ಬೆಂಗಳೂರು ಉತ್ತರ ಅಥವಾ ತುಮಕೂರಿನಿಂದ ಶೋಭಾ ಕರಂದ್ಲಾಜೆ?- ಬಿಜೆಪಿಯಲ್ಲಿ ಹೊತ್ತಿಕೊಂಡ ಭಿನ್ನಾಭಿಪ್ರಾಯವೇನು?
ಬೆಂಗಳೂರು, ಜನವರಿ 19: ಬಿಜೆಪಿಯ ರಾಜ್ಯ ಘಟಕದಲ್ಲಿನ ಕಚ್ಚಾಟ ಮತ್ತು ಆಂತರಿಕ ಭಿನ್ನಾಭಿಪ್ರಾಯಗಳು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹಿರಿಯ ಹಾಲಿ ಸಂಸದರನ್ನು ಕಣಕ್ಕಿಳಿಸುವ ಬಗ್ಗೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.
ಹೌದು, ಲೋಕಸಭೆಯಲ್ಲಿ ಉಡುಪಿ ಚಿಕ್ಕಮಗಳೂರು ಪ್ರತಿನಿಧಿಸುವ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಗಮನ ಸೆಳೆದ ಪ್ರಮುಖ ವ್ಯಕ್ತಿ. ಕಳೆದ ವರ್ಷ ನವೆಂಬರ್‌ನಲ್ಲಿ ಬಿವೈ ವಿಜಯೇಂದ್ರ ಅವರು ಕರ್ನಾಟಕ ಘಟಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರು ಕಡಿಮೆ ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದರು. ಹಾಲಿ ಸಂಸದರಾಗಿರುವ ಶೋಭಾ ಕರಂದ್ಲಾಜೆ ಅವರಿಗೆ ಉಡುಪಿ-ಚಿಕ್ಕಮಗಳೂರಿನಿಂದ ಸ್ಪರ್ಧಿಸುವ ಕುರಿತು ವಿರೋಧಗಳು ಕೇಳಿ ಬಂದಿವೆ.

ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರ ಬೆಂಬಲಿಗರು ಮತ್ತೆ ಶೋಭಾ ಅವರೇ ಉಡುಪಿ-ಚಿಕ್ಕಮಗಳೂರಿನಿಂದ ಮತ್ತೆ ಸ್ಪರ್ಧಿಸಬೇಕೆಂದು ಬಯಸುತ್ತಿರುವಾಗ, ಪಕ್ಷದ ಹಿರಿಯ ಕಾರ್ಯಕರ್ತರು ಅವರನ್ನು ಬೆಂಗಳೂರು ಉತ್ತರ ಅಥವಾ ತುಮಕೂರಿನಂತಹ ಒಕ್ಕಲಿಗ ಪ್ರಾಬಲ್ಯದ 'ಸುರಕ್ಷಿತ ಸ್ಥಾನ'ಗಳಿಗೆ ಸ್ಥಳಾಂತರಿಸುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.
ಈ ಕುರಿತು ಬಿಜೆಪಿ ವಕ್ತಾರ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಕರ್ನಾಟಕದಲ್ಲಿ ಎಲ್ಲಾ 28 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ನಾವು ತಂತ್ರಗಳನ್ನು ರೂಪಿಸುತ್ತಿದ್ದೇವೆ. ಇದರಲ್ಲಿ ಕೆಲವು ಹಾಲಿ ಸಂಸದರ ಬದಲಿಗೆ ಹೊಸ ಮುಖಗಳ ಪ್ರಯೋಗ ಮತ್ತು ಇತರರ ಸ್ಥಾನಗಳನ್ನು ಮರು ಹೊಂದಿಸುವ ಪ್ರಯೋಗವೂ ಸೇರಿದೆ. ಗೆಲ್ಲುವುದು ಪ್ರಾಥಮಿಕ ಮಾನದಂಡವಾಗಿ ಉಳಿದಿದೆ. ಪ್ರಸ್ತುತ ಕರಂದ್ಲಾಜೆ ಪ್ರತಿನಿಧಿಸುವ ಸ್ಥಾನವು ವಿಶೇಷ ಪರಿಶೀಲನೆಯಲ್ಲಿದೆ. ನಾಯಕತ್ವ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಶೋಭಾ ಕರಂದ್ಲಾಜೆ ಅವರ ಕ್ಷೇತ್ರ ಬದಲಾವಣೆ ಕುರಿತು ಸುಳಿವು ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಲಿಂಗಾಯತ ನಾಯಕ ಬಿಎಸ್ ಯಡಿಯೂರಪ್ಪ ಅವರಿಗೆ ಹತ್ತಿರವಾಗಿದ್ದ ಶೋಭಾ ಕರಂದ್ಲಾಜೆ ಅವರು 2019 ರಲ್ಲಿ ಮುಖ್ಯಮಂತ್ರಿಯಾಗಿ ಮರಳಿದ ನಂತರ ಯಡಿಯೂರಪ್ಪ ಅವರ ಪಾಳಯದಿಂದ ದೂರವಾಗಿದ್ದರು. ವಿಜಯೇಂದ್ರ ಅವರ ಉನ್ನತಿಯ ನಂತರ ಸಂಬಂಧವು ಮತ್ತಷ್ಟು ಹದಗೆಟ್ಟಿದೆ. ವಿಜಯೇಂದ್ರ ನಡೆಸಿಕೊಡುವ ಕಾರ್ಯಕ್ರಮಗಳಿಗೆ ಅವರ ಗೈರು ಸಹ ಎದ್ದು ಕಾಣುತ್ತಿದೆ. ಆದರೆ, ಇದನ್ನು ನಿರಾಕರಿಸಿದ ಕರಂದ್ಲಾಜೆ, "ಕೇಂದ್ರ ನಾಯಕತ್ವದಿಂದ ನಿಯೋಜಿಸಲಾದ ಪಕ್ಷದ ಕೆಲಸದಲ್ಲಿ ನಾನು ತೊಡಗಿಸಿಕೊಂಡಿದ್ದರಿಂದ ನಾನು ಹೊಸ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
2014 ರಿಂದ ಎರಡು ಬಾರಿ ಗೆದ್ದಿರುವ ಕ್ಷೇತ್ರವಾದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ತಾನು ಮರುಚುನಾವಣೆ ಬಯಸುತ್ತಿದ್ದೇನೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಈಗ ನಾನು ನನ್ನ ಸ್ವಂತ ಕ್ಷೇತ್ರದಿಂದ ಸ್ಪರ್ಧಿಸುವ ಭರವಸೆಯೊಂದಿಗೆ ಕೆಲಸ ಮಾಡುತ್ತಿದ್ದೇನೆ ಮತ್ತು ನನಗೆ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ. ಆದರೆ ಅಂತಿಮ ನಿರ್ಧಾರ ಪಕ್ಷದ ಹೈಕಮಾಂಡ್ ಮೇಲಿದೆ ಎಂದು ತಿಳಿಸಿದ್ದಾರೆ.
ಇನ್ನೂ ಉಡುಪಿ-ಚಿಕ್ಕಮಗಳೂರು ಪಕ್ಷದ ಟಿಕೆಟ್‌ಗಾಗಿ ಹೊಸ ಹೆಸರುಗಳು ಕೇಳಿ ಬರುತ್ತಿವೆ. ಪಕ್ಷದ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಡಿ.ಎನ್.ಜೀವರಾಜ್ ಸ್ಪರ್ಧೆಗೆ ಒಲವು ತೋರಿದ್ದಾರೆ. ಇನ್ನೂ ಬೆಂಗಳೂರು ಉತ್ತರ ಕ್ಷೇತ್ರಕ್ಕೂ ಹೆಸರು ಕೇಳಿ ಬರುತ್ತಿವೆ. ಈ ಕುರಿತು ಸಿ ಟಿ ರವಿ ಅವರು ಮಾತನಾಡಿ, ನಾನು ಪಕ್ಷದಿಂದ ಏನನ್ನೂ ಕೇಳಿಲ್ಲ, ಆದರೆ ಪಕ್ಷದಿಂದ ಸ್ಪರ್ಧಿಸುವಂತೆ ಹೇಳಿದರೆ ಜವಾಬ್ದಾರಿ ಹೊರಲು ಸಿದ್ಧ ಎಂದು ಹೇಳಿದ್ದಾರೆ.












Click it and Unblock the Notifications