ಮಕ್ಕಳ ರಾಜಕೀಯ ಭವಿಷ್ಯಕ್ಕಾಗಿ ಅಪ್ಪಂದಿರ ಸರ್ಕಸ್: ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ಮಂತ್ರಿಗಳು ಇವರು?
ಬೆಂಗಳೂರು, ಮಾರ್ಚ್ 20 : ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಜೋರಾಗಿದೆ. ಕಾಂಗ್ರೆಸ್ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ದೆಹಲಿಯಲ್ಲಿ ಮಂಗಳವಾರ ಸಭೆ ನಡೆಸಿದ್ದು, ಕಾಂಗ್ರೆಸ್ ಚುನಾವಣಾ ಸಮಿತಿಯು ಕರ್ನಾಟಕದಲ್ಲಿ ಘೋಷಣೆಯಾಗದೆ ಬಾಕಿಯಿದ್ದ 21 ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದೆ.
ಕಾಂಗ್ರೆಸ್ ಪಕ್ಷವು ಈಗಾಗಲೇ ಏಳು ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಪ್ರಕಟಿಸಿದೆ. ಇದೀಗ 17 ಕ್ಷೇತ್ರಗಳಿಗೆ ಹೆಸರು ಅಂತಿಮಗೊಳಿಸುವ ಮೂಲಕ ರಾಜ್ಯದಲ್ಲಿರುವ 28 ಲೋಕಸಭಾ ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಿಗೆ ಹೆಸರು ಅಂತಿಮಗೊಳಿಸಿದಂತಾಗಿದೆ. ಹಲವು ಸುತ್ತಿನ ಮಾತುಕತೆಯ ಬಳಿಕ ಈ ತೀರ್ಮಾನಕ್ಕೆ ಬರಲಾಗಿದ್ದು, ಕೆಲವು ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿಯಿರುವ ಕ್ಷೇತ್ರಗಳಿಗೆ ಹೆಸರು ಅಂತಿಮಗೊಳಿಸುವುದು ಬಾಕಿಯಿದೆ ಎಂದು ಮೂಲಗಳು ತಿಳಿಸಿವೆ.

ಇನ್ನೂ ಕಾಂಗ್ರೆಸ್‌ನಲ್ಲಿ ಈ ಬಾರಿ ಹೆಚ್ಚಾಗಿ ಕುಟುಂಬಸ್ಥರಿಗೆ ಟಿಕೆಟ್ ದಯಪಾಲಿಸಿದೆ. ಮೊದಲಿನಿಂದಲೂ ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರವೇ ದೊಡ್ಡ ತಲೆನೋವಾಗಿತ್ತು. ಇತ್ತ 20 ಕ್ಷೇತ್ರಗಳನ್ನ ಗೆಲ್ಲುವ ಟಾರ್ಗೆಟ್ ಹಾಕಿಕೊಂಡಿದ್ದ ಕಾಂಗ್ರೆಸ್ ಸಚಿವರನ್ನ ಕಣಕ್ಕಿಳಿಸಲು ಮಾಸ್ಟರ್ ಪ್ಲಾನ್ ಹಾಕಿಕೊಂಡಿತ್ತು. ಆದರೆ, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಸಚಿವರುಗಳು ನಿರಾಸಕ್ತಿ ತೋರಿದ್ದು, ತಮ್ಮ ಮಕ್ಕಳ ರಾಜಕೀಯ ಭವಿಷ್ಯವನ್ನ ರೂಪಿಸುವ ನಿಟ್ಟಿನಲ್ಲಿ ಕೆಲವು ಮಂತ್ರಿಗಳು ಯಶಸ್ವಿಯಾಗಿದ್ದಾರೆ.
6 ಕ್ಷೇತ್ರಗಳು ಸಚಿವರ ಮಕ್ಕಳಿಗೆ ಟಿಕೆಟ್
ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಮೊದಲ ಪಟ್ಟಿಯಲ್ಲಿ ಏಳು ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನ ಘೋಷಿಸಿದ್ದು, ಮಂಗಳವಾರ ನಡೆದ ಸಭೆಯಲ್ಲಿ 17 ಅಭ್ಯರ್ಥಿಗಳ ಹೆಸರನ್ನ ಅಂತಿಮಗೊಳಿಸಿದೆ. ಈ 17 ಜನ ಅಭ್ಯರ್ಥಿಗಳ ಫೈಕಿ 6 ಮಂದಿ ಹಾಲಿ ಸಚಿವರು ತಮ್ಮ ಕುಟುಂಬಸ್ಥರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿದೆ. ಆರು ಸಚಿವರು ತಮ್ಮ ಮಕ್ಕಳಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರು ಕಲಬುರಗಿ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.
17 ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳು ಸಚಿವಗಳು ತಮ್ಮ ತಮ್ಮ ಮಕ್ಕಳಿಗೆ ಟಿಕೆಟ್ ಗಿಟ್ಟಿಸುವಲ್ಲಿ ಮೇಲುಗೈ ಸಾಧಿಸಿದ್ದಾರೆ. ಬೆಂಗಳೂರು ದಕ್ಷಿಣದಿಂದ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ, ಬಾಗಲಕೋಟೆಯಿಂದ ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತಾ ಶಿವಾನಾಂದ ಪಾಟೀಲ್, ಚಿಕ್ಕೋಡಿಯಿಂದ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕ ಜಾರಕಿಹೊಳಿ ಟಿಕೆಟ್ ಗಿಟ್ಟಿಸಿದ್ದರೆ, ಬೆಳಗಾವಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಹಾಗೂ ಬೀದರ್‌ನಲ್ಲಿ ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಹೆಸರು ಅಂತಿಮವಾಗಿದೆ. ಇನ್ನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ ಅವರ ಹೆಸರು ದಾವಣಗೆರೆ ಕ್ಷೇತ್ರಕ್ಕೆ ಅಖೈರುಗೊಂಡಿದೆ.
ಅಂತಿಮಗೊಂಡ ಕಾಂಗ್ರೆಸ್ ಪಟ್ಟಿ!
1 ಕಲಬುರಗಿ- ರಾಧಾಕೃಷ್ಣ ದೊಡ್ಡಮನಿ
2 ಬೆಂಗಳೂರು ದಕ್ಷಿಣ- ಸೌಮ್ಯಾರೆಡ್ಡಿ
3 ಬೆಂಗಳೂರು ಸೆಂಟ್ರಲ್-ಮನ್ಸೂರ್ ಆಲಿಖಾನ್
4 ಮೈಸೂರು-ಲಕ್ಮಣ್
5 ರಾಯಚೂರು- ಕುಮಾರ ನಾಯಕ್
6 ಕೊಪ್ಪಳ-ರಾಜಶೇಖರ ಹಿಟ್ನಾಳ್
7 ಬೀದರ್- ಸಾಗರ್ ಖಂಡ್ರೆ
8 ದಾವಣಗೆರೆ- ಪ್ರಭಾ ಮಲ್ಲಿಕಾರ್ಜುನ್
9 ಉತ್ತರ ಕನ್ನಡ- ಅಂಜಲಿ ನಿಂಬಾಳ್ಕರ್
10 ದಕ್ಷಿಣ ಕನ್ನಡ- ಪದ್ಮರಾಜ್
11 ಚಿತ್ರದುರ್ಗ- ಬಿ.ಎನ್. ಚಂದ್ರಪ್ಪ
12 ಬೆಂಗಳೂರು ಉತ್ತರ-ರಾಜೀವ್ ಗೌಡ
13 ಧಾರವಾಡ- ವಿನೋದ ಅಸೂಟಿ
14 ಬಾಗಲಕೋಟೆ-ಸಂಯುಕ್ತ ಪಾಟೀಲ್
15 ಉಡುಪಿ/ಚಿಕ್ಕಮಗಳೂರು- ಜಯಪ್ರಕಾಶ್ ಹೆಗಡೆ
16 ಬೆಳಗಾವಿ- ಮೃಣಾಲ್ ಹೆಬ್ಬಾಳ್ಕರ್
17 ಚಿಕ್ಕೋಡಿ- ಪ್ರಿಯಾಂಕಾ ಜಾರಕಿಹೊಳಿ
ಏಳು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
ಶಿವಮೊಗ್ಗ -ಗೀತಾ ಶಿವರಾಜ್ ಕುಮಾರ್
ತುಮಕೂರು- ಎಸ್ಪಿ ಮುದ್ದಹನುಮೇಗೌಡ
ಮಂಡ್ಯ- ವೆಂಕಟರಾಮೇಗೌಡ (ಸ್ಟಾರ್ ಚಂದ್ರು)
ಹಾಸನ- ಶ್ರೇಯಸ್ ಪಟೇಲ್
ಬೆಂಗಳೂರು ಗ್ರಾಮಾಂತರ- ಡಿಕೆ ಸುರೇಶ್
ವಿಜಯಪುರ- ಎಚ್ಆರ್ ಅಲ್ಗೂರ್
ಹಾವೇರಿ-ಆನಂದ್ ಸ್ವಾಮಿ ಗಡ್ಡ ದೇವರಮಠ












Click it and Unblock the Notifications