'ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ 2024 ಪ್ರಕಟ: ಹಾವೇರಿಯ 'ಗುದ್ಲೆಪ್ಪ ಹಳ್ಳಿಕೇರಿ ಗುರುಕುಲ' & ಪ್ರೊ.ಜಿಬಿ ಶಿವರಾಜು ಆಯ್ಕೆ
ಬೆಂಗಳೂರು, ಸೆಪ್ಟಂಬರ್ 26: ದಶಕಗಳಿಂದಲೂ ಗುರುಕುಲ ಪಾಠ ಶಾಲಾ ಪದ್ಧತಿ ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದ 'ಶ್ರೀ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆ'ಗೆ ಹಾಗೂ ಹಿರಿಯ ಗಾಂಧಿವಾದಿ ಪ್ರೊ.ಜಿ.ಬಿ. ಶಿವರಾಜು ಅವರಿಗೆ ಪ್ರಸಕ್ತ 2024ನೇ ಸಾಲಿನ 'ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ'ಗೆ ಘೋಷಣೆ ಆಗಿದೆ.
ಪ್ರತಿ ವರ್ಷ ಕರ್ನಾಟಕ ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಈ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ. ಪ್ರಸಕ್ತ ಸಾಲಿಗೆ ಎರಡು ಪ್ರಶಸ್ತಿಗಳು ಘೋಷಣೆ ಆಗಿವೆ ಎಂದು ವಾತಾ ಇಲಾಖೆಯ ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್ ಅವರು ಮಾಹಿತಿ ನೀಡಿದ್ದಾರೆ.

ರಾಜ್ಯ ಸರ್ಕಾರವು 2014 ರಲ್ಲಿ 'ಕರ್ನಾಟಕ ಗಾಂಧೀ ಸೇವಾ ಪ್ರಶಸ್ತಿ' ಘೋಷಿಸಿತು. ಅಲ್ಲಿಂದ ಪ್ರತಿ ವರ್ಷ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರಲ್ಲಿ ಪ್ರಮುಖರಾದ ಮಹಾತ್ಮ ಗಾಂಧೀಜಿ ಅವರ ಸತ್ಯ, ಅಹಿಂಸೆ, ಸ್ವಾವಲಂಬನೆ, ಆರ್ಥಿಕ ಚಿಂತನೆಗಳು, ಖಾದಿ ಚಟುವಟಿಕೆ, ಜೀವನ ಶಿಕ್ಷಣ ಮತ್ತಿತರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಸಾಮಾಜದಲ್ಲಿ ಅತ್ಯುನ್ನದ ಸಾಧನೆ ಮಾಡಿದ ಸಾಧಕರು ಹಾಗೂ ಸಂಘ ಸಂಸ್ಥೆಗಳ ಉತ್ತಮ ಕಾರ್ಯ ಗುರುತಿಸಿ ನೀಡಲಾಗುತ್ತದೆ.
ಈ ಪ್ರಶಸ್ತಿಯು ಪ್ರಶಸ್ತಿ ಫಲಕ ಹಾಗೂ 5 ಲಕ್ಷ ರೂಪಾಯಿ ನಗದು ಒಳಗೊಂಡಿದೆ ಎಂದರು.
8 ಸಾಧಕರು 2 ಸಂಸ್ಥೆಗಳಿಗೆ ಪ್ರಶಸ್ತಿ ಪ್ರದಾನ
ಸರ್ಕಾರದಿಂದ ಈವರೆಗೆ 8 ಸಾಧಕರು ಹಾಗೂ 2 ಸಂಸ್ಥೆಗಳಿಗೆ ಇದೇ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2024ನೇ ಸಾಲಿನ ಪ್ರಶಸ್ತಿಯು ಪ್ರೊ. ಜಿ.ಬಿ. ಶಿವರಾಜು, ಗೊಟ್ಟಿಕೆರೆ, ತುರುವೇಕೆರೆ ತಾಲ್ಲೂಕು, ತುಮಕೂರು ಜಿಲ್ಲೆ ಇವರಿಗೆ ಮತ್ತು ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದ ಶ್ರೀ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆ ಸಂಸ್ಥೆಗೆ ವಿಂಗಡಿಸಿ ಪ್ರದಾನ ಮಾಡಲಾಗುತ್ತಿದೆ. ಈ ಪ್ರಶಸ್ತಿಯನ್ನು ಮುಂದಿನ ತಿಂಗಳ ಗಾಂಧಿ ಜಯಂತಿ (ಅಕ್ಟೋಬರ್ 02) ರಂದು ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದಾನ ಮಾಡಲಿದ್ದಾರೆ.

ಹಾವೇರಿಯ ಹೊಸರಿತ್ತಿ ಗುರುಕುಲದ ಬಗ್ಗೆ ಗೊತ್ತಿರಲಿ
ಪ್ರಶಸ್ತಿಗೆ ಭಾಜನವಾದ ಹಾವೇರಿ ಜಿಲ್ಲೆ ಹೊಸರಿತ್ತಿ ಗ್ರಾಮದ ಶ್ರೀ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆ 1984 ರ ಅಕ್ಟೋಬರ್ 02 ರಂದು ಆರಂಭವಾಯಿತು. ಅಲ್ಲಿಂದ ಈ ವರೆಗೆ ಬರೋಬ್ಬರಿ 39 ವರ್ಷಗಳ ಕಾಲ ಮಕ್ಕಳಲ್ಲಿ ಗಾಂಧಿ ವಿಚಾರಧಾರೆ ಬಿತ್ತುತ್ತಿದೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಈ ಗುರುಕುಲ ಕೊಡುಗೆ ಅಪಾರ.
ರಾಜ್ಯದ ವಿವಿಧ ಜಿಲ್ಲೆಗಳ ಮಕ್ಕಳು ಈ ಗಾಂಧೀ ಗ್ರಾಮೀಣ ಗುರುಕುಲ ವಸತಿ ಶಾಲೆಯಲ್ಲಿ 5 ರಿಂದ 10 ನೇ ತರಗತಿವರೆಗೆ ಶಿಕ್ಷಣ ಪಡೆಯುತ್ತಿದ್ದಾರೆ. ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳು ಗುರುಕುಲ ಪ್ರವೇಶಿಸುತ್ತಾರೆ. ಸಮಾಜದ ಎಲ್ಲಾ ವರ್ಗದ ಮಕ್ಕಳಿಗೆ, ರೈತರು ಮತ್ತು ಕೂಲಿಕಾರರ ಪ್ರತಿಭಾವಂತ ಮಕ್ಕಳಿಗೆ ಶಿಕ್ಷಣದ ಜೊತೆಗೆ ಊಟ, ವಸತಿ ಹಾಗೂ ಇತರ ಸೌಲಭ್ಯಗಳನ್ನು ನೀಡುತ್ತಾ ಬರಲಾಗಿದೆ.
ವಿಶೇಷವೆಂದರೆ ಈ ಗುರುಕುಲದಲ್ಲಿ ವಿದ್ಯಾರ್ಥಿಗಳು ತಾವೇ ನೇಯ್ದ ಬಟ್ಟೆ ಧರಿಸುತ್ತಾರೆ. ಕೃಷಿ ಬೆಳೆ ಬೆಳೆದು ತಯಾರಿಸಿದ ಆಹಾರ ಸೇವಿಸುತ್ತಾರೆ. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಶಿಕ್ಷಣ ಪಡೆಯುತ್ತಿದ್ದಾರೆ. ಪಠ್ಯಕ್ರಮದ ಜೊತೆಗೆ ಗಾಂಧೀ ವಿಚಾರಧಾರೆ, ನೇಯ್ಗೆ, ಹೈನುಗಾರಿಕೆ, ತೋಟಗಾರಿಕೆ, ಕೃಷಿ ಸೇರಿ ಸ್ವಾವಲಂಬಿ ಶಿಕ್ಷಣ ಪಡೆಯುತ್ತಿದ್ದಾರೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ, ಉತ್ತಮ ಬದುಕು ರೂಪಿಸಿಕೊಂಡಿದ್ದಾರೆ ಎಂಬುದು ಗುರುಕುಲಕ್ಕೆ, ಹೊಸರಿತ್ತಿ ಹಾಗೂ ಹಾವೇರಿಗೆ ಹೆಮ್ಮೆಯ ಸಂಗತಿಯಾಗಿದೆ.
ಪ್ರಶಸ್ತಿ ಪುರಸ್ಕೃತ ಪ್ರೊ.ಜಿ.ಬಿ. ಶಿವರಾಜು
ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಗೊಟ್ಟಿಕೆರೆಯ ಪ್ರೊ.ಜಿ.ಬಿ. ಶಿವರಾಜು (73) ಅವರು ವೃತ್ತಿ ಜೀವನದುದ್ದಕ್ಕೂ ವಿದ್ಯಾರ್ಥಿಗಳಲ್ಲಿ ಗಾಂಧಿ ವಿಚಾರಧಾರೆಯನ್ನು ರೂಪಿಸಲು ಶ್ರಮಿಸಿದವರು. ತಮ್ಮ ಜೀವನವನ್ನು ಯುವ ಜನರಿಗೆ ಗಾಂಧೀಜಿ ವಿಚಾರಧಾರೆ ತಲುಪಿಸಲು ವಿನಿಯೋಗಿಸುತ್ತಿದ್ದಾರೆ. ಗಾಂಧಿ ಪ್ರಣೀತ ಸಂಘ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳು, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಮದ್ಯಪಾನ ಸಂಯಮ ಮಂಡಳಿಗಳ ಸಮನ್ವಯದ ಮೂಲಕ ಗಾಂಧಿ ವಿಚಾರಗಳನ್ನು ವಿದ್ಯಾರ್ಥಿಗಳು ಮತ್ತು ಯುವ ಸಮುದಾಯಕ್ಕೆ ತಲುಪಿಸುವ ಕಾರ್ಯ ಮುಂದುವರೆಸಿದ್ದಾರೆ.
ಅರಸೀಕೆರೆಯಲ್ಲಿನ ಕಸ್ತೂರ ಬಾ ಗಾಂಧಿ ಆಶ್ರಮ, ಮೂಡಿಗೆರೆಯ ಭಾರತಿ ಬೈಲ್ ಕೇಂದ್ರ ಹಾಗೂಗಾಂಧೀ ಸಾಹಿತ್ಯ ಸಂಘ, ಹರಿಜನ ಸೇವಕ ಸಂಘ ಮೊದಲಾದ ಸಂಸ್ಥೆಗಳನ್ನು ಅಭಿವೃದ್ಧಿಗೊಳಿಸಿದ್ದಾರೆ. ಮಂಡ್ಯ ಜಿಲ್ಲೆ ಮಾರ್ನೋಮಿದೊಡ್ಡಿ ಗ್ರಾಮದಲ್ಲಿ ಕಸ್ತೂರಬಾ ಗಾಂಧಿ ಟ್ರಸ್ಟ್ ಉಪಕೇಂದ್ರವನ್ನು ಸ್ಥಳೀಯರ ಸಹಕಾರದಿಂದ ಗ್ರಾಮೀಣ ಮಹಿಳೆಯರ ಸ್ವ ಉದ್ಯೋಗ ಕಾರ್ಯಾಗಾರವನ್ನಾಗಿ ಮಾಡಿದ್ದಾರೆ. ಮೈಸೂರಿನ ಮಾನಸಗಂಗೋತ್ರಿಯಲ್ಲಿ ಸಬರಮತಿ ಮಾದರಿಯಲ್ಲಿ ಆಶ್ರಮ ನಿರ್ಮಿಸಿದ್ದಾರೆ. ಹೀಗೆ ಅನೇಕ ಉತ್ತಮ ಕಾರ್ಯಗಳನ್ನು ಗಾಂಧೀಜಿ ಹೆಸರಿನಲ್ಲಿ ಮಾಡಿದ್ದಾರೆ. ಇವರನ್ನು ಸಹ ಸರ್ಕಾರ ಪ್ರಶಸ್ತಿಗೆ ಆಯ್ಕೆ ಮಾಡಿದೆ.












Click it and Unblock the Notifications