Chigari Bus: ಗ್ಯಾರೇಜ್ ಸೇರುತ್ತಿವೆ ಚಿಗರಿ ಬಸ್, ಅವನತಿಯತ್ತ ಬಿಎಆರ್‌ಟಿಎಸ್! ಕೆಟ್ಟ ಎಸಿ, ಪ್ರಯಾಣಿಕರಿಗೆ ನಿತ್ಯವೂ ಕಿರಿಕಿರಿ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸಾಕಷ್ಟು ಸೌಕರ್ಯಗಳೊಂದಿಗೆ ಬಿಆರ್‌ಟಿಎಸ್ ಯೋಜನೆಯಡಿ ಚಿಗರಿ ಬಸ್‌ಗಳು (Chigari Bus) ತ್ವರಿತ ಸೇವೆ ನೀಡುತ್ತಿದ್ದವು. ವರ್ಷಗಳಿಂದಲೂ ಈ ಬಸ್‌ಗಳಿಗೆ ಬಿಡಿ ಭಾಗಗಳು ಸಿಗದೇ ಮೂಲೆ ಸೇರುತ್ತಿವೆ. ಒಟ್ಟು ಬಸ್‌ಗಳಲ್ಲಿ ಅರ್ಧಕ್ಕಿಂತ ಅಧಿಕ ಬಸ್‌ಗಳು ದುರಸ್ತಿ ಎದುರು ನೋಡುತ್ತಿವೆ. ಇದೆಲ್ಲ ಗಮನಿಸಿದರೆ ಚಿಗರಿ ಬಸ್ ಯೋಜನೆಯು ಅವನತಿಯ ಹಾದಿ ಹಿಡಿಯುತ್ತಿದೆ ಎಂದನಿಸುತ್ತದೆ.
ಸಂಚಾರಕ್ಕೆ ಪ್ರತ್ಯೇಕ ಮಾರ್ಗ, ಸವ್ಯವಸ್ಥಿತ ಮೂಲಸೌಕರ್ಯ ಒದಗಿಸಿದ ಬಳಿಕವು 'ಚಿಗರಿ ಬಸ್‌ಗಳು' ತ್ವರಿತ ಸೇವೆಯ ಜೊತೆಗೆ ನಿತ್ಯ ಅಪಘಾತ, ಜನರಿಗೆ ಕಿರಿಕಿರಿ ಮಾಡಿ ಸುದ್ದಿಯಾಗಿದ್ದೆ ಹೆಚ್ಚು. ಇದೀಗ ಈ ಬಸ್‌ಗಳು ಕೆಟ್ಟು ಗ್ಯಾರೇಜ್ ಸೇರಿಕೊಳ್ಳುತ್ತಿವೆ. ಆದರೆ ಸಿದ್ಧವಾಗಿ ಮರಳಿ ರಸ್ತೆಗೆ ಇಳಿಯುವ ಬಸ್‌ಗಳ ಸಂಖ್ಯೆ ಕಡಿಮೆಯಾಗಿದೆ. ಇನ್ನೂ ಬಸ್‌ಗಳ ಕಿಟಕಿ, ಗ್ಲಾಜು ಒಡೆದಿವೆ. ಅಗತ್ಯವಾದ ಬಿಡಿಭಾಗಗಳನ್ನು ಆರ್ಡರ್ ಮಾಡಿ ವರ್ಷಗಳು ಕಳೆದರು ಬಂದಿಲ್ಲ. ಇದರಿಂದ ಚಿಗರಿ ಬಸ್ ಅವಲಂಬಿಸಿದ ಸಾವಿರಾರು ಪ್ರಯಾಣಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ ಎಂದು ವರುಣ್ ಜಿ. ರಾವ್ ಅವರು (@varungrao) ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಬಹುತೇಕ ಎಲ್ಲ ಬಸ್‌ಗಳಲ್ಲಿ ಎಸಿ ಸ್ಥಗಿತ
ವರುಣ್ ಸೇರಿದಂತೆ ಈ ಭಾಗದ ಪ್ರಯಾಣಿಕರು ಹೇಳುವ ಪ್ರಕಾರ, ಬಿಡಿ ಭಾಗಗಳ ಸಮಸ್ಯೆಯಿಂದಾಗಿ ನಿತ್ಯ 2-3 ಬಸ್‌ಗಳು ಕೆಟ್ಟು ನಿಲ್ಲುತ್ತಿವೆ. ಇದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು, ಜನರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಮನವಿ ಮಾಡಿದರೆ ಬಿಡಿ ಭಾಗಗಳ ಪೂರೈಕೆ ಆಗಿಲ್ಲ. ಶೇಕಡಾ 90ರಷ್ಟು ಬಸ್‌ಗಳಲ್ಲಿ ಎಸಿಗಳು ಸ್ಥಗಿತಗೊಂಡಿವೆ. ಒಳಗೆ ಎಸಿ ಇಲ್ಲ, ಹೊರಗಿನಿಂದ ಗಾಳಿ ಬರಲು ಕಿಟಿಕಿಗಳ ಇಲ್ಲ. ಇದರಿಂದ ಪ್ರಯಾಣಿಕರು ಬೇಸಿಗೆಯಲ್ಲಿ ಉಸಿರಾಟಕ್ಕೂ ಪರದಾಡಲಿದ್ದಾರೆ.
ನಿತ್ಯ ಕೆಟ್ಟು ನಿಲ್ಲುವ ಬಸ್‌ಗಳು
ಅವಳಿ ನಗರದ ಎರಡು ಡಿಪೋದಲ್ಲಿ ಒಟ್ಟು 100 ಬಸ್‌ಗಳ ಪೈಕಿ 80 ಬಿಆರ್‌ಟಿಎಸ್ ಬಸ್‌ಗಳು ಮಾತ್ರ ನಿತ್ಯದ ಶೆಡ್ಯೂಲ್ ಆಧಾರದಲ್ಲಿ ಕಾರ್ಯಾಚರಣೆ ಮಾಡುತ್ತಿವೆ. ಅದರಲ್ಲಿ ದಿನಕ್ಕೆ ಕನಿಷ್ಠ 2-3 ಬಸ್‌ಗಳು ರಸ್ತೆಯ ಮಧ್ಯದಲ್ಲಿಯೇ ಕೆಟ್ಟು ನಿಲ್ಲುತ್ತಿವೆ. ಮತ್ತೆ ಕೆಲವು ದುರಸ್ತಿಗೆ ಹೋಗಿ ತಿಂಗಳು ಕಳೆದರೂ ಮರಳುವುದಿಲ್ಲ. ಇದು ಪ್ರಯಾಣಿಕರು ಹಾಗೂ ಚಾಲಕರ ಅಸಮಾಧಾನಕ್ಕೆ ಕಾರಣವಾಗುತ್ತಿದೆ ಎಂದು ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಶೇಕಡಾ 60ರಷ್ಟು ಬಸ್ ರಿಪೇರಿಗೆ ಬಂದಿವೆ
ಬಿಆರ್‌ಟಿಎಸ್ ಡಿಪೋದಲ್ಲಿ 60ಕ್ಕೂ ಹೆಚ್ಚು ಬಸ್‌ಗಳಲ್ಲಿ ವಿವಿಧ ಗಂಭೀರ ಹಾಗೂ ಸಾಮಾನ್ಯ ತಾಂತ್ರಿಕ ಸಮಸ್ಯೆ ಕಂಡು ಬಂದಿವೆ, ರಿಪೇರಿ ಮಾಡಲಾಗುತ್ತಿದೆ. ಅದರಲ್ಲಿ 10ಕ್ಕೂ ಹೆಚ್ಚು ಬಸ್‌ಗಳು ದುರಸ್ತಿ ಆಗದೇ ಗ್ಯಾರೇಜ್‌ನಲ್ಲಿ ನಿಂತಲ್ಲೇ ನಿಂತಿವೆ. ಬಸ್‌ನ ಬಿಡಿ ಭಾಗಗಳು ಸಿಗದ ಕಾರಣ ಟಾಯರ್, ಎಂಜಿನ್ ಆಯಿಲ್, ಎಸಿ ಗ್ಯಾಸ್ ಕಿಟ್, ಕ್ಲಚ್‌ಪ್ಲೇಟ್, ಎಲೆಕ್ಟ್ರಿಕಲ್ ವೈರಿಂಗ್, ರೇಡಿಯೇಟರ್ ಸೇರಿ ಪ್ರಮುಖ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲು ಆಗುತ್ತಿಲ್ಲ. ಬೇರೆ ಬಸ್‌ಗಳ ಒಂದಷ್ಟು ಬಿಡಿ ಭಾಗ ಜೋಡಿಸಿ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡರು. ಸದ್ಯ ಈ ಬಸ್‌ಗಳನ್ನು ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯೇ ನಿರ್ವಹಿಸುತ್ತಿದೆ. ಸಂಸ್ಥೆಯು ಬಿಡಿ ಭಾಗಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದೆ.
ಚಿಗರಿ ಬಸ್ಸಿನ ದುರಸ್ತಿ ಮಾಡಿ, ನಿರ್ವಹಣೆಗೆ ಬೇಕಾದ ಅಗತ್ಯ ಬಿಡಿಭಾಗಗಳ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಹುಬ್ಬಳ್ಳಿ ಧಾರವಾಡದ ಜೀವನಾಡಿಯಾದ ಚಿಗರಿ ಬಸ್ಸಿನ ಸೇವೆಯನ್ನು ಸರಿಪಡಿಸುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ.












Click it and Unblock the Notifications