ್ಲಿ ಪ್ರಾದೇಶಿಕ, ಭಾಷೆ, ಸಂಸ್ಕೃತಿಗಳ ವಿಭಜನೆಯಿಂದ ರಾಷ್ಟ್ರೀಯ ಏಕತೆಗೆ ಧಕ್ಕೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಖರ್ಗೆಗೆ ಪ್ರತ್ಯೇಕ ಕುರ್ಚಿ: ಬಿಜೆಪಿ ಟೀಕೆ
ಅಹಮದಾಬಾದ್‌ನ ಸಬರಮತಿ ಆಶ್ರಮದಲ್ಲಿ ನಡೆದ ಪ್ರಾರ್ಥನಾ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತ್ಯೇಕ ಕುರ್ಚಿಯ ಮೇಲೆ ಕುಳಿತಿರುವ ವಿಡಿಯೋ ಉಲ್ಲೇಖಿಸಿ ಬಿಜೆಪಿಯು ಅವರನ್ನು ಮಧ್ಯದಲ್ಲಿ ಏಕೆ ಕೂರಿಸಲಿಲ್ಲ ಎಂದು ಕಾಂಗ್ರೆಸ್ ಅನ್ನು ಪ್ರಶ್ನಿಸಿದೆ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಸೋಫಾದ ಮಧ್ಯದಲ್ಲಿ ಕುಳಿತಿರುವ ವೀಡಿಯೊದಲ್ಲಿ ಕಾಂಗ್ರೆಸ್‌ನ ಆಸನ ವ್ಯವಸ್ಥೆಯನ್ನು ಟೀಕಿಸಿದೆ. ಬಿಜೆಪಿಯ ರಾಷ್ಟ್ರೀಯ ಐಟಿ ವಿಭಾಗದ ಉಸ್ತುವಾರಿ ಅಮಿತ್ ಮಾಳವಿಯಾ, ಪಕ್ಷದ ಅಧ್ಯಕ್ಷರು ಮತ್ತು ಖರ್ಗೆಯಂತಹ ಹಿರಿಯ ವ್ಯಕ್ತಿಗೆ ಕೇಂದ್ರ ಸ್ಥಾನವನ್ನು ಏಕೆ ನೀಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಖರ್ಗೆ ಅವರಿಗೆ ಪ್ರತ್ಯೇಕ ಕುರ್ಚಿ ಇಡಬೇಕಾದರೆ, ಅದನ್ನು ಮಧ್ಯದಲ್ಲಿ ಏಕೆ ಇಡಲಿಲ್ಲ? ಅವರು ಪಕ್ಷದ ಅಧ್ಯಕ್ಷರು ಮತ್ತು ಹಿರಿಯ ವ್ಯಕ್ತಿ ಕೂಡ ಎಂದು ಮಾಳವೀಯ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ 84 ನೇ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಲು ಅಹಮದಾಬಾದ್‌ಗೆ ಬಂದಿದ್ದಾರೆ. ಏಪ್ರಿಲ್ 8 ಮತ್ತು 9ರಂದು ಪ್ರಾರಂಭವಾದ ಎರಡು ದಿನಗಳ ಕಾರ್ಯಕ್ರಮವು ಆರು ದಶಕಗಳ ನಂತರ ಗುಜರಾತ್‌ನಲ್ಲಿ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿ ರಾಜ್ಯದ ಕಾಂಗ್ರೆಸ್ ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.












Click it and Unblock the Notifications