ಜೆಡಿಎಸ್ ಪಕ್ಷದ 12 ಮಂದಿ ಹುರಿಯಾಳುಗಳು ಇವರೇ
ಬೆಂಗಳೂರು, ಮಾರ್ಚ್ 11: ಜೆಡಿಎಸ್ ಪಕ್ಷವು ಹಾಲಿ ಲೋಕಸಭಾ ಚುನಾವಣೆಗಾಗಿ 12 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದೆ. ಹಾಸನ ಕ್ಷೇತ್ರದಿಂದ ಸ್ವತಃ ದೇವೇಗೌಡರು ಸ್ಪರ್ಧಿಸಲಿದ್ದಾರೆ. ಇನ್ನು ಪಕ್ಷದ ರಾಜ್ಯಾಧ್ಯಕ್ಷ ಎ ಕೃಷ್ಣಪ್ಪ ಅವರು ತುಮಕೂರಿನಿಂದ ಕಣಕ್ಕಿಳಿದಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ಪುತ್ರಿ ಹಾಗೂ ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆಗಿಳಿಯುವುದು ಬಹುತೇಕ ಖಚಿತವಾಗಿದ್ದು, ಅಂತಿಮ ನಿರ್ಧಾರವನ್ನು ಅವರಿಗೇ ಬಿಡಲಾಗಿದೆ. ಒಂದು ವೇಳೆ ಅಂತಿಮ ಕ್ಷಣದಲ್ಲಿ ಅವರು ಒಪ್ಪದಿದ್ದಲ್ಲಿ ಬಂಗಾರಪ್ಪನವರ ಕಿರಿಯ ಪುತ್ರ ಮಧು ಬಂಗಾರಪ್ಪ ಅವರು ಸ್ಪರ್ಧಿಸಲಿದ್ದಾರೆ.

ಚಿತ್ರದುರ್ಗದಿಂದ ಗೂಳಿಹಟ್ಟಿ ಶೇಖರ್ ಅವರು ಜೆಡಿಎಸ್ ಅಭ್ಯರ್ಥಿಯಾಗಿದ್ದರೆ ಚಿಕ್ಕೋಡಿಯಿಂದ ಉತ್ತಮ ಪಾಟೀಲ್ ಮತ್ತು ಶ್ರೀಮಂತ ಪಾಟೀಲ್ ಸೋದರರ ಪೈಕಿ ಒಬ್ಬರು ಕಣಕ್ಕಿಳಿಯಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ.
ಸೋಮವಾರ ರಾತ್ರಿ ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಜೆಡಿಎಸ್ ಸಂಸದೀಯ ಮಂಡಳಿ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆಯಾಗಿದ್ದು, ಪ್ರೊ. ಎಚ್ ಸಿ ನೀರಾವರಿ ಅವರು ಪಟ್ಟಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. (ಲೋಕಸಭೆ ಚುನಾವಣಾ ವೇಳಾಪಟ್ಟಿ)
ಉಳಿದ 16 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು 2-3 ದಿನದಲ್ಲಿ ಬಿಡುಗಡೆ ಮಾಡಲು ಜೆಡಿಎಸ್ ನಿರ್ಧರಿಸಿದೆ. ಕೆಲ ಕ್ಷೇತ್ರಗಳು ಪ್ರತಿಷ್ಠೆಯ ಕಣವಾಗಿವೆ. ಹಾಗಾಗಿ, ಬೇರೆ ಪಕ್ಷಗಳ ಅಭ್ಯರ್ಥಿಗಳನ್ನು ನೋಡಿಕೊಂಡು ಅಲ್ಲಿಗೆ ಅಭ್ಯರ್ಥಿಗಳ ಆಯ್ಕೆ ಮಾಡುವುದು ಜೆಡಿಎಸ್ ಕಾರ್ಯತಂತ್ರವಾಗಿದೆ.
ಜೆಡಿಎಸ್ ಪಕ್ಷದ 12 ಮಂದಿ ಹುರಿಯಾಳುಗಳು ಇವರೇ:
1) ಹಾಸನ - ಎಚ್ ಡಿ ದೇವೇಗೌಡ
2) ಚಿಕ್ಕೋಡಿ - ಉತ್ತಮ ಪಾಟೀಲ್/ ಶ್ರೀಮಂತ ಪಾಟೀಲ್
3) ಚಾಮರಾಜನಗರ - ಎಂ. ಕೋಟೆ ಶಿವಣ್ಣ
4) ಉತ್ತರ ಕನ್ನಡ - ಶಿವಾನಂದ ನಾಯಕ್
5) ತುಮಕೂರು - ಎ ಕೃಷ್ಣಪ್ಪ
6) ಬೀದರ್ - ಬಂಡೆಪ್ಪ ಕಾಶಂಪೂರ್
7) ಬೆಂ. ಗ್ರಾಮಾಂತರ - ಆರ್ ಪ್ರಭಾಕರ ರೆಡ್ಡಿ
8) ಕೋಲಾರ - ಕೆ ಕೇಶವ
9) ಹಾವೇರಿ - ರವಿ ಮೆಣಸಿನಕಾಯಿ
10) ಶಿವಮೊಗ್ಗ - ಗೀತಾ ಶಿವರಾಜ್ ಕುಮಾರ್ / ಮಧು ಬಂಗಾರಪ್ಪ
11) ಚಿತ್ರದುರ್ಗ - ಗೂಳಿಹಟ್ಟಿ ಶೇಖರ್
12) ರಾಯಚೂರು- ರಾಜ ಅಮರೇಶ ನಾಯಕ












Click it and Unblock the Notifications