ಅರಮನೆ ಮೈದಾನದಲ್ಲಿ ಮೋದಿ ಸಭೆಗೆ 5 ಲಕ್ಷ ಮಂದಿ
ಬೆಂಗಳೂರು, ನ. 5: ಮುಂದಿನ ಲೋಕಸಭಾ ಚುನಾವಣೆ ನಿಮಿತ್ತ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶಾದ್ಯಂತ ಹೆಜ್ಜೆ ಹಾಕುತ್ತಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬರಲು ಇನ್ನು 13 ದಿನ ಬಾಕಿ ಇದೆ. ಅಷ್ಟರೊಳಗೆ ಸಮಾವೇಶದಲ್ಲಿ ಭಾಗವಹಿಸಲು 5 ಲಕ್ಷ ಮಂದಿಯನ್ನು ನೋಂದಣಿ ಮಾಡಿಸುವುದು ಮತ್ತು ಅದಕ್ಕೆ ತಕ್ಕಂತೆ ಭದ್ರತೆ ಸೇರಿದಂತೆ ಸಕಲ ಏರ್ಪಾಡುಗಳನ್ನು ಮಾಡಲು ರಾಜ್ಯ ಬಿಜೆಪಿ ಸರ್ವಸಿದ್ಧತೆ ಆರಂಭಿಸಿದೆ.
ಮಾಜಿ ಗೃಹ ಸಚಿವ ಆರ್ ಅಶೋಕ್ ಈ ಹೊಣೆ ಹೊತ್ತಿದ್ದಾರೆ. ಸುಮಾರು 5 ಲಕ್ಷ ಮಂದಿ ಸಮಾವೇಶಕ್ಕೆ ಆಗಮಿಸುವ ನಿರೀಕ್ಷೆಯಿದ್ದು ಬೆಂಗಳೂರಿನ ಅರಮನೆ ಮೈದಾನವನ್ನು ಅದಕ್ಕೆ ಸೂಕ್ತವಾಗಿ ಅಣಿಗೊಳಿಸಲಾಗುತ್ತಿದೆ. ಇದಕ್ಕಾಗಿ ಮೈದಾನವನ್ನು ಸಮತಟ್ಟುಗೊಳಿಸುವ ಕಾರ್ಯ ನಡೆದಿದೆ.

ಮೋದಿ ಸಮಾವೇಶ ತಯಾರಿ ಸಂಬಂಧ ರಚಿಸಲಾಗಿರುವ 35 ತಂಡಗಳ ಮೊದಲ ಸಭೆ ಅರಮನೆ ಮೈದಾನದಲ್ಲಿ ಇಂದು ಮಂಗಳವಾರ ನಡೆಯಲಿದೆ. ಮಾಜಿ ಡಿಸಿಎಂ ಅಶೋಕ್ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಹಾನಗರ ಘಟಕದ ಅಧ್ಯಕ್ಷ ಸುಬ್ಬಣ್ಣ, ನಗರ ಜಿಲ್ಲಾಧ್ಯಕ್ಷ ಎಸ್ ಮುನಿರಾಜು, ಪಕ್ಷದ ವಕ್ತಾರ ಅಶ್ವತ್ಥನಾರಾಯಣ ಸೇರಿದಂತೆ ನಗರ ಜಿಲ್ಲೆಯ ಬಿಜೆಪಿ ಶಾಸಕರು ಭಾಗವಹಿಸಲಿದ್ದಾರೆ.
ಇದಕ್ಕೂ ಮುನ್ನ ಸೋಮವಾರವೇ ಮೋದಿ ಸಮಾವೇಶದ ಹಿನ್ನೆಲೆಯಲ್ಲಿ ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಬಿಜೆಪಿ ಮುಖಂಡರು ಜಂಟಿಯಾಗಿ ಪ್ಯಾಲೆಸ್ ಗ್ರೌಂಡ್ಸ್ ಸ್ಥಳ ಪರಿಶೀಲನೆ ನಡೆಸಿದರು.
ಆ ಸಂದರ್ಭದಲ್ಲಿ ಬಿಹಾರದಲ್ಲಿನ ಇತ್ತೀಚಿನ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ನಗರದ ಸಮಾವೇಶಕ್ಕೆ ಹೆಚ್ಚಿನ ಭದ್ರತೆ ಒದಗಿಸುವಂತೆ ಮಾಜಿ ಗೃಹ ಸಚಿವ ಅಶೋಕ್ ಮತ್ತಿತರ ಮುಖಂಡರು ನಗರ ಪೊಲೀಸ್ ಆಯುಕ್ತರಿಗೆ ಲಿಖಿತ ಮನವಿಯನ್ನೂ ಸಲ್ಲಿಸಿದರು.
ಸಂಜೆ ಸುಮಾರು 4ಗಂಟೆಗೆ ಅರಮನೆ ಮೈದಾನಕ್ಕೆ ಆಗಮಿಸಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ ಲಾಲ್ ರುಕಮ್ ಪಚಾವೊ, ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್, ಹೆಚ್ಚುವರಿ ಆಯುಕ್ತ ಕಮಲ್ ಪಂತ್, ಜಂಟಿ ಪೊಲೀಸ್ ಆಯುಕ್ತ ದಯಾನಂದ್, ಡಿಸಿಪಿ ರವಿಕಾಂತೇ ಗೌಡ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಮೋದಿ ಸಮಾವೇಶಕ್ಕೆ ಹೆಚ್ಚಿನ ಭದ್ರತೆ ಒದಗಿಸುವ ಕುರಿತು ಚರ್ಚೆ ನಡೆಸಿದರು.
ಸಮಾವೇಶದ ಕುರಿತು ಸಮಗ್ರ ಮಾಹಿತಿಯನ್ನು ಬಿಜೆಪಿ ಮುಖಂಡರು ಪೊಲೀಸ್ ಅಧಿಕಾರಿಗಳಿಗೆ ನೀಡಿದರು. ಸಮಾವೇಶಕ್ಕೆ ಬಿಜೆಪಿ ವತಿಯಿಂದಲೂ ವಿಶೇಷ ಕಾರ್ಯಕರ್ತರನ್ನು ಬಂದೋಬಸ್ತಿಗಾಗಿ ನೇಮಿಸಲಾಗುವುದು. ಈ ಕಾರ್ಯಕರ್ತರು ಪೊಲೀಸರಿಗೆ ಭದ್ರತೆ ನೀಡುವಲ್ಲಿ ಸಹಕರಿಸಲಿದ್ದಾರೆ ಎಂದು ಬಿಜೆಪಿ ಮುಖಂಡರು ತಿಳಿಸಿದರು.
ದೂರದ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆತರುವುದು ಕಷ್ಟ ಎಂಬ ಕಾರಣಕ್ಕೆ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು ಭಾಗದಿಂದ ಹೆಚ್ಚಿನ ಜನರನ್ನು ಸೇರಿಸಲು ಗಮನಹರಿಸಲಾಗಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಿಗೆ ಯಾವುದೇ ಮಿತಿ ಹಾಕಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ಶಾಸಕರು, ಪಾಲಿಕೆ ಸದಸ್ಯರು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸದಸ್ಯರಿಗೆ ಹಾಗೂ ಸ್ಥಳೀಯ ಪದಾಧಿಕಾರಿಗಳಿಗೆ ಹೊಣೆಗಾರಿಕೆ ವಹಿಸಲಾಗಿದೆ.
ಕಾರ್ಯಕ್ರಮದಲ್ಲಿ ಗೊಂದಲ ಆಗದಂತೆ ಅಚ್ಚುಕಟ್ಟಿನ ವ್ಯವಸ್ಥೆ ಮಾಡಲು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳ ಮೇಲುಸ್ತುವಾರಿ ನೋಡಿಕೊಳ್ಳಲು ಶಾಸಕರು, ಸಂಸದರಿಗೆ ಜವಾಬ್ದಾರಿ ಕೊಡಲಾಗಿದೆ ಎಂದು ಪಕ್ಷ ಮೂಲಗಳು ತಿಳಿಸಿವೆ.












Click it and Unblock the Notifications