ಚೆನ್ನೈ ಪ್ರವಾಹ: ಸಂಪರ್ಕಕ್ಕೆ ಸಿಕ್ಕ ಮಂಡ್ಯ ಟೆಕ್ಕಿ
ಮಂಡ್ಯ, ಡಿಸೆಂಬರ್, 04 : ಚೆನ್ನೈ ಪ್ರವಾಹದಲ್ಲಿ ಸಿಲುಕಿ ಕಳೆದ ಮೂರು ದಿನಗಳಿಂದ ಸಂಪರ್ಕಕ್ಕೆ ಸಿಗದಿದ್ದ ಕೆ.ಆರ್.ಪೇಟೆ ತಾಲೂಕಿನ ಹೊಸಹೊಳಲು ಗ್ರಾಮದ ಸಾಫ್ಟ್ ವೇರ್ ಇಂಜಿನಿಯರ್ ಸುರಕ್ಷಿತವಾಗಿರುವ ಬಗ್ಗೆ ಇಮೇಲ್ ಸಂದೇಶ ಕಳುಹಿಸಿದ್ದು ಮನೆಯವರೆಲ್ಲರೂ ಆತಂಕದಿಂದ ದೂರವಾಗಿದ್ದಾರೆ.
ಕೆ.ಆರ್.ಪೇಟೆ ತಾಲೂಕಿನ ಹೊಸಹೊಳಲು ಗ್ರಾಮದ ನಿವಾಸಿ ನಿವೃತ್ತ ಶಿಕ್ಷಕ ಶಿವನಂಜಯ್ಯ ಮತ್ತು ಶಿವಲೀಲಾ ದಂಪತಿ ಪುತ್ರ ಎಸ್. ಶಿವಪ್ರಸಾದ್ (24) ಚೆನ್ನೈನ ಕ್ಯೂಬಸ್ಟ್ ಎಂಬ ಸಾಫ್ಟ್ ವೇರ್ ಕಂಪನಿಯಲ್ಲಿ ಕಳೆದ 4 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಕಳೆದ 3 ದಿನಗಳಿಂದ ಶಿವಪ್ರಸಾದ್ ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರೂ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.[ಚೆನ್ನೈ ಪ್ರವಾಹ : ಮೈಸೂರಿನ ಇಂಜಿನಿಯರ್ ನಾಪತ್ತೆ]

ಶಿವಪ್ರಸಾದ್ ಪೋಷಕರು ಆತಂಕಕ್ಕೀಡಾಗಿದ್ದು ಮನೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಗುರುವಾರ ಸಂಜೆ ತನ್ನ ಪೋಷಕರಿಗೆ ಇಮೇಲ್ ಸಂದೇಶ ಕಳುಹಿಸಿರುವ ಶಿವಪ್ರಸಾದ್, 'ನಾನು ಪ್ರವಾಹದಲ್ಲಿ ಸಿಲುಕಿದ್ದು ನಿಜ. ಆದರೆ ನನಗೆ ಯಾವ ಪ್ರಾಣಾಪಾಯವಾಗಿಲ್ಲ. ನಾನು ಸುರಕ್ಷಿತವಾಗಿದ್ದೇನೆ. ಆದ್ದರಿಂದ ಯಾವುದೇ ಆತಂಕಕ್ಕೆ ಒಳಗಾಗಬೇಡಿ, ನಾನು ಸದ್ಯದಲ್ಲೆ ಊರಿಗೆ ಮರಳುತ್ತೇನೆ' ಎಂದು ಇಮೇಲ್ ನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಶಿವ ಪ್ರಸಾದ್ ಇಮೇಲ್ ಯಿಂದ ಕುಟುಂಬದದಲ್ಲಿ ಮತ್ತೆ ಸಂತಸ ತುಂಬಿದ್ದು ಮಗನ ಬರುವಿಕೆಯ ನಿರೀಕ್ಷೆಗಾಗಿ ಹೆತ್ತವರು ಕಾಯುತ್ತಿದ್ದಾರೆ. ಒಟ್ಟಾರೆ ಚೆನ್ನೈನ ಜಲಪ್ರಳಯ ತಮಿಳುನಾಡು ಮಾತ್ರವಲ್ಲ, ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ.












Click it and Unblock the Notifications