ಅಂದು ಕೇಸರಿ ಶಾಲು ಧರಿಸಿದ ದಳಪತಿ; ಇಂದು ಜೆಡಿಎಸ್ ಶಾಲು ಧರಿಸಿದ ಮೋದಿ
ಬೆಂಗಳೂರು, ಏಪ್ರಿಲ್ 21: ಕಳೆದ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಬಿಜೆಪಿ ಹಾಗೂ ಜೆಡಿಎಸ್ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯಾಗಿದೆ. ಆಡಳಿತರೂಢ ಕಾಂಗ್ರೆಸ್ ಗೆ ಠಕ್ಕರ್ ಕೊಡುವ ನಿಟ್ಟಿನಲ್ಲಿ ಹಲವು ತಂತ್ರಗಳನ್ನ ಹಾಕಿಕೊಂಡಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪರಸ್ಪರ ಶಾಲುಗಳನ್ನ ಹಾಕಿಕೊಂಡಿದ್ದಾರೆ.
ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಅವರು ಬಿಜೆಪಿ ಜೊತೆಗಿನ ಮೈತ್ರಿಯಾದ ಬೆನ್ನಲ್ಲೇ ಕೇಸರಿ ಶಾಲನ್ನು ಹೆಗಲಿಗೆ ಹಾಕಿಕೊಂಡಿರುವುದು ರಾಜಕೀಯ ಪಡಸಾಲೆ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಜ್ಯಕ್ಕೆ ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಜೆಡಿಎಸ್ ಶಾಲು ಹಾಕಿದ್ದಾರೆ.

ಇನ್ನೂ ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಮಾತನಾಡಿ, ಇಂಡಿ ಒಕ್ಕೂಟಕ್ಕೆ ನಾಯಕರೇ ಇಲ್ಲ, ದೂರದೃಷ್ಟಿಯೂ ಇಲ್ಲ. ಅವರದು ಹಗರಣಗಳ ಚರಿತ್ರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಿಳಿಸಿದರಲ್ಲದೆ, ಫಿರ್ ಏಕ್ ಬಾರ್ ಮೋದಿ ಸರಕಾರ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನಿಲ್ಲಿ ರಿಪೋರ್ಟ್ ಕಾರ್ಡ್ ಜೊತೆ ಮತ ಕೇಳಲು ಬಂದಿದ್ದೇನೆ. ಹಗಲಿರುಳೆನ್ನದೆ ನಿಮಗಾಗಿ ಶ್ರಮಿಸಿದ್ದೇನೆ. ನಿಮ್ಮ ಕನಸುಗಳೇ ಮೋದಿಯ ಸಂಕಲ್ಪ ಎಂದರು. 24-7 ಮೂಲಕ 20247ರಲ್ಲಿ ದೇಶವನ್ನು ಮುನ್ನಡೆಸುವ ಗ್ಯಾರಂಟಿ ಕೊಡುತ್ತಿದ್ದೇನೆ. ಬಡವರಿಗಾಗಿ ಉಚಿತ ಪಡಿತರ ಕೊಟ್ಟಿದ್ದೇವೆ, ಲಕ್ಷಾಂತರ ಜನರಿಗೆ ಉಚಿತ ಪಡಿತರ ಸಿಗುತ್ತಿದೆ. ಇದು ಇನ್ನೂ 5 ವರ್ಷ ಮುಂದುವರಿಯಲಿದೆ ಎಂದು ಭರವಸೆ ನೀಡಿದರು. ಉಚಿತ ಚಿಕಿತ್ಸೆಯ ಕನಸನ್ನೂ ಕಾಣದ ಜನರಿಗೆ ಆಯುಷ್ಮಾನ್ ಕಾರ್ಡ್ ಮೂಲಕ ಉಚಿತ ಚಿಕಿತ್ಸೆ ಕೊಡುತ್ತಿದ್ದೇವೆ ಎಂದು ಹೇಳಿದರು.
ಎಸ್‍ಸಿ, ಎಸ್‍ಟಿ, ಒಬಿಸಿ ಪರಿವಾರಕ್ಕೆ ನನ್ನ ಸರಕಾರದ ಗರಿಷ್ಠ ಲಾಭ ಸಿಕ್ಕಿದೆ. ನೀರಿನ ಸೌಕರ್ಯ, ಮನೆ ಇಲ್ಲದೆ, ವಿದ್ಯುತ್ ಸಂಪರ್ಕವಿಲ್ಲದೆ ಜನರು ಜೀವಿಸುತ್ತಿದ್ದರು. 10 ವರ್ಷಗಳಲ್ಲಿ 25 ಕೋಟಿ ಜನರು ಬಿಪಿಎಲ್ ರೇಖೆಗಿಂತ ಮೇಲಕ್ಕೆ ಬಂದಿದ್ದಾರೆ ಎಂದು ವಿಶ್ಲೇಷಿಸಿದರು. ಮುಂದಿನ 10 ವರ್ಷಗಳಲ್ಲಿ 3 ಕೋಟಿ ಮನೆಗಳನ್ನು ನಿರ್ಮಿಸಿಕೊಡುತ್ತೇವೆ.2014ರಲ್ಲಿ ಎನ್‍ಡಿಎ ಸರಕಾರ ರಚಿಸಲಾಯಿತು. ಎಸ್‍ಸಿ ಕುಟುಂಬದವರು, ಬುಡಕಟ್ಟು ಸಮಾಜದವರಿಗೆ ರಾಷ್ಟ್ರಪತಿ ಆಗುವ ಅವಕಾಶ ಸಿಕ್ಕಿದೆ. ಬಾಬಾಸಾಹೇಬ ಅಂಬೇಡ್ಕರರ 5 ಸ್ಥಳಗಳನ್ನು ಪಂಚತೀರ್ಥವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.
ದೊಡ್ಡ ಶಕ್ತಿಗಳು ಮೋದಿಯನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಲು ಪ್ರಯತ್ನ ನಡೆಸಿವೆ. ಆದರೆ, ನಾರಿ ಶಕ್ತಿ, ಮಾತೃಶಕ್ತಿಯ ಆಶೀರ್ವಾದ, ಜನರ ಸುರಕ್ಷಾ ಕವಚ ನನ್ನ ಜೊತೆಗಿದೆ. ತಾಯಂದಿರ ಸೇವೆ ನನ್ನ ಪ್ರಾಥಮಿಕ ಆದ್ಯತೆ ಎಂದ ಅವರು, 3 ಕೋಟಿ ಸೋದರಿಯರನ್ನು ಲಕ್ಷಾಧಿಪತಿ ದೀದಿ ಮಾಡಲಿದ್ದೇವೆ ಎಂದು ನುಡಿದರು. ಕೃಷಿ ಕ್ಷೇತ್ರದಲ್ಲಿ ಡ್ರೋಣ್ ಪೈಲಟ್ ತರಬೇತಿ ನೀಡಲಾಗುತ್ತಿದೆ. ಈ ಭಾಗದ ಹೆಣ್ಮಕ್ಕಳೂ ಡ್ರೋಣ್ ತಾಂತ್ರಿಕತೆ ಬಳಸುವಂತೆ ಆಗಲಿದೆ ಎಂದು ತಿಳಿಸಿದರು.
ದೇವೇಗೌಡರು ಅತ್ಯಂತ ಅನುಭವಿ ರಾಜಕಾರಣಿ. ಅವರ ಮಾರ್ಗದರ್ಶನ ನಮ್ಮ ಜೊತೆಗಿದೆ. ಎನ್‍ಡಿಎ ಸರಕಾರ ರೈತರನ್ನು ಆರ್ಥಿಕವಾಗಿ ಬಲಪಡಿಸುತ್ತಿದೆ. ಶ್ರೀ ಅನ್ನ ಮೂಲಕ ಸಿರಿಧಾನ್ಯವನ್ನೂ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿದ್ದೇವೆ. ಇದು ಈ ಭಾಗದ ಜನರಿಗೆ ನೆರವಾಗಲಿದೆ ಎಂದು ತಿಳಿಸಿದರು. ಇಲ್ಲಿನ ನೀರಿನ ಸಮಸ್ಯೆ ಪರಿಹರಿಸಲು ಮುಂದಾಗಿದ್ದೇವೆ ಎಂದು ಹೇಳಿದರು.
ಇಲ್ಲಿ ಬಿಜೆಪಿ ಸರಕಾರ ಇದ್ದಾಗ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ 10 ಸಾವಿರ ಸಿಗುತ್ತಿತ್ತು. ಅದನ್ನು 6 ಸಾವಿರಕ್ಕೆ ಇಳಿಸಲಾಗಿದೆ. 4 ಸಾವಿರ ಕೊಡುತ್ತಿದ್ದುದನ್ನು ರದ್ದು ಮಾಡಿದ್ದಾರೆ. ಇಂಥ ರೈತ ವಿರೋಧಿಗಳಿಗೆ ಪಾಠ ಕಲಿಸಿ ಎಂದು ಮನವಿ ಮಾಡಿದರು. ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯಡಿ ಮೂಲಸೌಕರ್ಯ ಹೆಚ್ಚಿಸುತ್ತಿದ್ದೇವೆ. ಹೆದ್ದಾರಿಗಳ ಸಂಖ್ಯೆ ವ್ಯಾಪ್ತಿ ಹೆಚ್ಚಿಸಿದ್ದೇವೆ. ಈ ಭಾಗದಲ್ಲಿ ವಿಶೇಷ ಆರ್ಥಿಕ ವಲಯ ನಿರ್ಮಿಸಲಾಗುತ್ತಿದೆ. ನಂದಿ ಬೆಟ್ಟ, ತಾಯಿ ಕೋಲಾರಮ್ಮನ ಆಶೀರ್ವಾದ ಇದೆ. ಇವುಗಳಿಗೆ ಪ್ರೋತ್ಸಾಹ ಕೊಡುತ್ತೇವೆ ಎಂದರು. 26ರಂದು ತಪ್ಪದೆ ಮತದಾನ ಮಾಡಿ ಎಂದು ವಿನಂತಿಸಿದರು. ಮೋದಿಜೀ ಅವರು ಬಂದಿದ್ದರು; ನಿಮಗೆಲ್ಲರಿಗೂ ನಮಸ್ಕಾರ ಹೇಳಿದ್ದಾರೆ ಎಂದು ಜನರಿಗೆ ತಿಳಿಸಿ ಎಂದರು.












Click it and Unblock the Notifications