ಸೀಟು ಹಂಚಿಕೆ ಅಂತಿಮ: ಜೆಡಿಎಸ್ಸಿಗೆ ಎಷ್ಟು, ಕಾಂಗ್ರೆಸ್ಸಿಗೆ ಮಿಕ್ಕಿದ್ದೆಷ್ಟು?
Recommended Video

ಒಂದು ಕಡೆ ಕಾಂಗ್ರೆಸ್ ನವರು ಹದ್ದುಬಸ್ತಿನಲ್ಲಿದ್ದರೆ ಒಳ್ಳೆದು, ಇಲ್ಲದಿದ್ದರೆ ನಾನೇನು ಮುಖ್ಯಮಂತ್ರಿ ಹುದ್ದೆಗೆ ಅಂಟಿಕೊಳ್ಳುವ ಜಾಯಮಾನದವನಲ್ಲ ಎನ್ನುವ ಸಿಎಂ ಕುಮಾರಸ್ವಾಮಿ, ಇನ್ನೊಂದೆಡೆ ಮುಂಬರುವ ಲೋಕಸಭಾ ಚುನಾವಣೆಗೆ ದೇವೇಗೌಡರು, ನೇರವಾಗಿ ರಾಹುಲ್ ಗಾಂಧಿ ಅಥವಾ ಪರಮಾಪ್ತರ ಜೊತೆ ಸೀಟು ಹಂಚಿಕೆ ಸಂಬಂಧ ಮಾತುಕತೆ ನಡೆಸುತ್ತಿರುವುದು ಇನ್ನೊಂದೆಡೆ.
ಇನ್ನೂ ಒಂದು ಲೆವೆಲ್ ಮಾತುಕತೆ ಮಾತ್ರ ಮುಗಿದಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಹೇಳುತ್ತಿದ್ದರೂ, ತಮಗೆ ಬೇಕಾದ ಕ್ಷೇತ್ರವನ್ನು ಪಡೆದುಕೊಳ್ಳುವಲ್ಲಿ ದೇವೇಗೌಡರು ಯಶಸ್ವಿಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಮೂಲಗಳ ಪ್ರಕಾರ, ದೇವೇಗೌಡ್ರು ಹನ್ನೆರಡು ಸೀಟು ಡಿಮಾಂಡ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಯ ನಡುವೆ, ಎಂಟು ಕ್ಷೇತ್ರಕ್ಕೆ ಅವರನ್ನು ಒಪ್ಪಿಸುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಶಕ್ತವಾಗಿದೆ. ಇದರಿಂದ ಎದುರಾಗುವ ವಿರೋಧದ ಬಗ್ಗೆಯೂ ಮಾತುಕತೆ ನಡೆದಿದೆ.
ತಮಗೆ ಬೇಕಾದ ಎಂಟು ಕ್ಷೇತ್ರಗಳನ್ನು ಆಯ್ಕೆಮಾಡಿಕೊಳ್ಳುವಲ್ಲಿ, ಎಲ್ಲಾ ಸಮೀಕರಣಗಳನ್ನು ಅಳೆದು ತೂಗಿ, ತಮ್ಮೆಲ್ಲಾ ರಾಜಕೀಯ ಅನುಭವವನ್ನು ಒರೆಗಚ್ಚಿ, ದೇವೇಗೌಡ್ರು ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವುದು ಆಪ್ತವಲಯದಿಂದ ಕೇಳಿಬರುತ್ತಿರುವ ಮಾಹಿತಿ. ಜೆಡಿಎಸ್ಸಿಗೆ ಬಹುತೇಕ ಅಂತಿಮವಾಗಿದೆ ಎನ್ನಲಾಗುತ್ತಿರುವ ಎಂಟು ಕ್ಷೇತ್ರಗಳು ಯಾವುವು, ಮುಂದೆ ಓದಿ..

ಶಿವಮೊಗ್ಗ ಲೋಕಸಭಾ ಕ್ಷೇತ್ರ
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ದೋಸ್ತಿ ಸರಕಾರದ ಪರ, ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ. ಕಳೆದ ಉಪಚುನಾವಣೆಯಲ್ಲಿ ಜಂಟಿ ಅಭ್ಯರ್ಥಿ ಮಧು ಬಂಗಾರಪ್ಪ ಉತ್ತಮ ಪೈಪೋಟಿ ನೀಡಿದ್ದರು. ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ಅಸೆಂಬ್ಲಿ ಕ್ಷೇತ್ರಗಳಲ್ಲಿ ಬಿಜೆಪಿಯದ್ದೇ ಕಾರುಬಾರು. ಭದ್ರಾವತಿ ಕ್ಷೇತ್ರವೊಂದನ್ನು ಹೊರತು ಪಡಿಸಿ, ಮಿಕ್ಕೆಲ್ಲಾ ಕಡೆ ಬಿಜೆಪಿ ಅಭ್ಯರ್ಥಿಗಳು ಜಯಸಾಧಿಸಿದ್ದರು. ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಎರಡನೇ ಸ್ಥಾನದಲ್ಲಿತ್ತು. ಕ್ಷೇತ್ರದ ಹಾಲೀ ಸಂಸದ - ಬಿ ವೈ ರಾಘವೇಂದ್ರ (ಬಿಜೆಪಿ)

ಬೀದರ್ ಲೋಕಸಭಾ ಕ್ಷೇತ್ರ
ಬೀದರ್ ಲೋಕಸಭಾ ಕ್ಷೇತ್ರದಲ್ಲೂ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಧರಂಸಿಂಗ್ ಜೀವಿತಾವಧಿಯಲ್ಲಿ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಇದುವರೆಗೆ ನಡೆದ ಹನ್ನೆರಡು ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ತಲಾ ಆರು ಬಾರಿ ಗೆದ್ದಿದೆ.ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಎರಡರಲ್ಲಿ ಬಿಜೆಪಿ, ಒಂದರಲ್ಲಿ ಜೆಡಿಎಸ್ ಬಿಟ್ಟರೆ ಮಿಕ್ಕ ಐದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಕ್ಷೇತ್ರದ ಹಾಲೀ ಸಂಸದ - ಭಗವಂತ ಖೂಬಾ (ಬಿಜೆಪಿ)

ಬೆಂಗಳೂರು ಉತ್ತರ ಕ್ಷೇತ್ರ
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಹುತೇಕ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಇರುವುದಿಲ್ಲ. ಜೆಡಿಎಸ್ ವರಿಷ್ಠ ದೇವೇಗೌಡ್ರು ಈ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಹಾಸನದ ಹಾಲೀ ಸಂಸದರಾಗಿರುವ ಗೌಡ್ರು, ಅಳೆದುತೂಗಿ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಎರಡರಲ್ಲಿ ಜೆಡಿಎಸ್, ಒಂದರಲ್ಲಿ ಬಿಜೆಪಿ ಮತ್ತು ಐದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವನ್ನು ಸಾಧಿಸಿತ್ತು. ಕ್ಷೇತ್ರದ ಹಾಲೀ ಸಂಸದ - ಸದಾನಂದ ಗೌಡ (ಬಿಜೆಪಿ)

ಮಂಡ್ಯ ಲೋಕಸಭಾ ಕ್ಷೇತ್ರ
ನಿರೀಕ್ಷೆಯಂತೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯೇ ಕಣಕ್ಕಿಳಿಯಲಿದ್ದಾರೆ. ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಶಿವರಾಮೇ ಗೌಡ್ರು ಭರ್ಜರಿ ಜಯಗಳಿಸಿದ್ದರು. ಇನ್ನೊಂದೆಡೆ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಇಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವುದು ಬಹುತೇಕ ಖಚಿತ. ಕ್ಷೇತ್ರದ ಹಾಲೀ ಸಂಸದ - ಶಿವರಾಮೇ ಗೌಡ (ಜೆಡಿಎಸ್)

ವಿಜಯಪುರ ಲೋಕಸಭಾ ಕ್ಷೇತ್ರ
ಇತ್ತೀಚಿನ ದಿನಗಳಲ್ಲಿ ಬಹುತೇಕ ಬಿಜೆಪಿಯ ಭದ್ರಕೋಟೆ ವಿಜಯಪುರದಿಂದ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಸೆಂಬ್ಲಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಮೂರು, ಜೆಡಿಎಸ್ ಎರಡು ಸ್ಥಾನವನ್ನು ಗೆದ್ದಿತ್ತು. ಕ್ಷೇತ್ರದ ಹಾಲೀ ಸಂಸದ ಬಿಜೆಪಿಯ ರಮೇಶ್ ಜಿಗಜಿಣಗಿ.

ಹಾಸನ ಲೋಕಸಭಾ ಕ್ಷೇತ್ರ
ಹಾಸನ ಲೋಕಸಭಾ ಕ್ಷೇತ್ರದಲ್ಲೂ ಜೆಡಿಎಸ್ ಅಭ್ಯರ್ಥಿ ಜಂಟಿಯಾಗಿ ಕಣಕ್ಕಿಳಿಯಲಿದ್ದಾರೆ. ದೇವೇಗೌಡರ ಕರ್ಮಭೂಮಿಯಾಗಿರುವ ಈ ಕ್ಷೇತ್ರದಲ್ಲಿ ಸತತವಾಗಿ ಅವರು ಮೂರು ಬಾರಿ ಗೆದ್ದು ಬಂದಿದ್ದಾರೆ. ಈ ಬಾರಿ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವುದು ಬಹುತೇಕ ಅಂತಿಮ. ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ಕ್ಷೇತ್ರಗಳಲ್ಲಿ ಜೆಡಿಎಸ್ ಏಳು ಮತ್ತು ಬಿಜೆಪಿ ಒಂದು ಸ್ಥಾನದಲ್ಲಿ ಗೆದ್ದಿದೆ. ಕ್ಷೇತ್ರದ ಹಾಲೀ ಸಂಸದ - ಎಚ್ ಡಿ ದೇವೇಗೌಡ (ಜೆಡಿಎಸ್).

ರಾಯಚೂರು ಲೋಕಸಭಾ ಕ್ಷೇತ್ರ
ರಾಯಚೂರು ಕ್ಷೇತ್ರದಿಂದಲೂ ಜೆಡಿಎಸ್ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದೆ ಈ ಕ್ಷೇತ್ರ. 1998ರಿಂದ ಈಚೆಗೆ ನಡೆದ ಐದು ಚುನಾವಣೆಯಲ್ಲಿ ಕಾಂಗ್ರೆಸ್ ನಾಲ್ಕು ಬಾರಿ ಗೆಲುವು ಸಾಧಿಸಿತ್ತು. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ನಾಲ್ಕು, ಕಾಂಗ್ರೆಸ್ ಮೂರು ಮತ್ತು ಜೆಡಿಎಸ್ ಒಂದು ಕ್ಷೇತ್ರದಲ್ಲಿ ಜಯಗಳಿಸಿತ್ತು. ಕ್ಷೇತ್ರದ ಹಾಲೀ ಸಂಸದ - ಬಿ ವಿ ನಾಯಕ (ಕಾಂಗ್ರೆಸ್).

ಮೈಸೂರು ಲೋಕಸಭಾ ಕ್ಷೇತ್ರ
ಮೈಸೂರು ಕ್ಷೇತ್ರದಿಂದಲೂ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯಬಹುದು. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ಸೀಟಿನಲ್ಲಿ ಬಿಜೆಪಿ ನಾಲ್ಕು, ಜೆಡಿಎಸ್ ಮೂರು ಮತ್ತು ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಕ್ಷೇತ್ರದ ಹಾಲೀ ಸಂಸದ - ಪ್ರತಾಪ್ ಸಿಂಹ (ಬಿಜೆಪಿ).












Click it and Unblock the Notifications