ರಾಜ್ಯದೆಲ್ಲೆಡೆ ಮಹಾಶಿವರಾತ್ರಿ ಸಂಭ್ರಮ: ಶಿವ ದೇವಾಲಯಗಳಲ್ಲಿ ಭಕ್ತ ಸಾಗರ
ಬೆಂಗಳೂರು ಫೆಬ್ರವರಿ 26: ರಾಜ್ಯದೆಲ್ಲೆಡೆ ಮಹಾ ಶಿವರಾತ್ರಿ ಸಂಭ್ರಮ ಅದ್ಧೂರಿಯಾಗಿದ್ದು ಶಿವ ದೇವಸ್ಥಾನಗಳಲ್ಲಿ ಭಕ್ತರ ಸಾಗರವೇ ಕಂಡು ಬರುತ್ತಿದೆ. ಬೆಳಗ್ಗೆಯಿಂದ ಶಿವನ ದೇವಸ್ಥಾನಗಳಲ್ಲಿ ಅಭಿಷೇಕ, ರುದ್ರಾಭಿಷೇಕದೊಂದಿಗೆ ವಿಶೇಷ ಪೂಜಾ ಕಾರ್ಯಗಳು ನೆರವೇರುತ್ತಿವೆ. ಬೆಂಗಳೂರಿನ ಪ್ರಮುಖ ಶಿವನ ದೇವಸ್ಥಾನಗಳು ಕೂಡ ಜನರಿಂದ ತುಂಬಿ ಹೋಗಿವೆ.
ಬೆಂಗಳೂರಿನ ಕಾಡು ಮಲ್ಲೇಶ್ವರಂ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಜನ ಸರತಿ ಸಾಲಿನಲ್ಲಿ ನಿಂತು ಶಿವನ ಆರಾಧನೆಯಲ್ಲಿ ತೊಡಗಿದ್ದಾರೆ. ಇನ್ನೂ ರಾಜ್ಯದ ಭಟ್ಕಳದ ಮುರುಡೇಶ್ವರ, ಬಿಜಾಪುರದ ಶಿವಗಿರಿ, ಧರ್ಮಸ್ಥಳದ ಮಂಜುನಾಥ ದೇವಸ್ಥಾನ, ನಂಜನಗೂಡಿನಶ್ರೀಕಂಠೇಶ್ವರ, ಕೋಲಾರದ ಕೋಟಿಲಿಂಗೇಶ್ವರ ದೇವಸ್ಥಾನ, ಹಂಪಿಯ ಬಡವಿಲಿಂಗ ದೇವಸ್ಥಾನ ಹಾಗೂ ಹಳೇಬೀಡು ಹೊಯ್ಸಳೇಶ್ವರ, ಹಂಪಿಯ ವಿರೂಪಾಕ್ಷ ದೇವಸ್ಥಾನ ಸೇರಿದಂತೆ ಕರ್ನಾಟಕದ ಪ್ರಮುಖ ಶಿವ ದೇವಸ್ಥಾನಗಳಲ್ಲಿ ಪರಶಿವನಿಗೆ ವಿಶೇಷ ಪೂಜೆಗಳು ನಡೆಯುತ್ತಿವೆ.

ಬೆಂಗಳೂರಿನ ಕೆಂಪೋರ್ಟ್ (Kempfort Shiva Temple) ಶಿವ ದೇವಸ್ಥಾನ ಹಾಗೂ ಕಾಡುಮಲ್ಲೇಶ್ವರ ದೇವಸ್ಥಾನದಲ್ಲೂ ಶಿವರಾತ್ರಿ ಆಚರಣೆ ಜೋರಾಗಿದೆ. ಶಿವನಿಗೆ ದೇವರಿಗೆ ರುದ್ರಾಭಿಷೇಕ, ರುದ್ರ ಪಾರಾಯಣ ನೆರವೇರುತ್ತಿವೆ. ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಅಲಂಕಾರವನ್ನ ಮಾಡಲಾಗಿದ್ದು, 2,000 ಮುಸುಕಿನ ಜೋಳ ಇಪ್ಪತ್ತುವರೆ ಕಬ್ಬು ಹಾಗೂ 1,500 ಎಳನೀರಿನಿಂದ ಅಲಂಕಾರ ಮಾಡಲಾಗಿದೆ. ನಸುಕಿನ ಜಾವ 4 ಗಂಟೆಯಿಂದಲೇ ರುದ್ರಾಭಿಷೇಕದೊಂದಿಗೆ ಶಿವರಾತ್ರಿ ಆರಂಭವಾಗಿದೆ.
ಮೈಸೂರಿನ ನಂಜನಗೂಡು ದೇವಸ್ಥಾನ ಫೆ. 26 ರ ಬೆಳಗಿನ ಜಾವ 4 ರಿಂದ 27 ರ ಮಧ್ಯಾಹ್ನ 1.30 ರವರೆಗೂ ದೇಗುಲದ ಬಾಗಿಲು ತೆರೆದು ಭಕ್ತರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 4 ಕ್ಕೆ ಸ್ವಾಮಿಗೆ ಗಂಗಾಜಲ ಅಭಿಷೇಕ, ಫಲಪಂಚಾಮೃತಾಭಿಷೇಕ ಹಾಗೂ ಮಹಾನ್ಯಾಸಪೂರ್ವಕ ಏಕಾದಶವಾರ ರುದ್ರಾಭಿಷೇಕ ನೆರವೇರಿಸಿ, ನಂತರ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ.

ಇನ್ನೂ ಸಂಜೆ 6 ಕ್ಕೆ ಮೊದಲ ಜಾವದ ಪೂಜೆ, ರಾತ್ರಿ 9 ಕ್ಕೆ ಎರಡನೇ ಜಾವದ ಪೂಜೆ, ಮಧ್ಯರಾತ್ರಿ 12ಕ್ಕೆ ಮೂರನೇ ಜಾವ ಹಾಗೂ ಬೆಳಗ್ಗೆ 3 ಕ್ಕೆ ನಾಲ್ಕನೇ ಜಾವದ ಅಭಿಷೇಕ ಮತ್ತು ಪೂಜಾ ಕಾರ‍್ಯಗಳು, ರುದ್ರಪಾರಾಯಣ ನಿಯಮಿತವಾಗಿ ನಡೆಯಲಿವೆ.
ಶಿವ ಮಾಲಾಧಾರಿಗಳು ನಿರಂತರ ಶಿವನಾಮಸ್ಮರಣೆ, ಶಿವನ ಭಜನೆ ಮಾಡುತ್ತಿದ್ದಾರೆ. ನಿರಂತರ ಮಹಾರುದ್ರಾಭಿಷೇಕ, ಪಂಚಾಮೃತಾಭಿಷೇಕ, ಬಿಲ್ವಾರ್ಚನೆ ಸೇರಿ ವಿವಿಧ ಪೂಜಾ ಕೈಂಕರ್ಯಗಳನ್ನ ನೆರವೇರಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ಭಗವಂತನ ದರ್ಶನಕ್ಕಾಗಿ ಪರದಾಟ ನಡೆಸಿದ್ದಾರೆ. ಪೊಲೀಸ್ ಬಿಗಿ ಭದ್ರತೆಯಲ್ಲಿ ಭಕ್ತರು ಶಿವಲಿಂಗ ದರ್ಶನ ಪಡೆಯುತ್ತಿದ್ದಾರೆ.
ಶಿವರಾತ್ರಿಯಂದು ದೇಗುಲದ ಸುತ್ತ ಉರುಳು ಸೇವೆ ನಡೆಸುವವರು ಹಾಗೂ ಸರತಿ ಸಾಲಿನಲ್ಲಿ ನಿಲ್ಲುವವರಿಗಾಗಿ ದೇಗುಲದ ಸುತ್ತಲಿನ ಪ್ರದೇಶದಲ್ಲಿ ಶಾಮಿಯಾನ ಅಳವಡಿಸಿ ನೆರಳಿನ ಸೌಕರ್ಯ ಕಲ್ಪಿಸಲಾಗಿದೆ. ಜಾಗರಣೆ ಸಮಯದಲ್ಲೂ ಭಕ್ತರು ದೇವಾಲಯದ ಒಳ ಪ್ರವೇಶಿಸಲು ನೆರವಾಗುವಂತೆ ಅವಕಾಶ ಕಲ್ಪಿಸಲಾಗಿದ್ದು, ಭಕ್ತರು ಸರತಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದುಕೊಳ್ಳಬಹುದಾಗಿದೆ.
ಮುರುಡೇಶ್ವರದಲ್ಲೂ ಶಿವರಾತ್ರಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಕಡಲ ತೀರದಲ್ಲಿ ಇರುವ ಬೃಹತ್ತ ಶಿವ ಮೂರ್ತಿಗೆ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು ನಡೆದಿವೆ. ಅಭಿಷೇಕ, ರುದ್ರಾಭಿಷೇಕ, ಮಂಗಳರಾತಿ ಮಾಡಲಾಗುತ್ತಿದ್ದು ನೂರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಪೂಜೆಗಳನ್ನು ಸಲ್ಲಿಸುತ್ತಿದ್ದಾರೆ.












Click it and Unblock the Notifications