ಲೋಕಸಭೆ : ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾದರೆ ಕಾಂಗ್ರೆಸ್‌ಗೆ ನಷ್ಟ!
ಬೆಂಗಳೂರು, ಜುಲೈ 30 : 2018ರ ಕರ್ನಾಟಕ ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಲೋಕಸಭೆ ಚುನಾವಣೆಯಲ್ಲಿಯೂ ಮೈತ್ರಿ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಯುತ್ತಿದೆ. ಆದರೆ, ಮೈತ್ರಿ ಮಾಡಿಕೊಂಡರೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ನಷ್ಟವಾಗಲಿದೆ.
ಉತ್ತರ ಮತ್ತು ದಕ್ಷಿಣ ಕರ್ನಾಟಕ, ಲಿಂಗಾಯತ ಮತ್ತು ಒಕ್ಕಲಿಗ ಎಂಬ ಜಾತಿ ಲೆಕ್ಕಾಚಾರ ಸೇರಿದಂತೆ ಯಾವುದೇ ಆಯಾಮದಲ್ಲಿ ಆಲೋಚನೆ ನಡೆಸಿದರೂ ಕಾಂಗ್ರೆಸ್‌ಗೆ ನಷ್ಟವಾಗಲಿದೆ ಎನ್ನುತ್ತದೆ ವಿಶ್ಲೇಷಣೆ. ಆದರೆ, ಎರಡೂ ಪಕ್ಷಗಳು ಮೈತ್ರಿ ಮಾಡಿಕೊಳ್ಳಲಿವೆಯೇ? ಕಾದು ನೋಡಬೇಕು.
2014ರ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಮೈತ್ರಿ ನಡೆದಿರಲಿಲ್ಲ. 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 17, ಕಾಂಗ್ರೆಸ್ 9 ಮತ್ತು ಜೆಡಿಎಸ್ 2 ಸ್ಥಾನಗಳಲ್ಲಿ ಜಯಗಳಿಸಿದ್ದವು. ಆದರೆ, ಈ ಬಾರಿ ಮೈತ್ರಿ ನಡೆದರೆ ಯಾವ ಪಕ್ಷಕ್ಕೆ ಎಷ್ಟು ಸೀಟು ಸಿಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಗ್ಗೆಯೇ ಹಲವು ನಾಯಕರಿಗೆ ಅಸಮಾಧಾನವಿದೆ. ಇದರ ನಡುವೆಯೇ ಲೋಕಸಭೆ ಚುನಾವಣೆ ಎದುರಾಗಿದೆ. ಹಾಗಾದರೆ ಮೈತ್ರಿ ಉಂಟಾದರೆ ನಷ್ಟ ಯಾರಿಗೆ? ಇಲ್ಲಿದೆ ಮಾಹಿತಿ...

ಹಳೇ ಮೈಸೂರು/ಉತ್ತರ ಕರ್ನಾಟಕ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಲೋಕಸಭೆಯ ಚುನಾವಣೆಯಲ್ಲಿಯೂ ಮುಂದುವರೆದರೆ ಹಳೇ ಮೈಸೂರು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಉಭಯ ಪಕ್ಷಗಳ ನಾಯಕರಿಗೂ ಸಂಕಷ್ಟ ಎದುರಾಗಲಿದೆ. ಈಗಾಗಲೇ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಬಗ್ಗೆಯೇ ಅಸಮಾಧಾನ ಎದ್ದಿದೆ.
ಈ ಭಾಗದಲ್ಲಿನ ಜಿಲ್ಲಾ ನಾಯಕರಿಗೂ ಮೈತ್ರಿಯಿಂದ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಭದ್ರ ನೆಲೆಯನ್ನು ಹೊಂದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಹೆಚ್ಚು ಪ್ರಭಾವ ಹೊಂದಿದ್ದು, ಉಭಯ ಪಕ್ಷಗಳ ಮೈತ್ರಿ ಬಿಜೆಪಿಗೆ ವರವಾಗುವ ಸಾಧ್ಯತೆ ಇದೆ.

ಕಾಂಗ್ರೆಸ್ ತಕ್ಷಣ ಎಚ್ಚೆತ್ತುಕೊಳ್ಳಬೇಕು
ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಭಾಗಕ್ಕೆ ಹೋಲಿಕೆ ಮಾಡಿದರೆ ಜೆಡಿಎಸ್ ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಮತಗಳನ್ನು ಹೊಂದಿದೆ. ಕಾಂಗ್ರೆಸ್ ಪಕ್ಷ ಮೈತ್ರಿಗೆ ಮುಂದಾದರೆ ಪಕ್ಷಕ್ಕೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ, ಪಕ್ಷ ತಕ್ಷಣ ಮೈತ್ರಿ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳಬೇಕಿದೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಹಳೇ ಮೈಸೂರ ಭಾಗದಲ್ಲಿ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ಮುನಿಸು ಇನ್ನೂ ದೂರಾಗಿಲ್ಲ. ಲೋಕಸಭೆ ಚುನಾವಣೆ ಮೈತ್ರಿಯಾದರೆ ಇದು ಎರಡೂ ಪಕ್ಷಗಳ ಹಿನ್ನಡೆಗೆ ಕಾರಣವಾಗಬಹುದು.

ಒಕ್ಕಲಿಗರ ಪ್ರಾಬಲ್ಯ
ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಹಾಸನ, ರಾಮನಗರ, ತುಮಕೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಹೊಂದಿದೆ. ಒಕ್ಕಲಿಗೆ ಸಮುದಾಯದ ಮತಗಳು ಜೆಡಿಎಸ್ ಕಡೆಗಿವೆ. ಜೆಡಿಎಸ್ ಸರ್ಕಾರ ನಡೆಸುತ್ತಿರುವುದರಿಂದ ಬಲ ಮತ್ತಷ್ಟು ಹೆಚ್ಚಾಗಿದೆ.
ಒಂದು ವೇಳೆ ಕಾಂಗ್ರೆಸ್ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಕಾಂಗ್ರೆಸ್ ಇರುವ ವೋಟ್ ಬ್ಯಾಂಕ್ ಅನ್ನು ಸಹ ಕಳೆದುಕೊಳ್ಳಲಿದೆ. ಇದರಿಂದಾಗಿ ಬಿಜೆಪಿಗೆ ಸಹಾಯಕವಾಗಲಿದೆಯೇ? ಕಾದು ನೋಡಬೇಕು.

ಸಚಿವ ಸ್ಥಾನವೂ ಇಲ್ಲ, ಅನುದಾನವೂ ಇಲ್ಲ
ಎಚ್.ಡಿ.ಕುಮಾರಸ್ವಾಮಿ ಅವರು ಮೂರು ಜಿಲ್ಲೆಗೆ ಮಾತ್ರ ಮುಖ್ಯಮಂತ್ರಿಗಳು ಎಂದು ಈಗಾಗಲೇ ಚರ್ಚೆ ನಡೆಯುತ್ತಿದೆ. ಕುಮಾರಸ್ವಾಮಿ ಸಂಪುಟದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಸಾಕಷ್ಟು ಪ್ರಾತಿನಿಧ್ಯ ಸಿಕ್ಕಿಲ್ಲ. ಒಂದು ವೇಳೆ ಮೈತ್ರಿಯಾದರೆ ಜೆಡಿಎಸ್ ಪರವಾದ ವಿರೋಧಿ ಅಲೆ ಕಾಂಗ್ರೆಸ್‌ಗೂ ಹಿನ್ನಡೆ ಉಂಟು ಮಾಡಬಹುದು.
ಉತ್ತರ ಕರ್ನಾಟಕ ಭಾಗದ ಪ್ರಭಾವಿ ಕಾಂಗ್ರೆಸ್ ನಾಯಕರಾದ ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ಎಸ್.ಆರ್.ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರು ಸಂಪುಟದಲ್ಲಿ ಇಲ್ಲ. ಇದರಿಂದಾಗಿ ಜನರು ಮೈತ್ರಿ ಮಾಡಿಕೊಂಡರೂ ಕಾಂಗ್ರೆಸ್ ಬೆಂಬಲಿಸುವ ಸಾಧ್ಯತೆ ಕಡಿಮೆ.

ಲಿಂಗಾಯತರಿಗೆ ಆತಂಕ
ಕರ್ನಾಟಕದ ರಾಜಕೀಯದಲ್ಲಿ ಮೊದಲ ಬಾರಿಗೆ ಒಕ್ಕಲಿಗೆ ಪಾಬಲ್ಯವನ್ನು ನಾವು ನೋಡಬಹುದಾಗಿದೆ. ಇದರಿಂದಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿರುವ ಲಿಂಗಾಯತರು ಆತಂಕಗೊಂಡಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿರುವ ಕಾಂಗ್ರೆಸ್ ನಾಯಕರು ಸಹ ಮೈತ್ರಿ ಮಾಡಿಕೊಳ್ಳುವ ಮುನ್ನ ಹಲವು ಬಾರಿ ಚಿಂತನೆ ನಡೆಸಲಿದ್ದಾರೆ.
ಉತ್ತರ ಕರ್ನಾಟಕ ಭಾಗದ ನಾಯಕರು ಈಗಾಗಲೇ ಕಾಂಗ್ರೆಸ್‌ನ ಪ್ರಮುಖ ನಾಯಕರ ಬಳಿ ಮತ ವಿಭಜನೆ ಬಗ್ಗೆ ಮಾತುಕತೆ ನಡೆಸಿದ್ದಾರೆ. ಪರಿಸ್ಥಿತಿ ಕೈ ಮೀರುವ ಮುನ್ನ ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಒತ್ತಡ ಹಾಕುತ್ತಿದ್ದಾರೆ.












Click it and Unblock the Notifications