120 ಸೀಟು ಸಾಲಲ್ಲ, ಇಲ್ಲಿ ಕಳ್ಳರ ಕಾಟವಿದೆ ಎಂದ ಮಲ್ಲಿಕಾರ್ಜನ ಖರ್ಗೆ: ಆಪರೇಷನ್ ಕಮಲದ ಭೀತಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ?
ಚಿಕ್ಕಮಗಳೂರು, ಏಪ್ರಿಲ್ 25: ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದ ಮತದಾರರಲ್ಲಿ ವಿನಂತಿಸಿದರು. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 120 ಸ್ಥಾನಗಳನ್ನು ಗೆದ್ದರೂ ಸಾಕಾಗುವುದಿಲ್ಲ ಎಂದು ಹೇಳಿದ್ದಾರೆ.
'ಕರ್ನಾಟಕದಲ್ಲಿ ಸರ್ಕಾರ ರಚಿಸಲು ನಮಗೆ 113 ಸ್ಥಾನಗಳ ಅಗತ್ಯವಿದ್ದರೂ, 120 ಸ್ಥಾನಗಳು ಸಾಕಾಗುವುದಿಲ್ಲ. ಏಕೆಂದರೆ ಅವರು ( ಬಿಜೆಪಿ ) ನಮ್ಮ ಶಾಸಕರನ್ನು ಖರೀದಿ ಮಾಡಬಹುದು. ನಮ್ಮ ಶಾಸಕರನ್ನು ಕದ್ದುಕೊಂಡು ಹೋಗಿ ಈಗ ರಾಜ್ಯದಲ್ಲಿ ಸರ್ಕಾರ ರಚಿಸಿದ್ದಾರೆ. ಅದೇ ರೀತಿ ಗೋವಾದಲ್ಲಿ ಶಾಸಕರನ್ನು ಕಳ್ಳತನ ಮಾಡಲಾಗಿದೆ. ಕಳ್ಳರ ಕಾಟ ಇರುವುದರಿಂದ ಎಚ್ಚರಿಕೆ ವಹಿಸಬೇಕು' ಎಂದು ಹೇಳಿದ್ದಾರೆ.

ನಾನು ಯಾರ ಬಗ್ಗೆಯೂ ಮಾತನಾಡುತ್ತಿಲ್ಲ. ನಾವು ಬಹಳ ಜಾಗರೂಕರಾಗಿರಬೇಕು. ಹೀಗಾಗಿ 150 ಸ್ಥಾನ ಗೆಲ್ಲುವ ಗುರಿ ಹೊಂದಿದ್ದೇವೆ. ಸ್ಥಿರ ಸರ್ಕಾರವು ದೇಶ ಮತ್ತು ನಾಗರಿಕರಿಗೆ ಒಳ್ಳೆಯದು ಎಂದು ಅವರು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ತಕ್ಷಣ ಅದರ ಎಲ್ಲ 'ಖಾತರಿ'ಗಳಿಗೆ ಮೊದಲ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗುವುದು ಎಂದು ಖರ್ಗೆ ಹೇಳಿದರು.
ನಾವು 'ಗೃಹ ಜ್ಯೋತಿ'ಯನ್ನು ಜಾರಿಗೆ ತರುತ್ತೇವೆ. ಅದರ ಅಡಿಯಲ್ಲಿ ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು ಎಂದು ಎಐಸಿಸಿ ಅಧ್ಯಕ್ಷ ತಿಳಿಸಿದರು.
'ಗೃಹ ಲಕ್ಷ್ಮಿ' ಅಡಿಯಲ್ಲಿ ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ತಿಂಗಳಿಗೆ 2,000 ರೂ ನೀಡಲಾಗುವುದು. 'ಯುವ ನಿಧಿ' ಅಡಿಯಲ್ಲಿ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3,000 ರೂ ಕೊಡಲಾಗುವುದು. ನಿರುದ್ಯೋಗಿ ಡಿಪ್ಲೋಮಾದಾರರಿಗೆ ಮಾಸಿಕ 1,500 ರೂ ನೀಡಲಾಗುವುದು. ಬಿಪಿಎಲ್ ಕುಟುಂಬಗಳಿಗೆ ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವ 'ಅನ್ನ ಭಾಗ್ಯ' ವನ್ನು ಯೋಜಿಸಲಾಗುವುದು ಎಂದು ಅವರು ಹೇಳಿದರು.
ಅನೇಕ ವರ್ಷಗಳಿಂದ ಕರ್ನಾಟಕವು ಆತ್ಮಸಾಕ್ಷಿಯ ಮತದಾನಕ್ಕೆ ಹೆಸರುವಾಸಿಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.
'ಆದರೆ ಈಗ ಬಿಜೆಪಿಯು ನಮ್ಮ ರಾಜ್ಯವನ್ನು ಜನಪ್ರಿಯವಲ್ಲದ ಮತ್ತು 40 ಪರ್ಸೆಂಟ್ ಕಮಿಷನ್ ಸರ್ಕಾರಕ್ಕಾಗಿ ಕುಖ್ಯಾತಿ ಮಾಡಿದೆ. ಇದನ್ನು ಗುತ್ತಿಗೆದಾರರ ಸಂಘ ಪ್ರಧಾನಿಯವರ ಗಮನಕ್ಕೆ ತಂದಿದೆ. ಈಗಿನ ರಾಜ್ಯ ಸರ್ಕಾರ ಹೇಗೆ ಲೂಟಿ ಮಾಡುತ್ತಿದೆ ಎಂಬ ವಿವರವನ್ನು ಖರ್ಗೆ ನೀಡಿದರು. ಈ ಶೋಷಣೆಯಿಂದ ಜನರು ಬೇಸತ್ತಿದ್ದಾರೆ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದರು.
'ಪ್ರತಿ ಕಾಮಗಾರಿಯಲ್ಲೂ ಗುತ್ತಿಗೆದಾರರಿಂದ ಶೇ.40ರಷ್ಟು ಕಮಿಷನ್ ಪಡೆದರೆ ರಸ್ತೆ, ಕಟ್ಟಡ, ಶಾಲೆ, ಆರೋಗ್ಯ ಕ್ಷೇತ್ರ ಅಥವಾ ಇತರೆ ಯಾವುದೇ ಅಭಿವೃದ್ಧಿ ಕಾಮಗಾರಿಗಳಲ್ಲಿ ಗುಣಮಟ್ಟವನ್ನು ನಿರೀಕ್ಷಿಸುವುದು ಹೇಗೆ?' ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.
ಈ ವಿಷಯವನ್ನು ಕಾಂಗ್ರೆಸ್ ಎಲ್ಲೆಡೆ ಪ್ರಸ್ತಾಪಿಸುತ್ತಿದೆ ಎಂದು ಖರ್ಗೆ ಹೇಳಿದರು. ಆದರೆ ಕೇಂದ್ರವು ಒಂದು ಮಾತನ್ನೂ ಹೇಳುತ್ತಿಲ್ಲ. ಇಡಿ ಮತ್ತು ಸಿಬಿಐ ಪ್ರತಿಪಕ್ಷಗಳ ವಿರುದ್ಧ ಸಣ್ಣ ವಿಷಯಗಳಿಗೂ ಹಾಜರಾಗುತ್ತವೆ. ಅವರು ನಮ್ಮ ಶಾಸಕರು, ಸಂಸದರು ಮತ್ತು ನಾಯಕರನ್ನು ಪಕ್ಷಾಂತರ ಮಾಡಲು ಅವಿರತ ಪ್ರಯತ್ನ ಮಾಡುತ್ತಾರೆ. ಈ ನಾಯಕರು ಬೇರೆ ಪಕ್ಷದಲ್ಲಿ ಇರುವವರೆಗೂ ಭ್ರಷ್ಟರು ಎನ್ನುತ್ತಾರೆ. ಆದರೆ ಪಕ್ಷಾಂತರ ಮಾಡಿದ ಕ್ಷಣವೇ ಅವರಿಗೆ ಕ್ಲೀನ್ ಚಿಟ್ ನೀಡಲಾಗುತ್ತದೆ ಎಂದು ಆರೋಪಿಸಿದರು.
ಅವರ ಬಳಿ ಬೃಹತ್ ವಾಷಿಂಗ್ ಮೆಷಿನ್ ಇದೆ, ಅಲ್ಲಿ ಅವರು ಭ್ರಷ್ಟ ರಾಜಕಾರಣಿಗಳನ್ನು ಹಾಕುತ್ತಾರೆ ಮತ್ತು ಅವರನ್ನು ಕ್ಲೀನ್ ಮಾಡುತ್ತಾರೆ. ಅದಕ್ಕಾಗಿಯೇ ಜನರು ಈ ಸರ್ಕಾರವನ್ನು ಬದಲಾಯಿಸಲು ಬಯಸುತ್ತಾರೆ ಎಂದು ಅವರು ಹೇಳಿದರು.












Click it and Unblock the Notifications