ಬೆಳಗಾವಿ: ಎರಡೇರಡು ಬಾರಿ ಉದ್ಘಾಟನೆಯಾಗಿರುವ ಶಿವಾಜಿ ಪ್ರತಿಮೆ ಶುದ್ಧೀಕರಣಕ್ಕೆ ಎಂಇಎಸ್ ತಯಾರಿ
ರಾಜಹಂಸಗಡ ಕೋಟೆಯಲ್ಲಿ ಲೋಕಾರ್ಪಣೆಯಾದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಅಪಚಾರ ಮಾಡಿದ್ದಾರೆ.
ಬೆಳಗಾವಿ, ಮಾರ್ಚ್ 09: ಮುಂಬರುವ ವಿಧಾನಸಭಾ ಚುನಾವಣೆ ಬೆನ್ನಲ್ಲೆ ಎರಡೇರಡು ಸಲ ಉದ್ಘಾಟನೆಯಾಗಿ ರಾಜಕೀಯ ದಾಳಕ್ಕೆ ಒಳಗಾಗಿರುವ ಬೆಳಗಾವಿಯ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಮತ್ತೆ ಹೊಸ ವಿಷಯಕ್ಕೆ ಸುದ್ದಿಯಾಗಿದೆ. ಹೌದು, ಈ ಬಾರಿ ಮಹಾರಾಷ್ಟ್ರ ಏಕೀಕರಣ ಸಮಿತಿ ನಾಯಕರು ಪ್ರತಿಮೆಯ ಶುದ್ಧೀಕರಣ ಮಾಡಲು ಮುಂದಾಗಿದ್ದಾರೆ.
ಮಾರ್ಚ್ ಎರಡರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ರಾಜಹಂಸಗಡ ಕೋಟೆಯಲ್ಲಿ ಶಿವಾಜಿ ಪ್ರತಿಮೆಯನ್ನು ಅನಾವರಣ ಮಾಡಿದ್ದರು. ಇದಾಗಿ ಎರಡು ಮೂರು ದಿನಗಳಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತೆ ಉದ್ಘಾಟನ ಕಾರ್ಯಕ್ರಮ ಮಾಡಿ ಅದ್ಧೂರಿಯಾಗಿ ಪ್ರತಿಮೆ ಲೋಕಾರ್ಪಣೆ ಮಾಡಿದ್ದಾರೆ. ಇದಕ್ಕೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಆಕ್ಷೇಪ ವ್ಯಕ್ತಪಡಿಸಿದೆ.

ರಾಜಹಂಸಗಡ ಕೋಟೆಯಲ್ಲಿ ಲೋಕಾರ್ಪಣೆಯಾದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ರಾಜಕೀಯಕ್ಕಾಗಿ ಅಪಚಾರ ಮಾಡಿದ್ದಾರೆ. ಹೀಗಾಗಿ ಮಾರ್ಚ್ 19 ರಂದು ಇಡೀ ದಿನ ಶಿವಾಜಿ ಮಹಾರಾಜರ ಪ್ರತಿಮೆ ಶುದ್ಧೀಕರಣ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ ತಿಳಿಸಿದೆ.
ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಹಾಗೂ ಕೀರ್ತಿಯನ್ನು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ರಾಜಕೀಯಕ್ಕೆ ಬಳಸಿದ್ದಾರೆ. ಇದು ತಪ್ಪು. ಹೀಗಾಗಿ ಪ್ರತಿಮೆಯನ್ನು ಶುದ್ಧಗೊಳಿಸುವುದು ಅತ್ಯಗತ್ಯವಾಗಿದೆ ಎಂದಿದ್ದಾರೆ. ಬೆಳಗಾವಿಯ ಮರಾಠಾ ಮಂದಿರದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಾಯಕರು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಶುದ್ಧೀಕರಣ ಕಾರ್ಯಕ್ರಮ ಅಂಗವಾಗಿ ಶಿವಾಜಿ ಮಹಾರಾಜರ ಪಾದಪೂಜೆ, ಪಂಚಾಮೃತ ಅಭಿಷೇಕ ಮತ್ತಿತರ ಕಾರ್ಯಕ್ರಮ ನಡೆಯಲಿವೆ. ಮಹಾರಾಷ್ಟ್ರದ ಕೊಲ್ಹಾಪುರ, ಸಾತಾರ ಮತ್ತು ಜಿಲ್ಲೆಯ ವಿವಿಧೆಡೆ ಇರುವ ಶಿವಾಜಿ ಮಹಾರಾಜರ ಇತಿಹಾಸ ಸಾರುವ ಕೋಟೆಗಳಿಂದ ಶಿವಜ್ಯೋತಿ ತಂದು, ನಗರದಲ್ಲಿ ಮೆರವಣಿಗೆ ಮಾಡಲಾಗುವುದು ಎಂದು ಸಮಿತಿ ಮಾಹಿತಿ ನೀಡಿದೆ.

ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಜಕೀಯ ಕೆಸರೆರಚಾರ ಪ್ರತಿಮೆ ಅನಾವರಣ ವಿಚಾರದಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. "ಪ್ರತಿಮೆಗೆ ಇನ್ನು ಅರ್ಧ ಬಣ್ಣ ಬಳಿದಿರುವಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ಮಾಡಿದ್ದಾರೆ. ಅದು ಕೇವಲ 12 ನಿಮಿಷಗಳ ಕಾಲ ನಡೆದ ಕಾರ್ಯಕ್ರಮ. ಇದು ಶಿವಾಜಿ ಮಹಾರಾಜರಿಗೆ ಮಾಡಿದ ಅವಮಾನ" ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದರು.












Click it and Unblock the Notifications