2 ರಾಜ್ಯದ ಚುನಾವಣಾ ಫಲಿತಾಂಶ; ಸಿದ್ದರಾಮಯ್ಯ ವಿಶ್ಲೇಷಣೆ
ಬೆಂಗಳೂರು, ಅಕ್ಟೋಬರ್ 24 : ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. "ಯಾವ ಪಕ್ಷವೂ ಬಹುಮತ ಪಡೆಯದ ಕಾರಣ ಕಾಂಗ್ರೆಸ್ ಒತರ ಪಕ್ಷಗಳ ಜೊತೆ ಸೇರಿ ಸರ್ಕಾರ ರಚನೆ ಮಾಡಲಿದೆ" ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹರ್ಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶದ ಕುರಿತು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು. "ಬಿಜೆಪಿಯವರಿಗೆ ಏಕೆ ಇವಿಎಂ ಮೇಲೆ ಅತಿಯಾದ ವ್ಯಾಮೋಹವೋ ಅರ್ಥವಾಗುತ್ತಿಲ್ಲ" ಎಂದು ತಿಳಿಸಿದರು.
"ಹರ್ಯಾಣದ ಜನ ಬದಲಾವಣೆ ಬಯಸಿದ್ದಾರೆ ಎಂಬುದು ಚುನಾವಣಾ ಫಲಿತಾಂಶದಿಂದ ಸ್ಪಷ್ಟವಾಗಿದೆ. ಯಾವೊಂದು ಪಕ್ಷವೂ ಸ್ಪಷ್ಟ ಬಹುಮತ ಗಳಿಸದ ಕಾರಣ ಕಾಂಗ್ರೆಸ್ ಪಕ್ಷವು ಇತರ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸುವ ಸಾಧ್ಯತೆಗಳು ಹೆಚ್ಚಿದೆ" ಎಂದರು.
"ಎರಡೂ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಮುಖ್ಯಮಂತ್ರಿಗಳಾಗಲಿ, ನರೇಂದ್ರ ಮೋದಿಯವರಾಗಲಿ ತಮ್ಮ ಸರ್ಕಾರಗಳ ಸಾಧನೆ ಬಗ್ಗೆ ಮಾತಾಡಲೇ ಇಲ್ಲ. ಭಾವನಾತ್ಮಕ ವಿಚಾರಗಳಾದ ಕಾಶ್ಮೀರ ವಿವಾದ ಮತ್ತು ಪಾಕಿಸ್ತಾನವನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದರು" ಎಂದು ಸಿದ್ದರಾಮಯ್ಯ ದೂರಿದರು.

ಜನರು ಅವರನ್ನು ತಿರಸ್ಕರಿಸಿದ್ದಾರೆ
ಬಿಜೆಪಿಯನ್ನು ಜನರು ತಿರಸ್ಕರಿಸಿದ್ದಾರೆ. ಹರ್ಯಾಣ ಮತ್ತು ಮಹಾರಾಷ್ಟ್ರಗಳೆರಡೂ ರಾಜ್ಯಗಳಲ್ಲಿ ಚುನಾವಣಾ ಪೂರ್ವದಲ್ಲಿ ನಡೆದ ಪಕ್ಷಾಂತರ, ಸಂಘಟನೆಯಲ್ಲಿನ ಲೋಪಗಳು ಮತ್ತು ಸಂಪನ್ಮೂಲದ ಕೊರತೆಯಿಂದಾಗಿ ಕಾಂಗ್ರೆಸ್‌ಗೆ ಕೊಂಚ ಹಿನ್ನಡೆಯಾಯಿತು. ಇಲ್ಲದೆ ಇದ್ದಿದ್ದರೆ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುವ ಎಲ್ಲ ಅವಕಾಶಗಳು ಇತ್ತು.

ಮೋದಿ ಜನಪ್ರಿಯತೆ ಕುಸಿಯುತ್ತಿದೆ
ಎರಡು ರಾಜ್ಯಗಳ ಚುನಾವಣಾ ಫಲಿತಾಂಶ ನರೇಂದ್ರ ಮೋದಿಯವರ ಕುಸಿಯುತ್ತಿರುವ ಜನಪ್ರಿಯತೆಯ ದಿಕ್ಸೂಚಿ. ಎರಡೂ ಕಡೆ ಮೋದಿ-ಶಾ ಜೋಡಿ ಹಲವಾರು ಸಮಾವೇಶಗಳನ್ನು ಮಾಡಿದ ಹೊರತಾಗಿಯೂ ಬಿಜೆಪಿ ಸ್ಪಷ್ಟ ಬಹುಮತ ಗಳಿಸಲು ವಿಫಲವಾಗಿರುವುದು ಅವರ ಕ್ಷೀಣಿಸುತ್ತಿರುವ ಜನಪ್ರಿಯತೆಗೆ ಸಾಕ್ಷಿ.
ಕಳೆದ ಬಾರಿಯ ಚುನಾವಣಾ ಫಲಿತಾಂಶಕ್ಕೆ ಹೋಲಿಕೆ ಮಾಡಿದರೆ ಬಿಜೆಪಿ ಎರಡೂ ರಾಜ್ಯಗಳಲ್ಲಿ ಹಿನ್ನಡೆ ಅನುಭವಿಸಿದೆ, ಮಹಾರಾಷ್ಟ್ರದಲ್ಲಿ 120 ಸ್ಥಾನದಿಂದ ನೂರರ ಆಸುಪಾಸಿಗೆ ಬಂದಿದೆ. ಹರ್ಯಾಣದಲ್ಲಿ 47 ರಿಂದ 41ಕ್ಕೆ ಇಳಿದಿದೆ. ಬಿಜೆಪಿ ಭಾರೀ ಬಹುಮತ ಗಳಿಸಲಿದೆ ಎಂದು ಹೇಳುತ್ತಿದ್ದ ಸಮೀಕ್ಷೆಗಳೆಲ್ಲ ಹುಸಿಯಾಗಿವೆ.

ಕಾಂಗ್ರೆಸ್ ಪಕ್ಷ ಗೆದ್ದಿದೆ
ಹರ್ಯಾಣದಲ್ಲಿ ಐದು ತಿಂಗಳ ಹಿಂದೆ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ 10ಕ್ಕೆ 10 ಕ್ಷೇತ್ರಗಳನ್ನು ಬಿಜೆಪಿ ಗೆದ್ದಿತ್ತು, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಲು ವಿಫಲವಾಗಿದೆ. ಇದು ಮೋದಿಯವರ ಜನಪ್ರಿಯತೆ ಕುಸಿದಿರುವುದಕ್ಕೆ ಇನ್ನೊಂದು ಸಾಕ್ಷಿ. ನಾನು ಪ್ರಚಾರಕ್ಕೆ ಹೋಗಿದ್ದ ಮಹಾರಾಷ್ಟ್ರದ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ, ಕೇರಳದ ಮಂಜೇಶ್ವರದಲ್ಲಿ ಮುಸ್ಲಿಂ ಲೀಗ್ ಗೆದ್ದಿರುವುದು ಸಂತಸ ಉಂಟು ಮಾಡಿದೆ.

ಪಕ್ಷಾಂತರಿಗಳ ತಿರಸ್ಕಾರ
ಈ ಬಾರಿಯ ಚುನಾವಣೆಯಲ್ಲಿ ಪಕ್ಷಾಂತರಿಗಳನ್ನು ಜನ ತಿರಸ್ಕರಿಸಿದ್ದಾರೆ. ಗುಜರಾತ್ ಉಪ ಚುನಾವಣೆಯಲ್ಲಿ ಸಹ ಪಕ್ಷಾಂತರಿಗಳು ಸೋತಿದ್ದಾರೆ. ಕರ್ನಾಟಕದಲ್ಲಿ ಕೂಡಾ 15 ಸ್ಥಾನಗಳ ಪೈಕಿ ಬಹುಪಾಲು ಸ್ಥಾನಗಳು ಕಾಂಗ್ರೆಸ್ ಪಾಲಾಗಿ, ಯಡಿಯೂರಪ್ಪನವರು ರಾಜೀನಾಮೆ ನೀಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇವಿಎಂ ಅನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶವಿದೆ ಎಂದು ಇಂದು ಪತ್ರಿಕೆಯೊಂದು ವರದಿ ಮಾಡಿದೆ. ಇಷ್ಟಾದರೂ ಬಿಜೆಪಿಯವರಿಗೆ ಚುನಾವಣೆಯಲ್ಲಿ ಇವಿಎಂ ಬಳಕೆ ನಿಲ್ಲಿಸಿ ಮತ ಚೀಟಿ ಪದ್ದತಿಯನ್ನು ಜಾರಿಗೆ ತರಲು ಮನಸಿಲ್ಲ.












Click it and Unblock the Notifications